ತ್ರಿಭಾಷಾ ನೀತಿಯ ಮೂಲಕ ಹಿಂದಿ ಹೇರಿಕೆ ಮಾಡುವುದನ್ನು ತಮಿಳುನಾಡು ಸೇರಿದಂತೆ ದಕ್ಷಿಣ ಭಾರತದ ವಿವಿಧ ರಾಜ್ಯಗಳು ವಿರೋಧಿಸುತ್ತಿರುವಾಗ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಹಿಂದಿ ಪರವಾಗಿ ಹೇಳಿಕೆ ನೀಡಿ ಈಗ ಭಾಷಾ ಹೇರಿಕೆ ವಿರೋಧಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
“ಯಾರೇ ಆದರೂ ತಮ್ಮ ಮಾತೃಭಾಷೆಗೆ ಪ್ರಾಮುಖ್ಯತೆಯನ್ನು ನೀಡಬೇಕು. ಆದರೆ ಅದೇ ಸಂದರ್ಭದಲ್ಲಿ ಹಿಂದಿಯನ್ನು ಕೂಡಾ ಕಲಿಯುವುದು ಉತ್ತಮ. ಇದರಿಂದ ದೆಹಲಿಯಲ್ಲಿ ಸಂವಹನ ನಡೆಸಲು ಸುಲಭವಾಗಲಿದೆ. ಇತರೆ ಭಾಷೆಗಳನ್ನು ನಮ್ಮ ಜೀವನಕ್ಕೆ ಅಗತ್ಯವಿದ್ದರೆ ಕಲಿಯಬೇಕು” ಎಂದು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಹಿಂದಿ ಹೇರಿಕೆ | ಬಿಜೆಪಿ ತೊರೆದ ತಮಿಳು ನಟಿ ರಂಜನಾ ನಾಚಿಯಾರ್ ವಿಜಯ್‌ರ ಟಿವಿಕೆ ಸೇರ್ಪಡೆ
ಅಷ್ಟು ಮಾತ್ರವಲ್ಲದೆ ಹಿಂದಿಯನ್ನು ರಾಷ್ಟ್ರ ಭಾಷೆ ಎಂದು ಹೇಳುವ ಮೂಲಕ ಚಂದ್ರಬಾಬು ನಾಯ್ಡು ದಕ್ಷಿಣ ಭಾರತದ ಜನರ ವಾಗ್ದಾಳಿ ಎದುರಿಸಬೇಕಾಗಿದೆ. “ಹಿಂದಿ ನಮ್ಮ ರಾಷ್ಟ್ರ ಭಾಷೆ. ಇಂಗ್ಲೀಷ್ ಅಂತಾರಾಷ್ಟ್ರೀಯ ಭಾಷೆ. ವಿದೇಶಕ್ಕೆ ಹೋಗುವವರು ಇಂಗ್ಲೀಷ್ ಕಲಿಯುವುದು ಮುಖ್ಯವಾಗಿದೆ” ಎಂದು ಎನ್‌ಡಿಎ ಮಿತ್ರಪಕ್ಷದ ನಾಯಕ ಹೇಳಿಕೊಂಡಿದ್ದಾರೆ.
ದೇಶದಲ್ಲಿ ಹಿಂದಿ ಮಾತ್ರವಲ್ಲ ಯಾವುದೇ ಭಾಷೆಯೂ ರಾಷ್ಟ್ರ ಭಾಷೆಯಾಗಿಲ್ಲ. ಹಿಂದಿ ಮತ್ತು ಇಂಗ್ಲೀಷ್ ಎರಡು ಅಧಿಕೃತ ಭಾಷೆಗಳಾಗಿವೆ. ಆದರೆ ಹಿಂದಿಯನ್ನು ರಾಷ್ಟ್ರ ಭಾಷೆ ಎಂಬ ತಪ್ಪು ಮಾಹಿತಿಯನ್ನು ಹಲವು ರಾಜಕಾರಣಿಗಳು ಹಂಚುತ್ತಿದ್ದಾರೆ. ಕೇಂದ್ರ ಸರ್ಕಾರದ ಹಿಂದಿ ಹೇರಿಕೆಯನ್ನು ಬೆಂಬಲಿಸುವ ಹಲವು ನಾಯಕರು ಹಿಂದಿ ರಾಷ್ಟ್ರ ಭಾಷೆ ಎಂದು ಸುಳ್ಳು ಹೇಳುತ್ತಿದ್ದಾರೆ.
“ನಮ್ಮ ಜೀವನದಲ್ಲಿ ಅಗತ್ಯವಿದ್ದಾಗ ನಾವು ಎಷ್ಟು ಭಾಷೆಯನ್ನಾದರೂ ಕಲಿಯುತ್ತೇವೆ. ಆದರೆ ನಾವು ನಮ್ಮ ಮಾತೃ ಭಾಷೆಯನ್ನು ಮರೆಯುವುದಿಲ್ಲ. ಭಾಷೆಯನ್ನು ಬರೀ ಸಂವಹನಕ್ಕಾಗಿ ಕಲಿಯಬೇಕಾಗುತ್ತದೆ. ಹೆಚ್ಚು ಭಾಷೆಯನ್ನು ಕಲಿತರೆ ನಮಗೆಯೇ ಒಳ್ಳೆಯದು” ಎಂದು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಯುಗಧರ್ಮ | ಹಿಂದಿಗೆ ಅಧಿಕೃತ ಭಾಷಾ ಸ್ಥಾನಮಾನ: ವರವೋ ಅಥವಾ ಶಾಪವೋ?
“ಕೆಲವು ಜನರು ಇಂಗ್ಲೀಷ್ ತಿಳಿದರೆ ಉತ್ತಮ ಜ್ಞಾನ ಲಭಿಸುತ್ತದೆ ಅಂದುಕೊಂಡಿದ್ದಾರೆ. ಆದರೆ ಭಾಷೆ ಬರೀ ಸಂವಹನ ನಡೆಸಲು ಸಹಾಯ ಮಾಡುತ್ತದೆ. ಇದರಿಂದಾಗಿ ಜ್ಞಾನ ಬರದು. ನಮ್ಮ ಮಾತೃ ಭಾಷೆಯಲ್ಲಿ ಕಲಿತಾಗ ಮಾತ್ರ ಜ್ಞಾನ ಬರುತ್ತದೆ. ಮಾತೃ ಭಾಷೆಯಲ್ಲಿ ಜ್ಞಾನ ಗಳಿಸುವುದು ಸುಲಭ. ಇದು ವಿಶ್ವದ ಯಾವುದೇ ದೇಶದಲ್ಲಾದರೂ ಅನ್ವಯವಾಗುತ್ತದೆ” ಎಂದು ಕೂಡಾ ಹೇಳುವ ಮೂಲಕ ಹಿಂದಿ ಪರವಾದ ತನ್ನ ಹೇಳಿಕೆಯನ್ನು ಸಮತೋಲನಗೊಳಿಸಲು ಚಂದ್ರಬಾಬು ನಾಯ್ಡು ಪ್ರಯತ್ನಿಸಿದ್ದಾರೆ.
ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ ಸೇರಿದಂತೆ ಹಲವು ರಾಜ್ಯಗಳು ತ್ರಿಭಾಷಾ ನೀತಿಯನ್ನು ವಿರೋಧಿಸುತ್ತಿದೆ. ಹೆಚ್ಚು ಭಾಷೆಯನ್ನು ಕಲಿತರೆ ಒಳ್ಳೆಯದೇ. ಆದರೆ ಭಾಷಾ ಹೇರಿಕೆ ಸರಿಯಲ್ಲ ಎಂದು ಈ ರಾಜ್ಯಗಳು ಹೇಳಿದೆ.
