ಮಹಿಳೆಯ ಒಪ್ಪಿಗೆ ಇಲ್ಲದೆಯೇ ಜಾಹೀರಾತುಗಳಲ್ಲಿ ಮಹಿಳೆಯ ಚಿತ್ರ ಬಳಸುವುದು ‘ವಾಣಿಜ್ಯ ದೌರ್ಜನ್ಯ’ ಎಂದು ಬಾಂಬೆ ಹೈಕೋರ್ಟ್ ಹೇಳಿದೆ. ಸಾಮಾಜಿಕ ಮಾಧ್ಯಮ ಯುಗದಲ್ಲಿ ಇದೊಂದು ಗಂಭೀರ ವಿಷಯವಾಗಿದೆ ಎಂದು ಕೂಡಾ ಹೈಕೋರ್ಟ್ ಹೇಳಿದೆ.
ನಮೃತಾ ಅಂಕುಶ್ ಕವಾಲೆ ಎಂಬವರು ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಜಿ ಎಸ್ ಕುಲಕರ್ಣಿ ಮತ್ತು ಅದ್ವೈತ್ ಸೇಥ್‌ನ ಅವರ ವಿಭಾಗೀಯ ಪೀಠವು ಇಂದು ನಡೆಸಿದೆ. ಹಾಗೆಯೇ ಅರ್ಜಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ, ಕರ್ನಾಟಕ ಸೇರಿದಂತೆ ಒಟ್ಟು ನಾಲ್ಕು ರಾಜ್ಯಗಳಿಗೆ ನೋಟಿಸ್ ನೀಡಿದೆ. ಕಾಂಗ್ರೆಸ್ ಮತ್ತು ಯುಎಸ್ ಮೂಲಕ ಸಂಸ್ಥೆಗೂ ಬಾಂಬೆ ಹೈಕೋರ್ಟ್ ನೋಟಿಸ್ ನೀಡಿದೆ.
ಇದನ್ನು ಓದಿದ್ದೀರಾ? ಗುಟ್ಕಾ ಜಾಹೀರಾತು | ಶಾರುಖ್ ಖಾನ್, ಅಜಯ್ ದೇವಗನ್, ಟೈಗರ್ ಶ್ರಾಫ್‌ಗೆ ಸಮನ್ಸ್
ಪರಿಚಯಸ್ಥ ಛಾಯಾಗ್ರಹಕರಾದ ತುಕಾರಾಂ ಕರ್ವೆ ತನ್ನ ಚಿತ್ರವನ್ನು ಕ್ಲಿಕ್ಕಿಸಿದ್ದು, ತನ್ನ ಅನುಮತಿಯಿಲ್ಲದೆಯೇ ಶಟರ್‌ಸ್ಟಾಕ್ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ ಎಂದು ಅರ್ಜಿದಾರರಾದ ನಮೃತಾ ಆರೋಪಿಸಿದ್ದಾರೆ.
ಈ ಚಿತ್ರವನ್ನು ಕಾನೂನುಬಾಹಿರವಾಗಿ ನಾಲ್ಕು ರಾಜ್ಯ ಸರ್ಕಾರಗಳು ಮತ್ತು ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯ ಜಾಹೀರಾತಿನಲ್ಲಿ ಬಳಸಿದೆ. ಕೆಲವು ಖಾಸಗಿ ಸಂಸ್ಥೆಗಳು ಕೂಡಾ ಜಾಹೀರಾತು ಮತ್ತು ಡಿಸ್‌ಪ್ಲೇ ಬೋರ್ಡ್‌ಗಳಲ್ಲಿ ಬಳಸಿದೆ ಎಂದು ಆರೋಪಿಸಲಾಗಿದೆ.
“ಅರ್ಜಿಯಲ್ಲಿ ಎತ್ತಲಾಗಿರುವ ವಿಚಾರವು ಅತೀ ಗಂಭೀರವಾದ್ದದ್ದು. ಇಂದಿನ ಎಲೆಕ್ಟ್ರಾನಿಕ್ ಮತ್ತು ಸಾಮಾಜಿಕ ಮಾಧ್ಯಮ ಯುಗದಲ್ಲಿ ಇದು ಗಂಭೀರವಾದುದ್ದು. ಇದು ಛಾಯಾಗ್ರಾಹಕ ಮಾಡಿರುವ ವಾಣಿಜ್ಯ ದೌರ್ಜನ್ಯವಾಗಿದೆ” ಎಂದು ಬಾಂಬೆ ಹೈಕೋರ್ಟ್ ಹೇಳಿದೆ.
ಇದನ್ನು ಓದಿದ್ದೀರಾ? 25 ನಿಮಿಷ ಜಾಹೀರಾತು: ಬೆಂಗಳೂರಿನ ವ್ಯಕ್ತಿಯ ಸಮಯ ಪೋಲು ಮಾಡಿದ ಪಿವಿಆರ್‌ಗೆ 1.65 ಲಕ್ಷ ರೂ. ದಂಡ
ಇನ್ನು ಮಹಿಳೆಗೆ ಯಾವುದೇ ಮಾಹಿತಿ ನೀಡದೆಯೇ ಚಿತ್ರವನ್ನು ಶಟರ್‌ಸ್ಟಾಕ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ ಎಂದು ಹೇಳಲಾಗಿದೆ. ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ, ಒಡಿಶಾ ರಾಜ್ಯ ಸರ್ಕಾರಗಳು, ತೆಲಂಗಾಣ ಕಾಂಗ್ರೆಸ್ ಮತ್ತು ಶಟರ್‌ಸ್ಟಾಕ್ ವೆಬ್‌ಸೈಟ್ ನಿರ್ವಹಣೆ ಮಾಡುವ ಸಂಸ್ಥೆಗೆ ಹೈಕೋರ್ಟ್ ನೋಟಿಸ್ ನೀಡಿದೆ.
ನೋಟಿಸ್ ಪಡೆದ ಎಲ್ಲ ಸಂಸ್ಥೆಗಳು ಅಥವಾ ಸರ್ಕಾರಗಳು ಅಫಿಡವಿಟ್ ಸಲ್ಲಿಸುವಂತೆ ಹೈಕೋರ್ಟ್ ಆದೇಶಿಸಿದೆ. ಹಾಗೆಯೇ ವಿಚಾರಣೆಯನ್ನು ಮಾರ್ಚ್ 24ಕ್ಕೆ ಮುಂದೂಡಿದೆ.
