200 ಯೂನಿಟ್‌ವರೆಗೂ ಉಚಿತ ವಿದ್ಯುತ್ ನೀಡುವ ರಾಜ್ಯ ಸರ್ಕಾರದ ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಲು ಸರ್ವರ್ ಸಮಸ್ಯೆ ಅಡ್ಡಿಯಾಗಿದ್ದು, ಗ್ರಾಹಕರು ಕಾದು ವಾಪಸ್ ತೆರಳುತ್ತಿದ್ದಾರೆ.
ನಾಗರಿಕರು ಗೃಹಜ್ಯೋತಿ ಯೋಜನೆಯಡಿ ನೋಂದಾಯಿಸಲು ಅಗತ್ಯವಿರುವ ದಾಖಲೆಗಳೊಂದಿಗೆ ಗ್ರಾಮ ಒನ್, ನಾಡಕಚೇರಿ ಹಾಗೂ ಸೈಬರ್ ಕೇಂದ್ರಗಳಲ್ಲಿ ಸರತಿ ಸಾಲಿನಲ್ಲಿ ನಿಂತು ಕಾಯುವ ದೃಶ್ಯ ಸಾಮಾನ್ಯವಾಗಿ ಕಂಡು ಬರುತ್ತಿದೆ.
“ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿಯ ವಿಜಯಪುರ ಪಟ್ಟಣದಲ್ಲಿ ಸೇವಾ ಸಿಂಧು ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಲು ಸರ್ವರ್ ಸಮಸ್ಯೆ ಉಂಟಾಗಿದ್ದು, ನೋಂದಣಿ ಆಗುತ್ತಿಲ್ಲ. ಕೆಲವೊಮ್ಮೆ ಸರ್ವರ್ ಇದ್ದರೂ ನೋಂದಾಯಿತ ಮೊಬೈಲ್ ಸಂಖ್ಯೆಗೆ ಒಟಿಪಿ ಹೋಗುತ್ತದೆ. ಅದನ್ನು ಹೇಳುವಷ್ಟರಲ್ಲಿ ಸಂಪರ್ಕ ಕಡಿತಗೊಳ್ಳುತ್ತದೆ” ಎಂದು ನಾಡಕಚೇರಿ ಸಿಬ್ಬಂದಿಯೊಬ್ಬರು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಗೃಹಲಕ್ಷ್ಮಿ ಯೋಜನೆಗಾಗಿ ಪ್ರತ್ಯೇಕ ಆ್ಯಪ್, ಮೊಬೈಲ್‌ನಲ್ಲೇ ಅರ್ಜಿ ತುಂಬಲು ಅವಕಾಶ: ಡಿಕೆ ಶಿವಕುಮಾರ್
ರಾತ್ರಿಯ ವೇಳೆ ಸಕ್ರಿಯ
ಹಗಲಿನಲ್ಲಿ ಸರ್ವರ್ ಸಮಸ್ಯೆ ಕಾಡುತ್ತದೆ. ರಾತ್ರಿ 8 ಗಂಟೆಯ ನಂತರ ಸಕ್ರಿಯವಾಗುತ್ತಿದೆ. ಆದರೆ, ಸರ್ಕಾರದ ನಾಡಕಚೇರಿ, ಗ್ರಾಮ ಒನ್ ಕೇಂದ್ರಗಳಲ್ಲಿ ಸಿಬ್ಬಂದಿ ಇರುವುದಿಲ್ಲ. ಹೀಗಾಗಿ ನಾಗರಿಕರು, ಸೈಬರ್ ಕೇಂದ್ರಗಳತ್ತ ಮುಖ ಮಾಡುತ್ತಿದ್ದಾರೆ. ಸೈಬರ್ ಕೇಂದ್ರಗಳಲ್ಲಿ ದಾಖಲೆ ಪಡೆದುಕೊಂಡು ರಾತ್ರಿಯ ವೇಳೆ ಅರ್ಜಿ ಸಲ್ಲಿಕೆ ಮಾಡಿ, ಬೆಳಗ್ಗೆ ಸ್ವೀಕೃತಿ ಕೊಡುತ್ತಿದ್ದಾರೆ.