ಪೊಲೀಸರಿಗೆ ಲಂಚ ಕೊಡದೆ, ನ್ಯಾಯಾಲಯದಲ್ಲಿ ದಂಡ ಪಾವತಿಸಿದ್ದಕ್ಕಾಗಿ ಬೈಕ್ ಸವಾರನ ಮೇಲೆ ಪೊಲೀಸರು ಗಂಭೀರವಾಗಿ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಬೆಂಗಳೂರಿನಲ್ಲಿ ಕೇಳಿಬಂದಿದೆ. ಬೆಂಗಳೂರಿನ ವಿಜಯನಗರ ಟ್ರಾಫಿಕ್ ಪೊಲೀಸರ ವಿರುದ್ಧ ಬೈಕ್ ಸವಾರ ಈಶ್ವರ್ ಎಂಬವರು ಆರೋಪ ಮಾಡಿದ್ದಾರೆ.
ಮಾರ್ಚ್ 14ರ ರಾತ್ರಿ ವಿಜಯನಗರದ ಟೋಲ್ಗೇಟ್ ಬಳಿ ಸಬ್ ಇನ್ಸ್ಪೆಕ್ಟರ್ ಶಾಂತರಾಮ್ ನೇತೃತ್ವದಲ್ಲಿ ಪೊಲೀಸರು ‘ಡ್ರಂಕ್ ಅಂಡ್ ಡ್ರೈವ್’ ತಪಾಸಣೆ ಮಾಡುತ್ತಿದ್ದರು. ಈಶ್ವರ್ ಅವರು ಮದ್ಯ ಸೇವಿಸಿದ್ದಾರೆಂದು ಅವರ ಬೈಕ್ಅನ್ನು ವಶಕ್ಕೆ ಪಡೆದು, ಕೋರ್ಟ್ಗೆ ಹೋದರೆ 10,000 ರೂ.ದಂಡ ಕಟ್ಟಬೇಕಾಗುತ್ತದೆ, ಇಲ್ಲಿಯೇ 3,000 ರೂ. ಕೊಟ್ಟು ಹೋಗು ಎಂದು ಹೇಳಿದ್ದರು. ಆದರೆ, ಈಶ್ವರ್ ಲಂಚಕೊಡಲು ನಿರಾಕರಿಸಿದ್ದರು. ಅವರ ಬೈಕ್ಅನ್ನು ಪೊಲೀಸರು ಸೀಜ್ ಮಾಡಿ, ದಂಡದ ರಶೀದಿ ಕೊಟ್ಟಿದ್ದರು ಎಂದು ವರದಿಯಾಗಿದೆ.
ಮಾರನೆ ದಿನ (ಮಾರ್ಚ್ 15) ನ್ಯಾಯಾಲಯಕ್ಕೆ ತೆರಳಿ ದಂಡ ಪಾವತಿಸಿದ್ದಾರೆ. ಬಳಿಕ, ಬೈಕ್ ಬಿಡಿಸಿಕೊಳ್ಳಲು ವಿಜಯನಗರ ಸಂಚಾರ ಪೊಲೀಸ್ ಠಾಣೆಗೆ ಹೋಗಿದ್ದಾರೆ. ಈ ವೇಳೆ, ಈಶ್ವರ್ಗೆ ಪಿಎಸ್ಐ ಶಾಂತಕುಮಾರ್ ಮತ್ತು ಸಿಬ್ಬಂದಿಗಳು ಅವಾಚ್ಯವಾಗಿ ನಿಂದಿಸಿದ್ದಾರೆ. ಮಾತಿಗೆ ಮಾತು ಬೆಳೆದು, ಪೊಲೀಸರು ಈಶ್ವರ್ಗೆ ಕಾಲಿನಿಂದ ಒದ್ದು, ಥಳಿಸಿ ಹಲ್ಲೆಗೈದಿದ್ದಾರೆ. ಘಟನೆಯಲ್ಲಿ ಈಶ್ವರ್ ಪ್ರಜ್ಞೆ ಕಳೆದುಕೊಂಡು ಕುಸಿದು ಬಿದ್ದಿದ್ದಾರೆ. ಅವರನ್ನು ಪೊಲೀಸರೇ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.
ಘಟನೆಯನ್ನು ಗಮನಿಸಿದ ಸ್ಥಳೀಯರು ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಘಟನೆ ಸಂಬಂಧ ತನಿಖೆ ನಡೆಸಿ, ವರದಿ ನೀಡುವಂತೆ ಎಸಿಪಿಗೆ ಪಶ್ಚಿಮ ವಿಭಾಗದ ಸಂಚಾರ ಡಿಸಿಪಿ ಅನಿತಾ ಹದ್ದಣ್ಣನವರು ಸೂಚನೆ ನೀಡಿದ್ದಾರೆ.
ಪ್ರಕರಣ ಸಂಬಂಧ ಮಾಹಿತಿಗಾಗಿ ಈದಿನ.ಕಾಮ್ ವಿಜಯನಗರ ಸಂಚಾರ ಪೊಲೀಸರನ್ನು ಸಂಪರ್ಕಿಸಿತು. ಆದರೆ, ಅವರು ಮಾಹಿತಿ ಕೊಡಲು ನಿರಾಕರಿಸಿದ್ದಾರೆ.