ಮೊಬೈಲ್ ಅಂಗಡಿಯಿಂದ ₹10.83 ಲಕ್ಷ ಮೌಲ್ಯದ ಮೊಬೈಲ್ ಕಳವು ಮಾಡಿದ ವ್ಯಕ್ತಿಗೆ ಶುಕ್ರವಾರ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶೆ ಶೋಭಾ ಅವರು ಎರಡು ವರ್ಷ ಜೈಲು ಶಿಕ್ಷೆ ಹಾಗೂ ₹6 ಸಾವಿರ ದಂಡ ವಿಧಿಸಿ ಆದೇಶ ನೀಡಿದ್ದಾರೆ.
ಬೀದರ ಜಿಲ್ಲೆಯ ಗುಂಪಾ ಮೌನೇಶ್ವರ ಕಾಲೊನಿಯ ಮೌನೇಶ್ವರ ದಶರಥ ಶಿಕ್ಷೆಗೆ ಒಳಗಾದ ವ್ಯಕ್ತಿಯಾಗಿದ್ದಾರೆ.
2019 ಅಗಸ್ಟ್ 14ರಂದು ಶಹಾಪುರ ನಗರದ ಮಳಿಗೆಯೊಂದರಲ್ಲಿ ಶೆಟರ್ ಎತ್ತಿ ಅಂಗಡಿಯಲ್ಲಿದ್ದ ವಿವಿಧ ಕಂಪನಿಯ ₹10.83 ಲಕ್ಷ ಮೌಲ್ಯದ ಮೊಬೈಲ್ ಕಳವು ಮಾಡಿಕೊಂಡ ಹೋದ ಬಗ್ಗೆ ಶಹಾಪುರ ನಗರದ ಸೋಫಿಸಾಬ್ ಅತ್ತಾರ ಅವರು ಶಹಾಪುರ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಅಂದಿನ ಠಾಣೆಯ ಪಿ.ಐ ಹನುಮರೆಡ್ಡೆಪ್ಪ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು. ಫಿರ್ಯಾದಿದಾರ ಪರವಾಗಿ ಎಪಿಪಿ ದಿವ್ಯಾರಾಣಿ ನಾಯಕ ಸುರಪುರ ವಾದ ಮಂಡಿಸಿದ್ದರು.