“ಪ್ರಜಾಸತ್ತಾತ್ಮಕವಾಗಿ ವಿರೋಧ ಪಕ್ಷದ ನಾಯಕರಿಗೆ ಮಾತನಾಡಲು ಅವಕಾಶ ನೀಡಬೇಕು. ಆದರೆ ‘ಹೊಸ ಭಾರತ’ದಲ್ಲಿ ವಿಪಕ್ಷ ನಾಯಕರಿಗೆ ಮಾತನಾಡಲು ಅನುಮತಿ ನೀಡುವುದಿಲ್ಲ” ಎಂದು ಲೋಕಸಭೆ ವಿಪಕ್ಷ ನಾಯಕ, ಸಂಸದ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಲೋಕಸಭೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಮಹಾ ಕುಂಭಮೇಳವನ್ನು ಒಂದು ಪ್ರಮುಖ ಮೈಲಿಗಲ್ಲು ಎಂದು ಬಣ್ಣಿಸಿದ್ದಾರೆ. ಭಾರತ ಇಷ್ಟು ದೊಡ್ಡ ಕಾರ್ಯಕ್ರಮ ಆಯೋಜಿಸುವ ಸಾಮರ್ಥ್ಯ ಹೊಂದಿದೆಯೇ ಎಂದು ಪ್ರಶ್ನಿಸುವವರಿಗೆ ಈ ಕಾರ್ಯಕ್ರಮ ಒಂದು ಸೂಕ್ತ ಪ್ರತಿಕ್ರಿಯೆಯಾಗಿದೆ ಎಂದು ಕೂಡಾ ಪ್ರಧಾನಿ ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಆರು ರಾಜ್ಯಗಳಲ್ಲಿ 85 ಲಕ್ಷ ಮಕ್ಕಳ ಭವಿಷ್ಯ ಅಪಾಯದಲ್ಲಿದೆ: ಬಿಜೆಪಿ ವಿರುದ್ಧ ರಾಹುಲ್ ಗಾಂಧಿ ತರಾಟೆ
ಹಾಗೆಯೇ, ಮಹಾಕುಂಭದ ಸಮಯದಲ್ಲಿ ಇಡೀ ಜಗತ್ತು ಭಾರತದ ಭವ್ಯತೆಯನ್ನು ಕಂಡಿದೆ. ಧಾರ್ಮಿಕ ಸಭೆಯು ಭಾರತದ ಚೈತನ್ಯವನ್ನು ಪ್ರತಿಬಿಂಬಿಸುತ್ತದೆ ಎಂದು ಕೂಡಾ ಮಹಾ ಕುಂಭಮೇಳವನ್ನು ಹಾಡಿಹೊಗಳಿದ್ದಾರೆ. ಇದಾದ ಬಳಿಕ ವಿಪಕ್ಷಗಳು ಪ್ರತಿಭಟನೆ ನಡೆದಿದ್ದು, ಲೋಕಸಭೆಯನ್ನು ಮುಂದೂಡಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಮಹಾ ಕುಂಭಮೇಳ ಯಶಸ್ವಿಯಾಗಿದೆ ಎಂದು ಹೇಳಿದ ಬೆನ್ಮಲ್ಲೇ ಕುಂಭಮೇಳದಲ್ಲಾದ ಕಾಲ್ತುಳಿತದ ಬಗ್ಗೆ, ಅದರಲ್ಲಿ ಭಕ್ತರ ಸಾವಿನ ಬಗ್ಗೆ ವಿಪಕ್ಷಗಳು ಪ್ರಧಾನಿಯನ್ನು ಪ್ರಶ್ನಿಸಿವೆ. ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿವೆ.
ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್ ಗಾಂಧಿ, “ಜನವರಿ 29ರಂದು ಪ್ರಯಾಗ್‌ರಾಜ್‌ನಲ್ಲಿ ನಡೆದ ಮಹಾ ಕುಂಭಮೇಳದ ವೇಳೆ ಕಾಲ್ತುಳಿತದಿಂದಾಗಿ ಪ್ರಾಣ ಕಳೆದುಕೊಂಡವರಿಗೆ ಪ್ರಧಾನಿ ಶ್ರದ್ಧಾಂಜಲಿ ಸಲ್ಲಿಸಬೇಕಿತ್ತು” ಎಂದು ಹೇಳಿದ್ದಾರೆ.
“ನಾನು ಪ್ರಧಾನಿ ಮೋದಿ ಹೇಳುವುದಕ್ಕೆ ಬೆಂಬಲ ನೀಡಬೇಕೆಂದುಕೊಂಡಿದ್ದೆ. ಯಾಕೆಂದರೆ ಕುಂಭಮೇಳ ಎಂಬುದು ಒಂದು ಸಂಪ್ರದಾಯ, ಇತಿಹಾಸ ಹಾಗೂ ಸಂಸ್ಕೃತಿಯಾಗಿದೆ. ಆದರೆ ಕಾಲ್ತುಳಿತದಲ್ಲಿ ಸಾವನ್ನಪ್ಪಿದ್ದ ಭಕ್ತರಿಗೆ ಪ್ರಧಾನಿ ಶ್ರದ್ಧಾಂಜಲಿ ಸಲ್ಲಿಸಿಲ್ಲ ಎಂಬ ದೂರು ಕೂಡಾ ಇದೆ” ಎಂದು ರಾಹುಲ್ ಗಾಂಧಿ ತಿಳಿಸಿದರು.
ಇದನ್ನು ಓದಿದ್ದೀರಾ? ಬಿಜೆಪಿ ಜೊತೆ ಸೇರಿ ಒಳಸಂಚು ಮಾಡುವವರನ್ನು ತೆಗೆದುಹಾಕಿ: ಗುಜರಾತ್ ಕಾಂಗ್ರೆಸ್ ಸಮಿತಿಗೆ ರಾಹುಲ್ ಗಾಂಧಿ ಕರೆ
“ಕುಂಭಮೇಳಕ್ಕೆ ಹೋದ ಯುವಕರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಬೇರೊಂದು ಆಸೆಯನ್ನು ಪೂರೈಸಬೇಕಾಗಿದೆ. ಯುವಕರಿಗೆ ಪ್ರಧಾನಿ ಮೋದಿ ಉದ್ಯೋಗವನ್ನು ಕೂಡಾ ನೀಡಬೇಕು. ಉದ್ಯೋಗದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡಬೇಕು” ಎಂದು ಹೇಳಿದರು.
ಇನ್ನು ಮಾಧ್ಯಮದ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಾಹುಲ್ ಗಾಂಧಿ, “ನಮಗೆ ಮಾತನಾಡಲು ಅವಕಾಶ ನೀಡಿಲ್ಲ. ಪ್ರಜಾಸತ್ತಾತ್ಮಕವಾಗಿ ವಿರೋಧ ಪಕ್ಷದ ನಾಯಕರಿಗೆ ಮಾತನಾಡಲು ಅವಕಾಶ ನೀಡಬೇಕು. ಆದರೆ ಹೊಸ ಭಾರತದಲ್ಲಿ ವಿಪಕ್ಷ ನಾಯಕರಿಗೆ ಮಾತನಾಡಲು ಅನುಮತಿಯಿಲ್ಲ” ಎಂದು ತಿಳಿಸಿದರು.
ಮಹಾ ಕುಂಭಮೇಳದಲ್ಲಿ ಜನವರಿ 29ರಂದು ಕಾಲ್ತುಳಿತ ಉಂಟಾಗಿದ್ದು ಸುಮಾರು 30 ಮಂದಿ ಸಾವನ್ನಪ್ಪಿದ್ದಾರೆ ಎಂದು ಆಡಳಿತ ಹೇಳಿದೆ. ಆದರೆ ಮೃತರ ಸಂಖ್ಯೆ ಇನ್ನೂ ಹೆಚ್ಚಿದೆ, ಸರ್ಕಾರ ಮುಚ್ಚಿಡುತ್ತಿದೆ ಎಂಬುದು ವಿಪಕ್ಷಗಳ ಆರೋಪವಾಗಿದೆ. ಇನ್ನೂ 900 ಮಂದಿ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಸರ್ಕಾರ ಸರಿಯಾದ ಮಾಹಿತಿ ನೀಡಬೇಕು ಎಂದು ಎಸ್‌ಪಿ ನಾಯಕ ಅಖಿಲೇಶ್ ಯಾದವ್ ಆಗ್ರಹಿಸಿದ್ದಾರೆ.
