ನಾಗ್ಪುರದಲ್ಲಿ ನಡೆದ ಹಿಂಸಾಚಾರ ಪೂರ್ವಯೋಜಿತ ಪಿತೂರಿಯಂತೆ ಕಾಣುತ್ತದೆ. ಗುಂಪು ನಿರ್ದಿಷ್ಟ ಮನೆಗಳು ಮತ್ತು ಸ್ಥಳಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮಂಗಳವಾರ ಹೇಳಿದ್ದಾರೆ. ಹಾಗೆಯೇ ‘ಛಾವಾ’ ಸಿನಿಮಾದಿಂದಾಗಿ ಔರಂಗಜೇಬ್ ಮೇಲೆ ಆಕ್ರೋಶ ಉಂಟಾಗಿದೆ ಎಂದು ಹೇಳಿಕೊಂಡಿದ್ದಾರೆ.
ಸೋಮವಾರ ಮಹಾರಾಷ್ಟ್ರದ ಛತ್ರಪತಿ ಸಾಂಭಾಜಿನಗರದಲ್ಲಿರುವ ಮೊಘಲ್ ದೊರೆ ಔರಂಗಜೇಬ್ ಸಮಾಧಿಯನ್ನು ತೆರವುಗೊಳಿಸುವಂತೆ ಒತ್ತಾಯಿಸಿ ಸಂಘ ಪರಿವಾರದ ಸಂಘಟನೆಗಳು ನಡೆಸಿದ ಪ್ರತಿಭಟನೆ ವೇಳೆ ಹಿಂಸಾಚಾರ ನಡೆದಿದೆ. ಪ್ರತಿಭಟನೆ ವೇಳೆ ಕುರಾನ್ ಪ್ರತಿಯನ್ನು ಸುಡಲಾಗಿದೆ ಎಂಬ ವದಂತಿಯಿಂದಾಗಿ ಹಿಂಸಾಚಾರ ಸಂಭವಿಸಿದೆ.
ಇದನ್ನು ಓದಿದ್ದೀರಾ? ನಾಗ್ಪುರ ಹಿಂಸಾಚಾರ | ನಿಷೇಧಾಜ್ಞೆ ಜಾರಿ, ಫಡ್ನವೀಸ್ ಸರ್ಕಾರದ ವಿರುದ್ಧ ಆಕ್ರೋಶ
ಇದಾದ ಬೆನ್ನಲ್ಲೇ ಹಲವು ಮಂದಿಯನ್ನು ಬಂಧಿಸಲಾಗಿದೆ. ಐದು ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ. ಹಾಗೆಯೇ ನಾಗ್ಪುರ ನಗರದ ಹಲವು ಪ್ರದೇಶಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಹಿಂಸಾಚಾರದ ವೇಳೆ ಹಲವು ಮನೆಗಳು ಮತ್ತು ವಾಹನಗಳನ್ನು ಧ್ವಂಸಗೊಳಿಸಲಾಗಿದೆ.
ಈ ಬಗ್ಗೆ ಶಾಸಕಾಂಗ ಸಭೆಯಲ್ಲಿ ಮಾತನಾಡಿದ ಸಿಎಂ ಫಡ್ನವೀಸ್, “ಹಿಂಸಾಚಾರದಲ್ಲಿ ಮೂವರು ಪೊಲೀಸ್ ಉಪ ಆಯುಕ್ತರು ಸೇರಿದಂತೆ 33 ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ. ಹಿರಿಯ ಅಧಿಕಾರಿಗಳಲ್ಲಿ ಒಬ್ಬರ ಮೇಲೆ ಕೊಡಲಿಯಿಂದ ಹಲ್ಲೆ ಮಾಡಲಾಗಿದೆ” ಎಂದು ಹೇಳಿದ್ದಾರೆ.
ಮಧ್ಯ ನಾಗ್ಪುರದಲ್ಲಿ ಭುಗಿಲೆದ್ದ ಹಿಂಸಾಚಾರದಲ್ಲಿ ಮೂವರು ಡಿಸಿಪಿಗಳು (ಪೊಲೀಸ್ ಉಪ ಆಯುಕ್ತರು) ಸೇರಿದಂತೆ ಕನಿಷ್ಠ 12 ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ. ಪೊಲೀಸ್ ಸಿಬ್ಬಂದಿಯ ಮೇಲೆ ದಾಳಿ ಮಾಡಿದವರನ್ನು ಬಿಡುವುದಿಲ್ಲ ಎಂದು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಔರಂಗಜೇಬ್ ಸಮಾಧಿ ವಿವಾದ: ನಾಗ್ಪುರದಲ್ಲಿ ಹಿಂಸಾಚಾರ; ಹಲವರ ಬಂಧನ
“ಛಾವಾ ಸಿನಿಮಾದಿಂದಾಗಿ ಔರಂಗಜೇಬ್ ವಿರುದ್ಧ ಜನರು ಆಕ್ರೋಶಗೊಂಡಿದ್ದಾರೆ. ಆದರೆ ಜನರು ಕಾನೂನು ಮತ್ತು ಸುವ್ಯವಸ್ಥೆ, ಶಾಂತಿ ಕಾಪಾಡಿಕೊಳ್ಳಬೇಕು. ಗಲಭೆ ಮಾಡಿದರೆ, ಜಾತಿ, ಧರ್ಮ ನೋಡದೆ ಕ್ರಮಕೈಗೊಳ್ಳಲಾಗುವುದು” ಎಂದು ಸಿಎಂ ಎಚ್ಚರಿಕೆ ನೀಡಿದ್ದಾರೆ.
“ಗುಂಪು ನಿರ್ದಿಷ್ಟ ಮನೆಗಳು ಮತ್ತು ಸ್ಥಳಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ. ಈ ದಾಳಿ ಪೂರ್ವಯೋಜಿತ ಪಿತೂರಿಯಂತೆ ಕಾಣುತ್ತದೆ” ಎಂದು ಫಡ್ನವೀಸ್ ಹೇಳಿದ್ದಾರೆ. ಇನ್ನು “ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸುವ ಪಿತೂರಿ ನಡೆದಿದೆ” ಎಂದು ಉಪಮುಖ್ಯಮಂತ್ರಿ ಏಕನಾಥ್ ಶಿಂದೆ ಹೇಳಿದ್ದಾರೆ.
