ಶಹಾಪುರ ಸರ್ಕಾರಿ ಆಸ್ಪತ್ರೆಯ ಈ ಹಿಂದಿನ ಆಡಳಿತ ವೈದ್ಯಾಧಿಕಾರಿ ಡಾ.ಯಲ್ಲಪ್ಪ ಪಾಟೀಲ ಅವರ ಅವಧಿಯಲ್ಲಿ ನಡೆದ ಅವ್ಯವಹಾರಗಳನ್ನು ತನಿಖೆ ನಡೆಸಿ, ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ನಮ್ಮ ಕರ್ನಾಟಕ ಸೇನೆ ತಾಲೂಕು ಘಟಕದಿಂದ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಪತ್ರ ಸಲ್ಲಿಸಿದರು.
ಶಹಾಪುರ ತಾಲ್ಲೂಕು ಅಧ್ಯಕ್ಷ ಸಿದ್ದು ಪಟ್ಟೇದಾರ್ ಮಾತನಾಡಿ, ʼಶಹಾಪುರ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಡಾ.ಯಲ್ಲಪ್ಪ ಪಾಟೀಲ್ ರವರ ಅಧಿಕಾರ ಅವಧಿಯಲ್ಲಿ ಸುಮಾರು 5-6 ತಿಂಗಳು ಶಸ್ತ್ರ ಚಿಕಿತ್ಸೆ ಸ್ಥಗಿತಗೊಳಿಸಿ, ಖಾಸಗಿ ಆಸ್ಪತ್ರೆಗಳ ಜೊತೆ ಒಪ್ಪಂದ ಮಾಡಿಕೊಂಡಿದ್ದರು. ಸರ್ಕಾರಿ ಆಸ್ಪತ್ರೆಗೆ ಬರುವ ಬಡ ರೋಗಿಗಳಿಗೆ ಖಾಸಗಿ ಆಸ್ಪತ್ರೆಗೆ ಕಳುಹಿಸಿ ಹಣ ಗಳಿಸುವ ಹಗಲು ದರೋಡೆ ನಡೆದಿದೆʼ ಎಂದು ಆರೋಪಿಸಿದರು.
“ಡಾ.ಯಲ್ಲಪ್ಪ ಪಾಟೀಲ ಅಧಿಕಾರ ಅವಧಿಯಲ್ಲಿ ಸರ್ಕಾರದಿಂದ ಬಿಡುಗಡೆಯಾದ ಲಕ್ಷಾಂತರ ಹಣಕ್ಕೆ ಯಾವುದೇ ಲೆಕ್ಕಪತ್ರವಿಲ್ಲದೇ, ಮನಸ್ಸಿಗೆ ಬಂದಂತೆ ಹಣ ಲಪಟಾಯಿಸಲಾಗಿದೆ ಎಂಬ ಅನುಮಾನವಿದ್ದು, ಇಲಾಖೆ ಮಟ್ಟದಲ್ಲಿ ಒಂದು ಉನ್ನತ ಮಟ್ಟದ ತನಿಖಾ ತಂಡ ರಚನೆ ಮಾಡಿ, ಡಾ.ಯಲ್ಲಪ್ಪ ಪಾಟೀಲ್ ಅವಧಿಯಲ್ಲಿ ನಡೆದ ಅವ್ಯವಹಾರ ತನಿಖೆ ನಡೆಸಿ ಡಾ.ಯಲ್ಲಪ್ಪ ಪಾಟೀಲ್ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ದುರ್ಬಳಕೆ ಮಾಡಿಕೊಂಡ ಹಣ ಮರು ಪಾವತಿ ಮಾಡಿಸಿಕೊಂಡು ಅವರನ್ನು ಕರ್ತವ್ಯದಿಂದ ಅಮಾನತುಗೊಳಿಸಬೇಕುʼ ಎಂದು ಆಗ್ರಹಿಸಿದರು.
ಒಂದು ವೇಳೆ ಕಾಲಮಿತಿಯೊಳಗೆ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳದಿದ್ದರೆ ಮಾ.28ರಂದು ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಮುಂದೆ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ತೊಗರಿ ಬೆಳೆ ಹಾನಿ, ಆರ್ಥಿಕ ಹೊರೆ; ಒಂದೇ ತಿಂಗಳಲ್ಲಿ ಆರು ಮಂದಿ ರೈತರ ಆತ್ಮಹತ್ಯೆ
ಸಂಘಟನೆಯ ಪ್ರಮುಖರಾದ ದೇವಿಂದ್ರ ಕಟ್ಟಿಮನಿ, ಅಂಬರೀಶ್ ತೇಲಶುರ್, ರಾಜು, ಸದ್ದಾಂ, ಚಂದ್ರಕಾಂತ ಹಲಗಿ, ನಬಿ ಪಟೇಲ್, ಭೀಮರಾಯ, ಮಲ್ಲಯ್ಯಗೌಡ, ಶಂಕರ್ ಜಾಗಿರದಾರ, ಕಿರಣ, ಮಲ್ಲಿಕಾರ್ಜುನ, ವಿಶ್ವನಾಥ, ನಾಯ್ಕಡಿ, ಬಸವರಾಜ ಕಕ್ಕೇರಾ, ಇಬ್ರಾಹಿಂ ಇನ್ನಿತರರು ಉಪಸ್ಥಿತರಿದ್ದರು.