ಪತಂಜಲಿ ಮುಖ್ಯವಾಗಿ ಯೋಗವನ್ನು ಮನಸ್ಸಿನ ಚಂಚಲತೆಯನ್ನು ನಿಯಂತ್ರಿಸುವ ಮಾರ್ಗವೆಂದು ವಿವರಿಸಿದ್ದಾರೆಯೇ ಹೊರತು ಯೋಗದಿಂದಲೇ ಆರೋಗ್ಯ ಎನ್ನುವ ತೀರ್ಪನ್ನು ನೀಡಿಲ್ಲ. "ಯೋಗ: ಚಿತ್ತವೃತ್ತಿ ನಿರೋಧ:" ಎಂದು ಹೇಳುವಲ್ಲಿ ದೈಹಿಕ ಸಮಸ್ಯೆಗಳ ಕುರಿತಾಗಲೀ, ರೋಗದ ಕುರಿತಾಗಲೀ ಯಾವುದೇ ಪ್ರಸ್ತಾಪ ಮಾಡಿಲ್ಲ. ಆದರೆ ಇಂದು ಯೋಗಾಸನ ಮಾಡಿದರೆ ನಿರೋಗಿಯಾಗುತ್ತಾರೆ ಎನ್ನುವಂತಹ ಭ್ರಮೆಯನ್ನು ಬಿತ್ತಲಾಗುತ್ತಿದೆ
ಇತ್ತೀಚೆಗೆ ಹಿರಿಯ ನಾಗರಿಕರ ವೇದಿಕೆಯ ಒಂದು ಕಾರ್ಯಕ್ರಮಕ್ಕೆ ಅತಿಥಿಯಾಗಿ ಹೋಗಿದ್ದೆ. ಅಲ್ಲಿ ಬಂದಿದ್ದ ಓರ್ವ ಯೋಗ ಗುರುಗಳು ಯೋಗದ ಕುರಿತು ಹೇಳುತ್ತಾ ಕಾಲುನೋವು, ಬೆನ್ನುನೋವು, ಕುತ್ತಿಗೆ ನೋವು, ಉದರ ಸಂಬಂಧಿ ಕಾಯಿಲೆ, ಅಲರ್ಜಿ, ಕಣ್ಣಿನ ದೃಷ್ಟಿ ದೋಷವೇ ಸೇರಿದಂತೆ ಎಲ್ಲ ವಿಧದ ಕಾಯಿಲೆಗಳು ಯೋಗದಿಂದ ಗುಣವಾಗುತ್ತದೆ ಎಂದರು. ಆಗ ನಾನು ಅವರ ಬಳಿ ಕೇಳಿದೆ ಯೋಗದಿಂದ ಬಿಳಿಯಾಗಿರುವ ಹಿರಿಯರ ತಲೆಗೂದಲು ಕಪ್ಪಾಗುವುದಿಲ್ಲವೇ..? ಎಂದು. ಅವರು ಸುಮ್ಮನೆ ನಕ್ಕರು…! ನಾನು ಯೋಗದ ಕುರಿತು ವ್ಯಂಗ್ಯವಾಡಿದ್ದಲ್ಲ, ಆದರೆ ಯೋಗದಿಂದ ಎಲ್ಲವೂ ಸಾಧ್ಯ, ಎಲ್ಲ ರೋಗಗಳು ವಾಸಿಯಾಗುತ್ತವೆ ಎಂದೆಲ್ಲಾ ಅತಿರಂಜಿತವಾಗಿ ಬಿಂಬಿಸುವುದು ಸರಿಯಲ್ಲ.
ನಾನು ಆಯುರ್ವೇದ ಪದವಿ ಓದುವಾಗ ಯೋಗವನ್ನು ಒಂದು ವಿಷಯವಾಗಿ ಅಧ್ಯಯನ ಮಾಡಿದವ. ಅದಾದ ನಂತರವೂ ಹಲವಾರು ರೋಗಿಗಳಿಗೆ ಯೋಗದ ಮಹತ್ವದ ಕುರಿತು ತಿಳಿ ಹೇಳಿದ್ದುಂಟು. ಆದರೆ ಆರೋಗ್ಯಕ್ಕೆ ಯೋಗ ಪೂರಕವಾಗಬಲ್ಲದೇ ಹೊರತು ಯೋಗವೇ ಆರೋಗ್ಯಕ್ಕೆ ಕಾರಣ ಎನ್ನುವ ಭಾವನೆ ಸರಿಯಲ್ಲ. ಏಕೆಂದರೆ ಈಗಿನ ಯೋಗ ತರಗತಿ ಇರಬಹುದು ಅಥವಾ ಯೋಗ ಗುರುಗಳ ಪಾಠಗಳಿರಬಹುದು ಅದು ಪತಂಜಲಿ ಮಹರ್ಷಿ ಹೇಳಿದ ಯೋಗ ದರ್ಶನದಲ್ಲಿನ ಸಂಪೂರ್ಣ ವಿಚಾರವನ್ನು ಅಳವಡಿಸಿಕೊಂಡಿಲ್ಲ. ಪತಂಜಲಿ ಮುಖ್ಯವಾಗಿ ಯೋಗವನ್ನು ಮನಸ್ಸಿನ ಚಂಚಲತೆಯನ್ನು ನಿಯಂತ್ರಿಸುವ ಮಾರ್ಗವೆಂದು ವಿವರಿಸಿದ್ದಾರೆಯೇ ಹೊರತು ಯೋಗದಿಂದಲೇ ಆರೋಗ್ಯ ಎನ್ನುವ ತೀರ್ಪನ್ನು ನೀಡಿಲ್ಲ. “ಯೋಗ: ಚಿತ್ತವೃತ್ತಿ ನಿರೋಧ:” ಎಂದು ಹೇಳುವಲ್ಲಿ ದೈಹಿಕ ಸಮಸ್ಯೆಗಳ ಕುರಿತಾಗಲೀ, ರೋಗದ ಕುರಿತಾಗಲೀ ಯಾವುದೇ ಪ್ರಸ್ತಾಪ ಮಾಡಿಲ್ಲ. ಆದರೆ ಇಂದು ಯೋಗಾಸನ ಮಾಡಿದರೆ ನಿರೋಗಿಯಾಗುತ್ತಾರೆ ಎನ್ನುವಂತಹ ಭ್ರಮೆಯನ್ನು ಬಿತ್ತಲಾಗುತ್ತಿದೆ.

ಅಂತರರಾಷ್ಟ್ರೀಯ ಮಟ್ಟದಲ್ಲಿ ಯೋಗ ದಿನಾಚರಣೆಯನ್ನು ಪ್ರತಿವರ್ಷ ಜೂನ್ 21 ರಂದು ಕಳೆದ 9 ವರ್ಷಗಳಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಆದರೆ ನಿಜವಾಗಿಯೂ ಯೋಗವೆಂದರೆ ಕೇವಲ ಆಸನ ಮತ್ತು ಪ್ರಾಣಾಯಾಮ ಮಾತ್ರವೇ…? ಎನ್ನುವುದನ್ನು ಈಗಿನ ಯೋಗಗುರುಗಳು ಸ್ಪಷ್ಟಪಡಿಸಬೇಕು. ಆಸ್ತಿಕ ದರ್ಶನಗಳಲ್ಲಿ ಒಂದಾದ ಪತಂಜಲಿ ಮಹರ್ಷಿ ಬರೆದಿರುವ ಯೋಗ ದರ್ಶನದಲ್ಲಿ ಅಷ್ಟಾಂಗ ಯೋಗದ ಕುರಿತು ಹೇಳಿದೆ. ಈ ಎಂಟು ಅಂಗಗಳನ್ನು ಕ್ರಮವತ್ತಾಗಿ ಅಭ್ಯಾಸ ಮಾಡಿದರೆ ನಾವು ನಮ್ಮ ಮನಸ್ಸನ್ನು ನಿಯಂತ್ರಣದಲ್ಲಿರಿಸಿ ಪರಮಾತ್ಮನಲ್ಲಿ ಐಕ್ಯರಾಗಲು ಸಾಧ್ಯ ಎನ್ನುವ ತತ್ವ ಅದರಲ್ಲಿದೆ. ಯೋಗ ಶಬ್ದದ ಅರ್ಥ ಸಂಧಿ ಅಥವಾ ಕೂಟ ಎಂದು, ಆತ್ಮವು ಪರಮಾತ್ಮನೊಂದಿಗೆ ಸಂಧಿಸುವುದು ಎನ್ನುವ ಪಾರಮಾರ್ಥಿಕ ಚಿಂತನೆ ಇದರಲ್ಲಿ ಅಡಗಿದೆ. ಓರ್ವ ವ್ಯಕ್ತಿ ತನ್ನ ಬದುಕನ್ನು ಸಾರ್ಥಕ ಪಡಿಸಿಕೊಂಡು ಮೋಕ್ಷ ಪಡೆಯಲು ಈ ಅಷ್ಟಾಂಗ ಯೋಗದ ಹಾದಿಯಲ್ಲಿ ಸಾಗುವ ಕುರಿತಾಗಿ ಇಲ್ಲಿ ವಿವರಿಸಲಾಗಿದೆ.
ಅಪ್ಟಾಂಗ ಯೋಗದಲ್ಲಿ ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ, ಸಮಾಧಿ ಎನ್ನುವ ಎಂಟು ಅಂಗಗಳಿವೆ.
ಯಮ ಎಂದರೆ ಅಹಿಂಸೆ, ಸತ್ಯ, ಆಸ್ತೇಯ (ಕಳ್ಳತನ ಮಾಡದಿರುವುದು), ಬ್ರಹ್ಮಚರ್ಯ, ಅಪರಿಗ್ರಹ (ದುರಾಸೆ ಪಡದಿರುವುದು) ಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಸ್ವಚ್ಛ ವ್ಯಕ್ತಿತ್ವವನ್ನು ರೂಪಿಸಿ, ರೂಢಿಸಿಕೊಳ್ಳುವುದು. ಇದು ಜೈನ ಧರ್ಮದ ಪಂಚಾಣು ಸೂತ್ರಗಳಾಗಿವೆ.
ನಿಯಮ ಎಂದರೆ ಶೌಚ (ಅಂತರಂಗ & ಬಹಿರಂಗ ಶುದ್ದಿ), ಸಂತೋಷ, ತಪಸ್ಸು, ಸ್ವಾಧ್ಯಾಯ, ಈಶ್ವರ ಪ್ರಣಿಧಾನಗಳನ್ನು ಪರಿಪಾಲಿಸುವುದಾಗಿದೆ.
ಆಸನಗಳೆಂದರೆ ನಿಯಮಗಳ ಅಭ್ಯಾಸಕ್ಕೆ ಅನುಕೂಲಕರವಾದ ಸ್ಥಿರವೂ ಸುಖವೂ ಆದ ಭಂಗಿಗಳು. ವಿವಿಧ ರೀತಿಯ ಆಸನಗಳಿದ್ದು ಸಿದ್ದಾಸನ, ಪದ್ಮಾಸನ, ಸ್ವಸ್ತಿಕಾಸನ, ಶವಾಸನ ಮೊದಲಾದುವು ಅಗತ್ಯ ಸಂದರ್ಭಕ್ಕನುಸಾರವಾಗಿ ಉಪಯುಕ್ತವಾಗಿವೆ.
ಪ್ರಾಣಾಯಾಮ ನಮ್ಮ ಉಸಿರಾಟದ ಮೇಲಿನ ಹಿಡಿತ. ಅಂದರೆ ಶ್ವಸನ ಕ್ರಿಯೆಯನ್ನು ಕ್ರಮಬದ್ದವಾಗಿರಿಸುವ ಅಭ್ಯಾಸವಾಗಿದೆ.
ಪ್ರತ್ಯಾಹಾರ ಎಂದರೆ ಪಂಚೇಂದ್ರಿಯಗಳು ತಮ್ಮ ವಿಷಯಗಳ (ಶಬ್ದ, ರೂಪ, ಗಂಧ, ರಸ, ಸ್ಪರ್ಶ) ಕಡೆ ವಾಲದಂತೆ ತಡೆಯುವ ಪ್ರಕ್ರಿಯೆ.
ಧಾರಣ ಎಂದರೆ ಪ್ರಾಣಾಯಾಮದಿಂದ ಶುದ್ದವಾದ ಹಾಗೂ ಪ್ರತ್ಯಾಹಾರದಿಂದ ಏಕಾಗ್ರತೆಯೆಡೆಗೆ ಕೇಂದ್ರಿಕೃತವಾದ ಮನಸ್ಸನ್ನು ಒಂದೆಡೆ ನಿಲ್ಲುವಂತೆ ಮಾಡುವುದಾಗಿದೆ.
ಧ್ಯಾನ ಎಂದರೆ ಧಾರಣೆಯ ಜಾಗದಲ್ಲಿ ಏಕಾಗ್ರತೆಯಿಂದ ಮನಸ್ಸು ಸ್ಥಿರವಾಗಿ ನಿಲ್ಲಿಸುವ ಪ್ರಯತ್ನವಾಗಿದೆ.
ಸಮಾಧಿ ಎಂದರೆ ಧ್ಯಾನ ವಸ್ತುವಿನ ಸ್ವರೂಪವನ್ನು ಪಡೆದು ಮನಸ್ಸಿನ ಸ್ವರೂಪವನ್ನು ಕಳೆದುಕೊಳ್ಳುವುದಾಗಿದೆ. ಅದನ್ನೇ ತದೇವಾರ್ಥ ಮಾತ್ರ ನಿರ್ಬಾಸಂ ಸ್ವರೂಪ ಶೂನ್ಯಮಿವ ಸಮಾಧಿ: ಎಂದು ಹೇಳಲಾಗಿದೆ.
ಹೀಗೆ ಎಂಟು ಅಂಗಗಳ ಯೋಗದಿಂದ ವ್ಯಕ್ತಿ ತನ್ನೊಳಗಿನ ಕಲ್ಮಷಗಳನ್ನು ಕಳೆದುಕೊಂಡು ನಿರ್ಮಲ ಮನಸ್ಸಿನವನಾಗಿ ಪರಮಾತ್ಮನಲ್ಲಿ ಲೀನನಾಗಲು ಸಾಧ್ಯವಿದೆ ಎನ್ನುವ ನಂಬಿಕೆ ಯೋಗ ದರ್ಶನದ ಸಾರ.
ಈಗ ಪ್ರಸ್ತುತ ಯೋಗ ಎನ್ನುವುದು ಒಂದು ಪ್ಯಾಶನ್ ಆಗಿದೆ. ಅದು ಒಂದು ರೀತಿಯ ವ್ಯಾಯಾಮದಂತಾಗಿದೆ. ಅದೇ ಚಿಕಿತ್ಸಾಕ್ರಮವೂ ಆದಂತಿದೆ. ಆದರೆ ಪತಂಜಲಿ ಹೇಳಿರುವ ಯೋಗವು ಮನಸ್ಸಿನ ವಿಚಾರಕ್ಕೆ ಸಂಬಂಧಿಸಿದ್ದೇ ಹೊರತು ದೇಹದ ವಿಕಾರಕ್ಕೆ ಸಂಬಂಧಿಸಿಲ್ಲ. ಆಸನಗಳು ಕೇವಲ ನಿಯಮವನ್ನು ಆಚರಿಸಲು ದೇಹವನ್ನು ಇರಿಸಿಕೊಳ್ಳುವ ವಿವಿಧ ಭಂಗಿಗಳೇ ಹೊರತು ಅವು ವ್ಯಾಯಾಮದ ವಿವಿಧ ಮಜಲುಗಳಲ್ಲ. ಉಳಿದ ಆರು ಅಂಗಗಳನ್ನು ಅದರಲ್ಲೂ ಬಹುಮುಖ್ಯವಾಗಿ ಯಮ, ನಿಯಮಗಳನ್ನು ಆಚರಿಸದೇ ಕೇವಲ ಆಸನ ಮತ್ತು ಪ್ರಾಣಾಯಾಮಕ್ಕೆ ಹೆಚ್ಚಿನ ಮಹತ್ವ ನೀಡಿ ಯೋಗ ಮಾಡುವುದು ಯೋಗಸೂತ್ರ ಹೇಳಿದ ಮಹರ್ಷಿಗಳಿಗೆ ನಾವು ಎಸಗುವ ದ್ರೋಹವಾಗಿದೆ. ಕಾಲು ನೋವು, ಬೆನ್ನು ನೋವು, ತಲೆ ನೋವು, ಕಣ್ಣು ನೋವು, ಕಿವಿ ನೋವು, ಬಂಜೆತನ, ಉದರ ರೋಗ ಮೊದಲಾದುವು ಕಡಿಮೆಯಾಗುತ್ತದೆ ಎಂದು ಪತಂಜಲಿ ತಮ್ಮ ಯೋಗದರ್ಶನದಲ್ಲಿ ಹೇಳಿದ್ದಾರೆಯೇ…? ಅಥವಾ ಆಯುರ್ವೇದದ ಚರಕ, ಸುಶ್ರುತ, ವಾಗ್ಬಟಾಚಾರ್ಯರು ಉಲ್ಲೇಖಿಸಿದ್ದಾರೆಯೇ…? ಆದರೆ ಮಧ್ಯಕಾಲೀನ ಕೆಲವೊಂದು ಗ್ರಂಥಗಳಲ್ಲಿ ಯೋಗದ ಪ್ರಯೋಜನಗಳನ್ನು ಹೇಳುತ್ತವೆ ಅಷ್ಟೇ.
ಮಣಿಪುರ ಹಿಂಸಾಚಾರ | ಕುಕಿ ಬುಡಕಟ್ಟು ಸಮುದಾಯದ ಅರ್ಜಿಯ ತುರ್ತು ವಿಚಾರಣೆಗೆ ಸುಪ್ರೀಂಕೋರ್ಟ್ ನಕಾರ
ಹಠಯೋಗ ಪ್ರದೀಪಿಕಾದಲ್ಲಿ ಯೋಗದಿಂದ ಸ್ಥಿರತೆ, ಉತ್ತಮ ಆರೋಗ್ಯ ಮತ್ತು ಅಂಗಗಳು ಹಗುರವಾಗುತ್ತವೆ ಎಂದು ಹೇಳಲಾಗಿದೆ. ಹಾಗೆಯೇ ಕೆಲವೊಂದು ಆಸನಗಳು ಹೆಚ್ಚುವರಿ ಪ್ರಯೋಜನ ನೀಡುತ್ತವೆ ಎಂದೂ ಉಲ್ಲೇಖವಿದೆ. ಉದಾಹರಣೆಗೆ ಪಶ್ಚಿಮೋತ್ತಾಸನವು ಜೀರ್ಣರಸವನ್ನು ಹೆಚ್ಚು ಉತ್ಪತ್ತಿ ಮಾಡಿ, ಉದರ ಸಂಬಂಧಿ ಕಾಯಿಲೆಗಳನ್ನು ಸರಿಪಡಿಸುತ್ತದೆ. ಶವಾಸನವು ಆಯಾಸವನ್ನು ಕಡಿಮೆ ಮಾಡಿ, ದೇಹಕ್ಕೆ, ಮನಸ್ಸಿಗೆ ಹಿತವನ್ನುಂಟು ಮಾಡುತ್ತದೆ. ಪದ್ಮಾಸನವು ಎಲ್ಲಾ ರೋಗಗಳನ್ನು ನಾಶ ಪಡಿಸುತ್ತದೆ ಎಂದು ವಿವರಿಸಲಾಗಿದೆ. ಒಂದು ಇವೆಲ್ಲಾ ಹೌದಾದರೆ ಮತ್ತೇಕೆ ದೊಡ್ಡ ದೊಡ್ಡ ಆಸ್ಪತ್ರೆಗಳು, ತಜ್ಞವೈದ್ಯರು, ಅಲೋಪತಿ ಔಷಧ ಪದ್ದತಿ…? ಕೇವಲ ಯೋಗಗುರುಗಳೇ ಸಾಕಲ್ಲವೇ…? ಇನ್ನೊಂದು ಗ್ರಂಥ ಹೇಮಚಂದ್ರನ ಯೋಗಶಾಸ್ತ್ರದಲ್ಲಿ ಮಾಂತ್ರಿಕ ಶಕ್ತಿಯ ಕುರಿತು ಹೇಳಿದೆ, ಅದು ಇಂದಿನ ಕಾಲಮಾನದಲ್ಲಿ ಅಪ್ರಸ್ತುತವಾಗಿದೆ. ಆದರೆ ಯೋಗವು ರೋಗಗಳನ್ನು ಗುಣಪಡಿಸುತ್ತದೆ ಎನ್ನುವುದು ಇಂದಿನ ವರೆಗೆ ವೈದ್ಯಕೀಯ ವಿಜ್ಞಾನದ ಮೂಲಕ ಸಾಬೀತಾಗಿಲ್ಲ. ಹಾಗಾಗಿ ಯೋಗದಿಂದ ರೋಗವನ್ನು ವಾಸಿ ಮಾಡುತ್ತೇವೆ ಎಂದು ಹೇಳುವ ಯೋಗಗುರುಗಳೇ ಹೃದಯಾಘಾತವಾದಾಗ ಆಸ್ಪತ್ರೆಗಳ ಐಸಿಯುನಲ್ಲಿ ಮಲಗಿರುವುದನ್ನು, ಕಾಲುನೋವಿಗೆ ಮೂಳೆರೋಗ ತಜ್ಞರಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗರುವುದನ್ನು, ಬಂಜೆತನಕ್ಕೆ ಸ್ತ್ರೀರೋಗ ತಜ್ಞರಲ್ಲಿ ಔಷಧ ತೆಗೆದುಕೊಳ್ಳುವುದನ್ನು, ದೃಷ್ಟಿದೋಷಕ್ಕಾಗಿ ಕನ್ನಡಕ ಹಾಕಿಕೊಂಡಿರುವುದನ್ನು ನೋಡುತ್ತಿರುತ್ತೇವೆ.
ಭಾರತದಲ್ಲಿ ಪತ್ರಿಕಾ ಸ್ವಾತಂತ್ರ್ಯ ಉಳಿಸಿ-ಬೆಳೆಸಲು ಅಟ್ಲಾಂಟದಲ್ಲೊಂದು ಪ್ರದರ್ಶನ
ಹಾಗಾದರೆ ಇವರು ಕಲಿಸುವ ಯೋಗ ಬೇರೆಯವರಿಗೆ ಉಪದೇಶಿಸುವುದಕ್ಕೆ ಮಾತ್ರ ಸೀಮಿತವೇ…? ಎಲ್ಲಾ ಕಾಯಿಲೆ ಗುಣ ಪಡಿಸುತ್ತೇವೆ ಎಂದು ಯೋಗ ಕಲಿಸುತ್ತಾ ಉಳಿದರೆ ರೋಗಿಯ ಕಾಯಿಲೆ ಉಲ್ಬಣಿಸಿ, ಅದು ಗುಣಪಡಿಸಲಾಗದ ಸ್ಥಿತಿಗೆ ಹೋದರೆ ಅದಕ್ಕೆ ಯಾರು ಹೊಣೆ…? ಅದಕ್ಕಾಗಿ ಯೋಗದ ಮೂಲ ಉದ್ದೇಶ ಮತ್ತು ಅದರ ಇತಿಮಿತಿ ಅರಿತು ಯೋಗಾಭ್ಯಾಸ ಮಾಡುವುದು ಉತ್ತಮ
ಕೊನೆಯದಾಗಿ ಅಂತರರಾಷ್ಟ್ರೀಯ ಯೋಗದಿನಾಚರಣೆ ಮಾಡಿದ್ದರಿಂದ ನಾವು ʼವಿಶ್ವಗುರುʼ ಆಗಿದ್ದೇವೆ ಎಂದು ನಮ್ಮ ಬೆನ್ನನ್ನು ನಾವೇ ತಟ್ಟಿಕೊಳ್ಳುತ್ತಿದ್ದೇವೆ. ಆದರೆ ಯೋಗವನ್ನು ನಾವೇ ಸರಿಯಾಗಿ ಅರಿಯದೇ ಅರ್ಧಂಬರ್ದ ತಿಳಿದುಕೊಂಡು ಎಲ್ಲಾ ರೋಗವನ್ನು ಯೋಗದಿಂದ ಗುಣಪಡಿಸುತ್ತೇವೆ ಎಂದು ಹೇಳಿಕೊಂಡು ತಿರುಗುವುದು ಸರಿಯೇ..? ಯೋಗ ದರ್ಶನದಿಂದ ಇಂದಿನ ರಾಮ್ ದೇವ್ ಬಾಬಾರ ಯೋಗದ ವರೆಗಿನ ಎಲ್ಲಾ ಜ್ಞಾನವನ್ನು ಅರಿತು ಸಮಾಜಕ್ಕೆ ಹೇಳುವಂತಾಗಲಿ ಎನ್ನುವ ಸದಾಶಯ ನಮ್ಮದು.
