ಬೆಂಗಳೂರಿನ ಮಲ್ಲೇಶ್ವರದ ಬಳಿಯಿರುವ ಸ್ಯಾಂಕಿ ಕೆರೆಯಲ್ಲಿ ಮಾರ್ಚ್ 21ರಂದು ರಾತ್ರಿ ಹಮ್ಮಿಕೊಳ್ಳಲಾಗುವ ‘ಕಾವೇರಿ ಆರತಿ’ ಕಾರ್ಯಕ್ರಮನ್ನು ನಿಲ್ಲಿಸುವಂತೆ ಅರ್ಜಿದಾರರೊಬ್ಬರು ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.
ಸ್ಯಾಂಕಿ ಕೆರೆಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳುವುದರಿಂದ ಪಕ್ಷಿಗಳ ಬದುಕಿಗೆ ಮಾರಕವಾಗುತ್ತದೆ ಹಾಗೂ ಕೆರೆಯು ಬಫರ್ ವಲಯದಲ್ಲಿರುವ ಕಾರಣ ತಾತ್ಕಾಲಿಕ ಹಾಗೂ ಶಾಶ್ವತ ರಚನೆಗಳನ್ನು ನಿರ್ಮಿಸುವುದು ಕಾನೂನಿಗೆ ವಿರುದ್ಧವಾಗಿದೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ.
ಮಂಗಳವಾರ (ಮಾ.18) ತುರ್ತಾಗಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್ ವಿ ಅಂಜಾರಿಯಾ ಹಾಗೂ ನ್ಯಾಯಮೂರ್ತಿ ಎಂ ಐ ಅರುಣ್ ಅವರ ವಿಭಾಗೀಯ ಪೀಠ ಮಧ್ಯಂತರ ಅರ್ಜಿಯನ್ನು ಸಲ್ಲಿಸುವಂತೆ ಅರ್ಜಿದಾರರ ಪರ ವಕೀಲರನ್ನು ಕೇಳಿದ್ದು, ಹೀಗಾಗಿ ಪೀಠವು ವಿಚಾರಣೆಯನ್ನು ಕೈಗೆತ್ತಿಕೊಳ್ಳಲಿದೆ.
ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ ಅರ್ಜಿದಾರ ಗೀತಾ ಮಿಶ್ರಾ ಅವರ ಪರವಾಗಿ ವಕೀಲರಾದ ಜಿ ಆರ್ ಮೋಹನ್ ಅವರು ಹಾಜರಾಗಿ ಕೆರೆಯ ಒಳಗಡೆ ಹಮ್ಮಿಕೊಳ್ಳುವ ಕಾವೇರಿ ಆರತಿ ಕಾರ್ಯಕ್ರಮವು 2019ರ ಜಲ ಸಂಪನ್ಮೂಲಗಳ ಸಂರಕ್ಷಣೆ ಕಾಯ್ದೆಯನ್ನು ಉಲ್ಲಂಘಿಸಲಿದೆ ಎಂದು ನ್ಯಾಯಾಲಯಕ್ಕೆ ಮನವರಿಕೆ ಮಾಡಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಕಾರ್ಪೊರೇಟ್ ಕೈಯಲ್ಲಿ ಶಿಕ್ಷಣ, ಖರ್ಗೆಯವರ ಸಿಟ್ಟು ಮತ್ತು ಬಡವರ ಮಕ್ಕಳು
ತಾತ್ಕಾಲಿಕ ಕಟ್ಟಡಗಳನ್ನು ನಿರ್ಮಿಸುವುದು ಬಫರ್ ವಲಯದ ಕಾನೂನಿಗೆ ವಿರುದ್ಧವಾಗಿದೆ ಹಾಗೂ ಬೆಂಗಳೂರು ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಹಮ್ಮಿಕೊಂಡಿರುವ ಕಾರ್ಯಕ್ರಮಗಳು ಕೆರೆಯಲ್ಲಿನ ಹಕ್ಕಿಗಳ ರಾತ್ರಿ ಜೀವನಕ್ಕೆ ಮಾರಕವಾಗಲಿದೆ ಎಂದು ಅರ್ಜಿದಾರರು ತಿಳಿಸಿದ್ದಾರೆ.
ಕಾರ್ಯಕ್ರಮವು ಕರ್ನಾಟಕ ಕೆರೆ ಸಂರಕ್ಷಣಾ ಮತ್ತು ಅಭಿವೃದ್ಧಿ ಪ್ರಾಧಿಕಾರ ಕಾಯ್ದೆಯ ಸಂಪೂರ್ಣ ಉಲ್ಲಂಘನೆಯಾಗಲಿದೆ. ಮನರಂಜನಾ ಚಟುವಟಿಕೆಗಳನ್ನು ಯೋಜಿಸಿ ಜಾಹೀರಾತು ನೀಡುವುದರಿಂದ ಸ್ಯಾಂಕಿ ಕೆರೆಯಲ್ಲಿ ವಾಸಿಸುವ ಪಕ್ಷಿಗಳಿಗೆ ಅಪಾರ ತೊಂದರೆಯಾಗುತ್ತದೆ. ಬಫರ್ ವಲಯದೊಳಗಿನ ಚಟುವಟಿಕೆಗಳನ್ನು ನಿಲ್ಲಿಸಲು ಬಿಡಬ್ಲ್ಯೂಎಸ್ಎಸ್‌ಬಿ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ಅರ್ಜಿದಾರರು ನ್ಯಾಯಾಲಯವನ್ನು ಕೋರಿದ್ದಾರೆ.
ಮಾರ್ಚ್ 21ರಂದು ಕಾವೇರಿ ನದಿಗೆ ಗೌರವ ಸಲ್ಲಿಸುವ ಕ್ರಮವಾಗಿ ಸ್ಯಾಂಕಿ ಟ್ಯಾಂಕ್ ಕೆರೆಯಲ್ಲಿ ಪೂಜೆಗೆ ಪೂರ್ವ ತಯಾರಿ ನಡೆದಿದೆ. ಅದಲ್ಲದೆ ಈ ಕಾರ್ಯಕ್ರಮವೂ ಗಿನ್ನಿಸ್ ದಾಖಲೆ ಮಾಡುವ ನಿಟ್ಟಿನಲ್ಲಿ ಜಲಮಂಡಲಿ ಎಲ್ಲ ಸಿದ್ಧತೆ ಮಾಡಿಕೊಳ್ಳಲು ಮುಂದಾಗಿದೆ. ಕಾವೇರಿ ಆರತಿ ಮಾಡುವ ಬಗ್ಗೆ ಇತ್ತೀಚೆಗೆ ವಾರಾಣಸಿಗೆ ತೆರಳಿ ಸಚಿವ ಚಲುವರಾಯಸ್ವಾಮಿ ತಂಡ ಅಧ್ಯಯನ ಮಾಡಿದ್ದರು. ಈ ವಿಶೇಷ ಸಂಭ್ರಮಕ್ಕೆ ಉತ್ತರ ಪ್ರದೇಶದಿಂದ ವಿಮಾನದಲ್ಲಿ ಪುರೋಹಿತರನ್ನು ಕರೆತರಲಾಗುತ್ತಿದೆ.
ಈ ಕಾರ್ಯಕ್ರಮದಲ್ಲಿ ಜಲಮಂಡಲಿಯಲ್ಲಿ ಕೆಲಸ ಮಾಡುತ್ತಿರುವ ಅಧಿಕಾರಿಗಳು ಮತ್ತವರ ಕುಟುಂಬ ಸೇರಿ ಹತ್ತು ಸಾವಿರ ಜನರು ಭಾಗಿಯಾಗುವ ನಿರೀಕ್ಷೆಯಿದೆ.
ಕಾವೇರಿ ಆರತಿ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಭಾಗಿಯಾಗುವ ಸಾಧ್ಯತೆ ಇದೆ. ಆರತಿ ಬೆಳಗುವ ದೃಶ್ಯಾವಳಿಗಳನ್ನು ಎಲ್‌ಇಡಿ ಟಿವಿಗಳಲ್ಲಿ ವೀಕ್ಷಿಸುವ ಅವಕಾಶ ಇರಲಿದೆ. ಜೊತೆಗೆ ಕೆರೆಯ ಸುತ್ತಮುತ್ತ ಲೈಟಿಂಗ್ಸ್ ವ್ಯವಸ್ಥೆ, ಲೈವ್ ಆರ್ಕೆಸ್ಟ್ರಾ ಇರಲಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಮಾಹಿತಿ ನೀಡಿದ್ದರು.
ಸ್ಯಾಂಕಿ ಕೆರೆ ಬೆಂಗಳೂರಿನಲ್ಲಿ ಅತಿ ಸ್ವಚ್ಛವಾಗಿರುವಂತದ್ದು, ಇಲ್ಲಿ ಜನರು ಸೇರುವುದಕ್ಕೂ ಸೂಕ್ತ ವ್ಯವಸ್ಥೆ ಇರುವ ಕಾರಣ ಇದೆ ಪ್ರದೇಶ ಆಯ್ಕೆ ಮಾಡಿಕೊಂಡೆವು. ಗಾಳಿ ಆಂಜನೇಯ ದೇವಸ್ಥಾನ, ಸಹ ಪಟ್ಟಿಯಲ್ಲಿತ್ತು. ಆದರೆ, ದೇಗುಲದ ಸಮೀಪ ಚರಂಡಿ ಇದ್ದ ಕಾರಣ ಕೈಬಿಡಲಾಯಿತು. ಆದರೆ, ಸ್ಯಾಂಕಿ ಕೆರೆಯಲ್ಲೇ ಕಾವೇರಿ ಆರತಿ ಮಾಡಲು ಕಾರಣವೆಂದರೆ, ಕಾವೇರಿಯ ಉಪನದಿ ವೃಷಭಾವತಿ, ಅದರ ಉಗಮ ಸ್ಥಾನ ಸ್ಯಾಂಕಿ ಕೆರೆ ಹಿನ್ನೆಲೆ, ಇಲ್ಲಿಯೆ ಕಾರ್ಯಕ್ರಮ ನಡೆಸಲು ನಿರ್ಧರಿಸಲಾಯಿತು. ಸ್ಯಾಂಕಿ ಕೆರೆ ಸಮೀಪ ಜಲಗಂಗಮ್ಮ ದೇವಸ್ಥಾನವನ್ನು ಇತಿಹಾಸದಲ್ಲಿ ನಿರ್ಮಿಸಲಾಗಿತ್ತು. ಇದು ವೃಷಭಾವತಿ ಉಗಮದ ಸಂಕೇತ. ಕೆಲವರು ಬಸವನಗುಡಿಯ ನಂದಿ ಪಾದದಿಂದ ನೀರು ಉದ್ಭವಿಸಿತು ಎಂಬ ವಾದವು ಇದೆ ಎಂದು ಜಲಮಂಡಲಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.