- ಸಾಮಾಜಿಕ ಜಾಲತಾಣಗಳಲ್ಲಿನ ಫೇಕ್ ನ್ಯೂಸ್‌ಗಳಿಗೆ ಕಡಿವಾಣ
- ಸುಳ್ಳು ಸುದ್ದಿ ಹರಿಬಿಡುವವರ ವಿರುದ್ಧ ಕಠಿಣಕ್ರಮ ಜಾರಿಗೆ ಸೂಚನೆ
ರಾಜ್ಯದ ಎಲ್ಲಾ ಠಾಣೆಗಳಲ್ಲೂ ಪ್ರತ್ಯೇಕ ಸೈಬರ್ ವಿಂಗ್ ರಚಿಸುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಫೇಕ್ ನ್ಯೂಸ್ ಹರಡುವುದಕ್ಕೆ ಕಡಿವಾಣ ಹಾಕಲಾಗುತ್ತದೆ ಎಂದು ಗೃಹ ಸಚಿವ ಜಿ ಪರಮೇಶ್ವರ್ ಹೇಳಿದರು.
ಬೆಂಗಳೂರಿನಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದ ಎಲ್ಲ ಠಾಣೆಗಳಲ್ಲೂ ಪ್ರತ್ಯೇಕ ಸೈಬರ್ ವಿಂಗ್ ರಚಿಸಲಾಗುವುದು. ಅದಕ್ಕೂ ಮುನ್ನ ಗೂಗಲ್, ಫೇಸ್ ಬುಕ್, ಟ್ವಿಟರ್ ಸೇರಿದಂತೆ ಸಾಮಾಜಿಕ ಜಾಲತಾಣದ ಮುಖ್ಯಸ್ಥರ ಸಭೆ ಕರೆಯಲಾಗುತ್ತಿದೆ ಎಂದು ಹೇಳಿದರು.
ಫೇಕ್ ಸುದ್ದಿ ಹರಿಬಿಡುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಇದಕ್ಕೆ ಮೊದಲು ಕಡಿವಾಣ ಹಾಕಲಾಗುವುದು. ಹಾಗೆಯೇ ಯಾರು ಸುಳ್ಳು ಸುದ್ದಿ ಹರಿಬಿಡುತ್ತಾರೋ ಅವರ ವಿರುದ್ಧ ಕ್ರಮಕೈಗೊಳ್ಳಲಾಗುವುದು. ಯಾವುದೇ ಪಕ್ಷ, ಸಂಘಟನೆ ಇರಲಿ ಕ್ರಮ ನಿಶ್ಚಿತ ಎಂದು ಗೃಹ ಸಚಿವರು ಹೇಳಿದರು.
ಈ ಸುದ್ದಿ ಓದಿದ್ದೀರಾ?:ರೇರಾ ಅನುಮತಿ ಇಲ್ಲದೆ ನಿವೇಶನ ನೋಂದಣಿ ಮಾಡುವಂತಿಲ್ಲ: ಸಚಿವ ಜಮೀರ್ ಅಹಮದ್
ಕೆಲ ದಿನಗಳ ಹಿಂದಷ್ಟೇ ಫೇಕ್ ನ್ಯೂಸ್ ಮೂಲಗಳನ್ನು ಪತ್ತೆ ಹಚ್ಚಿ ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಡಿಸುತ್ತಿರುವವರನ್ನು ಗುರುತಿಸಿ ಕಾನೂನು ಕ್ರಮಕ್ಕೆ ಒಳಪಡಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.
ಈ ಹಿಂದೆ ಬೆಂಗಳೂರು ನಗರ ಪೊಲೀಸ್ ಕಮಿಷನರೇಟ್ ಮತ್ತು ಪೊಲೀಸ್ ಪ್ರಧಾನ ಕಚೇರಿಯಲ್ಲೇ ಒಂದು ತಾಂತ್ರಿಕ ತಂಡ ಫೇಕ್ ನ್ಯೂಸ್ ಗಳನ್ನು ಪತ್ತೆ ಹಚ್ಚಿ, ಫ್ಯಾಕ್ಟ್ ಚೆಕ್ ಮಾಡಿ ಜನರನ್ನು ಎಚ್ಚರಿಸುವ, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕೆಲಸ ನಡೆಸುತ್ತಿತ್ತು. ಆದರೆ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಈ ವಿಭಾಗವನ್ನು ರದ್ದುಗೊಳಿಸಿತ್ತು.