ಮೈಸೂರು ಜಿಲ್ಲೆ, ಹುಣಸೂರಿನ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಮಾಜಿ ನಗರಸಭೆ ಸದಸ್ಯ ಹಾಗೂ ಮಾದಿಗ ಸಮುದಾಯದ ಮುಖಂಡ ಎಂ ಶಿವಕುಮಾರ್ ಮಾತನಾಡಿ ” ಮಾರ್ಚ್ 21 ರಂದು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಒಳ ಮೀಸಲಾತಿ ಜಾರಿಗೆ ಒತ್ತಾಯಿಸಿ ಮಾದಿಗ ಸಮುದಾಯದಿಂದ ಕ್ರಾಂತಿಕಾರಿ ಸಮಾವೇಶ ” ನಡೆಯಲಿದೆ ಎಂದರು.
” ಒಳ ಮೀಸಲಾತಿ ಬೇಡಿಕೆ ರಾಜ್ಯದ ಮಾದಿಗ ಸಮುದಾಯದ ಬಹು ದೀರ್ಘಕಾಲದ ಬೇಡಿಕೆಯಾಗಿದೆ. ಒಳ ಮೀಸಲಾತಿ ಜಾರಿಗಾಗಿ ಸಮುದಾಯ ಮೂವತ್ತು ವರ್ಷಗಳಿಂದಲೂ ನಿರಂತರವಾಗಿ ಹೋರಾಟ ಮಾಡುತ್ತಲೇ ಇದೇ. ಈ ನಡುವೆ ಘನತವೆತ್ತ ಸುಪ್ರೀಂ ಕೋರ್ಟ್ ನಿರ್ದೇಶನ ಮಾಡಿದ್ದರು ಸಹ ಕರ್ನಾಟಕ ಸರ್ಕಾರ ಒಳ ಮೀಸಲಾತಿ ಜಾರಿಗೆ ವಿಳಂಬ ನೀತಿ ಅನುಸರಿಸುತ್ತಿದೆ.
ಸರ್ಕಾರದ ವಿಳಂಬ ನೀತಿ ಸಾಮಾಜಿಕ ನ್ಯಾಯದ ತಿರಸ್ಕಾರವು ಆಗಿದ್ದು ಬಹು ಸಂಖ್ಯಾತ ಸಮುದಾಯದ ಅವಹೇಳನ ಮಾಡಿದಂತಾಗಿದೆ. ಹಾಗಾಗಿ, ರಾಜ್ಯ ಸರ್ಕಾರದ ವಿಳಂಬ ನೀತಿಯ ಧೋರಣೆಯನ್ನು ಖಂಡಿಸಿ ದಿನಾಂಕ 21-03-2025 ರಂದು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ‘ ಕ್ರಾಂತಿಕಾರಿ ಸಮಾವೇಶ ‘ ಹಮ್ಮಿಕೊಳ್ಳಲಾಗಿದೆ ” ಎಂದರು.
ಸಮುದಾಯದ ಮತ್ತೋರ್ವ ಮುಖಂಡ ಜೆ ಮಹದೇವು ಮಾತನಾಡಿ ” ಹರಿಹರದ ಪ್ರೊ. ಬಿ ಕೃಷ್ಣಪ್ಪ ಅವರ ಸಮಾಧಿಯಿಂದ ಆರಂಭವಾದ ಪಾದಯಾತ್ರೆ ಈಗ ಬೆಂಗಳೂರು ಕಡೆಗೆ ಧಾವಿಸುತ್ತಿದೆ. ಸಾಮಾಜಿಕ ಹೋರಾಟಗಾರ ಬಾಸ್ಕರ್ ಪ್ರಸಾದ್ ಅವರ ನೇತೃತ್ವದಲ್ಲಿ ಮಾದಿಗ ಸಮುದಾಯದ ಸಮಾವೇಶ ನಡೆಯಲಿದೆ. ಸರ್ಕಾರದ ವಿಳಂಬ ನೀತಿ ಸರಿಯಾದದ್ದು ಅಲ್ಲ ಈಗಾಗಲೇ ತಮಿಳುನಾಡು, ಕೇರಳ, ಹರಿಯಾಣ, ಪಂಜಾಬ್, ತೆಲಂಗಾಣದಲ್ಲಿ ಜಾರಿಯಾಗಿದ್ದು ಕರ್ನಾಟಕದಲ್ಲಿ ಮಾತ್ರ ಜಾರಿಯಾಗದೆ ಇನ್ನು ಮೀನಾಮೇಷ ಎಣಿಸುತ್ತಿರುವುದು ಶೋಚನಿಯ ಸಂಗತಿ. ಈ ಕೂಡಲೇ ಒಳ ಮೀಸಲಾತಿ ಜಾರಿ ಮಾಡಬೇಕು ” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಹಳೇ ದ್ವೇಷ, ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಎಫ್ಐಆರ್ ದಾಖಲು
ಪ್ರತ್ರಿಕಾಗೋಷ್ಟಿಯಲ್ಲಿ ನಗರಸಭಾ ಸದಸ್ಯ ಹೆಚ್ ಪಿ ಸತೀಶ್ ಕುಮಾರ್, ದಸಂಸ ಮುಖಂಡ ಕಾಂತರಾಜು, ರಾಯನಹಳ್ಳಿ ಪ್ರಭ ಸೇರಿದಂತೆ ಇನ್ನಿತರರು ಇದ್ದರು.