ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ದಿವಂಗತ ವೈ ಎಸ್ ರಾಜಶೇಖರ ರೆಡ್ಡಿ ಅವರ ಪುತ್ರಿ ವೈ ಎಸ್ ಶರ್ಮಿಳಾ ಈಗ ತಾನು ಕಟ್ಟಿದ ‘ಯುವಜನ ಶ್ರಮಿಕ ರೈತ ತೆಲಂಗಾಣ ಪಕ್ಷ’ (ವೈಎಸ್‌ಆರ್‌ಟಿಪಿ)ವನ್ನು ಕಾಂಗ್ರೆಸ್‌ನೊಂದಿಗೆ ವಿಲೀನಗೊಳಿಸುವ ಕುರಿತು ಮಾತುಕತೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಮುಂದಿನ ಆರೇಳು ತಿಂಗಳಲ್ಲಿ ತೆಲಂಗಾಣದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಅದಕ್ಕೂ ಮುನ್ನವೇ ವೈ ಎಸ್ ಶರ್ಮಿಳಾ ಅವರು ಮಹತ್ವದ ನಿರ್ಧಾರಕ್ಕೆ ಬಂದಿದ್ದಾರೆ. ಜುಲೈ 8 ರಂದು ವೈಎಸ್‌ಆರ್ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ವಿಲೀನದ ಕುರಿತು ಘೋಷಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಕರ್ನಾಟಕ ಚುನಾವಣೆಯಲ್ಲಿನ ಕಾಂಗ್ರೆಸ್ ಗೆಲುವಿನಿಂದ ಹುರುಪು ಪಡೆದಿರುವ ಕಾಂಗ್ರೆಸ್ ಹೈಕಮಾಂಡ್ ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ಪಕ್ಷವನ್ನು ಬಲಪಡಿಸುವ ಸಲುವಾಗಿ ಹಲವು ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಆಂಧ್ರಪ್ರದೇಶದಲ್ಲಿ ಶರ್ಮಿಳಾ ಅವರಿಗೆ ನಿರ್ಣಾಯಕ ನಾಯಕತ್ವದ ಪಾತ್ರವನ್ನು ನೀಡಿ ಪಕ್ಷವನ್ನು ಅಧಿಕಾರಕ್ಕೆ ತರಲು ಚಿಂತಿಸುತ್ತಿದೆ ಎಂದು ವರದಿಯೊಂದು ಹೇಳಿದೆ.
ತನ್ನ ಪಕ್ಷವನ್ನು ಕಾಂಗ್ರೆಸ್‌ನೊಂದಿಗೆ ವಿಲೀನಗೊಳಿಸಿದರೆ ತಮ್ಮ ಸಹೋದರ, ಸದ್ಯ ಆಂಧ್ರ ಮುಖ್ಯಮಂತ್ರಿ ಆಗಿರುವ ವೈ ಎಸ್ ಜಗನ್‌ಮೋಹನ್ ರೆಡ್ಡಿ ಅವರೊಂದಿಗಿನ ಸಂಬಂಧ ಇನ್ನಷ್ಟು ಹದಗೆಡಬಹುದು ಎಂಬ ಆತಂಕವೂ ಶರ್ಮಿಳಾ ಅವರಿಗಿದೆ. ಆದರೆ ತಮ್ಮ ರಾಜಕೀಯ ಭವಿಷ್ಯದ ದೃಷ್ಟಿಯಿಂದ ಅವರು ದೊಡ್ಡ ಸಾಹಸಕ್ಕೆ ಕೈಹಾಕುವುದಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ.
ಈ ಸುದ್ದಿ ಓದಿದ್ದೀರಾ? ಮೋದಿ ಅಮೆರಿಕ ಭೇಟಿ: ಮಾನವ ಹಕ್ಕುಗಳ ಕಾರ್ಯಕರ್ತರಿಂದ ಪ್ರತಿಭಟನೆ
ಕರ್ನಾಟಕದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜಯಗಳಿಸಿದ ಕೆಲವೇ ದಿನಗಳಲ್ಲಿ ಶರ್ಮಿಳಾ ಅವರು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಈ ಸಮಯದಲ್ಲಿ ಕಾಂಗ್ರೆಸ್‌ನೊಂದಿಗೆ ವಿಲೀನದ ಮಾತುಕತೆ ನಡೆದಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬಂದಿವೆ.
ಮುಂದಿನ ತಿಂಗಳು ಕಡಪದಲ್ಲಿ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರ ಸಮ್ಮುಖದಲ್ಲಿ ಪಕ್ಷಗಳ ವಿಲೀನದ ಬಗ್ಗೆ ಘೋಷಣೆಯಾಗುವ ಸಾಧ್ಯತೆಯಿದೆ ಎಂದು ವರದಿಗಳು ಹೇಳಿವೆ.