ಉಡುಪಿ ಜಿಲ್ಲೆಯ ಮಲ್ಪೆ ಬಂದರಿಗೆ ಏಷ್ಯಾದಲ್ಲೇ ಅತಿದೊಡ್ಡ ಸರ್ವಋತು ಮೀನುಗಾರಿಕೆ ಬಂದರು ಎಂಬ ಹೆಗ್ಗಳಿಕೆಯಿದೆ. ಇಲ್ಲಿ ನಿತ್ಯವೂ ಕೋಟ್ಯಂತರ ರೂಪಾಯಿ ವಹಿವಾಟು ನಡೆಯುತ್ತದೆ. ಇಲ್ಲಿನ ಮೀನುಗಾರಿಕೆ ಚಟುವಟಿಕೆಗಳನ್ನೇ ನಂಬಿ ಸಾವಿರಾರು ಕುಟುಂಬಗಳಿವೆ. ಕೇವಲ ಕರಾವಳಿ ಪ್ರದೇಶದವರು ಮಾತ್ರವಲ್ಲದೆ ಹೊರ ಜಿಲ್ಲೆ, ಹೊರ ರಾಜ್ಯದಿಂದಲೂ ನೂರಾರು ಮಂದಿ ಇಲ್ಲಿ ಪ್ರತಿನಿತ್ಯ ಕಾರ್ಮಿಕರಾಗಿ ದುಡಿದು ಜೀವನ ಸಾಗಿಸುತ್ತಿದ್ದಾರೆ.
ಹೀಗೆ ತನ್ನ ಜೀವನವನ್ನು ಅರಸಿ ದೂರದ ವಿಜಯನಗರ ಜಿಲ್ಲೆಯಿಂದ ಬಂದು, ಕಳೆದ ಐದು ವರ್ಷಗಳಿಂದ ಮಲ್ಪೆ ಬಂದರಿನಲ್ಲಿ ಬೋಟಿನಲ್ಲಿರುವ ಮೀನನ್ನು ಬುಟ್ಟಿಯಲ್ಲಿ ತುಂಬಿಸಿ ಹೊರುವ ಕೆಲಸ ಮಾಡುತ್ತಿದ್ದ ಮಹಿಳೆ ಮೇಲೆ ಮೀನು ಕಳ್ಳತನದ ಆರೋಪ ಹೊರಿಸಿ ಮರಕ್ಕೆ ಕಟ್ಟಿಹಾಕಿ ಹಲ್ಲೆ ನಡೆಸಿದ ವೀಡಿಯೋ ಸಾಮಾಜಿಕ ತಾಣಗಳಲ್ಲಿ ಬಹಳಷ್ಟು ವೈರಲ್ ಆಗಿ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗುತ್ತಿದ್ದಂತೆ ಕೇಸು ಕೂಡ ದಾಖಲಾಗಿದೆ.

ಎಂದಿನಂತೆ ಮಲ್ಪೆ ಬಂದರಿನಲ್ಲಿ ಮಂಗಳವಾರ ಬೆಳಿಗ್ಗೆ ಆರು ಗಂಟೆ ಸಮಯಕ್ಕೆ ಮಲ್ಪೆ ಬಂದರಿನಲ್ಲಿ ಶ್ರೀ ಆರಾಧನ ಬೋಟ್ ನಿಂದ ಮೀನು ಖಾಲಿ ಮಾಡಿ ಒಂದು ಬುಟ್ಟಿಯಲ್ಲಿ ಸಿಗಡಿ (ಚಟ್ಲಿ) ಮೀನನ್ನು ತಲೆಯ ಮೇಲೆ ಹೊತ್ತುಕೊಂಡು ಪದಾರ್ಥಕ್ಕೆಂದು ಕೊಂಡು ಹೋಗಿದ್ದು, ಇದರಿಂದ ಕೋಪಗೊಂಡ ಬಂದರಿನಲ್ಲಿ ಮೀನು ಮಾರಾಟ ಮಾಡುವ ಶ್ರೀಮತಿ ಲಕ್ಷ್ಮೀ, ಶಿಲ್ಪ, ಆರಾಧನ ಬೋಟಿನ ಚಂದ್ರ, ಸುಂದರ ಮತ್ತು ಇತರ ಸುಮಾರು ಜನರು ಅಕ್ರಮವಾಗಿ ಸೇರಿಕೊಂಡು ತಡೆದು ನಿಲ್ಲಿಸಿ, ನಮ್ಮ ಊರು ಮಲ್ಪೆಗೆ ಎಲ್ಲಿಂದಲೋ ಬಂದು ನಮ್ಮ ಮೀನು ಕೊಂಡು ಹೋಗುತ್ತೀಯ ಎಂದು ಅವಾಚ್ಯವಾಗಿ ಬೈದು ಅವರೆಲ್ಲ ಸೇರಿ ಮೈಮೇಲೆ ಕೈಹಾಕಿ ಎಳೆದಾಡಿ ಬಳಿಕ, ಅಲ್ಲಿನ ಒಂದು ಮರಕ್ಕೆ ಹಗ್ಗದಿಂದ ಕಟ್ಟಿಹಾಕಿ ಲಕ್ಷ್ಮೀ ಮತ್ತು ಸುಂದರ ಇವರು ಕೈಯಿಂದ ಕೆನ್ನೆಗೆ, ಮೈಮೇಲೆ ಹೊಡೆದು ಹಲ್ಲೆ ನಡೆಸಿದ್ದಾರೆ.

ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಪ್ರಕರಣದಲ್ಲಿ ಆರೋಪಿತರಾದ ಶ್ರೀಮತಿ ಲಕ್ಷ್ಮೀ, ಶಿಲ್ಪ ಮತ್ತು ಸುಂದರ್ ರವರನ್ನು ಬಂದಿಸಲಾಗಿದೆ ಹಾಗೂ ಇನ್ನೋರ್ವ ಶಂಕಿತನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ. ವಿಡಿಯೋ ಹಾಗೂ ಇತರ ಸಾಕ್ಷಿಗಳನ್ನು ಪರಿಶೀಲಿಸಿ, ಮುಂದೆ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.

ಈ ಬಗ್ಗೆ ಉಡುಪಿ ಜಿಲ್ಲಾಧಿಕಾರಿ ಡಾ ವಿದ್ಯಾಕುಮಾರಿ ಮಾಧ್ಯಮದ ಜೊತೆ ಮಾತನಾಡಿ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗುತ್ತಿರುವ ವೀಡಿಯೋ ನನ್ನ ಗಮನಕ್ಕೆ ಬಂದಿದೆ ಈ ಘಟನೆಯ ಕುರಿತು ಕ್ರಮ ಕೈಗೊಳ್ಳಲು ತಿಳಿಸಿದ್ದೇನೆ. ಹೊಡೆಯುವಾಗ ಜನ ನಗುತ್ತ ನಿಂತಿದ್ದಾರೆ. ಈ ರೀತಿಯ ಮಾನಸಿಕತೆ ಬೆಳೆದರೆ ಕಷ್ಟ. ಈ ಘಟನೆಯ ಕುರಿತು ಎಸ್ಪಿಯವರೊಂದಿಗೆ ಮಾತನಾಡಿದ್ದು ಸೂಕ್ತ ಕ್ರಮ ಕೈಗೊಳ್ಳಲು ತಿಳಿಸಲಾಗಿದೆ ಎಂದು ಹೇಳಿದರು.

ಪ್ರಜ್ಞಾವಂತ ಉಡುಪಿ ಜಿಲ್ಲೆಯಲ್ಲಿ ಇದೊಂದು ಹೃದಯ ವಿದ್ರಾಹಕ ಘಟನೆ – ಕೋಟ ನಾಗೇಂದ್ರ ಪುತ್ರನ್
ಓರ್ವ ಮಹಿಳೆಯನ್ನು ಮರಕ್ಕೆ ಕಟ್ಟಿ ಮನಸೋ ಇಚ್ಛೆ ಹೊಡೆಯುತ್ತಿರುದು ನೋಡಿದರೆ ನಮ್ಮ ಉಡುಪಿ ಯಾವ ಮಟ್ಟಕ್ಕೆ ಹೋಗುತ್ತಾ ಇದೆ ಎನ್ನುವುದೇ ಒಂದು ರೀತಿಯ ಮನಸ್ಸಿಗೆ ನೋವು ಆಗ್ತಾ ಇದೆ.
ನಾವು ಸೋಶಿಯಲ್ ಮೀಡಿಯಾಗಳಲ್ಲಿ ಎಲ್ಲೊ ಉತ್ತರ ಪ್ರದೇಶ, ಬಿಹಾರ ದಂತಹ ರಾಜ್ಯದಲ್ಲಿ ಇಂತಹ ಘಟನೆ ನಡೆದಿದ್ದು ನೋಡಿದ್ದೇವೆ, ಆದರೆ ಇವತ್ತು ನಮ್ಮ ಜಿಲ್ಲೆ ಉಡುಪಿ ಮಲ್ಪೆ ಶಾಸಕರ ಬೀಡು, ಇಲ್ಲಿ ಓರ್ವ ಮಹಿಳೆಗೆ ಮರಕ್ಕೆ ಕಟ್ಟಿ ಹೊಡೆಯುತ್ತಿರುವುದು ನೋವಿನ ಸಂಗತಿ.

ಮಲ್ಪೆಯಲ್ಲಿ ಮಹಿಳೆಯನ್ನು ಮರಕ್ಕೆ ಕಟ್ಟಿ ಹಲ್ಲೆಗೈದ ಘಟನೆ ಖಂಡನೀಯವಾಗಿದ್ದು ತಪ್ಪಿತಸ್ಥರ ವಿರುದ್ಧ ಸೂಕ್ರ ಕೈಗೊಳ್ಳಲು ಸಾಲಿಡಾರಿಟಿ ಉಡುಪಿ ಆಗ್ರಹಿಸಿದೆ.
ಮಹಿಳೆಯು ಮೀನು ಕದ್ದ ಆರೋಪದಡಿಯಲ್ಲಿ ಮರಕ್ಕೆ ಕಟ್ಟಿ ಹೊಡೆಯುವ ವೀಡಿಯೋವೊಂದು ವೈರಲಾಗಿದೆ. ಈ ಘಟನೆಯು ಅತ್ಯಂತ ಅಮಾನವೀಯವಾಗಿದ್ದು ಒಂದು ವೇಳೆ ಮಹಿಳೆ ತಪ್ಪು ಎಸಗಿದ್ದರೂ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಬೇಕು. ಆದರೆ ಈ ಘಟನೆಯಲ್ಲಿ ಅಮಾನವೀಯವಾಗಿ ವರ್ತಿಸಿ ಗುಂಪುಗೂಡಿ ಮರಕ್ಕೆ ಕಟ್ಟಿ ಥಳಿಸಲಾಗಿದೆ. ಕಾನೂನನ್ನು ಕೈಗೆತ್ತಿಕೊಳ್ಳುವ ಹಕ್ಕು ಯಾರಿಗೂ ಇಲ್ಲ ಹಾಗಾಗಿ ಸರಕಾರ ಕೂಡಲೇ ಇಂತಹ ಕೃತ್ಯದ ವಿರುದ್ಧ ಕ್ರಮ ಕೈಗೊಳ್ಳಬೇಕಾಗಿದೆ. ತಪ್ಪಿಸ್ಥರನ್ನು ಬಂಧಿಸಿ ಮಹಿಳೆಗೆ ನ್ಯಾಯ ಒದಗಿಸಿಕೊಡಬೇಕೆಂದು ಈ ಮೂಲಕ ಸಾಲಿಡಾರಿಟಿ ಯೂತ್’ಮೂವ್ಮೆಂಟ್ ಜಿಲ್ಲಾಧ್ಯಕ್ಷರಾದ ಅಫ್ವಾನ್ ಹೂಡೆ ಆಗ್ರಹಿಸಿದ್ದಾರೆ.
ಮೀನು ಕದ್ದ ಆರೋಪದಲ್ಲಿ ಮಹಿಳೆಯೊಬ್ಬರನ್ನು ಮರಕ್ಕೆ ಕಟ್ಟಿ ಹಾಕಿ ಥಳಿಸಿರುವ ಅಮಾನವೀಯ ವರ್ತನೆ ಉಡುಪಿ ಜಿಲ್ಲೆಯ ಮಲ್ಪೆ ಬಂದರಿನಲ್ಲಿ ನಡೆದಿದ್ದು ಕೆಪಿಸಿಸಿ ವಕ್ತಾರರಾದ ವೆರೋನಿಕಾ ಕರ್ನೆಲೀಯೋ ಖಂಡಿಸಿದ್ದಾರೆ.
ಘಟನೆಗೆ ಸಂಬಂಧಿಸಿ ಈಗಾಗಲೇ ಪೊಲೀಸರು ನಾಲ್ವರು ವ್ಯಕ್ತಿಗಳನ್ನು ಬಂಧಿಸಿರುವುದಾಗಿ ಪೊಲೀಸ್ ವರಿಷ್ಠಾಧಿಕಾರಿಗಳು ತಿಳಿಸಿದ್ದು ಇದರ ಜೊತೆಗೆ ಒರ್ವ ಮಹಿಳೆಯ ಮೇಲೆ ಅಮಾನುಷ ವರ್ತನೆ ತೋರುತ್ತಿದ್ದಾಗ ಮೂಕ ಪ್ರೇಕ್ಷಕರಂತೆ ವರ್ತಿಸಿದ ಸಾರ್ವಜನಿಕರ ನಡೆ ಕೂಡ ಖಂಡನೀಯವಾಗಿದೆ. ಮಹಿಳೆಯಿಂದ ತಪ್ಪು ನಡೆದಿದ್ದರೂ ಸಹ ಆಕೆಯ ಮೇಲೆ ಹಲ್ಲೆ ನಡೆಸುವ ಬದಲು ಪೊಲೀಸರಿಗೆ ಒಪ್ಪಿಸಿ ಸೂಕ್ತ ತನಿಖೆ ನಡೆಸಲು ಒತ್ತಾಯ ಮಾಡುವ ಕನಿಷ್ಠ ಸೌಜನ್ಯ ತೋರದಿರುವುದು ಉಡುಪಿ ಜಿಲ್ಲೆಯ ಪ್ರತಿಯೊಬ್ಬ ಪ್ರಜ್ಞಾವಂತ ಜನತೆ ತಲೆತಗ್ಗಿಸುವ ವರ್ತನೆಗೆ ಸಾಕ್ಷಿಯಾಗಿದೆ.
ನಮ್ಮ ವ್ಯವಸ್ಥೆ ಯಾರಿಗೂ ಯಾವ ಕಾರಣಕ್ಕೂ ಹಲ್ಲೆ ಮಾಡುವ ವಿಚಾರದಲ್ಲಿ ಅನುಮತಿಯನ್ನು ನೀಡುವುದಿಲ್ಲ. ಸರಿ ತಪ್ಪು ಪ್ರಶ್ನಿಸಲು ಪೊಲೀಸ್ ಇಲಾಖೆ ಕಾನೂನು ವ್ಯವಸ್ಥೆ ರಾಜ್ಯ ಹಾಗೂ ದೇಶದಲ್ಲಿ ಇದ್ದು ಶಿಕ್ಷಿತರಾದ ನಮ್ಮ ಜಿಲ್ಲೆಯ ಪ್ರಜ್ಞಾವಂತ ನಾಗರಿಕರು ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಬೇಕಾದ ಅಗತ್ಯತೆ ಇದೆ. ಘಟನೆಗೆ ಕಾರಣರಾದ ಎಲ್ಲಾ ಆರೋಪಿಗಳ ವಿರುದ್ದ ಪೊಲೀಸರು ಕೂಡಲೇ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಮೀನು ಕದ್ದ ಆರೋಪದಲ್ಲಿ ಮಹಿಳೆಯೊಬ್ಬರನ್ನು ಮರಕ್ಕೆ ಕಟ್ಟಿ ಹಾಕಿ ಥಳಿಸಿರುವ ಅಮಾನವೀಯ ಘಟನೆ ಮಲ್ಪೆ ಬಂದರಿನಲ್ಲಿ ನಡೆದಿದ್ದು ಇದನ್ನು ವಿಮೆನ್ ಇಂಡಿಯಾ ಮೂವ್ಮೆಂಟ್ ಉಡುಪಿ ಜಿಲ್ಲಾ ಸಮಿತಿ ತೀವ್ರವಾಗಿ ಖಂಡಿಸುತ್ತದೆ.
ಉಡುಪಿಯಂತಹ ಸುಶಿಕ್ಷಿತರ ಜಿಲ್ಲೆಯಲ್ಲಿ ಇಂತಹ ಘಟನೆ ನಡೆದಿರುವುದು ಅತ್ಯಂತ ಕಳವಳಕಾರಿ ಒಂದು ವೇಳೆ ಮಹಿಳೆ ತಪ್ಪು ಮಾಡಿದ್ದರೂ ಸಹ ಅವರನ್ನು ಪೊಲೀಸರಿಗೆ ಒಪ್ಪಿಸಿ ಕಾನೂನಾತ್ಮಕವಾಗಿ ಶಿಕ್ಷಿಸಬೇಕಿತ್ತೆ ಹೊರತು ಈ ರೀತಿ ಸಾರ್ವಜನಿಕವಾಗಿ ಮರಕ್ಕೆ ಕಟ್ಟಿ ಹಲ್ಲೆ ನಡೆಸಿರುವುದು ಅತ್ಯಂತ ಅಮಾನವೀಯ ಹಾಗೂ ಅನಾಗರಿಕ ಘಟನೆಯಾಗಿದೆ ಆದ್ದರಿಂದ ಪೊಲೀಸ್ ಇಲಾಖೆ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಪ್ರಕರಣವನ್ನು ದಾಖಲಿಸಿ ಆರೋಪಿಗಳನ್ನು ಬಂಧಿಸಬೇಕು ಆ ಮೂಲಕ ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಬೇಕು ಎಂದು ವಿಮೆನ್ ಇಂಡಿಯಾ ಮೂವ್ಮೆಂಟ್ ಉಡುಪಿ ಜಿಲ್ಲಾಧ್ಯಕ್ಷೆಯಾಗಿರುವ ನಾಝಿಯ ನಸ್ರುಲ್ಲ ಆಗ್ರಹಿಸಿದ್ದಾರೆ.

ಅಮಾನುಷ ಘಟನೆಯಿಂದ ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ – ರೆನೋಲ್ಡ್ ಪ್ರವೀಣ್ ಕುಮಾರ್
ಸಾತ್ವಿಕರ ನೆಲೆವೀಡಾದ ಕೃಷ್ಣನೂರಿನ ಮಲ್ಪೆ ಬಂದರಿನಲ್ಲಿ ಮೀನು ಕದ್ದಿದ್ದಾರೆ ಎಂಬ ಆರೋಪದಡಿ ದಲಿತ ಮಹಿಳೆಯೊಬ್ಬರನ್ನು ಮರಕ್ಕೆ ಕಟ್ಟಿ ಹಾಕಿ ಹಲ್ಲೆ ನಡೆಸಿರುವ ಅಮಾನುಷ ಘಟನೆಯು ನಾಗರಿಕ ಸಮಾಜವನ್ನು ತಲೆ ತಗ್ಗಿಸುವಂತೆ ಮಾಡಿದೆ ಎಂದು ಉಡುಪಿ ವಕೀಲರ ಸಂಘದ ಅಧ್ಯಕ್ಷ ರೆನೋಲ್ಡ್ ಪ್ರವೀಣ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ.
ಮಹಿಳೆ ಮೀನು ಕದ್ದಿದ್ದರೇ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿ, ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸುವ ಹಕ್ಕು ಮೀನಿನ ಮಾಲೀಕರಿಗಿತ್ತು. ಆದರೆ ಕಾನೂನನ್ನು ಕೈಗೆತ್ತಿಕೊಂಡು ಮಹಿಳೆಯೊಬ್ಬರನ್ನು ಮರಕ್ಕೆ ಕಟ್ಟಿ ಹಾಕಿ ಹಲ್ಲೆ ನಡೆಸಿ, ಶೌರ್ಯ ಮೆರೆಯುವುದು ಎಷ್ಟು ಸರಿ. ಈ ವಿಕೃತ ಮನಸ್ಥಿತಿಯ ಕೆಲವು ಪುಂಡರಿಂದ ಇಡೀ ಉಡುಪಿ ತಲೆ ತಗ್ಗಿಸುವಂತಾಗಿದೆ.
ಘಟನೆ ನಡೆದ ತಕ್ಷಣ ಪ್ರಕರಣ ದಾಖಲಿಸಬೇಕಾಗಿದ್ದ ಪೋಲಿಸರು ತಡವಾಗಿ ಪ್ರಕರಣ ದಾಖಲಿಸಿರುವ ಹಿಂದೆ ಕಾಣದ ಕೈಗಳ ಕೈವಾಡವಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಇನ್ನಾದರೂ ಪೋಲಿಸ್ ಇಲಾಖೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಹಲ್ಲೆಗೊಳಗಾದ ಮಹಿಳೆಗೆ ಸೂಕ್ತ ನ್ಯಾಯ ದೊರಕಿಸಬೇಕೆಂದು ಅವರು ಆಗ್ರಹಿಸಿದ್ದಾರೆ.
