ಕೊಡಗು ಜಿಲ್ಲಾ ಕಸಾಪ, ಮಡಿಕೇರಿ ತಾಲೂಕು ಕಸಾಪ ಹಾಗೂ ಸಹಕಾರ ಸಂಘಗಳ ತರಬೇತಿ ಕೇಂದ್ರ, ಮಡಿಕೇರಿ ಸಂಯುಕ್ತಾಶ್ರಯದಲ್ಲಿ ಜರುಗಿದ ದಿ.ಗಂಗಾಧರ್ ಶೇಠ್ ಮತ್ತು ಸುಲೋಚನ ಭಾಯಿ ಸ್ಮಾರಕ ದತ್ತಿ ಮತ್ತು ದಿ. ಡಿ ಜೆ ಪದ್ಮನಾಭ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕಿ ಡಾ ಚೈತ್ರ ಮಾತನಾಡಿ 1937 ರ ‘ ಅಮರ ಸುಳ್ಯ ‘ ಹೋರಾಟವೇ ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮ. ಅದುವೇ, ಕೊಡಗಿನಿಂದ ಪ್ರಾರಂಭವಾಗಿದ್ದು ಎಂದರು.
” ಅಂದಿಗೆ ಕೊಡಗಿನ ವ್ಯಾಪ್ತಿ ವಿಶಾಲವಾಗಿದ್ದು ಸುಳ್ಯ ಕೊಡಗಿಗೆ ಸೇರಿತ್ತು. ಹಾಲೇರಿ ವಂಶದ ಆಡಳಿತ ಮುಗಿದು ಬ್ರಿಟಿಷರ ಆಡಳಿತ ಪ್ರಾರಂಭವಾದಾಗ,ಕರ ಸಂಗ್ರಹ ವಿಧಾನ ಬದಲಾಯಿಸಲಾಯಿತು. ಹಾಲೇರಿ ವಂಶಸ್ಥರ ಆಡಳಿತದಲ್ಲಿ ವಸ್ತು ರೂಪದಲ್ಲಿ ಕರ ಸಂಗ್ರಹಣೆ ಮಾಡುತ್ತಿದ್ದರು. ಆದರೆ ಬ್ರಿಟಿಷರು ಹಣ ರೂಪದಲ್ಲಿ ಸಂಗ್ರಹ ಮಾಡಲು ಪ್ರಾರಂಭಿಸಿದಾಗ ಸಹಜವಾಗಿಯೇ ಜನರಲ್ಲಿ ಬ್ರಿಟಿಷರ ವಿರುದ್ಧ ಮುನಿಸು ಮೂಡಿತು.ಆ ಸಂದರ್ಭದಲ್ಲಿ ಸ್ವಾಮಿ ಅಪರಾಂಪರ ಮತ್ತು ಇತರರು ಸ್ವಾತಂತ್ರ್ಯ ಸಂಗ್ರಾಮ ಪ್ರಾರಂಭಿಸಿದರು. ಆದರೆ ಇತಿಹಾಸದಲ್ಲಿ ಮತ್ತು ಪಠ್ಯ ಪುಸ್ತಕಗಳಲ್ಲಿ ಅದೊಂದು ರೈತ ದಂಗೆ ಎಂದು ಬಿಂಬಿಸಲಾಗಿದೆ ” ಎಂದು
ವಿಷಾದಿಸಿದರು.
ಚೆರಂಬಾಣೆಯ ಶಿಕ್ಷಕಿ ಹಾಗೂ ನೃತ್ಯ ಕಲಾವಿದೆ ಬೃಂದಾ ಕವನ್ ಕುದುಪಜೆ ಮಾತನಾಡಿ ” ಕೊಡಗಿನಲ್ಲಿ ಕೃಷಿ ಸಂದರ್ಭದಲ್ಲಿ, ಹಬ್ಬ ಹರಿದಿನಗಳಲ್ಲಿ ಆಡುವ ಮಾತು ಮತ್ತು ಹಾಡುಗಳು ಕೂಡ ಜನಪದೀಯವಾಗಿರುತ್ತದೆ. ಉಮ್ಮತ್ತಾಟ್, ಕೋಲಾಟ್, ಬೊಳಕಾಟ್ ಜನಪ್ರಿಯಗೊಂಡಿದ್ದರೂ ಹತ್ತು ಹಲವು ಜನಪದೀಯ ಕಲೆಗಳು ಕೊಡಗಿನಲ್ಲಿವೆ. ಕೊಂಬಾಟ್ ನಮ್ಮೆ, ದುಡಿ ಕೊಟ್ಟು, ಪುತ್ತರಿ ಪಾಟ, ಎರವ ಕೊಟ್ಟು, ಕಪ್ಪೆ ಆಟ್, ಕುಡಿಯರ ಕುಣಿತ, ಕುರುಬಾಟ, ಕುಂಬುಕೊಟ್ಟ್ ವಾಲಗ, ಜೋಯಿಪಾಟು, ಭೂತ ನೃತ್ಯ, ಡೋಲು ಪಾಟ್, ಪರೆಯಕಳಿ, ಪಿಲಿಯಾಟ್, ಬಾಳೋ ಪಾಟ್, ಬಿಲ್ಲಾಟ್, ವಾಲಗದಾಟ್ ಹೀಗೆ ಹಲವು ರೀತಿಯ ಜನಪದೀಯ ಕಲೆಗಳು ಇವೆ. ಅವುಗಳನ್ನು ಹಬ್ಬ ಹರಿದಿನಗಳಲ್ಲಿ, ಹುತ್ತರಿ ಮಂದಗಳಲ್ಲಿ ಆಚರಿಸಿಕೊಂಡು ಬರುತ್ತಿದ್ದಾರೆ. ಕೊಡಗಿನಲ್ಲಿ ಜನಪದ ಎನ್ನುವುದು ಜ್ಞಾನಪದವಾಗಿದೆ. ನಮ್ಮ ಹಿರಿಯರು ಪ್ರತಿಯೊಂದು ಆಟಕ್ಕೂ ಜನಪದವನ್ನು ಜೋಡಿಸಿದ್ದಾರೆ.
ಉಮ್ಮತ್ತಾಟ್ ಕಾವೇರಿ ಮಾತೆಯನ್ನು ಸ್ತುತಿಸುವ ಹಾಡುಗಳನ್ನು ಹೊಂದಿದ್ದರೆ, ಬೊಳಕಾಟ್ ಹೆಸರೇ ಹೇಳುವಂತೆ ದೀಪದ ಸುತ್ತಲೂ ಮಾಡುವಂತಹ ನೃತ್ಯವಾಗಿದೆ. ಕೋಲಾಟ್ ಹುತ್ತರಿ ಸಂದರ್ಭದಲ್ಲಿ ಕೋಲು ಮಂದುಗಳಲ್ಲಿ ಆಡುವಂತಹ ಒಂದು ಕಲೆಯಾಗಿದೆ. ಬಾಳೋಪಾಟ್ ನಲ್ಲಿ ಹುಟ್ಟಿನಿಂದ ಸಾವಿನವರೆಗಿನ ಕಥೆಯನ್ನು ಸಾದರಪಡಿಸಲಾಗುತ್ತದೆ. ಜೋಯಿಪಾಟ್ – ಭೂತಕಾಲ, ವರ್ತಮಾನ ಕಾಲ ಮತ್ತು ಭವಿಷ್ಯ ಕಾಲಕ್ಕೆ ಕುರಿತಂತೆ ವಿಚಾರ ಮಂಡಿಸುತ್ತದೆ. ಪರೆಯಕಳಿ ಬಿದುರಿನ ಬೆತ್ತದಿಂದ ಆಡುವ ಆಟ ಯುದ್ಧದ ನೆನಪನ್ನು ತರುತ್ತದೆ ” ಎಂದು ಕೊಡಗಿನ ಜನಪದದ ಬಗ್ಗೆ ಮಾಹಿತಿ ನೀಡಿದರು.
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ ಪಿ ಕೇಶವ ಕಾಮತ್ ಮಾತನಾಡಿ ಗೋಣಿಕೊಪ್ಪಲಿನ ಎಂ ಜಿ ಮೋಹನ್ ತಮ್ಮ ತಂದೆ ತಾಯಿ ದಿ.ಸುಲೋಚನಾ ಬಾಯಿ, ಗಂಗಾಧರ್ ಶೇಟ್ ರವರ ಹೆಸರಿನಲ್ಲಿ ದತ್ತಿ ಸ್ಥಾಪಿಸಿದ್ದು ಕೊಡಗಿನ ಸ್ವಾತಂತ್ರ್ಯ ಯೋಧರ ಕುರಿತು ವಿದ್ಯಾರ್ಥಿಗಳಿಗೆ ತಿಳಿಪಡಿಸುವ ದತ್ತಿ ಉಪನ್ಯಾಸ ನೀಡುವಂತೆ ಕೋರಿರುತ್ತಾರೆ ಎಂದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮನರೇಗ- ಕೂಲಿ ಸಂಕಟಕ್ಕೆ ಮೋದಿ ತಾತ್ಸಾರ
ವಿರಾಜಪೇಟೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಿ ರಾಜೇಶ್ ಪದ್ಮನಾಭ, ಸಹಕಾರ ಸಂಘಗಳ ತರಬೇತಿ ಕೇಂದ್ರದ ಪ್ರಾಂಶುಪಾಲೆ ಡಾ ರೇಣುಕಾ ಆರ್ ಎಸ್, ದತ್ತಿ ದಾನಿ ಎಂ ಜಿ ಮೋಹನ್, ಪ್ರೊ ದಂಬೆಕೊಡಿ ಸುಶೀಲ ಸುಬ್ರಮಣಿ, ಮಡಿಕೇರಿ ತಾಲೂಕು ಕಸಾಪ ನಿಕಟ ಪೂರ್ವ ಅಧ್ಯಕ್ಷ ಅಂಬೇಕಲ್ ನವೀನ್,ಮಡಿಕೇರಿ ತಾಲೂಕು ಕಸಾಪ ಅಧ್ಯಕ್ಷೆ ಕಡ್ಲೇರ ತುಳಸಿ ಮೋಹನ್, ಯೋಜನಾಧಿಕಾರಿ ಎನ್ ಪುರುಷೋತ್ತಮ್, ಕಸಾಪ ಮಾಜಿ ಕೋಶಾಧಿಕಾರಿ ವಾಸು ರೈ, ಮೂರ್ನಾಡು ಹೋಬಳಿ ಗೌರವ ಕಾರ್ಯದರ್ಶಿ ಕಟ್ಟೆಮನೆ ಮಹಾಲಕ್ಷ್ಮಿ, ಕೋಶಾಧಿಕಾರಿ ಅಮ್ಮಾಟಂಡ ಬೃಂದ, ಮೂಡಗದ್ದೆ ವಿಕ್ರಂ, ಸಹಕಾರಿ ತರಬೇತಿ ಕೇಂದ್ರದ ಉಪನ್ಯಾಸಕರುಗಳು ಮತ್ತು ವಿದ್ಯಾರ್ಥಿಗಳು ಇದ್ದರು.