ಪ್ರಸ್ತುತ ಕೊಪ್ಪಳ ಜಿಲ್ಲೆ ಕುಷ್ಟಗಿ ಪುರಸಭೆಯಲ್ಲಿ ಪ್ರಭಾರ ಮುಖ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಡಿ ಎನ್ ಧರಣೇಂದ್ರ ಕುಮಾರ್ ಅವರನ್ನು ಕರ್ತವ್ಯ ಲೋಪ ಸಾಬೀತಾದ ಹಿನ್ನೆಲೆ ಕಡ್ಡಾಯ ನಿವೃತ್ತಿಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.
ಧರಣೇಂದ್ರ ಕುಮಾರ್ ಈ ಹಿಂದೆ ಹಾವೇರಿ ಜಿಲ್ಲೆ ಗುತ್ತಲ ಪಟ್ಟಣ ಪಂಚಾಯತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ 2015ರಿಂದ 2018ರ ಅವಧಿಯಲ್ಲಿ ವಿವಿಧ ಕಾಮಗಾರಿಗಾರಿಗಳಿಗೆ ಬಿಡುಗಡೆಯಾಗಿದ್ದ ಅನುದಾನದಲ್ಲಿ ನಿಯಮ ಬಾಹಿರವಾಗಿ 2.53 ಕೋಟಿಯನ್ನು ಗುತ್ತಿಗೆದಾರರಿಗೆ ಪಾವತಿಸಿದ್ದರು. ಆಗ ಅಲ್ಲಿನ ಜಿಲ್ಲಾಧಿಕಾರಿ ಅವರನ್ನು ಅಮಾನತು ಮಾಡುವಂತೆ ಸರ್ಕಾರಕ್ಕೆ ಶಿಫಾರಸು ಮಾಡಿದ್ದರು.
ಅವರ ವಿರುದ್ಧದ ಪ್ರಕರಣಗಳು ಗಂಭೀರ ಸ್ವರೂಪದ್ದಾಗಿದ್ದು, ಕರ್ತವ್ಯಲೋಪ ಸಾಬೀತಾಗಿರುವ ಹಿನ್ನೆಲೆ ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರು ಅವರನ್ನು ನಿವೃತ್ತಿಗೊಳಿಸಿ ಆದೇಶಿಸಿದ್ದಾರೆ. ಎರಡು ವರ್ಷಗಳಿಂದ ಕುಷ್ಟಗಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಧರಣೇಂದ್ರ ಅವರ ಸೇವಾವಧಿ ಇನ್ನೂ 10 ವರ್ಷಗಳು ಬಾಕಿ ಇರುವಾಗಲೇ ಕೊಪ್ಪಳ ಜಿಲ್ಲಾಧಿಕಾರಿ ನಳಿನ್ ಅತುಲ್ ಅವರು ಧರಣೇಂದ್ರ ಅವರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಆದೇಶ ನೀಡಿದ್ದಾರೆ.
ಇದನ್ನೂ ಓದಿ: ರಾಯಚೂರು | ವಿವೇಚನಾ ನಿಧಿಯ ಅನುದಾನ ಸಮರ್ಪಕ ಬಳಕೆಯಾಗಬೇಕು: ರಾಘವೇಂದ್ರ ಕುಷ್ಟಗಿ
ಸರ್ಕಾರಿ ನೌಕರಿಯಲ್ಲಿರುವ ಅಧಿಕಾರಿಗಳು ಕರ್ತವ್ಯಲೋಪ ಎಸಗುವುದು ಮೊದಲೇನಲ್ಲ. ಆದರೆ ಇಲ್ಲಿವರೆಗೆ ಎಷ್ಟು ಮಂದಿಗೆ ಶಿಕ್ಷೆಯಾಗಿದೆ ಎನ್ನುವುದು ಗಮನಿಸಬೇಕಾದ ವಿಚಾರ. ಬೆರಳೆಣಿಕೆಯಷ್ಟೇ.. ಇನ್ನು ಅಧಿಕಾರಿಗಳಿಗೆ ಶಿಕ್ಷೆ ನೀಡುವ ಅಧಿಕಾರವಿರುವ ಜನಪ್ರತಿನಿಧಿಗಳು ಎಷ್ಟರಮಟ್ಟಿಗೆ ಸದಾಚಾರಿಗಳು ಎನ್ನುವುದು ಜಗಜ್ಜಾಹೀರು. ಆದರೂ ಮೇಲಿನಂತಹ ಪ್ರಕರಣಗಳು ಹೆಚ್ಚು ಮುನ್ನಲೆಗೆ ಬಂದು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಗಳಾದಲ್ಲಿ ಮಾತ್ರ ಬದಲಾವಣೆ ನಿರೀಕ್ಷಿಸಲು ಸಾಧ್ಯ.
