ಔರಂಗಜೇಬ್ ಸಮಾಧಿ ತೆರವುಗೊಳಿಸಬೇಕೆಂದು ಹಿಂದುತ್ವವಾದಿಗಳು ನಡೆಸಿದ ಪ್ರತಿಭಟನೆಯ ಸಮಯದಲ್ಲಿ ಹಿಂಸಾಚಾರ ನಡೆದಿದ್ದು, ಮಹಾರಾಷ್ಟ್ರದ ನಾಗ್ಪುರದಲ್ಲಿ ‘ಕರ್ಫ್ಯೂ’ ವಿಧಿಸಲಾಗಿದೆ. ಅಲ್ಲದೆ, ಗಲಭೆಯಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ ವಿಶ್ವ ಹಿಂದು ಪರಿಷತ್ (ವಿಎಚ್‌ಪಿ, ಬಜರಂಗ ದಳದ ಮುಖಂಡರು, ಕಾರ್ಯಕರ್ತರು ಸೇರಿ ಒಟ್ಟು 78 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಸೋಮವಾರ ರಾತ್ರಿ ನಡೆದ ಗಲಭೆಗೆ ಫಹೀಮ್ ಖಾನ್ (38) ರುವಾರಿ ಎಂದು ಪೊಲೀಸರು ಗುರುತಿಸಿದ್ದಾರೆ. ಆತನನ್ನು ಮಂಗಳವಾರ ಮುಂಜಾನೆ ಬಂಧಿಸಿದ್ದಾರೆ.
ಔರಂಗಜೇಬ್ ಸಮಾಧಿ ತೆರವಿಗಾಗಿ ಆಗ್ರಹಿಸಿ ನಡೆದ ಪ್ರತಿಭಟನೆಯಲ್ಲಿ ಬಜರಂಗದಳ ಮತ್ತು ವಿಎಚ್‌ಪಿ ಕಾರ್ಯಕರ್ತರು ಔರಂಗಬೇಜ್ ಪ್ರತಿಕೃತಿ ಮತ್ತು ಧಾರ್ಮಿಕ ಚಾದರ್ ಅನ್ನು ದಹಿಸಿದ್ದರು. ಧಾರ್ಮಿಕ ಭಾವನೆಗೆ ಹಿಂದುತ್ವವಾದಿಗಳು ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ, ಮುಸ್ಲಿಂ ಮುಖಂಡರು ನಾಗ್ಪುರದ ಗಣೇಶಪೇಟೆ ಪೊಲೀಸ್ ಠಾಣೆಗೆ ತೆರಳಿದ್ದರು.
ಈ ವೇಳೆ, ಪೊಲೀಸರು ಆರೋಪಿಗಳಿಗೆ ನೀರಕ್ಷಣೆ ನೀಡುತ್ತಿದ್ದಾರೆ ಎಂದು ಆಪಾದಿಸುವ ಎರಡು ವಿಡಿಯೋಗಳನ್ನು ಚಿತ್ರೀಕರಿಸಿ, ಅವುಗಳನ್ನು ಫಾಹೀಮ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದನು. ಆತ ಹರಿಬಿಟ್ಟ ವಿಡಿಯೋಗಳ ಕಾರಣಕ್ಕಾಗಿಯೇ ಗಲಭೆ ಆರಂಭವಾಗಿದೆ ಎಂದು ಪೊಲೀಸರು ಪ್ರತಿಪಾದಿಸಿದ್ದಾರೆ.
ಈ ವರದಿ ಓದಿದ್ದೀರಾ?: ನಾಗ್ಪುರ ಹಿಂಸಾಚಾರ ಪೂರ್ವಯೋಜಿತ, ‘ಛಾವಾ’ ಚಿತ್ರದಿಂದಾಗಿ ಔರಂಗಜೇಬ್ ಮೇಲೆ ಆಕ್ರೋಶ: ಫಡ್ನವೀಸ್
ಗಲಭೆ ಸಂಬಂಧ ಗಣೇಶಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸುವುದಕ್ಕೂ ಮುನ್ನವೇ ಬಜರಂಗದಳ ಮತ್ತು ವಿಎಚ್‌ಪಿಯ ಎಂಟು ಮಂದಿ ಆರೋಪಿಗಳು ಪೊಲೀಸರ ಎದುರು ಶರಣಾಗಿದ್ದಾರೆ. ಅವರಿಗೆ ನ್ಯಾಯಾಲಯ ಜಾಮೀನು ನೀಡಿದೆ. ಉಳಿದಂತೆ 27 ಮಂದಿ ಹಿಂದುತ್ವವಾದಿ ಕಾರ್ಯಕರ್ತರು ಮತ್ತು ವಿವಿಧ ಸಮುದಾಯಗಳ 43 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ನಾಗ್ಪುರದಲ್ಲಿ ವಿವಿಧೆಡೆ ನಡೆದ ಹಿಂಸಾಚಾರದಲ್ಲಿ 1,200ಕ್ಕೂ ಹೆಚ್ಚು ಮಂದಿ ಷಾಮೀಲಾಗಿದ್ದಾರೆ. 1,500ಕ್ಕೂ ಹೆಚ್ಚು ಕಣ್ಗಾವಲು ಕ್ಯಾಮೆರಾಗಳು ವಿಫಲವಾದ ಹಿನ್ನೆಲೆಯಲ್ಲಿ ಅವರನ್ನು ಪತ್ತೆ ಮಾಡುವ ಪ್ರಯತ್ನಕ್ಕೆ ಹಿನ್ನಡೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.