ತಡವಾಗಿಯಾದರೂ ಮುಂಗಾರು ಮಳೆ ರಾಜ್ಯವನ್ನು ಪ್ರವೇಶಿಸಿದೆ. ಮಂಗಳವಾರದಿಂದ ರಾಜ್ಯದ ನಾನಾ ಭಾಗಗಳಲ್ಲಿ ಮಳೆಯಾಗುತ್ತಿದೆ. ಕರಾವಳಿ ಮತ್ತು ಮಲೆನಾಡು ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಅಲ್ಲಿನ ಘಾಟಿ ರಸ್ತೆಗಳಲ್ಲಿ ಸಂಚಾರ ಮಾಡುವುದು ಅಪಾಯಕಾರಿಯಾಗಿ ಪರಿಣಮಿಸಿದೆ.
ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನಲ್ಲಿರುವ ಕುದುರೆಮುಖ-ಮಾಳ ರಾಷ್ಟ್ರೀಯ ಹೆದ್ದಾರಿಯು ಅರಣ್ಯ ಭಾಗದಲ್ಲಿ ಹಾದುಹೋಗಿದೆ. ಹೆಚ್ಚು ತಿರುವುಗಳಿರುವ ಈ ರಸ್ತೆಯಲ್ಲಿ ಮಳೆ ಬೀಳುವ ಸಮಯದಲ್ಲಿ ವಾಹನ ಚಾಲನೆ ಮಾಡುವುದು ಸವಾಲಾಗಿದೆ. ಮರ ಬೀಳುವುದು, ಮಣ್ಣು ಕುಸಿತ, ನೀರಿನ ಹರಿವಿನಿಂದ ರಸ್ತೆಯಲ್ಲಿ ಸಂಚಾರ ಅಸಾಧ್ಯವೆಂಬಂತಾಗುತ್ತದೆ.
ಈ ರಸ್ತೆಯಲ್ಲಿ ಅಪಘಾತವೇನಾದರೂ ಸಂಭವಿಸಿದರೆ, ಹತ್ತಿರದಲ್ಲಿ ಆಸ್ಪತ್ರೆಗಳೂ ಇಲ್ಲ. ಅಪಘಾತಕ್ಕೀಡಾದವರು ಶೃಂಗೇರಿ ಅಥವಾ ಕಾರ್ಕಳಕ್ಕೆ ತೆರಳಬೇಕಾಗುತ್ತದೆ.
ಇನ್ನು ಮಾಳ-ಮುಳ್ಳೂರು ರಸ್ತೆಯಲ್ಲಿಯೂ ಅದೇ ಕತೆ. ಧರ್ಮಸ್ಥಳ, ಸುಬ್ರಹ್ಮಣ್ಯ, ಹೊರನಾಡು ಸೇರಿದಂತೆ ನಾನಾ ಧಾರ್ಮಿಕ ಕ್ಷೇತ್ರಗಳಿಗೆ ಸಂಪರ್ಕ ಕಲ್ಪಿಸುವ ಈ ರಸ್ತೆಯಲ್ಲಿ ಸಾವಿರಾರು ಜನರು ಸಂಚರಿಸುತ್ತಾರೆ. ಮಳೆ ಸಮಯದಲ್ಲಿ ಘಾಟಿ ರಸ್ತೆಯಲ್ಲಿ ಸಂಚರಿಸುವ ವಾಹನಗಳು ನಿಯಂತ್ರಣ ತಪ್ಪುವ ಸಾಧ್ಯತೆಗಳು ಹೆಚ್ಚಾಗಿವೆ ಎಂದು ಸ್ಥಳೀಯರು ಹೇಳುತ್ತಾರೆ.
ತನಿಕೋಡು ಅರಣ್ಯ ತಪಾಸಣಾ ಕೇಂದ್ರ ಮತ್ತು ಮಾಳ ಅರಣ್ಯ ತಪಾಸಣಾ ಕೇಂದ್ರದ ನಡುವೆ 39 ಕಿ.ಮೀ ಅಂತರವಿದೆ. ಈ ರಸ್ತೆಯಲ್ಲಿ ಸಂವಹನ ಮಾಡಲು ಯಾವುದೇ ಸಂಪರ್ಕ ವ್ಯವಸ್ಥೆಯಿಲ್ಲ. ಅಪಘಾತವಾದರೆ, ಗಲಾಟೆಗಳು ನಡೆದರೆ, ಅನಾಹುತಗಳು ಸಂಭವಿಸಿದರೆ ಅಥವಾ ಬೇರೇನಾದರೂ ಸಮಸ್ಯೆಗಳಾದರೆ, ಯಾವ ರೀತಿಯಲ್ಲೂ ಯಾರನ್ನೂ ಸಂಪರ್ಕಿಸಲು ಸಾಧ್ಯವಾಗುವುದಿಲ್ಲವೆಂಬ ಆರೋಪಗಳೂ ಇವೆ.