ಬೀದರ್‌ | ಅನ್ನದಾತರ ಸಾವಿಗೆ ಕೊನೆಯಿಲ್ಲ : 5 ವರ್ಷಗಳಲ್ಲಿ 100 ದಾಟಿದ ರೈತರ ಆತ್ಮಹತ್ಯೆ ಸಂಖ್ಯೆ

Date:

Advertisements

ಕೈಕೊಟ್ಟ ಬೆಳೆ ಮತ್ತು ಸಾಲದ ಹೊರೆಯಿಂದಾಗಿ ಸಂಕಷ್ಟದ ಸುಳಿಯಿಂದ ಹೊರಬರಲಾಗದೆ ಕಳೆದ ಐದು ವರ್ಷಗಳ ಅವಧಿಯಲ್ಲಿ ಬೀದರ್ ಜಿಲ್ಲೆಯಲ್ಲಿ 131 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕುಟುಂಬಕ್ಕೆ ಆಧಾರವಾಗಿದ್ದವರನ್ನು ಕಳೆದುಕೊಂಡ ಕೃಷಿ ಕುಟುಂಬಗಳು, ಈಗ ಸಂಕಷ್ಟಕ್ಕೆ ಸಿಲುಕಿವೆ.

ಬೆಲೆ ಕುಸಿತ, ಬೆಳೆ ಹಾನಿ, ಬ್ಯಾಂಕ್‌ ಸಾಲ ಸೇರಿದಂತೆ ವಿವಿಧ ಕಾರಣದಿಂದಾಗಿ ಜಿಲ್ಲಾದ್ಯಂತ ರೈತರ ಆತ್ಮಹತ್ಯೆ ಪ್ರಕರಣಗಳು ಸತತ ವರದಿಯಾಗುತ್ತಲೇ ಇವೆ. ಸದ್ಯ ಸರಣಿ ಸಾವಿನ ಪ್ರಕರಣಗಳು ನಿಲ್ಲುವ ಹಾಗೇ ಗೋಚರಿಸುತ್ತಿಲ್ಲ. ಇದರಿಂದ ರೈತ ಸಮುದಾಯದಲ್ಲಿ ಆತಂಕದ ಛಾಯೆ ಮೂಡಿಸಿದೆ.

ಸರ್ಕಾರದ ಅಧಿಕೃತ ಅಂಕಿ-ಅಂಶಗಳ ಪ್ರಕಾರ 2020-21ರಲ್ಲಿ ಜಿಲ್ಲೆಯಲ್ಲಿ 10 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. 2021-22ರಲ್ಲಿ ಆತ್ಮಹತ್ಯೆಗೆ ಶರಣಾದ ಅನ್ನದಾತರ ಸಂಖ್ಯೆ 21 ಇನ್ನು 2022-23ರಲ್ಲಿ 4 ಜನ ರೈತರು ಜೀವ ತ್ಯಜಿಸಿದ್ದರು. 2023-24ರಲ್ಲಿ 75 ಹಾಗೂ 2024-25ನೇ ಸಾಲಿನಲ್ಲಿ 21 ರೈತರು ಸಾವಿನ ಮೊರೆ ಹೋದ ಪ್ರಕರಣಗಳು ವರದಿಯಾಗಿವೆ. 2021-25ರವರೆಗೆ ಐದು ವರ್ಷಗಳಲ್ಲಿ ಪ್ರಾಣ ಕಳೆದುಕೊಂಡ ರೈತರ ಒಟ್ಟು ಸಂಖ್ಯೆ 126ಕ್ಕೆ ತಲುಪಿದೆ.

Advertisements

ಭಾಲ್ಕಿ ತಾಲ್ಲೂಕಿನಲ್ಲಿ ಅತಿ ಹೆಚ್ಚು ರೈತರ ಆತ್ಮಹತ್ಯೆ :

ಕೃಷಿ ಇಲಾಖೆಯ ದಾಖಲೆಗಳ ಪ್ರಕಾರವೇ 2023-24ರಲ್ಲಿ ಜಿಲ್ಲೆಯ ಔರಾದ್‌ (5), ಬೀದರ್‌ (13), ಹುಮನಾಬಾದ್‌ (10), ಬಸವಕಲ್ಯಾಣ (3) ಭಾಲ್ಕಿ (32), ಹುಲಸೂರ (2) ಚಿಟಗುಪ್ಪ (7) ಹಾಗೂ ಕಮಲನಗರ (3) ತಾಲೂಕುಗಳಲ್ಲಿ ಒಂದು ವರ್ಷದಲ್ಲಿ 75 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. 2024-25ರಲ್ಲಿ ಜಿಲ್ಲಾದ್ಯಂತ 21 ಜನ ರೈತರು ಆತ್ಮಹತ್ಯೆ ಮಾಡಿಕೊಂಡಿರುವುದು ವರದಿಯಾಗಿದೆ.

ಬೀದರ್ ಜಿಲ್ಲೆಯನ್ನು ಬರಪೀಡಿತ ಎಂದು ಘೋಷಣೆಯಾದ 2023-24ನೇ ಸಾಲಿನಲ್ಲಿ 75 ಜನ ರೈತರು ಆತ್ಮಹತ್ಯೆ ಪ್ರಕರಣಗಳು ವರದಿಯಾಗಿದ್ದವು. ಅಚ್ಚರಿ ಸಂಗತಿ ಎಂದರೆ ಕಳೆದ ವರ್ಷದಲ್ಲಿ ವರದಿಯಾದ 75 ಜನ ರೈತರ ಆತ್ಮಹತ್ಯೆ ಪ್ರಕರಣಗಳಲ್ಲಿ ಭಾಲ್ಕಿ ಒಂದೇ ತಾಲ್ಲೂಕಿನಲ್ಲಿ 32 ಮಂದಿ ರೈತರು ಆತ್ಮಹತ್ಯೆಗೆ ಶರಣಾಗಿದ್ದರು. 2024-25ರಲ್ಲಿ ಇದೇ ತಾಲ್ಲೂಕಿನಲ್ಲಿ 7 ರೈತರು ಆತ್ಮಹತ್ಯೆ ದಾರಿ ಹಿಡಿದಿರುವುದು ವರದಿಯಾಗಿದೆ.

ʼ2023-24 ಸಾಲಿನಲ್ಲಿ ವರದಿಯಾದ 75 ಪ್ರಕರಣಗಳ ಎಲ್ಲ ರೈತರ ಕುಟುಂಬಗಳಿಗೆ ಪರಿಹಾರ ವಿತರಿಸಲಾಗಿದೆ. 2024-25ನೇ ಸಾಲಿನಲ್ಲಿ ವರದಿಯಾದ 21 ಆತ್ಮಹತ್ಯೆ ಪ್ರಕರಣಗಳಲ್ಲಿ 14 ರೈತ ಕುಟುಂಬಸ್ಥರಿಗೆ ಪರಿಹಾರ ವಿತರಿಸಲಾಗಿದೆ. ಇತ್ತೀಚೆಗೆ ವರದಿಯಾದ ಕೆಲ ಪ್ರಕರಣಗಳು ಸೇರಿ ಬಾಕಿ ಉಳಿದ ಪ್ರಕರಣಗಳಲ್ಲಿ ಅರ್ಹರಿಗೆ ಪರಿಹಾರ ವಿತರಿಸಲಾಗುವುದುʼ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಒಂದೇ ದಿನ ಇಬ್ಬರು ರೈತರ ಆತ್ಮಹತ್ಯೆ :

ಕೈಕೊಟ್ಟ ಬೆಳೆ ಮತ್ತು ಸಾಲದ ಹೊರೆಯಿಂದಾಗಿ 2025ರ ಜನವರಿ 28ರಂದು ಒಂದೇ ದಿನ ಇಬ್ಬರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು.

ಭಾಲ್ಕಿ ತಾಲ್ಲೂಕಿನ ಖಾನಾಪುರ ಗ್ರಾಮದ 21 ವರ್ಷದ ಯುವ ರೈತ ಬೇರೆಯವರ ಜಮೀನು ಗುತ್ತಿಗೆ ಪಡೆದು ಬೇಸಾಯ ಮಾಡುವುದಕ್ಕಾಗಿ ಬ್ಯಾಂಕ್‌ ಹಾಗೂ ಖಾಸಗಿಯವರ ಬಳಿ ಕೈಸಾಲ ಸೇರಿ ಒಟ್ಟು ₹4 ಲಕ್ಷ ಸಾಲ ಪಡೆದಿದ್ದರು. ನಿರೀಕ್ಷೆಯಂತೆ ಬೆಳೆ ಬೆಳೆಯದೆ ಸಂಕಷ್ಟಕ್ಕೆ ಸಿಲುಕಿದ್ದರು. ಸಾಲದಿಂದ ಹೊರಬರಲಾಗದೆ ಖಾನಾಪುರ ಅರಣ್ಯ ಪ್ರದೇಶದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು.

ರೇಷ್ಮೆ ಕೃಷಿ ಮಾಡುತ್ತಿದ್ದ ಬಸವಕಲ್ಯಾಣ ತಾಲ್ಲೂಕಿನ ಇಲ್ಲಾಳ ಗ್ರಾಮದ ರೈತ ಜಗದೀಶರೆಡ್ಡಿ ಪ್ರಲ್ಹಾದರೆಡ್ಡಿ ಎಂಬುವವರು ಬ್ಯಾಂಕಿನಲ್ಲಿ ₹1.25 ಲಕ್ಷ ಹಾಗೂ ಖಾಸಗಿ ಕೈಸಾಲ ಮಾಡಿಕೊಂಡಿದ್ದರು. ಸಾಲ ತೀರಿಸುವುದಕ್ಕಾಗಿ ತಮ್ಮ ಒಂದು ಎಕರೆ ಜಮೀನು ಕೂಡ ಮಾರಾಟ ಮಾಡಿದ್ದರು. ಆದರೂ ಸಾಲ ಬಾಧೆಯಿಂದ ಮುಕ್ತವಾಗಲು ಸಾಧ್ಯವಾಗದಕ್ಕೆ ತನ್ನ ಜಮೀನಿನಲ್ಲಿರುವ ಬಾವಿಗೆ ಹಾರಿ ಪ್ರಾಣ ಬಿಟ್ಟಿದ್ದರು.

ಹುಲಸೂರ ತಾಲ್ಲೂಕಿನ ಬೆಟಬಾಲಕುಂದ ಗ್ರಾಮದ ಪಂಡರಿ ದಿಗಂಬರಾವ್‌, ಗಡಿಗೌಡಗಾಂವನ ರೇಷ್ಮಾ ಸುನೀಲ್‌, ಆನಂದವಾಡಿಯ ಸುಧಾಕರ ವೈಜಿನಾಥ ಘೋಡೆ, ಚಿಟ್ಟಗುಪ್ಪ ತಾಲ್ಲೂಕಿನ ರಾಂಪೂರ್‌ನ ಗಣೇಶ ಹೀಗೆ ಜಿಲ್ಲಾದ್ಯಂತ ರೈತರು ವಿವಿಧ ಕಾರಣಕ್ಕೆ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಆತ್ಮಹತ್ಯೆಗೆ ಕಾರಣವೇನು?

ಬೀದರ್ ಜಿಲ್ಲೆಯು ಹೆಚ್ಚಿನ ನೀರಾವರಿ ಪ್ರದೇಶ ಹೊಂದಿಲ್ಲದಿದ್ದರೂ ಕಾರಂಜಾ ಜಲಾಶಯ, ಚುಳುಕಿನಾಲಾ ಹಾಗೂ ಮಂಜ್ರಾ ನದಿ ಕೆಲ ರೈತರಿಗೆ ಜೀವನಾಡಿ ಎಂಬಂತಿವೆ. ಹೆಚ್ಚಾಗಿ ಮಳೆಯಾಶ್ರಿತ ಪ್ರದೇಶದಲ್ಲಿ ಬೆಳೆದ ಸೋಯಾ, ತೊಗರಿ, ಕಡಲೆ ಸೇರಿದಂತೆ ಇತರೆ ಬೆಳೆದ ಬೆಳೆಗೆ ಸೂಕ್ತ ಬೆಲೆ ದೊರಕುತ್ತಿಲ್ಲ. ʼಸಾಗುವಳಿ ಖರ್ಚು ಹೆಚ್ಚು ಬೆಳೆದ ಬೆಳೆಗೆ ದರ ಕಡಿಮೆʼ ಎಂಬುದು ಒಂದೆಡೆಯಾದರೆ, ಬೆನ್ನು ಬಿಡದ ಬರಗಾಲ, ಅತಿವೃಷ್ಟಿ, ಅನಾವೃಷ್ಟಿಯಿಂದಾಗಿ ಸಾಲದ ಸುಳಿಯಿಂದ ಹೊರಬರಲಾಗದ ಅನ್ನದಾತ ನೇಣಿಗೆ ಕೊರಳೊಡ್ಡುವ ಪರಿಸ್ಥಿತಿ ಬಂದೊದಗಿದೆ.

ಹಾಗಿದ್ದರೆ ಅನ್ನದಾತರ ಆತ್ಮಹತ್ಯೆಗಳು ತಡೆಯಲು ಸಾಧ್ಯವೇ ಇಲ್ಲವೇ ಎಂಬ ಪ್ರಶ್ನೆ ಹುಟ್ಟಿಕೊಳ್ಳುತ್ತದೆ. ಅದಕ್ಕೆ ಸರ್ಕಾರದ ಸಹಾಯಹಸ್ತ ರೈತರನ್ನು ತಲುಪುತ್ತಿಲ್ಲ. ರೈತರಲ್ಲಿ ಆತ್ಮವಿಶ್ವಾಸ ತುಂಬುವು ಕೆಲಸ ನಡೆಯದ ಕಾರಣಕ್ಕೆ ಆತ್ಮಹತ್ಯೆ ಸರಣಿ ಮುಂದುವರೆದಿದೆ ಎನ್ನಬಹುದು. ಸಾವಿನ ಮೊರೆ ಹೋದ ಬಹುತೇಕ ಎಲ್ಲರೂ ಸಣ್ಣ ಮತ್ತು ಅತಿಸಣ್ಣ ರೈತರಾದರೆ, ಇವರಲ್ಲಿ ಯುವಕರ ಸಂಖ್ಯೆಯೂ ಹೆಚ್ಚುತ್ತಿರುವುದು ಗಮನಾರ್ಹ ಅಂಶ.

ಆತ್ಮಹತ್ಯೆ ಮಾಡಿಕೊಂಡು ರೈತರ ಅವಲಂಬಿತರಿಗೆ ಪರಿಹಾರ ಸಿಗಲು ವಿಳಂಬವಾಗುತ್ತಿದೆ ಎಂಬ ಆರೋಪ ಇದ್ದೇ ಇದೆ. ಆದರೆ ಕೃಷಿ, ಕಂದಾಯ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸರಿಯಾಗಿ ಮಾನದಂಡ ಅನುಸರಿಸಿದರೆ, ಆತ್ಮಹತ್ಯೆಯಾದ ಕುಟುಂಬಸ್ಥರಿಗೆ ಮಾನವೀಯತೆಯ ದೃಷ್ಟಿಯಿಂದ ತ್ವರಿತವಾಗಿ ಪರಿಹಾರ ವಿತರಿಸಬಹುದು ಎನ್ನುವುದು ಪ್ರಜ್ಞಾವಂತ ನಾಗರಿಕರ ಅಭಿಪ್ರಾಯ.

ʼಆತ್ಮಹತ್ಯೆ ಮಾಡಿಕೊಂಡ ರೈತರಿಗೆ ಕೃಷಿ ಇಲಾಖೆಯಿಂದ ₹5 ಲಕ್ಷ ಪರಿಹಾರ ನೀಡಲಾಗುತ್ತದೆ. ಜೊತೆಗೆ ವಿಧವಾ ಪಿಂಚಣಿ, ಆರೋಗ್ಯ, ಶಿಕ್ಷಣ, ವಸತಿ ಸೌಲಭ್ಯಗಳು ಒದಗಿಸಲಾಗುತ್ತದೆʼ ಎಂದು ಜಂಟಿ ಕೃಷಿ ನಿರ್ದೇಶಕ ಜಿಯಾವುಲ್ಲಾ ಖಾನ್‌ ತಿಳಿಸಿದ್ದಾರೆ.

ʼರೈತರು ಕೃಷಿಗಾಗಿ ಬ್ಯಾಂಕ್‌ಗಳಲ್ಲಿ ಪಡೆದ ಸಾಲ ವರ್ಷದಿಂದ ವರ್ಷಕ್ಕೆ ದುಪ್ಪಟ್ಟಾಗುತ್ತಿದೆ. ಸಕಾಲಕ್ಕೆ ಬೆಳೆ ವಿಮೆ ಪರಿಹಾರ ಸಿಗುತ್ತಿಲ್ಲ. ರೈತ ಬೆಳೆದ ಬೆಳೆಗೆ ಮಾರುಕಟ್ಟೆಯಲ್ಲಿ ನ್ಯಾಯಯುತ ಬೆಂಬಲ ಬೆಲೆ ದೊರಕಿದರೆ ರೈತರ ಆತ್ಮಹತ್ಯೆ ತಡೆಗಟ್ಟಬಹುದುʼ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡ ವೀರಾರೆಡ್ಡಿ ಪಾಟೀಲ್‌ ಕಿಟ್ಟಾ ಅಭಿಪ್ರಾಯಪಟ್ಟರು.

ಈ ಸುದ್ದಿ ಓದಿದ್ದೀರಾ? ಭೂ ಸುಧಾರಣಾ ಖಾತೆ ಸಚಿವರಾಗಿ, ಸ್ವಂತ ಭೂಮಿಯನ್ನೇ ಬಿಟ್ಟುಕೊಟ್ಟ ಸುಬ್ಬಯ್ಯ ಶೆಟ್ಟಿ

ಬಹುತೇಕ ಸರ್ಕಾರಿ ಕಾರ್ಯಕ್ರಮಗಳಲ್ಲಿ ʼನೇಗಿಲ ಹಿಡಿದ ಹೊಲದೊಳು ಹಾಡುತ್ತಾ….ಉಳುವ ಯೋಗಿಯ ನೋಡಲ್ಲಿ…ಎಂಬ ಹಾಡನ್ನು ಕೇಳುತ್ತಿರುತ್ತೇವೆ. ಅಷ್ಟೇ ಅಲ್ಲದೇ ʼನಾವು ರೈತರ ಪರವಾಗಿದ್ದೇವೆʼ ಎಂದು ಎದೆಯುಬ್ಬಿಸಿ ಹೇಳಿಕೆ ನೀಡುವ ಜನಪ್ರತಿನಿಧಿಗಳಿಗೆ ನಾಡಿನ ಅನ್ನದಾತರ ತೀವ್ರ ನೋವು, ಯಾತನೆ ಅರ್ಥವಾಗುವುದು ಇನ್ನೆಂದು? ಅನ್ನದಾತರ ಸಾವಿಗೆ ಕೊನೆಯಿಲ್ಲವೇ ಎಂಬುದು ರೈತರಿಗೆ ಸದಾ ಕಾಡುವ ಪ್ರಶ್ನೆ!.

WhatsApp Image 2025 02 06 at 11.55.32 e1738823214905
ಬಾಲಾಜಿ ಕುಂಬಾರ್
+ posts

ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

Download Eedina App Android / iOS

X