ರಾಜ್ಯದಲ್ಲಿ ಮಾರ್ಚ್ 21ರಿಂದ (ಶುಕ್ರವಾರ) ಎಸ್‌ಎಸ್‌ಎಸ್ ಪರೀಕ್ಷೆಗಳು ಆರಂಭವಾಗಲಿವೆ. ಸುಮಾರು 8.96 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಹಾಜರಾಗುವುದಕ್ಕೂ ಮುನ್ನ ಮತ್ತು ಪರೀಕ್ಷಾ ಕೊಠಡಿಯಲ್ಲಿ ಪಾಲಿಸಬೇಕಾದ ಕೆಲವು ನಿಯಮಗಳನ್ನು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಸೂಚಿಸಿದೆ.
ರಾಜ್ಯಾದ್ಯಂತ ಒಟ್ಟು 2,818 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಪರೀಕ್ಷೆ ಬರೆಯುವ 8.96 ಲಕ್ಷ ವಿದ್ಯಾರ್ಥಿಗಳ ಪೈಕಿ, 4.61 ಲಕ್ಷ ಬಾಲಕರು, 4.34 ಲಕ್ಷ ಬಾಲಕಿಯರಿದ್ದಾರೆ. ಪರೀಕ್ಷೆಗಳು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1.15ರವರೆಗೆ ನಡೆಯಲಿವೆ.
ಮಾರ್ಚ್ 21ರಂದು ಕಲಿಕೆಯ ಪ್ರಥಮ ಭಾಷೆಗಳಾದ ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲಿಷ್ ಹಾಗೂ ಸಂಸ್ಕೃತ ವಿಷಯಗಳ ಪರೀಕ್ಷೆಗಳು ನಡೆಯಲಿವೆ. 24ರಂದು ಗಣಿತ, 26ರಂದು ದ್ವಿತೀಯ ಭಾಷೆಗಳಾದ ಇಂಗ್ಲಿಷ್, ಕನ್ನಡ, 29ರಂದು ಸಮಾಜ ವಿಜ್ಞಾನ, ಏಪ್ರಿಲ್ 1ರಂದು ಅರ್ಥಶಾಸ್ತ್ರ, ಎಂಜಿನಿಯರಿಂಗ್ ವಿಷಯಗಳು, ಏಪ್ರಿಲ್ 2ರಂದು ವಿಜ್ಞಾನ ಹಾಗೂ ರಾಜ್ಯಶಾಸ್ತ್ರ, ಹಿಂದೂಸ್ತಾನಿ, ಕರ್ನಾಟಕ ಸಂಗೀತ, ಏಪ್ರಿಲ್ 4ರಂದು ತೃತೀಯ ಭಾಷೆಗಳಾದ ಹಿಂದಿ, ಕನ್ನಡ, ಇಂಗ್ಲಿಷ್, ಅರೇಬಿಕ್, ಪರ್ಷಿಯನ್, ಉರ್ದು, ಸಂಸ್ಕೃತ, ಕೊಂಕಣಿ, ತುಳು ಹಾಗೂ ಎನ್‌ಎಸ್‌ಕ್ಯೂಎಫ್ ವಿಷಯಗಳಿಗೆ ಪರೀಕ್ಷೆಗಳು ನಡೆಯಲಿವೆ.
ಪರೀಕ್ಷಾ ಕೇಂದ್ರಗಳಲ್ಲಿ ಅಕ್ರಮ ಅಥವಾ ನಕಲು ತಡೆಯಲು ಎಲ್ಲ ಕೇಂದ್ರಗಳಲ್ಲಿ ಸಿಟಿ ಟಿವಿ ಮತ್ತು ವೆಬ್ ಕ್ಯಾಸ್ಟಿಂಗ್ ಅಳವಡಿಸಲಾಗಿದೆ. ಇದನ್ನು ಜಿಲ್ಲಾ ಪಂಚಾಯಿತಿ ಸಿಇಒ ಕಚೇರಿಯಲ್ಲಿ ನಿಯಂತ್ರಣ ಕೊಠಡಿಯಿಂದ ನಿಯಂತ್ರಿಸಲಾಗುತ್ತದೆ. ಪರೀಕ್ಷಾ ಕೇಂದ್ರಗಳ ಸುತ್ತಲಿನ 200 ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಎಸ್‌ಟಿಡಿ, ಮೊಬೈಲ್ ಪೇಜರ್, ಝರಾಕ್ಸ್, ಟೈಪಿಂಗ್ ಮುಂತಾದವುಗಳನ್ನು ನಿಷೇಧಿಸಲಾಗಿದೆ.
ವಿದ್ಯಾರ್ಥಿಗಳ ಪಾಲಿಸಬೇಕಾದ ನಿಮಯಗಳು;
- ಗುರುತಿನ ಚೀಟಿ ಹಾಗೂ ಹಾಲ್ ಟಿಕೆಟ್ಅನ್ನು ಕಡ್ಡಾಯವಾಗಿ ಹೊಂದಿರಬೇಕು.
- ಮೊಬೈಲ್ ಫೋನ್, ಎಲೆಕ್ಟ್ರಿಕಲ್ ಉಪಕರಣಗಳ ಬಳಸುವಂತಿಲ್ಲ.
- ವಿದ್ಯಾರ್ಥಿಗಳು, ಸರಳ ಕ್ಯಾಲ್ಕುಲೇಟರ್‌ಗಳನ್ನು ಮಾತ್ರವೇ ಬಳಸಬೇಕು.
- ವಿದ್ಯಾರ್ಥಿಗಳು ಪರೀಕ್ಷಾ ಕೊಠಡಿಯಿಂದ ಹೊರಡುವ ಮುನ್ನ ಉತ್ತರ ಪತ್ರಿಕೆ ಮತ್ತು ಪ್ರಶ್ನೆ ಪತ್ರಿಕೆಗಳನ್ನು ಕಡ್ಡಾಯವಾಗಿ ಮೇಲ್ವಿಚಾರಕರಿಗೆ ಸಲ್ಲಿಸಬೇಕು.
- ಪರೀಕ್ಷಾ ಅವಧಿಗಿಂತ ಮುಂಚೆ ಹೊರಕ್ಕೆ ಹೋಗುವ ವಿದ್ಯಾರ್ಥಿಗಳಿಗೆ ಪ್ರಶ್ನೆ ಪತ್ರಿಕೆ ನೀಡಲಾಗುವುದಿಲ್ಲ.
- ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಹಾಗೂ ಮೌಖಿಕ ಪರೀಕ್ಷೆಗಳನ್ನು ಆಯಾ ಶಾಲೆಗಳಲ್ಲಿ ನಡೆಸಲಾಗುವುದು.
- ಹಿಂದುಸ್ಥಾನಿ ಸಂಗೀತ ಮತ್ತು ಕರ್ನಾಟಕ ಸಂಗೀತ ವಿಷಯದ ಪರೀಕ್ಷೆಯನ್ನು ಮಧ್ಯಾಹ್ನ 2.00 ಗಂಟೆಯಿಂದ ಸಾಯಂಕಾಲ 5.15 ರವರೆಗೆ ನಿಗದಿಪಡಿಸಿದೆ.
ವಿಶೇಷ ಚೇತನ ವಿದ್ಯಾರ್ಥಿಗಳು ಮೂರು ಗಂಟೆಯ ಪ್ರಶ್ನೆಪತ್ರಿಕೆಗೆ ಉತ್ತರಿಸಲು ಹೆಚ್ಚುವರಿಯಾಗಿ 60 ನಿಮಿಷ, ಎರಡೂವರೆ ಗಂಟೆಯ ಪ್ರಶ್ನೆಪತ್ರಿಕೆಗೆ ಹೆಚ್ಚುವರಿ 50 ನಿಮಿಷ, ಎರಡು ಗಂಟೆಯ ಪ್ರಶ್ನೆಪತ್ರಿಕೆಗೆ ಹೆಚ್ಚುವರಿ 40 ನಿಮಿಷ, ಒಂದೂವರೆ ಗಂಟೆಯ ಪ್ರಶ್ನೆಪತ್ರಿಕೆಗೆ ಹೆಚ್ಚುವರಿ 30 ನಿಮಿಷ ಕಾಲಾವಕಾಶ ನೀಡಲಾಗುವುದು.