ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು ಮುದಗೊಳಿಸಲಿ ಎಂಬ ಕಾರಣಕ್ಕಾಗಿ ಈದಿನ.ಕಾಮ್, ಮರೆಯಬಾರದ ಕತೆಗಳು ಮಾಲಿಕೆಯಲ್ಲಿ ಪ್ರತಿ ಭಾನುವಾರ ಪ್ರಕಟಿಸಲಿದೆ.
ವೆಂಕಪ್ಪ ದೇಸಾಯರೂ ಮದ್ಧೂರಾಯರೂ ಚಿಕ್ಕಂದಿನಿಂದ ಕೂಡಿ ಆಡಿದವರು. ಬುದ್ಧಿ ಬಲು ಚುರುಕು. ಗರಡಿಯಾದರೂ ಒಂದೇ. ಆಯಾಕಾಲದಿಂದ ಕೋರ್ಟುಕಛೇರಿಗಳಲ್ಲಿ ನಲಿದಾಡುತ್ತಿರುವ ಬ್ರಿಟಿಷ್ ನ್ಯಾಯದೇವತೆಯನ್ನು ಕುಣಿದಾಡಿಸುವುದು ಅವರ ಕೈಯೊಳಗಿನ ಮಾತು. ಊರಲ್ಲಿಯ ಬೇರೆಬೇರೆ ತಂಡಗಳ ಹುಂಜಗಳನ್ನು ಹುರಿದುಂಬಿಸಿ ಕಾದುಬಿಡುವುದೂ, ಸೋಲು-ಗೆಲುವಿನ ಆಟಕ್ಕೆ ತಾವು ಹೊಣೆಯಾಗದೇ ಪಾರಾಗುವುದೂ, ಬಿಚ್ಚಿದ ಕೈಗಳನ್ನು ಮೆಚ್ಚಿನಿಂದ ಮುಚ್ಚಿಸುವುದೂ ಆ ವೆಂಕಪ್ಪನಿಗೆ ಗೊತ್ತು, ಆ ಮಧ್ವಮುನಿಗೆ ಗೊತ್ತು. ಮಹಾರಾಯರ ಮಾಟಕ್ಕೆ ಮರುಳಾಗದವರೇ ಇಲ್ಲ. ಒಬ್ಬ ಪೋಲೀಸನುಳಿಯಲಿಲ್ಲ. ಒಬ್ಬ ವಕೀಲನುಳಿಯಲಿಲ್ಲ. ಕೈಗೆ ಬಂದದ್ದೇ ಸದ್ದು, ಹೂಂ!
ಒಮ್ಮೆ ದೇಸಾಯರ ದೊಡ್ಡ ರೈತ, ಅವರ ಪರಮ ಶಿಷ್ಯ ರಾಚಯ್ಯ ಒಂದು ಭಯಂಕರ ಕೊಲೆಯ ಪ್ರಕರಣದಲ್ಲಿ ಸಿಕ್ಕಿದ್ದ. ಆತನ ದೆಸೆಯಿಂದ ದೇಸಾಯರು ಸ್ವತಃ ಮುಂಬಯಿಗೆ ಹೋಗಿ ಬ್ಯಾರಿಸ್ಟರನ್ನು ಕರೆತಂದಿದ್ದರು. ಮದ್ಧೂರಾಯನಂತೂ ಇದ್ದೇ ಇದ್ದ. ಆಮೇಲೇನು ಕೇಳುವುದವರ ಕೈಚಳಕದ ಕಸರತ್ತು! ಬಿಡುಗಡೆಯಾಯಿತು. ಜಡ್ಜ್ ಸಾಹೇಬರು “There were surely giant brains, behind the scene, to work out minutely each detail in this ghastly crime, which still elude the deft arm of law”- “ಕಾಯಿದೆಯ ಕೈಯೆಳೆತವನ್ನಿನ್ನೂ ತಪ್ಪಿಸಿಕೊಳ್ಳುತ್ತಿರುವ ಈ ಭಯಂಕರ ಪ್ರಕಾರದ ಪ್ರತಿಯೊಂದು ಇಕ್ಕಟ್ಟನ್ನು ಸೂಕ್ಷ್ಮವಾಗಿ ಯೋಚಿಸಿದ ವಿಶಾಲಬುದ್ಧಿಯುಳ್ಳವರಾರೋ ಈ ಪ್ರಕರಣದ ಬುಡದಲ್ಲಿದ್ದಿರಬೇಕು” ಎಂದು ತಮ್ಮ ನಿರ್ಣಯದಲ್ಲಿ ಬರೆದಿದ್ದರು. ನಮ್ಮ ಮೂಕ ವಿಶ್ವವಿದ್ಯಾಲಯಗಳಿಗೆ ಪ್ರಶಸ್ತಿ ಪತ್ರಿಕೆಗಳನ್ನು ಕೊಡುವುದೇ ಗೊತ್ತಿಲ್ಲ.
ಕಾಲದ್ದೆಂಥ ಚಮತ್ಕಾರ! ಕೂಡಿದ ಜುಗವು ಬಿಡಿಯಾಗಬೇಕೆ! ದೇಸಾಯರೂ ಮದ್ಧೂರಾಯರೂ ಅಂದಿಗೆ ಇಂದಿಗೆ ಕೂಡಿ ಕೆಲಸ ಮಾಡಿದವರು. ಒಂದು ಸಣ್ಣ ಮಾತಿಗಾಗಿ ಬಡಿದಾಡಿದರು. ವಿಷಯ ಸಣ್ಣದು, ಮಾತು ದೊಡ್ಡದಾಯಿತು. ಮದ್ಧೂರಾಯನ ಆಪ್ತನೊಬ್ಬನಿಗೆ ಸಾಲ ಬೇಕಾಗಿತ್ತು. ಆತನು ಸಾಲದ ಹೊಣೆಗಾಗಿ ಬೇಕಾದ ಹೊಲ ಬರಕೊಡಲಿಕ್ಕೆ ಸಿದ್ಧನಾಗಿದ್ದ. ಹೊತ್ತೇ ಅಂತಹುದು ಬಂದಿತ್ತು. ಆಪ್ತ ಸ್ವಕೀಯರಲ್ಲಿ ಸಾಲದ ಸೂಕ್ಷ್ಮ ಸಂಬಂಧವಿರಬಾರದೆಂಬದೊಂದು ಮದ್ಧೂರಾಯನ ವ್ಯವಹಾರ ಸೂತ್ರ. ಸಾಲ ತಾನು ಕೊಟ್ಟರೂ ಮೋರೆ ಬದಲು ಮಾಡುವುದಕ್ಕಾಗಿ ಹೆಸರು ದೇಸಾಯರದು ಹೇಳಿದ; ಹೊಲವನ್ನೂ ಕಬ್ಜಾ ಮಾಡಿಕೊಡಲಿಲ್ಲ. ದಿನದಿನಕ್ಕೆ ಬಡ್ಡಿ ಮಾತ್ರ ಬೆಳೆಯುತ್ತ ಬಂದಿತು. ಸಾಮದಾನಗಳ ಎಲ್ಲ ಪ್ರಕಾರಗಳಾಗಿ ಹೋದವು. ಮಧ್ಯಸ್ಥರ ಪುಣ್ಯ ಬೆಳೆಯಿತು. ಪುಣ್ಯಾತ್ಮ ಹಣಿಯಲಿಲ್ಲ. ಮೂರೂ ಕೋರ್ಟಿನ ಮೆಟ್ಟಿಲುಗಳು ಸರಿದವು. ಹೊಲದ ಕಬ್ಜಾ ಅಂತೂ ಬಂದಿತು. ರೊಕ್ಕದ ಸುರಿಮಳೆ ಮಾತ್ರ ಆಯಿತು. ದೇಸಾಯರೇ ಎಲ್ಲ ವೆಚ್ಚ ಮಾಡಿದರು.
ಇದನ್ನು ಓದಿದ್ದೀರಾ?: ಪ. ರಮಾನಂದರ ಕತೆ | ಬಾಳ್ವೆಯ ಮಸಾಲೆ
ದೇಸಾಯರೂ ಮದ್ಧೂರಾಯರೂ ತಮ್ಮತಮ್ಮೊಳಗೆ ಒಂದು ಕರಾರು ಮಾಡಿಕೊಂಡಿದ್ದರು. ವೆಚ್ಚ ಮಾಡಿದ ಹಣ ಮೊದಲು ಮದ್ಧೂರಾಯರು ದೇಸಾಯರಿಗೆ ಕೊಡಬೇಕು ಮತ್ತು ದೇಸಾಯರು ತಾವು ಹಾಕಿದ ಹಣಕ್ಕಂತೂ ಆಯಿತು, ಮಾಡಿಸಿದ ಶ್ರಮಕ್ಕಂತೂ ಆಯಿತು, ಹೊಲದಲ್ಲಿ ಐದಾಣೆಯಷ್ಟು ಪಾಲು ತಮಗಿಟ್ಟುಕೊಂಡು ಉಳಿದ ಹನ್ನೊಂದಾಣೆಯಷ್ಟು ಪಾಲು ಮದ್ಧೂರಾಯರಿಗೆ ಬಿಟ್ಟುಕೊಡಬೇಕು.
ಒಮ್ಮೆ ಮದ್ಧೂರಾಯ ಏನೋ ಒಂದು ಲಹರಿಗೆ ಬಿದ್ದು ಹೊಲದ ಬಗ್ಗೆ ಕೇಳಿದ. ದೇಸಾಯರು ತಮ್ಮ ಹಣ ಕೇಳಿದರು. ಮೂರು ಸಾವಿರ ರೂಪಾಯಿಗಳ ವಿಷಯ, ಇಂಥ ಎಷ್ಟು ಮೂರು ಸಾವಿರ ರೂಪಾಯಿಗಳನ್ನು ಅವರಿಬ್ಬರೂ ಹಾಳು ಮಾಡಿದ್ದರೊ! ದೇಸಾಯರು ಹಣ ಕೇಳಬಾರದಾಗಿತ್ತು. ಮದ್ಧೂರಾಯರಾದರೂ ವ್ಯವಹಾರದಲ್ಲಿ ಚೊಕ್ಕಾಗಿರಬೇಕಾಗಿತ್ತು. ಎರಡೂ ಉಕ್ಕಿನ ಬರೆಗಳು. ಸರಿದು ಮಾತಾಡುವವರಾರು!
ವೈಮನಸ್ಯವಂತೂ ಹುಟ್ಟಿಯೇ ಬಿಟ್ಟಿತು. ಒಮ್ಮೆ ದೇಸಾಯರು ಒಂದು ದತ್ತಕ ಪ್ರಕರಣದಲ್ಲಿ ಸಾಕ್ಷಿಗೆ ಹೋದಾಗ ಅವರು ಸುಳ್ಳು ಹೇಳಿದ ಅಪರಾಧಕ್ಕಾಗಿ ಎಂದು ಐದುನೂರು ದಂಡವಾಯಿತು. ಮದ್ಧೂರಾಯರ ಲೀಲಾಕೌತುಕ! ಮುಂದೆ ತುಸುದಿನಗಳಲ್ಲಿ ಮದ್ಧೂರಾಯರಿಗೆ ಆರು ತಿಂಗಳ ವಿಸಾಪೂರ ಸಹವಾಸವಾಯ್ತು.
ಊರೊಳಗಿನ ಸಣ್ಣಪುಟ್ಟ ತಂಡಗಳೆಲ್ಲ ಮುರಿದು ಎರಡೇ ಎರಡು ತಂಡಗಳು ಕಾಣಹತ್ತಿದವು. ಹೊಲದ ಮಾತಿನ್ನೂ ಮುಗಿದಿರಲಿಲ್ಲ. ಮದ್ಧೂರಾಯ ಕೋರ್ಟಿನ ಕಟ್ಟೆ ಹತ್ತುವನೆಂದು ಸುದ್ದಿ ಬಂದಿತು. ಶ್ರೀ ವಿಠಲೇಶ ಆದಿಬುನಾದಿಯಿಂದ ದೇಸಾಯರ ಕುಲದೇವರು. ದೇಸಾಯರಿಗೆ ಬಲುದಿನದಿಂದ ಆತನಿಗೊಂದು ಹರಕೆ ಮುಟ್ಟಿಸಬೇಕಾಗಿತ್ತು. ಯೋಗ್ಯ; ಕುಲದೇವರ ಹರಕೆ ಮೊದಲು ಮುಟ್ಟಿಸತಕ್ಕದ್ದು. ದೇಸಾಯರು ವ್ಯಾಜ್ಯದ ಹೊಲವನ್ನು ಆ ವೈಕುಂಠಪತಿಗೆ ಸಮರ್ಪಿಸಿ ತಾವು ಸರಿದುಕೊಂಡರು. ಶ್ರೀಹರಿಗೆ ತನ್ನ ಚಿಂತೆ.
ಕೋರ್ಟಿನಲ್ಲಿ ಪ್ರಕರಣ ನಡೆದು ತ್ರಿಸ್ಥಲದ ಯಾತ್ರೆ ಸಂಪೂರ್ಣವಾಯಿತು. ಹೈಕೋರ್ಟಿನವರು ಎರಡೂ ದಂಡೆಗಳ ಮೇಲೆ ಕೈಯಿಟ್ಟು, ಮದ್ಧೂರಾಯ ದೇಸಾಯರಿಗೆ-ಅಂದರೆ ಈಗ ಶ್ರೀವಿಠ್ಠಲೇಶನಿಗೆ, ಕೊಡತಕ್ಕ ಹಣಕ್ಕೆ ಒಪ್ಪಿದರು. ಆದರೆ ಈವರೆಗೆ ಹೊಲದಿಂದ ಬಂದ ಲಾಭವನ್ನು ಮೂಲ ರಕಮಿನಲ್ಲಿ ಮುರಿಯಬೇಕು; ಕಬ್ಜಾ ಶ್ರೀ ವಿಠ್ಠಲೇಶನದು; ಮದ್ಧೂರಾಯ ವರ್ಷವರ್ಷಕ್ಕೆ ಬಂದ ವಸೂಲಿನಲ್ಲಿ ಪಾಲುದಾರ. ಅಂತೂ ಇಬ್ಬರೂ ಗೆದ್ದಂತಾಗಲಿಲ್ಲ; ಸೋತಂತೂ ಆಗಲಿಲ್ಲ.
ಹೈಕೋರ್ಟಿನ ನಿರ್ಣಯ ಬಂದ ದಿನವೇ ಮಧ್ಯರಾತ್ರಿಯ ಸಮಯಕ್ಕೆ ಮದ್ಧೂರಾಯನ ಮನೆಗೆ ಬೆಂಕಿ ಹತ್ತಿ, ಅದು ನೆಲಸಮಾನವಾಯಿತು. ಶ್ರೀ ವಿಠ್ಠಲೇಶನೇ ಕೋಪಿಸಿರಬೇಕು. ಮದ್ಧೂರಾಯ ಊರಲ್ಲಿರಲಿಲ್ಲವಂತೆ. ಅವರ ಹೆಂಡತಿಯೂ ತವರು ಮನೆಗೆ ಹೋಗಿದ್ದಳು. ಮನೆಗೆ ಕೀಲಿಯೇ ಇತ್ತು.
ದಿನ ಎರಡುದಿನ ಅನ್ನುತ್ತ ಆರೆಂಟು ತಿಂಗಳುಗಳ ಅವಧಿಯಾಯಿತು. ಮದ್ಧೂರಾಯ ಮರಳಿ ಊರಿಗೆ ಬರಲಿಲ್ಲ. ಅವನೆಲ್ಲಿದ್ದನೆಂಬುದೂ ಯಾರಿಗೂ ಗೊತ್ತಾಗಿರಲಿಲ್ಲ. ಜನ ನಾಲ್ಕು ದಿನ ಮಾತಾಡುತ್ತಿತ್ತು. ಮುಂದೆ ಮರೆತುಬಿಟ್ಟಿತು.
*
ದೇಸಾಯರ ಮನೆಯ ಕಟ್ಟೆಯ ಮೇಲೆ ಒಂದು ಬೆಳಗಿನಲ್ಲಿ ಯಾರೋ ಒಂದು ತಿಂಗಳ ವಯಸ್ಸಿನ ಕೂಸನ್ನು ಬಿಟ್ಟುಹೋಗಿದ್ದರು. ಯಾವ ಮಕ್ಕಳೊಂದಿಗಿತ್ತಿಯದಿತ್ತೊ! ಪಾಪ! ಮುಂಜಾವಿನ ತಂಗಾಳಿಗೆ ಅರೆಹೆಪ್ಪುಗಟ್ಟಿ ಅದರ ಮೈ, ಮೇಲ್ನೊರೆಯಂತೆ ನಡುಗುತ್ತಿತ್ತು. ಗಂಡಸರೂ ಹೆಂಗಸರೂ ಚಿಕ್ಕವರೂ ಮುದುಕರೂ ಓಣಿಯೊಳಗಿನ ಹೋಗುಬರುವವರೂ ಹಾಗೆ ನೆರೆದುಕೊಂಡಿದ್ದರು. ಕೂಸು ಮಾತ್ರ ಶಾಂತವಾಗಿ ನಿದ್ರೆ ಮಾಡುತ್ತಿತ್ತು.
ಕೂಸು ಯಾರದು? ಕೇವಲ ತರ್ಕದಿಂದ ಮಾತು ಗೊತ್ತಾಗುವಂತಿರಲಿಲ್ಲ. ಅಲ್ಲಿ ಕೂಡಿದ್ದ ಹದಿನೈದು-ಹದಿನಾರು ವಯಸ್ಸಿನ ಬಾಲವಿಧವೆಯರನ್ನು ಮೊದಲ್ಗೊಂಡು, ಎಪ್ಪತ್ತು ಎಂಬತ್ತು ವಯಸ್ಸಿನ ಮುಪ್ಪಿನ ವಿಧವೆಯರವರೆಗೆ ಎಲ್ಲರೂ ತಮ್ಮೊಳಗೆ ಒಬ್ಬರನ್ನೊಬ್ಬರು ಸಂಶಯದೃಷ್ಟಿಯಿಂದ ನೋಡಹತ್ತಿದರು. ಪೊಲೀಸರು ಬಂದು ಪಂಚನಾಮೆಯನ್ನೇನೋ ಮಾಡಿದರು.
ಇದನ್ನು ಓದಿದ್ದೀರಾ?: ವಿ.ಜಿ. ಶ್ಯಾನಭಾಗರ ಕತೆ | ದೇವದಾಸಿ
ಕೂಸು ಹೆಣ್ಣು, ಹುಟ್ಟಿ ತಿಂಗಳಾಗಿರಬಹುದಷ್ಟೆ, ಹೊಯ್ಹಾಲುಣಿಸಿ ಜೀವಕ್ಕಿಂತ ಹೆಚ್ಚು ಮಾಡಿ ಸಾಕುವವರಾರು! ಊರೊಳಗಿನ ಕಲಾವತಿಯರಲ್ಲೊಬ್ಬಿಬ್ಬರ ಮನಸ್ಸು ಕರಗಿತು. ಪೊಲೀಸರು ಕೂಸನ್ನವರಿಗೊಪ್ಪಿಸಿದಂತೇ ಆಗಿತ್ತು. ದೇಸಾಯರದಕ್ಕೊಪ್ಪಲಿಲ್ಲ. ಅವರಿಗೂ ಮಕ್ಕಳಿರಲಿಲ್ಲ. ಮನೆಗೊಬ್ಬ ಮಗಳಾದಳು.
*
ಇತ್ತೀಚೆಗೆ ಬಾಳಮ್ಮನ (ದೇಸಾಯರ ಸಾಕುಮಗಳು) ಹೊರತಾಗಿ ದೇಸಾಯರ ಹೆಜ್ಜೆಯೇ ಸಾಗುತ್ತಿರಲಿಲ್ಲ ಹಗಲಿರುಳು ಬಾಳಮ್ಮ ಬಾಳಮ್ಮ. ಬೇರೆ ಮಾತೇ ಇರಲಿಲ್ಲ. ಉಂಡುಟ್ಟ ಜೀವಕ್ಕೆ ಅಮೃತವೊಂದು ಸಿಕ್ಕಂತಾಗಿತ್ತು. ಬಾಯಿಯವರು (ದೇಸಾಯರ ಹೆಂಡತಿ) ತೀರಿಕೊಂಡಮೇಲಂತೂ ಕೇಳುವ ಕಾರಣವೇ ಇರಲಿಲ್ಲ. ಅವರಾದರೂ ಬಾಳಮ್ಮನನ್ನು ತಮ್ಮ ಅಂಗೈ ಅಲೆಯಂತೆ ಜೋಪಾನ ಮಾಡಿದ್ದರು. ದೇಸಾಯರ ಮೇಲೆ ಅವಳನ್ನು ಸಾಕಿ ಸಲಹುವ ಭಾರವಂತೂ ಬಿದ್ದೇ ಇತ್ತು. ಈಗ ಅವಳ ಮದುವೆಯ ಚಿಂತೆ. ಬಾಳಮ್ಮನ ಜನ್ಮದಿತಿಹಾಸ ಎಲ್ಲರಿಗೂ ಗೊತ್ತಾದದ್ದು. ಸಂಪನ್ನ ಮನೆತನಗಳೇನೂ ಕಡಿಮೆಯಿರಲಿಲ್ಲ. ದೇಸಾಯರ ಸಂಪತ್ತಿಯ ಮೇಲಾಶೆಯಿದ್ದರೂ ಸಂಬಂಧ ಮಾಡಿಕೊಳ್ಳುವುದು ಸ್ವಲ್ಪ ಕಠಿಣವಾಗಿತ್ತು. ಬಾಳಮ್ಮನ ಬೆಳಿಗೆಯಂತೆ ದೇಸಾಯರ ಚಿಂತೆ ದೊಡ್ಡದಾಗ ಹತ್ತಿತ್ತು. ಬರೀ ವಿಚಾರದಿಂದಲೇ ಮಾತು ಮುಗಿಯುವಂತಿರಲಿಲ್ಲ. ಹತ್ತೆಂಟು ಕಡೆಗೆ ಯತ್ನ ಮಾಡಿ ನೋಡಿದರು. ಎಲ್ಲರೂ ಮೂಗು ಮುರಿಯುವವರೇ. ಒಬ್ಬಿಬ್ಬರಂತೂ ಬಾಳಮ್ಮನ ಜಾತಿ ಯಾವುದೆಂದು ಪ್ರಶ್ನೆ ಮಾಡಿದರು. ದೇಸಾಯರು ರೇಗಿದರು. ಬಾಳಮ್ಮನಿಗೆ ತನ್ನ ಜನ್ಮದಿತಿಹಾಸ ಗೊತ್ತಿರಲಿಲ್ಲವಾದರೂ ತನ್ನ ಮದುವೆಯ ವಿಷಯದಲ್ಲಿ ಏನೋ ತೊಂದರೆ ಬರುತ್ತಿರುವುದೆಂಬುದು ಇತ್ತೀಚೆಗೆ ಅವಳ ಲಕ್ಷ್ಯಕ್ಕೆ ಬರಹತ್ತಿತ್ತು. ದೇಸಾಯರ ಮೋರೆಯ ಮೇಲೆ ದಿನ ದಿನಕ್ಕೆ ಹೆಚ್ಚುತ್ತಿರುವ ನಿರಾಶೆಯನ್ನು ನೋಡಿ ಅವಳ ಎದೆ ಒಡೆದು ನೀರಾಗುತ್ತಿತ್ತು. ಒಂದು ದಿನ ಅವರು ರೊಚ್ಚಿಗೆದ್ದು “ಯಾವ ಹಾದಿ ಹೋಗೋ ಕಳ್ಳ ಬರವಲ್ಲನ್ಯಾಕs. ಕೊಟ್ಟುಬಿಡ್ತೇನಿ” ಎಂದು ಸ್ವಲ್ಪ ಗಟ್ಟಿಯಾಗಿಯೇ ನುಡಿದುಕೊಂಡರು. ಬಾಳಮ್ಮ ಹತ್ತಿರ ನಿಂತಿದ್ದು ಅವರ ಲಕ್ಷ್ಯಕ್ಕೆ ಬರಲಿಲ್ಲ. ಅವಳು “ಇದಕ್ಕೂ ಭಾಂವ್ಯಾಗ ಯಾಕ ನುಗಸೋದಿಲ್ಲ?” ಎಂದು ಕೇಳಿ ಕರುಣ ದೃಷ್ಟಿಯಿಂದ ನೋಡಿದಳು. ದೇಸಾಯರ ಕಣ್ಣಿಗೆ ಕತ್ತಲೆಯೇ ಕಾಣಹತ್ತಿತು.
ದೇಸಾಯರ ಮನೆಯೆಂದರೆ ದೊಡ್ಡ ಧರ್ಮಶಾಲೆ- ಅನ್ನಛತ್ರ. ಊರಿಗೆ ಬಂದ ಪರಸ್ಥರು, ದೇಶಾವರಿಯವರು, ಹರಿದಾಸರು, ಕೆಲಸದ ನಿಮಿತ್ತ ಬಂದವರು, ಎಲ್ಲರೂ ಇಲ್ಲಿಯೆ ಇಳಿದುಕೊಳ್ಳುವ ಪರಿಪಾಠ. ಸಮಾರಾಧನೆ ಹಾಗೇ ನಡೆದಿರುತ್ತಿತ್ತು. ದೇಸಾಯರಿಗೆ ಮನೆಯಲ್ಲಿಯ ಯಾವ ಸುದ್ದಿಯೂ ಗೊತ್ತಿರುತ್ತಿರಲಿಲ್ಲ. ಬಾಯಿಯವರಿದ್ದಾಗ ಎಲ್ಲ ವ್ಯವಸ್ಥೆಯನ್ನೂ ಅವರೇ ನೋಡಿಕೊಂಡು ಹೋಗುತ್ತಿದ್ದರು. ಅವರ ನಂತರ ಬಾಳಮ್ಮನಾದರೂ ಮೊದಲಿನಂತೆ ಎಲ್ಲವನ್ನೂ ನಡೆಯಿಸಿದ್ದಳು. ಅವಳ ಮದುವೆಯ ಮಾತಿನ್ನೂ ನನೆಗುದಿಗೆ ಬಿದ್ದಿತ್ತು.
ಇದನ್ನು ಓದಿದ್ದೀರಾ?: ಎಸ್.ಜಿ. ಶಾಸ್ತ್ರಿಯವರ ಕತೆ | ಹಬ್ಬದ ಉಡುಗೊರೆ
ಒಂದು ದಿನ ಒಬ್ಬ ಮುದುಕ ಬಾವಾ ಬಂದು ಅವಳ ಕೈನೋಡಿ ಏನೇನೋ ಹೇಳಿದ್ದ. ಆಯಿತು. ಅಂದಿನಿಂದವಳು ಮನೆಯಲ್ಲಿ ವಿರಕ್ತಭಾವದಿಂದಲೇ ವರ್ತಿಸಹತ್ತಿದಳು. ತನ್ನ ಕೋಣೆಯಲ್ಲಿಯೇ ಕಾಲ ಕಳೆಯುತ್ತಿದ್ದಳು. ಬಾವಾ ಬಂದರೆ ಆತನನ್ನು, ಮನೆಯಿಂದ ತುಸು ದೂರದಲ್ಲಿದ್ದ ಮಾವಿನತೋಪಿಗೆ ಕರೆದೊಯ್ದು, ಅಲ್ಲಿ ಆತನ ಸಂಗಡ ತಾಸುತಾಸು ಮಾತಾಡುತ್ತ ಕುಳಿತುಕೊಳ್ಳುತ್ತಿದ್ದಳು. ಹೀಗೇ ನಡೆಯಿತು ಕೆಲದಿನ. ಒಂದು ದಿನ ಸಂಜೆಗೆ ಮನೆಬಿಟ್ಟು ಹೋದವಳು ಮನೆಗೆ ಬರಲಿಲ್ಲ. ಎಲ್ಲರೂ ಗಾಬರಿಯಾದರು, ಕೆರೆಬಾವಿಗಳನ್ನು ಹುಡುಕಿದರು. ಠಾವು ಸಿಗಲಿಲ್ಲ. ದೇಸಾಯರು ಹಣೆಹಣೆ ಬಡಕೊಂಡರು.

*
ರಾತ್ರಿ ಹತ್ತುಹನ್ನೊಂದು ಗಂಟೆಯ ಸಮಯ. ದಾರಿಯಲ್ಲಿ ಯಾರೂ ಸುಳಿದಾಡುತ್ತಿರಲಿಲ್ಲ. ಮುಂದೆ ಒಬ್ಬ ಬಾವಾ ನಡೆದಿದ್ದ. ಹಿಂದಿನಿಂದೊಬ್ಬ ಹೆಣ್ಣುಮಗಳು.
“ನನ್ನೆಲ್ಲಿ ಕರಕೊಂಡು ಹೊಂಟೀದೀ!”
“ಮುನ್ನೋಡಿ ನಡಿ”-ಬಾವಾ ಗುರುಗುಟ್ಟಿದ.
ಹೆಣ್ಣುಮಗಳು ಅಳುತ್ತ ನಿಂತುಕೊಂಡಳು.
”ಹೂಂ… ಯಾಕ…”
ಅವಳು ಮತ್ತಷ್ಟು ಅಳಹತ್ತಿದಳು. “ನಮ್ಮಪ್ಪನ ಕಡೆಗೆ ಹೋಗ್ತಿನಿ……”
“ಅದ್ಯಾವ ನಿಮ್ಮಪ್ಪ…. ನಾನು ನಿಮ್ಮಪ್ಪ… ಹೂಂ-ಮುಚ್ಚುಬಾಯಿ.”
“ನಮ್ಮಪ್ಪನ ಕಡೆಗೆ ನನ್ನ ಕಳಸೂ…”
”ಅವ ನಿಮ್ಮಪ್ಪನ… ಮನೇಹಾಳ ಮಾಡಾವ… ಹೂಂ… ಮುಚ್ಚಂತೇನಿ ಬಾಯಿ.”
ಇದನ್ನು ಓದಿದ್ದೀರಾ?: ಕೆರೂರ ವಾಸುದೇವಾಚಾರ್ಯರ ಕತೆ | ತೊಳೆದ ಮುತ್ತು
“ಸುಳ್ಳು… ಅವ್ವನ ಕಡೆಗೆ ಕರಕೊಂಡು ಹೋಗೇನಂತ್ಹೇಳಿ…” ಅವಳು ಅಳುವುದನ್ನು ಕೇಳುವರಾರು! ಬಾವಾ ಸಿಟ್ಟಿನಿಂದ ಅವಳ ಕೈಹಿಡಿದು ತಿರುವಿದ. ಚೀರಿದಳು; ಉರುಳಿಬಿದ್ದಳು. ಅವಳು ಮೇಲಕ್ಕೇಳುವಷ್ಟರಲ್ಲಿ ಬಾವಾ ಅವಳ ಮೇಲೆ ದುಮುಕಿ, ಕುತ್ತಿಗೆಗೆ ಕೈಹಾಕಿದ. ಬಲು ಒದ್ದಾಡಿದಳು. ಕೊನೆಗೊಮ್ಮೆ ದೇಹದಿಂದ ಜೀವದ ಬಿಡುಗಡೆಯಾಯಿತು. ಬಾವಾ ಅಲ್ಲಿಯೇ ಹುತ್ತಿಗೆ ಆತು ದಣಿವಾರಿಸಿಕೊಳ್ಳುತ್ತ ಕುಳಿತುಕೊಂಡ. ದೂರದಲ್ಲಿ ಗಸ್ತಿಯವರ ಕೂಗು ಕೇಳಿಬಂತು. ನಡುನಡುವೆ ನಾಯಿಗಳು ಬೊಗಳಿದ್ದೂ ಕೇಳಿಸಿತು. ಬಾವಾ ವಿಚಾರದಿಂದ ಎಚ್ಚೆತ್ತು ಅಲ್ಲಿಯೇ ಒಂದು ಹಾಳು ಬಾವಿಗೆ ಎಳೆದೊಯ್ದು, ಜೋಳಿಗೆಯಿಂದೊಂದು ಕಂದಿಲಿಯನ್ನು ತೆಗೆದು, ಆ ಪ್ರೇತವನ್ನು ಛಿನ್ನಛಿನ್ನ ಮಾಡತೊಡಗಿದ. ಎಷ್ಟೋ ಹೊತ್ತಿನವರೆಗೆ ತನ್ನ ಕೆಲಸದಲ್ಲಿ ಮಗ್ನನಾಗಿದ್ದ. ಕಾಗೆಗಳೆಚ್ಚೆತವು. ಆತನು ಚಟ್ಟನೆ ಎದ್ದ. ಬೆದರಿ ಅತ್ತಿತ್ತ ನೋಡಿ ಕತ್ತಲೆಯಲ್ಲಿ ಮಾಯವಾದ.
*
ಬಾಳಮ್ಮ ಇಲ್ಲದಂತಾದಂದಿನಿಂದ ದೇಸಾಯರು ಎದೆ ಬಡಕೊಂಡು ಹಾಸಿಗೆಯನ್ನೇ ಹಿಡಿದರು. ಬೇನೆ ಕೈಮೀರಿತು. ಹೇಳುವುದನ್ನೆಲ್ಲ ಹಾಗೇ ತುಂಬಿಕೊಂಡು ದೇಸಾಯರು ಒಂದು ದಿನ ನಡೆದರು. ಸ್ಮಶಾನಯಾತ್ರೆ ಸೂರಿಸೂರಿಯಾಯಿತು. ದೇಸಾಯರು ಯಾರಿಗೆ ಬೇಕಾಗಿರಲಿಲ್ಲ! ಎಲ್ಲರೂ ಈ ಹೊತ್ತು ಭೇದಗಳನ್ನು ಬಿಟ್ಟು ಅವರನ್ನು ಹಿಂಬಾಲಿಸಿದರು. ಮನೆ ಬಿಡುವುದಕ್ಕೇ ಮೂರು ಸಂಜೆಯಾಗಿತ್ತು. ಸುತ್ತುಮುತ್ತಲಿನ ಹಳ್ಳಿಯವರೂ ಸ್ಮಶಾನಕ್ಕೆ ಬಂದುಬಿಟ್ಟರು. ಅಗ್ನಿಸಾಧನೆಯಾಗಿ ಚಿತೆಗೆ ಬೆಂಕಿ ಹತ್ತಬೇಕಾದರೆ ರಾತ್ರಿ ಏರಿಯೇ ಬಂದಿತು. ಆಪ್ತರೂ – ಇಷ್ಟರೂ ಒಂದೊಂದು ಉರವಲನ್ನು ಚಿತೆಗೇರಿಸಹತ್ತಿದರು. ರಾಚಯ್ಯ ಬಂದಿದ್ದ. ಆತನೂ ಎರಡು ಉರವಲುಗಳನ್ನು ಈ ಕೈಯಲ್ಲಿ ಹಿಡಿದುಕೊಂಡಿದ್ದ. ಆತನ ಕಣ್ಣುಗಳಿಂದ ನೀರು ಸುರಿಯುತ್ತಿದ್ದವು. “ನಾನು ಈ ಕಟಗಿ ಇಡಲೇನ್ರಿ!” ಎಂದು ನಡುಗುವ ದನಿಯಿಂದ ಕೇಳಿದ.
“ಹಾಂ… ಈಗs ಮುಟ್ಟಬ್ಯಾಡಪ್ಪಾ….” ಎಂದು ರಾಮಭಟ್ಟರು ಪಿಸಗುಟ್ಟಿದರು.
“ಸುಮ್ಮನಿರಿ ಭಟ್ರ! ನಾವೂ ನೀವೂನs ದೂರ ದೇಸಾಯರಿಗೆ. ಅಂದಂಗೆ ಇಂದಿಗೆ ರಾಚಯ್ಯ…. ಅಂದರ… ಜೀವ ಕಳಕೋತಿದ್ರು ದೇಸಾಯರು. ಹೂಂ……. ಅವರನೇನ್ ಕೇಳ್ತೀ. ಕಿಚ್ಚಿಗ್ಯಾತರ ಮೈಲಿಗಿ ?…ಇಲ್ಲಿ ಬಂದಮ್ಯಾಲ ಎಲ್ಲಾರು ದೇವರ…..”
“ದೇವರನಾದರೂ ಹ್ಯಾಂಗ ಮುಟ್ಟಾಗ ಬರತೈತ್ರೀ?” ಯಾರೋ ಅಂದುಬಿಟ್ಟರು. ರಾಚಯ್ಯ ಭಕ್ತಿ ಅಭಿಮಾನ ಭೀತಿ ಮುಂತಾದ ಅನೇಕ ಭಾವನೆಗಳ ಸೆಳವಿನಲ್ಲಿಯೆ ಚಿತೆಯ ಹತ್ತಿರ ಹೋಗಿ ”ಮಾರಾಯ, ನೀನು ನನಗ ಮಂಣ್ ಕೊಟ್ಟಿ ಅಂತ ಮಾಡಿದ್ನಿ” ಎಂದು ಆರ್ತಸ್ವರದಿಂದ ಕೂಗಿ ಉರುವಲುಗಳನ್ನೇರಿಸಿದ. ಅಗ್ನಿ ನಾರಾಯಣನು ಮೆಲ್ಲಮೆಲ್ಲನೆ ತನ್ನ ಉಗ್ರಸ್ವರೂಪವನ್ನು ತೋರಹತ್ತಿದನು. ಎಲ್ಲರೂ ಹಿಂದೆ ಸರಿದು ಗುಂಪು ಗುಂಪಾಗಿ ಕುಳಿತುಕೊಂಡರು. ಎಲೆ ಅಡಿಕೆ ಸಿಗರೇಟುಗಳ ವ್ಯವಸ್ಥೆಯಾಯಿತು. ಆ ಮಾತು ಈ ಮಾತು ನಡೆದವು.
ಇದನ್ನು ಓದಿದ್ದೀರಾ?: ಪಂಜೆ ಮಂಗೇಶರಾಯರ ಕತೆ | ನನ್ನ ಚಿಕ್ಕತಂದೆಯವರ ‘ಉಯಿಲ್’
“ನಾರಾಯಣ, ಬಾಳಾ, ಇಲ್ಲೆ… ಚಹಾದ್ದೇನಾರ… ವ್ಯವಸ್ಥಾ ಆಗ್ತದೇನು ನೋಡತೀಯಾ?” ಒಂದು ಗುಂಪಿನೊಳಗಿನ ಬಕ್ಕತಲೆಯ ಮುದುಕ ಕೇಳಿದ.
”ಇಲ್ಲೇನು ವ್ಯವಸ್ತಾ ಆಗಬೇಕ್ರಿ! ನಮ್ಮ ಮನೀನ ಇದು?” ಎಂದು ಗುರಗುಟ್ಟಿ ನಾರಾಯಣ ಮುಂದೆ ಸಾಗಿದ. “ಯಾರಿದ್ದೀರಪ್ಪಾ ದಕ್ಷಿಣೇಯವರು!” ಎಂದು ಕೂಗಿದ.

ಯಾಚಕರ ದಂಡೇ ಇತ್ತು. ನಾರಾಯಣ ಕೈಗೆ ಬಂದ ನಾಣ್ಯವನ್ನು ಕೊಡುತ್ತ ನಡೆದಿದ್ದ, ಯಾಚಕರು ತುಂಬಾ ಸಂತೋಷದಲ್ಲಿ ಮುಳುಗಿದರು. ಈವೊತ್ತು ಸತ್ತ ಮಹಾಪುರುಷ ದಿನವೊಂದಕ್ಕೆ ಸಾಯಲೆಂದು ಪರಮೇಶ್ವರನನ್ನು ಪ್ರಾರ್ಥಿಸಿದರು. ಈ ದಂಡಿನಲ್ಲಿ ಒಬ್ಬ ಫಕೀರ ಚಿತೆಯ ಕಡೆ ನೋಡುತ್ತ ನಿಂತಿದ್ದ. ನಾರಾಯಣ ಆತನಿಗೂ ಒಂದು ನಾಣ್ಯ ಕೊಡಬೇಕೆಂದು ಕೈಚಾಚಿ “ಓಯ್ ಫಕೀರ ಸಾಬ್” ಎಂದವನನ್ನು ಎಚ್ಚರಿಸಿದ.
“ಯಹ್ ಕೌನ್ ಧರ್ಮಾತ್ಮಾ ಥಾ!” ಫಕೀರನು ಕೈಯೊಡ್ಡುತ್ತ ಕೇಳಿದ. ಒಡ್ಡಿಯೊಳಗೆ ನಾಣ್ಯ ಬಿದ್ದಿತು. ಪ್ರಶ್ನೆಗೆ ಉತ್ತರ ಸಿಗಲಿಲ್ಲ. ನಾರಾಯಣ ಯಾವುದೋ ಒಂದು ಗುಂಪಿನಲ್ಲಿ ಆಗಲೇ ಸೇರಿಬಿಟ್ಟಿದ್ದ. ಮಾದರ ಕರಿಯ ಏನೇನೋ ಹೇಳತೊಡಗಿದ. ಫಕೀರನಿಗೆ ಆತನು ಹೇಳಿದ್ದು ತಿಳಿಯಿತೋ ಬಿಟ್ಟಿತೋ!
ಕಿಚ್ಚಿನ ಬೆಂಕಿಯು ಉಕ್ಕೇರಿ ಹೊರಚೆಲ್ಲಹತ್ತಿತು. ಫಟ್‌ಫಟ್ ಎಂಬ ಸಪ್ಪಳವೂ ಕೇಳ ಬಂದಿತು. ಕೂಡಲೇ “ಅಪ್ಪಣೆಯಂತೂ ಆತು. ಆಚಾರ್‍ರ ನಡೀರಿನ್ನ ಮನೀಗೆ” ಯಾರೋ ಕೂಗಿದರು.
“ನೀವು ನಡೀರಿ” ಆಚಾರ್ಯರು ಒಂದು ಕಳಗವನ್ನು ತೆಗೆದುಕೊಂಡು ಕಿಚ್ಚಿನಲ್ಲಿ ಚುಚ್ಚುತ್ತ ಸುತ್ತಲ್ಲ ತಿರುಗಾಡಹತ್ತಿದರು.
”ಮಹಾರಾಯನ ಕಡೆಯ ಸೇವಾ… ಇಷ್ಟರ ಬಹಳs…” ಎಂದು ಆಚಾರ್ಯರೂ ಹೊರಟರು. ಕರಿಯಾ ಕೇಳಿದ, ”ಕರ್ಮಾ ಯಾರ ಹಿಡಿಯಾವರ್‍ರಿ?”
”ನಮ್ಮ ರಂಗಪ್ಪನ ಮಗ ಇಲ್ಲ, ಆ ಚಿಕ್ಕಪ್ಪಾ… ದೇಸಾಯರಿಗೂ ಮಗನ…” ಎಂದು ಯಾರೋ ಹೇಳಿದರು.
ಇದನ್ನು ಓದಿದ್ದೀರಾ?: ಕುಲಕರ್ಣಿ ಶ್ರೀನಿವಾಸರ ಕತೆ | ಹೊಸಬಾಯಿ
ಎಲ್ಲರೂ ಹೋದಂತಾಯಿತು. ಫಕೀರ ನಿಂತೇ ಇದ್ದ. ಎಲ್ಲ ಸದ್ದು ಇಲ್ಲದಂತಾದದ್ದನ್ನು ನೋಡಿ ಚಿತೆಯ ಹತ್ತಿರ ಹೋಗಿ ನಿಂತ. ಮೃಣ್ಮಯ ದೇಹವು ಈಗ ಬೆಂಕಿಯಲ್ಲಿ ಬೆರೆತು ಕುಸಿಬೀಳಹತ್ತಿತ್ತು. ಉರಿಯ ಚಿಗುರುಗಳು ಅಲ್ಲಲ್ಲಿ ಕುಣಿಯುತ್ತಿದ್ದವು. ಎಷ್ಟೋ ಹೊತ್ತಿನ ಮೇಲೆ ಕಿಚ್ಚು ಶಾಂತವಾಗಬಂದಿತು. ಗಾಳಿಯ ಸುಳಿವಿಗೆ ಬೂದಿ ಹಾರಹತ್ತಿತು. ಫಕೀರನು ಅಲ್ಲಿಯೇ ಬಿದ್ದಿದ್ದ ಕಳಗವನ್ನು ತೆಗೆದುಕೊಂಡು ಕಿಚ್ಚಿನ ಬೆಂಕಿಯನ್ನು ಸರಿಮಾಡಿ ಅದನ್ನು ಕಿಚ್ಚಿನಲ್ಲಿಯೇ ಒಗೆದುಬಿಟ್ಟ. ಬೆಂಕಿಯು ಉರಿಗಟ್ಟಿತು. ಫಕೀರ ಅದರ ಕಡೆಗೆ ನೋಡುತ್ತ ನಿಂತಿದ್ದ.
(ಕೃಪೆ: ಮಲ್ಲಿಗೆ ಮಾಸಪತ್ರಿಕೆ, ‘ಭಾವಪ್ರಭಾತ’, ಪ್ರೇಮ ಪ್ರಕಟಾಲಯ, ಧಾರವಾಡ, 1937)

ಜೋಶಿಯವರ ‘ಕಿಚ್ಚಿನ ಕಾವಲು’
ಧಾರವಾಡದ ಕಡೆಯಿಂದ ಸಣ್ಣಕತೆಗಳನ್ನು ಬರೆಯತೊಡಗಿದ ಎರಡನೆಯ ಪೀಳಿಗೆಯ ಲೇಖಕರಲ್ಲಿ ದಿ. ಹ.ಪೀ. ಜೋಶಿ (ಹಣಮಂತರಾವ್ ಪೀತಾಂಬರ ಜೋಶಿ: 1898-1941) ಒಬ್ಬರು. 1923ರ ಹೊತ್ತಿಗೆ ಅವರ ಇಂಗ್ಲಿಷ್ ಕಥೆಯೊಂದು ಪ್ರಕಟವಾಗಿತ್ತಂತೆ. ನಂತರ “ಜಯ ಕರ್ನಾಟಕ”, “ಪ್ರೇಮ” ಮೊದಲಾದ ಪತ್ರಿಕೆಗಳಲ್ಲಿ ಅವರ ಕನ್ನಡ ಕಥೆಗಳು ಪ್ರಕಟವಾಗತೊಡಗಿದವು. 1933ರ ಹೊತ್ತಿಗೆ ಆಗಲೇ ಅವರು ಉತ್ತಮ ಕಥೆಗಾರರೆಂದು ಗುರುತಿಸಲ್ಪಟ್ಟಿದ್ದರೆಂಬುದಕ್ಕೆ ಆ ಕಾಲದ “ನವಿಲುಗರಿ” ಮತ್ತು “ಕಾಮನಬಿಲ್ಲು”ಗಳಲ್ಲಿ ಅವರ ಕಥೆಗಳಿಗೆ ಪ್ರಾತಿನಿಧ್ಯ ಸಿಕ್ಕಿದ್ದೇ ನಿದರ್ಶನವಾಗಿದೆ. ನಂತರ ಅವರ ಹದಿನಾಲ್ಕು ಕಥೆಗಳ ಸಂಕಲನ “ಭಾವ-ಪ್ರಭಾತ” (1937) ಪ್ರಕಟವಾಯಿತು. ಅವರ ಆವರೆಗಿನ ಎಲ್ಲ ಕಥೆಗಳೂ ಈ ಸಂಕಲನದಲ್ಲಿ ಬಂದಿರುವಂತಿದೆ. ಈ ಸಂಕಲನದ ನಂತರ – ಅವರು ಮತ್ತೆ ಬರೆದರೋ ಇಲ್ಲವೋ ಈಗ ತಿಳಿಯುವುದಿಲ್ಲ. ಈ ಹದಿನಾಲ್ಕು ಕತೆಗಳ ಹೊರತಾಗಿ ‘ಪಂಕಜಂ’ ಎಂಬ ಕತೆ ”ಜಯ ಕರ್ನಾಟಕ”ದಲ್ಲೂ (1935), ‘ಆಚೆ’ ಎಂಬ ಕತೆ ”ಜಯಂತಿ”ಯಲ್ಲೂ (1938) ಪ್ರಕಟವಾಗಿವೆ. ಮುಂದೆ ನಾಲ್ಕೇ ವರ್ಷಗಳಲ್ಲಿ ಅವರು ತೀರಿಕೊಂಡದ್ದರಿಂದ ಹೆಚ್ಚಿನ ಬರವಣಿಗೆ ಆದಂತಿಲ್ಲ. ಹೆಚ್ಚುಕಡಿಮೆ ಮರತೇಹೋದಂತಿದ್ದ ಇವರ ಕತೆಗಳ ಬಗ್ಗೆ ಕುರ್ತಕೋಟಿಯವರು ಒಂದಿಷ್ಟು ಬರೆದು ಉಪಕಾರ ಮಾಡಿದ್ದಾರೆ. (”ಯುಗಧರ್ಮ ಹಾಗೂ ಸಾಹಿತ್ಯ ದರ್ಶನ”, ಪುಟ: 152-4), ಮುಗಳಿಯವರೂ ಒಂದೆರಡು ಸಾಲು ಬರೆದಿದ್ದಾರೆ (“ಕನ್ನಡ ಸಾಹಿತ್ಯದ ಇತಿಹಾಸ”, ಪುಟ: 243). ಇನ್ನುಳಿದಂತೆ ಒಬ್ಬಿಬ್ಬರು ಅವರ ಹೆಸರು ಹೇಳಿದ್ದಾರಾದರೂ ಬಹಳ ಮಂದಿಗೆ ಅವರ ಕಥೆಗಳು ಅಪರಿಚಿತವಾಗಿವೆಯೆಂದೇ ಹೇಳಬೇಕು. (ಅಲಭ್ಯವಾದ “ಭಾವ-ಪ್ರಭಾತ”ವನ್ನು ದೊರಕಿಸಿ ಕೊಟ್ಟವರು ಬೆಂಗಳೂರು ವಿಶ್ವವಿದ್ಯಾಲಯದ ಗ್ರಂಥಾಲಯದ ಅಧಿಕಾರಿ, ರಾಘವೇಂದ್ರ ಖಾಸನೀಸ ಅವರು. ಕಥೆಗಳನ್ನಲ್ಲದೆ ಜೋಶಿಯವರು “ಮಾವಿನ ತೋಪು” (1933) ಎಂಬ ಒಂದು ವಿಶಿಷ್ಟ ಕಾದಂಬರಿಯನ್ನೂ, “ರಾಜವಲ್ಲಭ” (1935) ಎಂಬ ಕಂಪನೀ ಶೈಲಿಯ ಒಂದು ಪೌರಾಣಿಕ ನಾಟಕವನ್ನೂ ಬರೆದಿದ್ದಾರೆಂಬುದು ಕೂಡ ಅನೇಕರಿಗೆ ಗೊತ್ತಿಲ್ಲ. ಈ ಮೂರು ಪುಸ್ತಕಗಳನ್ನು ಒಟ್ಟಿಗೆ ಸೇರಿಸಿ ಈಚೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಕಟಿಸಿದೆ (1990).
ವಸ್ತು, ಕಾಲ, ಸನ್ನಿವೇಶ, ಶೈಲಿ, ನಿರೂಪಣಾ ವಿಧಾನ ಮೊದಲಾದ ದೃಷ್ಟಿಯಿಂದ “ಭಾವ-ಪ್ರಭಾತ”ದ ಕಥೆಗಳು ವೈವಿಧ್ಯಪೂರ್ಣವಾಗಿವೆ. ಸಂಕ್ಷಿಪ್ತತೆ ಈ ಎಲ್ಲ ಕಥೆಗಳ ಮುಖ್ಯ ಲಕ್ಷಣ. ಕಾಲ ಘಟನೆಗಳ ಹರವು ದೊಡ್ಡದಾದಾಗಲೂ 8-10 ಪುಟಗಳನ್ನು ಮೀರಿ ಕಥೆ ಬೆಳೆಯುವುದಿಲ್ಲ. 3-4 ಪುಟಗಳಲ್ಲೇ ಮುಗಿದಿರುವ ಕಥೆಗಳೂ ಇವೆ. ಸನ್ನಿವೇಶಗಳನ್ನು ವಿವರವಾಗಿ ಬೆಳೆಸಲು ಹೋದಾಗ ಕೇಂದ್ರಬಿಂದುವಿನಿಂದ ಸ್ವಲ್ಪ ಆಚೆ ಸರಿಯುವುದೂ ಉಂಟು. ಬದಲಾಗಿ ಘಟನೆಗಳನ್ನು ಅಡಕಗೊಳಿಸಿ ಸಂಗ್ರಹಿಸಿದಾಗ ಅತಿಸೂಚ್ಯತೆ ತಲೆದೋರುತ್ತದೆ. ಈ ದೋಷಗಳಿಂದ ಮುಕ್ತವಾಗಿರುವ, ಅಥವಾ ಈ ದೋಷಗಳಿದ್ದೂ ಯಶಸ್ವಿಯಾಗಿರುವ ‘ಕಿಚ್ಚಿನ ಕಾವಲು’, ‘ಕಡೇ ಆಟ’, ‘ಅಪೂರ್ಣಾ’ ಮೊದಲಾದ ಕತೆಗಳನ್ನು ಇಂದಿಗೂ ಆಸಕ್ತಿಯಿಂದ ಓದಬಹುದಾಗಿದೆ. ಇವುಗಳಲ್ಲಿ ಚಿತ್ತಾಲರ ‘ಖಾಲಿ ಕೋಣೆ’, ದೇಸಾಯರ ‘ಬೇಸರ’ಗಳನ್ನು ಹೋಲುವ ‘ಅಪೂರ್ಣಾ’ ವಸ್ತು, ನಿರೂಪಣೆ, ಮನೋವಿಶ್ಲೇಷಣೆಗಳು ದೃಷ್ಟಿಯಿಂದ ನಮ್ಮ ಬರವಣಿಗೆಗೆ ಸಮೀಪ ಬರುತ್ತದೆ. ‘ಕಡೇ ಆಟ’ ಮಾದರಿಯ ನವೋದಯ ಬರವಣಿಗೆ. ‘ಕಿಚ್ಚಿನ ಕಾವಲು’ ಮಾತ್ರ ವಿಶಿಷ್ಟ ರೀತಿಯ ಕಥೆ.
ಇದನ್ನು ಓದಿದ್ದೀರಾ?: ಎ.ಆರ್. ಕೃಷ್ಣಶಾಸ್ತ್ರಿ ಅವರ ಕತೆ | ಬಂಗಲಿಯ ವಾಸ
‘ಕಿಚ್ಚಿನ ಕಾವಲು’ ಈಚೆಗೆ ಕನ್ನಡದಲ್ಲಿ ಮತ್ತೆ ಪ್ರಚಾರಕ್ಕೆ ಬರುತ್ತಿರುವ ಸಂಗ್ರಹನಿರೂಪಣಾ ವಿಧಾನಕ್ಕೆ ಒಂದು ಉತ್ತಮ ಉದಾಹರಣೆಯಾಗಿದೆ. ಈ ಕಥೆಯಲ್ಲಿ ಒಂದು ಸಣ್ಣ ಕತೆಗೆ ಹೆಚ್ಚೇ ಅನಿಸುವಷ್ಟು ಘಟನೆಗಳಿವೆ. ಕಾಲವೂ ದೀರ್ಘವಾಗಿದೆ. ವಿವರವಾದ ನಿರೂಪಣೆಯಲ್ಲಿ ಕಥೆಯ ಕೇಂದ್ರವಸ್ತು ತನ್ನ ಚೂಪನ್ನು, ತೀವ್ರತೆಯವ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ಅಂತೆಯೇ ಸಂಗ್ರಹನಿರೂಪಣೆಯ ಮೂಲಕ ಘಟನೆಗಳ ಬಾಹುಳ್ಯವನ್ನೂ ಕಾಲದ ವಿಸ್ತಾರವನ್ನೂ ನಿಯಂತ್ರಿಸಿಕೊಂಡು ಉದ್ದೇಶಿತ ಪರಿಣಾಮವನ್ನು ದಟ್ಟಗೊಳಿಸುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ.
ಈ ಕಥೆ, ಮೇಲುನೋಟಕ್ಕೆ, ಇತ್ತೀಚೆಗೆ ವಿಪುಲವಾಗಿ ಬರುತ್ತಿರುವ ಹಳ್ಳಿಯ ಜೀವನದ ವೈಯಕ್ತಿಕ ವೈಮನಸ್ಸು, ಪ್ರತಿಷ್ಠೆಗಳಿಂದ ಹುಟ್ಟುವ ಜಗಳಗಳ ದುರಂತ ಕಥೆಯಂತೆ ಕಂಡರೂ, ಸೃಜನಶೀಲವಲ್ಲದ ಕುಚೋದ್ಯ, ಕುತಂತ್ರ, ಧೂರ್ತತನಗಳು ಕೊನೆಗೆ ಆತ್ಮ ವಿನಾಶಕ್ಕೆ ಕಾರಣವಾಗುವದು ಈ ಕಥೆಯ ಮುಖ್ಯವಸ್ತು ಎನ್ನಬಹುದು. ವೆಂಕಪ್ಪ ದೇಸಾಯಿ ಹಾಗೂ ಮದ್ಧೂರಾಯರ ಈ ಕಲ್ಯಾಣಗುಣಗಳ ಪ್ರಸ್ತಾಪ ಕಥೆಯ ಆರಂಭದಲ್ಲೇ ಬರುತ್ತದೆ. ಹರಿತವಾದ ವ್ಯಂಗ್ಯ, ಚುರುಕಾದ ಪ್ರತಿಮೆಗಳು, ಜಾಣತನದ ವಾಕ್ಯಸಮತೋಲನಗಳ ಮೂಲಕ ಇವರಿಬ್ಬರ ಸ್ವಭಾವದಲ್ಲಿಯ ಹಟಮಾರಿತನ, ಬುದ್ಧಿವಂತಿಕೆ, ತಂತ್ರಕೌಶಲಗಳು ಮೊದಲಿಗೇ ಸ್ಥಾಪಿತವಾಗುತ್ತದೆ. ಒಬ್ಬೊಬ್ಬರ ಸಾಮರ್ಥ್ಯವೇ ಸಾಕಷ್ಟು ವಿನಾಶಕಾರಿಯಾಗಿದೆ. ಇಬ್ಬರೂ ಕೂಡಿದರೆ ಕೇಳಬೇಕೆ? ಅವರು ಮಾಡಿದ್ದೇ ಆಟವಾಗುತ್ತದೆ. ಆದರೆ ಹೊಲದ ವ್ಯವಹಾರವೊಂದರಲ್ಲಿ ತಾವೇ ಪರಸ್ಪರ ಎದುರುಬಿದ್ದಾಗ ಅದೇ ವಿನಾಶಕಾರೀ ಗುಣಗಳಿಂದ ಇಬ್ಬರೂ ದುರಂತಕ್ಕೀಡಾಗುತ್ತಾರೆ. ದೇಸಾಯಿ ಮದ್ಧೂರಾಯನ ಮನೆ ಸುಡಿಸುತ್ತಾನೆ. ಮದ್ಧೂರಾಯ ಊರು ಬಿಟ್ಟು ಕಣ್ಮರೆಯಾಗುತ್ತಾನೆ. ಆದರೆ ಅವನ ಜಿದ್ದು ಮಾತ್ರ ತೀರುವುದಿಲ್ಲ. ಈ ಜಿದ್ದಿನಲ್ಲಿ ಗೆಲ್ಲಲು ಮದ್ಧೂರಾಯ ಒಡ್ಡುವ ಪಣ, ಅನುಸರಿಸುವ ವಿಧಾನಗಳು ಮಾತ್ರ ಊಹಿಸಲಿಕ್ಕೂ ಅಸಾಧ್ಯವಾದವುಗಳಾಗಿವೆ. ತನ್ನ ಹೊಟ್ಟೆಯ ಮಗಳನ್ನು ತಂದು ಮದ್ಧೂರಾಯ ದೇಸಾಯಿಯ ಮನೆಯ ಮುಂದೆ ಬಿಡುವದು, ಮಕ್ಕಳಿಲ್ಲದ ದೇಸಾಯಿ ಅದನ್ನೇ ಪ್ರೀತಿಯಿಂದ ಸಾಕಿ ದೊಡ್ಡವಳನ್ನಾಗಿ ಮಾಡುವುದು, ಹೊಟ್ಟೆಯ ಮಗಳಂತೆ ಪ್ರೀತಿಸುತ್ತಿದ್ದ ಅವನ ಹೊಟ್ಟೆ ಉರಿಸಲೆಂದೇ ಮದ್ಧೂರಾಯ ಬಾವಾನ ವೇಷದಲ್ಲಿ ಬಂದು ಅವಳನ್ನು ಎಳೆದೊಯ್ದು ಕೊಲ್ಲುವದು, ಅದರಿಂದಾಗಿ ದೇಸಾಯಿ ಹೊಟ್ಟೆಬೇನೆ ಹಚ್ಚಿಕೊಂಡು ಸಾಯುವದು, ಜಿದ್ದು ತೀರಿದ ಮದ್ಧೂರಾಯ ದೇಸಾಯಿಯ ಚಿತೆಯ ಮುಂದೆ ನಿಲ್ಲುವದು- ಇವೆಲ್ಲ ಅದ್ಭುತರಮ್ಯ ಜಾನಪದ ಕಥಾಲೋಕದ ನೆನಪು ತರುವಂತಿವೆ. ಆದರೆ ಇವೆಲ್ಲದರ ಹಿಂದಿನ ಜಿದ್ದು, ಪ್ರತೀಕಾರಗಳ ಸ್ವರೂಪ ಮಾತ್ರ ದಿಗಿಲುಗೊಳಿಸುತ್ತದೆ.
ಇದನ್ನು ಓದಿದ್ದೀರಾ?: ಕೊರಡ್ಕಲ್ ಶ್ರೀನಿವಾಸರಾವ್ ಅವರ ಕತೆ | ಧನಿಯರ ಸತ್ಯನಾರಾಯಣ
ಕಥೆಯಲ್ಲಿ ಇಷ್ಟೆಲ್ಲ ಘಟನೆಗಳಿದ್ದರೂ ಬರವಣಿಗೆಯಲ್ಲಿ ಅನಗತ್ಯ ಆತುರವೇನೂ ಇಲ್ಲ. ಹೆಚ್ಚಿನ ಘಟನೆಗಳೆಲ್ಲ ಸೂಚ್ಯವಾಗಿ, ಸಂಗ್ರಹವಾಗಿ ಬಂದು ಕಥೆಯ ವಸ್ತುವನ್ನು ಮುಂದುವರಿಸಿಕೊಂಡು ಹೋಗುತ್ತವೆ. ಬಾವಾಜಿ-ಬಾಳಮ್ಮ ಹಾಗೂ ಸ್ಮಶಾನದಲ್ಲಿಯ ಸಂಭಾಷಣೆಯ ದೃಶ್ಯಗಳಲ್ಲಿ ಸ್ವಲ್ಪ ವಿವರವಾದ ನಾಟಕೀಯ ಬೆಳವಣಿಗೆ ಇದ್ದರೂ ಸಂಗ್ರಹನಿರೂಪಣೆಯೇ ಕಥೆಯ ಮುಖ್ಯ ವಿಧಾನವಾಗಿದೆ. ಆದರೆ ಈ ಸಂಗ್ರಹ ನಿರೂಪಣೆ ಕಲಾತ್ಮಕತೆಯ ಮೂಲತತ್ವವಾದ ನಾಟ್ಯಾಯಮಾನತೆಗೆ ವಿರುದ್ಧವಾದುದಲ್ಲ ಎಂಬುದು ಇಲ್ಲಿ ಗಮನಿಸಬೇಕಾದ ಸಂಗತಿಯಾಗಿದೆ. ಎಂದರೆ ಈ ನಿರೂಪಣೆ ದೀರ್ಘಕಥೆಯೊಂದರ ಕಥಾಸಾರಾಂಶವಲ್ಲ; ತನ್ನಷ್ಟಕ್ಕೇ ಸ್ವಯಂಪೂರ್ಣವಾದ ಕಲಾಕೃತಿ. ಇಲ್ಲಿ ಘಟನೆಗಳು ಬಿಡಿಬಿಡಿಯಾಗಿ ವಿವರವಾಗಿ ಬೆಳೆಯುವದಿಲ್ಲ. ಆದರೆ ಭಾವಗೀತೆಯಲ್ಲಿಯ ಪ್ರತಿಮೆಗಳಂತೆ ಸಣ್ಣ-ಪುಟ್ಟ ವಿವರಗಳಲ್ಲಿಯೇ ಪಾತ್ರಗಳ ಸ್ವಭಾವ ದರ್ಶನವಾಗುತ್ತದೆ. ವಸ್ತುವಿನ ಸಾವಯವ ಸಂಬಂಧಗಳು ಸ್ಪಷ್ಟವಾಗುತ್ತವೆ. ಕಥೆಯ ಮೊದಲ ಭಾಗದ ಬರವಣಿಗೆ ಈ ಬಗೆಯ ಶ್ರೇಷ್ಠ ಕಲೆಗಾರಿಕೆಯ ಮಾದರಿಯಾಗಿದೆ. ದೇಸಾಯಿ-ಮದ್ಧೂರಾಯರ ನಡುವಿನ ವೈಮನಸ್ಸಿಗೆ ಕಾರಣವಾಗುವ ಘಟನೆ ಸಂಗ್ರಹವಾಗಿಯೇ ಬಂದಿದ್ದರೂ, ಅದನ್ನು ನೈಜವಾಗಿಸಲು ಅಗತ್ಯವಾದ ವಿವರಗಳೆಲ್ಲವೂ ಅದರಲ್ಲಿವೆ. ಜೊತೆಗೆ ಉತ್ತರ ಕರ್ನಾಟಕದ ಆಡುಮಾತಿನ ಅಡಕವಾದ ಧ್ವನಿಪೂರ್ಣ ನುಡಿಗಟ್ಟು ಈ ವಿವರಗಳಿಗೆ ಒಂದು ಹೊಸ ರುಚಿಯನ್ನು ಕೊಟ್ಟಿದೆ. ಕೇವಲ ಭಾಷೆಯ ಉಪಯೋಗದ ದೃಷ್ಟಿಯಿಂದ ನೋಡಿದರೂ ಇದೊಂದು ಅತ್ಯುತ್ತಮ ಬರವಣಿಗೆಯ ಮಾದರಿಯಾಗಿದೆ ಎನ್ನಬಹುದು. (‘ಮಾವಿನ ತೋಪು’ ಕಾದಂಬರಿಯ ನಿರೂಪಣಾ ವಿಧಾನವೂ ಇದೇ ರೀತಿಯದು. ಆದರೆ ಅಲ್ಲಿ ವಿವರಗಳು ಎಷ್ಟೋಸಲ ಮೈತುಂಬಿಕೊಂಡಂತೆ ಅನಿಸುವುದಿಲ್ಲ.)
ಈ ಬಗೆಯ ಸಂಗ್ರಹನಿರೂಪಣೆಯಿಂದ ಕಥೆಗೆ ಇನ್ನೊಂದು ಲಾಭವಾಗಿದೆ. ಮೇಲುನೋಟಕ್ಕೆ ಕಾಣುವಂತೆ ಈ ಸೇಡು ಮತ್ತು ಪ್ರತೀಕಾರದ ಕಥೆಯಲ್ಲಿ ಸಾಕಷ್ಟು ಮೆಲೋಡ್ರಮ್ಯಾಟಿಕ್ ಅಂಶಗಳಿವೆ. ವಿವರವಾದ ಬರವಣಿಗೆಯಲ್ಲಿ ಎದ್ದು ಕಾಣಬಹುದಾಗಿದ್ದ ಈ ಅಂಶಗಳನ್ನು ಚುರುಕಾದ ವೇಗದ ನಿರೂಪಣೆಯಲ್ಲಿ ವ್ಯಂಗ್ಯ ಟೀಕೆ-ಟಿಪ್ಪಣಿಗಳ ಮೂಲಕ ನಿಯಂತ್ರಿಸಿಕೊಂಡು ಹೋಗಲು ಸಾಧ್ಯವಾಗಿದೆ.
ಇದನ್ನು ಓದಿದ್ದೀರಾ?: ಕೆರೂರ ವಾಸುದೇವಾಚಾರ್ಯರ ಕತೆ | ತೊಳೆದ ಮುತ್ತು
ಹಾಗೆಯೇ ಈ ಕಥೆಯಲ್ಲಿ ರಹಸ್ಯಮಯತೆಯ (suspense) ಉಪಯೋಗವೂ ಅರ್ಥಪೂರ್ಣವಾಗಿದ್ದು ಕಥೆಯ ಪರಿಣಾಮವನ್ನು ಆಳವಾಗಿಸುತ್ತದೆ. ಮೊದಲು ಬಾವಾ ಯಾರೆಂದು ಸ್ಪಷ್ಟವಾಗುವದಿಲ್ಲ. ಬಾಳವ್ವನನ್ನು ಖಿನ್ನಳನ್ನಾಗಿ ಮಾಡುವ ಅವನ ಗುಟ್ಟೂ ಏನೆಂದು ತಿಳಿಯುವುದಿಲ್ಲ. ಮುಂದಿನ ಭಾಗದಲ್ಲಿ ಬಾವಾ ಮತ್ತು ಬಾಳವ್ವರನ್ನು ಅಪರಿಚಿತ ಪಾತ್ರಗಳೆಂಬಂತೆ ಹೊಸದಾಗಿ ಪರಿಚಯಿಸಲಾಗಿದೆ. ಕೊನೆಯ ಭಾಗದಲ್ಲಿ ಬರುವ ಫಕೀರ ಮತ್ತೆ ಹೊಸ ಪಾತ್ರವೆಂಬಂತೆ ಬರುತ್ತಾನೆ. ಆದರೆ ಈ ಪಾತ್ರಗಳು ಯಾರು-ಯಾರು, ಅವರ ನಡುವಿನ ಸಂಬಂಧಗಳೇನು ಎಂಬುದನ್ನು ಗುರುತಿಸುತ್ತ ಹೋದಂತೆ ದಿಗಿಲು ಹುಟ್ಟಿಸುವ ಸೇಡು-ಪ್ರತೀಕಾರಗಳ ನಿಗೂಢ ಪ್ರಪಂಚವೇ ತೆರೆದುಕೊಳ್ಳುತ್ತದೆ. ಇದರಿಂದಾಗಿ ನಿರೂಪಣಾವಿಧಾನದಲ್ಲಿ ಸ್ವಲ್ಪ ಅಸಹಜವೆನಿಸುವ ಪಲ್ಲಟಗಳು (Shifts) ಕಾಣಿಸಿದರೂ, ಅವೆಲ್ಲ ಕಥೆಯ ಅನುಭವದ ನಿಗೂಢತೆಯನ್ನು ದಟ್ಟಗೊಳಿಸುವುದರಿಂದ ಸಮರ್ಥನೀಯವೇ ಆಗಿವೆ. ಜೋಶಿಯವರು ಕಥೆಗಾರಿಕೆಯನ್ನು ಹೇಗೆ ಕಲಾಪೂರ್ಣವಾಗಿ ಎಚ್ಚರಿಕೆಯಿಂದ ನಿರ್ವಹಿಸಬಲ್ಲರು. ಎಂಬುದಕ್ಕೆ ಇದೊಂದು ನಿದರ್ಶನ.
(ವಿಮರ್ಶೆ: ಡಾ. ಗಿರಡ್ಡಿ ಗೋವಿಂದರಾಜ, ಕೃಪೆ: ಮಲ್ಲಿಗೆ ಮಾಸಪತ್ರಿಕೆ)