ಐಪಿಎಲ್‌ 2025 | ಏನಿರಲಿದೆ ಈ ಬಾರಿಯ ನಿರೀಕ್ಷೆಗಳು ಮತ್ತು ವಿಶೇಷತೆಗಳು

Date:

Advertisements
ಹದಿನೆಂಟನೇ ಆವೃತ್ತಿಯ ಐಪಿಎಲ್‌ ಮತ್ತಷ್ಟು ರೋಚಕತೆಯಿಂದ ಕೂಡಿರಲಿದೆ. ಬೌಲರ್‌ಗಳು ಬ್ಯಾಟರ್‌ಗಳನ್ನು ಕಟ್ಟಿಹಾಕಲು ತಂತ್ರಗಳನ್ನು ರೂಪಿಸುತ್ತಿದ್ದರೆ, ಬ್ಯಾಟರ್‌ಗಳು ಬೌಲರ್‌ಗಳ ಬೆವರಿಳಿಸಲು ಸಿದ್ಧರಾಗುತ್ತಿದ್ದಾರೆ. 

ಐಸಿಸಿ ಚಾಂಪಿಯನ್ಸ್ ಟ್ರೋಫಿ, ಡಬ್ಲ್ಯೂಪಿಎಲ್‌ ಸಂಭ್ರಮದ ಬಳಿಕ ಕ್ರಿಕೆಟ್ ಪ್ರಿಯರ ಕಣ್ಣು ವಿಶ್ವದ ಶ್ರೀಮಂತ ಲೀಗ್‌ಗಳಲ್ಲಿ ಒಂದಾಗಿರುವ ಐಪಿಎಲ್ ಕಡೆ ನೆಟ್ಟಿದೆ. ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ 18ನೇ ಆವೃತ್ತಿಯ ಈ ಕ್ರೀಡಾಕೂಟ ಮಾ.22ರಿಂದ ಅದ್ಧೂರಿಯಾಗಿ ಆರಂಭವಾಗಲಿದೆ. ಈಗಾಗಲೇ ಎಲ್ಲ 10 ಫ್ರಾಂಚೈಸಿಗಳು ತಮ್ಮ ತಂಡಗಳ ನಾಯಕರ ಹೆಸರನ್ನು ಅಂತಿಮಗೊಳಿಸಿವೆ. ಈ ಹಿಂದಿನ ಟೂರ್ನಿಗಳಲ್ಲಿ ವಿದೇಶಿ ಆಟಗಾರರೇ ಹೆಚ್ಚಾಗಿ ನಾಯಕರಾಗಿದ್ದ ಉದಾಹರಣೆಗಳಿವೆ. ಆದರೆ, ಈ ಬಾರಿಯ ಐಪಿಎಲ್‌ನಲ್ಲಿ ಒಬ್ಬರು ಮಾತ್ರ ವಿದೇಶಿ ಆಟಗಾರ ನಾಯಕನಾಗಿದ್ದು, ಮಿಕ್ಕೆಲ್ಲ ತಂಡಗಳಿಗೆ ಟೀಂ ಇಂಡಿಯಾದ ಆಟಗಾರರೇ ನಾಯಕರಾಗಿರುವುದು ವಿಶೇಷ. ಈ ಮೊದಲು ಆಸ್ಟ್ರೇಲಿಯಾದ ಸ್ಟಾರ್ ಆಟಗಾರರಾದ ಡೇವಿಡ್ ವಾರ್ನರ್, ಆಡಂ ಗಿಲ್‌ಕ್ರಿಸ್ಟ್‌, ಶೇನ್ ವಾರ್ನ್, ಸ್ಟೀವನ್ ಸ್ಮಿತ್, ಕ್ಯಾಮರೂನ್ ವೈಟ್, ಕುಮಾರ ಸಂಗಕ್ಕರ, ಕೇನ್ ವಿಲಿಯಮ್ಸನ್, ಡೇನಿಯಲ್ ವೆಟ್ಟೋರಿ, ಬ್ರೆಂಡನ್ ಮೆಕಲಮ್‌ ಮುಂತಾದ ವಿದೇಶಿ ಆಟಗಾರರು ವಿವಿಧ ಫ್ರಾಂಚೈಸಿಯ ನಾಯಕರಾಗಿದ್ದರು.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನೂ ಮೂವರು ವಿದೇಶಿ ಆಟಗಾರರು ಮುನ್ನಡೆಸಿದ್ದರು. 2009ರಲ್ಲಿ ಕೆವಿನ್ ಪೀಟರ್ಸನ್, 2011 ಮತ್ತು 2012ರಲ್ಲಿ ಡೇನಿಯಲ್ ವೆಟ್ಟೋರಿ ಮತ್ತು 2022, 2023 ಮತ್ತು 2024ರ ಆವೃತ್ತಿಯಲ್ಲಿ ದಕ್ಷಿಣ ಆಫ್ರಿಕಾದ ಫಾಫ್ ಡು ಪ್ಲೆಸಿಸ್ ನಾಯಕರಾಗಿದ್ದರು. ಇದೇ ರೀತಿ ಬಹುತೇಕ ಎಲ್ಲ ತಂಡಗಳ ಕೆಲವು ಆವೃತ್ತಿಗಳಲ್ಲೂ ವಿದೇಶಿಯರು ನಾಯಕರಾಗಿದ್ದರು. ಉದಾಹರಣೆಗೆ, ಮುಂಬೈ ಇಂಡಿಯನ್ಸ್ ತಂಡವನ್ನು ದಕ್ಷಿಣ ಆಫ್ರಿಕಾದ ಶಾನ್ ಪೊಲಾಕ್ (2008), ವೆಸ್ಟ್ ಇಂಡೀಸ್ ತಂಡದ ಡ್ವೇನ್‌ ಬ್ರಾವೋ (2010) ಮತ್ತು ಕೀರನ್ ಪೊಲಾರ್ಡ್ (2014 – 2021) ನಾಯಕರಾಗಿದ್ದರು. ಆದರೆ ಈ ಆವೃತ್ತಿಯಲ್ಲಿ ಭಾರತೀಯರದೆ ಸಿಂಹಪಾಲಿದೆ. 10 ತಂಡಗಳ ಪೈಕಿ 9 ಮಂದಿ ಟೀಂ ಇಂಡಿಯಾ ಆಟಗಾರರೆ ಸಾರಥ್ಯ ವಹಿಸುತ್ತಿದ್ದಾರೆ. ಸನ್‌ ರೈಸರ್ಸ್‌ ಹೈದರಾಬಾದ್‌ ತಂಡಕ್ಕೆ ಮಾತ್ರ ಆಸ್ಟ್ರೇಲಿಯಾದ ಪ್ಯಾಟ್‌ ಕಮ್ಮಿನ್ಸ್ ನಾಯಕರಾಗಿದ್ದಾರೆ.

10 ತಂಡ, 65 ದಿನ, 74 ಪಂದ್ಯಗಳು

Advertisements

ಎಸ್‌ಆರ್‌ಎಚ್‌ ಬಿಟ್ಟರೆ ಮುಂಬೈ ಇಂಡಿಯನ್ಸ್‌ಗೆ ಹಾರ್ದಿಕ್ ಪಾಂಡ್ಯ, ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ರಜತ್ ಪಾಟೀದಾರ್, ಕೋಲ್ಕತ ನೈಟ್ ರೈಡರ್ಸ್ ತಂಡಕ್ಕೆ ಅಜಿಂಕ್ಯ ರಹಾನೆ, ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ರುತುರಾಜ್ ಗಾಯಕ್ವಾಡ್ ಪ್ರತಿನಿಧಿಸಿದರೆ, ಗುಜರಾತ್ ಟೈಟನ್ಸ್‌ಗೆ ಶುಭ್‌ಮನ್ ಗಿಲ್, ರಾಜಸ್ಥಾನ ರಾಯಲ್ಸ್‌ಗೆ ಸಂಜು ಸ್ಯಾಮ್ಸನ್, ಲಖನೌ ಸೂಪರ್ ಜೈಂಟ್ಸ್‌ ತಂಡವನ್ನು ರಿಷಭ್ ಪಂತ್, ಪಂಜಾಬ್ ಕಿಂಗ್ಸ್‌ಗೆ ಶ್ರೇಯಸ್ ಐಯ್ಯರ್ ಹಾಗೂ ಅಕ್ಷರ್ ಪಟೇಲ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕರಾಗಿದ್ದಾರೆ.

ಈ ಪೈಕಿ ರಜತ್ ಪಾಟೀದಾರ್ ಹಾಗೂ ಅಕ್ಷರ್ ಪಟೇಲ್ ಐಪಿಎಲ್‌ನಲ್ಲಿ ಮೊದಲ ಬಾರಿ ನಾಯಕರಾಗಿ ಆಯ್ಕೆಯಾಗಿದ್ದಾರೆ. ಮೆಗಾ ಹರಾಜಿನ ಬಳಿಕದ ಟೂರ್ನಿ ಆಗಿರುವುದರಿಂದ ಬಹುತೇಕ ಎಲ್ಲ ತಂಡಗಳಲ್ಲೂ ಹೆಚ್ಚಿನ ಬದಲಾವಣೆ ಕಂಡುಬಂದಿದೆ. ಕೆಲವು ಫ್ರಾಂಚೈಸಿಗಳು ಪ್ರಮುಖ ಆಟಗಾರರನ್ನು ಉಳಿಸಿಕೊಂಡರೆ ಇನ್ನು ಕೆಲವು ಇಂಪಾಕ್ಟ್‌ ಆಟಗಾರರನ್ನು ಹರಾಜಿನಲ್ಲಿ ಖರೀದಿಸಿದೆ. ಕೆಲವು ತಂಡಗಳ ಮ್ಯಾನೇಜ್‌ಮೆಂಟ್‌ಗಳಲ್ಲೂ ಬದಲಾವಣೆ ಕಂಡುಬಂದಿದೆ.

ಇದನ್ನು ಓದಿದ್ದೀರಾ?: 2025ರ ಚಾಂಪಿಯನ್ಸ್ ಟ್ರೋಫಿ ಗೆದ್ದ ಭಾರತ ತಂಡಕ್ಕೆ ₹58 ಕೋಟಿ ಬಹುಮಾನ ಘೋಷಣೆ

ಐಪಿಎಲ್‌ ಕ್ರೀಡಾಕೂಟ ಒಟ್ಟು 65 ದಿನಗಳ ಸುದೀರ್ಘ ಅವಧಿಗೆ ದೇಶದ 13 ವಿವಿಧ ನಗರಗಳಲ್ಲಿ 74 ಪಂದ್ಯಗಳು ನಡೆಯುತ್ತವೆ. ಪ್ಲೇಆಫ್ ಮತ್ತು ಫೈನಲ್ ಪಂದ್ಯ ಸೇರಿಸಿ ಹತ್ತು ತಂಡವನ್ನು ಎ ಮತ್ತು ಬಿ ಗುಂಪಿನಲ್ಲಿ ವಿಂಗಡಿಸಲಾಗಿದೆ. ಪ್ರತಿ ಪಂದ್ಯದಲ್ಲೂ 20 ಓವರ್‌ಗಳಂತೆ 240 ಎಸೆತಗಳಿರುತ್ತವೆ. ಈ ವರ್ಷದ ಪ್ರಸಾರದ ಹಕ್ಕಿನ ಮೊತ್ತ 9,678 ಕೋಟಿ ರೂಪಾಯಿಗೆ ಮಾರಾಟವಾಗಿರುವುದರಿಂದ ಒಂದೊಂದು ಎಸೆತದ ಬೆಲೆ 54.50 ಲಕ್ಷ ರೂ. ಇದೆ ಎಂದು ಅಂದಾಜಿಸಲಾಗಿದೆ.  

ಡೆಲ್ಲಿ ಕ್ಯಾಪಿಟಲ್ಸ್‌ನಲ್ಲಿ ಹೆಚ್ಚು ಕನ್ನಡಿಗರು

ಈ ಬಾರಿಯ ಐಪಿಎಲ್ ಮೆಗಾ ಹರಾಜಿನ ಮೂಲಕ ಆರ್‌ಸಿಬಿ ಫ್ರಾಂಚೈಸಿಯು 22 ಸದಸ್ಯರ ಬಲಿಷ್ಠ ತಂಡವನ್ನು ರೂಪಿಸಿದೆ. ತಂಡದಲ್ಲಿ ಕರ್ನಾಟಕದಿಂದ ಆಯ್ಕೆಯಾಗಿರುವುದು ಕೇವಲ ಇಬ್ಬರು ಮಾತ್ರ. ವಿಶೇಷವೆಂದರೆ ಆರ್​​ಸಿಬಿ ಖರೀದಿಸಿದ ಇಬ್ಬರು ಆಟಗಾರರು ಕೂಡ ಈ ಹಿಂದೆ ಆರ್​ಸಿಬಿ ತಂಡದಲ್ಲಿದ್ದ ಆಟಗಾರರು. ಈ ಹಿಂದೆ ಆರ್​ಸಿಬಿ ಪರ ಆಡಿದ್ದ ದೇವದತ್ ಪಡಿಕ್ಕಲ್​ ಅವರನ್ನು ಮತ್ತೆ ತಂಡಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ. ಹಾಗೆಯೇ ಕಳೆದ ಎರಡು ಸೀಸನ್​​ಗಳಿಂದ ಆರ್​ಸಿಬಿ ಬಳಗದಲ್ಲಿದ್ದ ಮನೋಜ್ ಭಾಂಡಗೆಯನ್ನು ಮತ್ತೆ ಖರೀದಿಸಲಾಗಿದೆ. ಈ ಐಪಿಎಲ್‌ನಲ್ಲಿ ಮತ್ತೊಂದು ಪ್ರಮುಖವಾದ ಸಂಗತಿಯೆಂದರೆ ​​ಆರ್​ಸಿಬಿಗಿಂತ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಹೆಚ್ಚಿನ ಕನ್ನಡಿಗರಿಗೆ ಮಣೆ ಹಾಕಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್‌ನಲ್ಲಿರುವ 23 ಆಟಗಾರರ ಬಳಗದಲ್ಲಿ ಮೂವರು ಕನ್ನಡಿಗರು ಸ್ಥಾನ ಪಡೆದಿದ್ದಾರೆ. ಕೆ ಎಲ್ ರಾಹುಲ್, ಕರುಣ್ ನಾಯರ್ ಹಾಗೂ ಮನ್ವಂತ್ ಕುಮಾರ್ ತಂಡದಲ್ಲಿದ್ದಾರೆ.

ಧೋನಿಯ ಮೇಲೆ ಎಲ್ಲರ ಕಣ್ಣು

ಟೀಂ ಇಂಡಿಯಾ ಹಾಗೂ ಚೆನ್ನೈ ಸೂಪರ್‌ ಕಿಂಗ್ಸ್‌ನ ಯಶಸ್ವಿ ನಾಯಕ ಎನಿಸಿಕೊಂಡಿರುವ ಮಹೇಂದ್ರ ಸಿಂಗ್‌ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾಗಿದ್ದರೂ ಐಪಿಎಲ್‌ಗೆ ವಿದಾಯ ಹೇಳಿಲ್ಲ. ಧೋನಿ 2008ರಲ್ಲಿ ಆರಂಭವಾದ ಐಪಿಎಲ್‌ನಿಂದ ಇಲ್ಲಿಯವರೆಗೂ 17 ಆವೃತ್ತಿಗಳನ್ನು ಆಡಿದ್ದು, 18ನೇ ಆವೃತ್ತಿ ಆಡಲು ಸಜ್ಜಾಗಿದ್ದಾರೆ. ಧೋನಿ ನಾಯಕತ್ವದಲ್ಲಿ ಸಿಎಸ್‌ಕೆ ತಂಡ 5 ಬಾರಿ (2010, 2011, 2018, 2021 ಮತ್ತು 2023) ಪ್ರಶಸ್ತಿ ಗೆದ್ದುಕೊಂಡಿದೆ. ಈ ಮೂಲಕ ಧೋನಿ ಐಪಿಎಲ್‌ನಲ್ಲೂ ಯಶಸ್ವಿ ನಾಯಕ ಎನಿಸಿಕೊಂಡಿದ್ದಾರೆ. ಮ್ಯಾಚ್ ಫಿಕ್ಸಿಂಗ್ ಆರೋಪದಲ್ಲಿ ಸಿಎಸ್‌ಕೆ ಫ್ರಾಂಚೈಸಿ 2 ವರ್ಷ ನಿಷೇಧ ಶಿಕ್ಷೆ ಅನುಭವಿಸಿದ ಸಂದರ್ಭದಲ್ಲಿ ಧೋನಿ ಪುಣೆ ಸೂಪರ್‌ ಜೈಂಟ್ಸ್ ತಂಡದ ಪರ ಆಡಿದ್ದರು.

IPL1 1

ಈಗಾಗಲೇ ಕೆಲ ಕ್ರಿಕೆಟಿಗರು 400 ಟಿ20 ಪಂದ್ಯಗಳನ್ನು ಆಡಿದ್ದಾರೆ. ಆದರೆ 350 ಏಕದಿನ ಮತ್ತು 50 ಟೆಸ್ಟ್ ಪಂದ್ಯಗಳನ್ನು ಯಾರೂ ಆಡಿಲ್ಲ. ಸ್ಟಾರ್‌ ಬ್ಯಾಟರ್‌ ವಿರಾಟ್ ಕೊಹ್ಲಿ ಕೂಡ 400 ಟಿ20 ಪಂದ್ಯಗಳ ಹೊಸ್ತಿಲಿನಲ್ಲಿದ್ದಾರೆ. ಈಗಾಗಲೇ 399 ಟಿ20 ಪಂದ್ಯಗಳಲ್ಲಿ ಬ್ಯಾಟಿಂಗ್‌ ಮಾಡಿದ್ದಾರೆ. ಮಾ.22 ರಂದು ಈಡನ್ ಗಾರ್ಡನ್ಸ್‌ನಲ್ಲಿ ಆರ್‌ಸಿಬಿ ಮತ್ತು ಕೆಕೆಆರ್ ನಡುವಿನ ಪಂದ್ಯದಲ್ಲಿ ಕೊಹ್ಲಿ 400ನೇ ಟಿ20 ಪಂದ್ಯವನ್ನು ಆಡಲಿದ್ದಾರೆ. ಈ ಮೂಲಕ 400 ಟಿ20 ಪಂದ್ಯಗಳನ್ನು ಆಡಿದ ಮೂರನೇ ಭಾರತೀಯ ಆಟಗಾರ ಎನಿಸಿಕೊಳ್ಳಲಿದ್ದಾರೆ. ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಹಾಗೂ ದಿನೇಶ್ ಕಾರ್ತಿಕ್ 400ಕ್ಕೂ ಹೆಚ್ಚು ಟಿ20 ಪಂದ್ಯಗಳನ್ನು ಆಡಿರುವ ಇತರೆ ಭಾರತೀಯ ಆಟಗಾರರು. ರೋಹಿತ್ 448 ಟಿ20 ಪಂದ್ಯಗಳನ್ನು ಆಡಿದ್ದಾರೆ. ಐಪಿಎಲ್ 2025ರಲ್ಲಿ 450ನೇ ಪಂದ್ಯವನ್ನು ಆಡಲಿದ್ದಾರೆ. ಸದ್ಯ ಐಪಿಎಲ್‌ನಿಂದಲೂ ನಿವೃತ್ತಿಯಾಗಿರುವ ದಿನೇಶ್‌ ಕಾರ್ತಿಕ್ 412 ಟಿ20 ಪಂದ್ಯಗಳಲ್ಲಿ ವಿವಿಧ ತಂಡಗಳನ್ನು ಪ್ರತಿನಿಧಿಸಿದ್ದರು.

ಪ್ರಮುಖ ಆಟಗಾರರ ಮೇಲೆ ಎಲ್ಲರ ಕಣ್ಣು

ಹದಿನೆಂಟನೇ ಆವೃತ್ತಿಯ ಐಪಿಎಲ್‌ ಮತ್ತಷ್ಟು ರೋಚಕತೆಯಿಂದ ಕೂಡಿರಲಿದೆ. ಬೌಲರ್‌ಗಳು ಬ್ಯಾಟರ್‌ಗಳನ್ನು ಕಟ್ಟಿಹಾಕಲು ತಂತ್ರಗಳನ್ನು ರೂಪಿಸುತ್ತಿದ್ದರೆ, ಬ್ಯಾಟರ್‌ಗಳು ಬೌಲರ್‌ಗಳ ಬೆವರಿಳಿಸಲು ಸಿದ್ಧರಾಗುತ್ತಿದ್ದಾರೆ. ಈ ಬಾರಿ ಕೆಲವು ಬ್ಯಾಟರ್‌ಗಳ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಅಂತಹ ಪ್ರಮುಖರಲ್ಲಿ ಐವರು ಪ್ರಮುಖ ಬ್ಯಾಟರ್‌ಗಳಿದ್ದಾರೆ.

ಟ್ರಾವಿಸ್‌ ಹೆಡ್

ಟ್ರಾವಿಸ್ ಹೆಡ್ ಅದ್ಭುತ ಬ್ಯಾಟಿಂಗ್ ಪ್ರದರ್ಶನದಿಂದಾಗಿ ಭಾರತವು 2025ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಹಾಗೂ 2023 ಏಕದಿನ ವಿಶ್ವಕಪ್‌ನ ಫೈನಲ್‌ನಲ್ಲಿ ಸೋಲು ಅನುಭವಿಸಿತ್ತು. ಟ್ರಾವಿಸ್ ಹೆಡ್ 2023ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಮತ್ತು 2023ರ ವಿಶ್ವಕಪ್‌ನ ಸೆಮಿಫೈನಲ್ ಹಾಗೂ ಫೈನಲ್‌ ಪಂದ್ಯಗಳಲ್ಲಿ ಶತಕಗಳನ್ನು ಬಾರಿಸಿದ್ದರು. ಈ ಮೂಲಕ ಭಾರತ ಚಾಂಪಿಯನ್ ಆಗುವುದನ್ನು ತಪ್ಪಿಸಿದ್ದರು. 2ನೇ ಐಪಿಎಲ್‌ ಆಡುತ್ತಿರುವ ಟ್ರಾವಿಸ್‌ ಹೆಡ್‌ ಎಸ್‌ಆರ್‌ಹೆಚ್‌ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಕಳೆದ ಬಾರಿಯೂ ಹೆಡ್‌ ಸ್ಪೋಟಕ ಬ್ಯಾಟಿಂಗ್‌ ಮಾಡಿ ಬೌಲರ್‌ಗಳಿಗೆ ಹೆಡ್ಹೇಕ್‌ ಆಗಿದ್ದರು.

ಸೂರ್ಯಕುಮಾರ್ ಯಾದವ್

ಮುಂಬೈ ಇಂಡಿಯನ್ಸ್‌ ತಂಡದ ಸ್ಪೋಟಕ ಬ್ಯಾಟರ್ ಸೂರ್ಯಕುಮಾರ್ ಯಾದವ್ ಐಪಿಎಲ್ 2025ರಲ್ಲಿ ಸ್ಟಾರ್‌ ಆಟಗಾರರಾಗಿದ್ದಾರೆ. ಅವರು ಮೈದಾನದೆಲ್ಲೆಡೆ ಬೌಂಡರಿ ಮತ್ತು ಸಿಕ್ಸರ್‌ಗಳನ್ನು ಬಾರಿಸುವಲ್ಲಿ ಪ್ರಸಿದ್ಧರು. ಈ ಬಾರಿ ಸೂರ್ಯಕುಮಾರ್ ಯಾದವ್ ಬಿರುಸಿನ ಬ್ಯಾಟಿಂಗ್ ಮೂಲಕ ಬೌಲರ್‌ಗಳಿಗೆ ಕಾಟ ಕೊಡಬಹುದು. ಮುಂಬೈ ಇಂಡಿಯನ್ಸ್ ತಂಡದ ಪರ ಐಪಿಎಲ್ 2024ರಲ್ಲಿ ಆಡಿದ 11 ಪಂದ್ಯಗಳಲ್ಲಿ 34.50 ಸರಾಸರಿಯಲ್ಲಿ 345 ರನ್ ಗಳಿಸಿದ್ದರು. ಇದರಲ್ಲಿ ಒಂದು ಶತಕ ಮತ್ತು 3 ಅರ್ಧಶತಕಗಳು ಸೇರಿವೆ. ಅವರ ಅತ್ಯುತ್ತಮ ಸ್ಕೋರ್ ಅಜೇಯ 102 ರನ್‌.

ಇದನ್ನು ಓದಿದ್ದೀರಾ?: ಐಪಿಎಲ್ | ‘ಈ ಸಲ ಕಪ್ ನಮ್ದೇ’ ಅಂತ ದಯವಿಟ್ಟು ಹೇಳ್ಬೇಡಿ; ಕೊಹ್ಲಿ ಹೀಗೆ ಹೇಳಿದ್ದೇಕೆ?

ಯಶಸ್ವಿ ಜೈಸ್ವಾಲ್

ಜೈಸ್ವಾಲ್ ಪಂದ್ಯದ ಗತಿಯನ್ನು ಕ್ಷಣಮಾತ್ರದಲ್ಲಿ ಬದಲಾಯಿಸಬಲ್ಲ ಆಟಗಾರ. ಜೈಸ್ವಾಲ್ ಐಪಿಎಲ್ 2025ರಲ್ಲಿ ಅತಿಹೆಚ್ಚು ರನ್ ಕಲೆ ಹಾಕಬಲ್ಲ ಬ್ಯಾಟರ್‌ಗಳ ಪಟ್ಟಿಯಲ್ಲಿದ್ದಾರೆ. ರಾಜಸ್ಥಾನ ರಾಯಲ್ಸ್ ತಂಡದ ಪರ ಆರಂಭಿಕ ಬ್ಯಾಟರ್ ಆಗಿರುವ ಯಶಸ್ವಿ ಜೈಸ್ವಾಲ್ ಐಪಿಎಲ್ 2024ರಲ್ಲಿ ಆಡಿದ 16 ಪಂದ್ಯಗಳಲ್ಲಿ 31.07 ಸರಾಸರಿಯಲ್ಲಿ 1 ಶತಕ ಮತ್ತು 1 ಅರ್ಧಶತಕವನ್ನು ಒಳಗೊಂಡಂತೆ 435 ರನ್ ಗಳಿಸಿದರು. ಅವರ ಅತ್ಯುತ್ತಮ ಸ್ಕೋರ್ ಅಜೇಯ 104 ರನ್. ಯಶಸ್ವಿ ಜೈಸ್ವಾಲ್ ಅತ್ಯಂತ ವೇಗವಾಗಿ ರನ್ ಗಳಿಸುವ ಸಾಮರ್ಥ್ಯ ಹೊಂದಿದ್ದಾರೆ.

ಫಾಫ್ ಡು ಪ್ಲೆಸಿಸ್

ಆರ್‌ಸಿಬಿ ಮಾಜಿ ನಾಯಕ ಫಾಫ್ ಡು ಪ್ಲೆಸಿಸ್ ಐಪಿಎಲ್ ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್ ಪರ ಬ್ಯಾಟ್‌ ಮಾಡಲಿದ್ದಾರೆ. ಕಳೆದ ವರ್ಷ ಐಪಿಎಲ್‌ನಲ್ಲಿ ಫಾಫ್ ಡು ಪ್ಲೆಸಿಸ್ 15 ಪಂದ್ಯಗಳಲ್ಲಿ 29.20 ಸರಾಸರಿಯಲ್ಲಿ 4 ಅರ್ಧಶತಕಗಳು ಸೇರಿದಂತೆ 438 ರನ್ ಗಳಿಸಿದ್ದರು. ಅವರ ಅತ್ಯುತ್ತಮ ಸ್ಕೋರ್ 64 ರನ್‌. ಐಪಿಎಲ್ 2025 ರಲ್ಲಿ ಫಾಫ್ ಡು ಪ್ಲೆಸಿಸ್ ತಮ್ಮ ಬ್ಯಾಟಿಂಗ್ ಅದ್ಭುತ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾದರೆ ಡೆಲ್ಲಿ ಫೈನಲ್‌ ತಲುಪುವ ದಾರಿ ಸುಲಭವಾಗಲಿದೆ.

ಶುಭಮನ್ ಗಿಲ್

ಗುಜರಾತ್ ಟೈಟಾನ್ಸ್ ತಂಡದ ನಾಯಕ ಶುಭ್‌ಮನ್ ಗಿಲ್ ದಾಖಲೆಗಳನ್ನು ಸೃಷ್ಟಿಸಲು ಅಣಿಯಾಗುತ್ತಿದ್ದಾರೆ. ಕಳೆದ ವರ್ಷದ ಐಪಿಎಲ್‌ನಲ್ಲಿ 12 ಪಂದ್ಯಗಳಲ್ಲಿ 38.73ರ ಸರಾಸರಿಯಲ್ಲಿ ಗಿಲ್ 426 ರನ್ ಗಳಿಸಿದ್ದರು. ಇದರಲ್ಲಿ 1 ಶತಕ ಮತ್ತು 2 ಅರ್ಧಶತಕಗಳು ಸೇರಿತ್ತು. ಅವರ ಅತ್ಯುತ್ತಮ ಸ್ಕೋರ್ 104 ರನ್. ಇತ್ತೀಚೆಗೆ, ಶುಭಮನ್ ಗಿಲ್ ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ರಲ್ಲಿ ಅದ್ಭುತ ಪ್ರದರ್ಶನ ನೀಡಿದರು. 5 ಪಂದ್ಯಗಳಲ್ಲಿ 188 ರನ್ ಗಳಿಸಿದ್ದರು.

ವಿರಾಟ್ ಕೊಹ್ಲಿ

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವನ್ನು ಮೊದಲ ಬಾರಿಗೆ ಚಾಂಪಿಯನ್ ಮಾಡಲು ಸ್ಟಾರ್ ಆಟಗಾರ ವಿರಾಟ್‌ ಕೊಹ್ಲಿ ಪಣ ತೊಟ್ಟಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಆರ್‌ಸಿಬಿ ಮೂರು ಬಾರಿ ಫೈನಲ್ ತಲುಪಿದೆ. ಆದರೆ ಇಲ್ಲಿಯವರೆಗೂ ಟ್ರೋಫಿಯನ್ನು ಎತ್ತಿ ಹಿಡಿಯಲು ಸಾಧ್ಯವಾಗಿಲ್ಲ. ಮೂರು ಬಾರಿಯೂ ರನ್ನರ್ ಅಪ್ ಆಗಿದೆ. ಐಪಿಎಲ್ 2025ರಲ್ಲಿ ವಿರಾಟ್ ಕೊಹ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದು, ಆರೆಂಜ್ ಕ್ಯಾಪ್ ಗೆದ್ದಿದ್ದರು. ವಿರಾಟ್ ಕೊಹ್ಲಿ 15 ಪಂದ್ಯಗಳಲ್ಲಿ 61.75 ಸರಾಸರಿಯಲ್ಲಿ 741 ರನ್ ಗಳಿಸಿದ್ದರು. ಇದರಲ್ಲಿ 1 ಶತಕ ಮತ್ತು 5 ಅರ್ಧಶತಕಗಳು ಸೇರಿವೆ. ಅವರ ಅತ್ಯುತ್ತಮ ಸ್ಕೋರ್ ಅಜೇಯ 113 ರನ್‌ಗಳು. ಫಾರ್ಮ್‌ನಲ್ಲಿರುವ ವಿರಾಟ್ ಕೊಹ್ಲಿ ಐಪಿಎಲ್ 2025 ರಲ್ಲಿ ರನ್ ಹೊಳೆ ಹರಿಸಿ ಕಪ್‌ ಗೆಲ್ಲಿಸಲಿದ್ದಾರೆ ಎನ್ನಲಾಗುತ್ತಿದೆ.

ಐಪಿಎಲ್‌ನ ದಾಖಲೆಗಳು

ಐಪಿಎಲ್‌ ಆವೃತ್ತಿಯಲ್ಲಿ ಮುರಿಯಲು ಕಷ್ಟಕರವಾದ ದಾಖಲೆಗಳಿವೆ. ಅವುಗಳಲ್ಲಿ ವೈಯಕ್ತಿಕ ಗರಿಷ್ಠ ಸ್ಕೋರ್, ಒಂದೇ ಋತುವಿನಲ್ಲಿ ಗಳಿಸಿದ ಅತ್ಯಧಿಕ ಸ್ಕೋರ್, ನಾಯಕನಾಗಿ ಅತಿ ಹೆಚ್ಚು ಗೆಲುವು, ಹೆಚ್ಚು ವಿಕೆಟ್, ಕಡಿಮೆ ಸ್ಕೋರ್‌ ಗಳಿಸಿದ ತಂಡದ ದಾಖಲೆಯೂ ಸೇರಿದೆ.

ಕ್ರಿಸ್‌ಗೇಲ್‌ ಭರ್ಜರಿ ಶತಕ

ಐಪಿಎಲ್ ಇತಿಹಾಸದಲ್ಲಿ ವೆಸ್ಟ್ ಇಂಡೀಸ್ ದಿಗ್ಗಜರಾದ ಕ್ರಿಸ್ ಗೇಲ್ ಅವರ ಭರ್ಜರಿ ಶತಕದ ದಾಖಲೆ ಮುರಿಯುವುದು ಕಷ್ಟವೆಂದು ಹೇಳಲಾಗುತ್ತಿದೆ. ಅವರು ಒಂದೇ ಇನಿಂಗ್ಸ್‌ನಲ್ಲಿ ಅತಿ ಹೆಚ್ಚು ವೈಯಕ್ತಿಕ ಸ್ಕೋರ್ ಗಳಿಸಿರುವುದು ದಾಖಲೆಯಾಗಿದೆ. 2013ರ ಏಪ್ರಿಲ್ 23ರಂದು ಆರ್‌ಸಿಬಿ ಪರವಾಗಿ ಆಡಿದ ಅವರು ಟೂರ್ನಿಯ 31ನೇ ಪಂದ್ಯದಲ್ಲಿ ಪುಣೆ ವಾರಿಯರ್ಸ್‌ ವಿರುದ್ಧ 66 ಎಸೆತಗಳಲ್ಲಿ ಅಜೇಯ 175 ರನ್ ಬಾರಿಸಿದ್ದರು. ಅವರ ಈ ಇನಿಂಗ್ಸ್‌ನಲ್ಲಿ 13 ಬೌಂಡರಿ, 17 ಸಿಕ್ಸರ್‌ಗಳಿದ್ದವು.

ವಿರಾಟ್‌ ಕೊಹ್ಲಿ

ಐಪಿಎಲ್‌ನ ಒಂದೇ ಆವೃತ್ತಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ವಿರಾಟ್ ಕೊಹ್ಲಿ ಹೆಸರಿನಲ್ಲಿದೆ. 2016ರ ಐಪಿಎಲ್‌ನಲ್ಲಿ ಕೊಹ್ಲಿ ಆರ್‌ಸಿಬಿ ಪರವಾಗಿ 973 ರನ್ ಗಳಿಸಿದ್ದರು. ಯಾವೊಬ್ಬ ಬ್ಯಾಟರ್ ಕೂಡ ಈ ದಾಖಲೆಯ ಹತ್ತಿರಕ್ಕೂ ಬಂದಿಲ್ಲ. ಆ ಋತುವಿನಲ್ಲಿ ಕೊಹ್ಲಿ 16 ಪಂದ್ಯಗಳಲ್ಲಿ 81.08 ಸರಾಸರಿ ಮತ್ತು 152.03 ಸ್ಟೈಕ್ ರೇಟ್‌ನಲ್ಲಿ ಇಷ್ಟು ರನ್‌ ಸಿಡಿಸಿದ್ದರು. ಅವರು ಆಡಿದ 16 ಪಂದ್ಯಗಳಲ್ಲಿ 4 ಶತಕ ಮತ್ತು 7 ಅರ್ಧಶತಕ ಸಿಡಿಸಿದ್ದರು. ಕೊಹ್ಲಿ ನಂತರ 2ನೇ ಸ್ಥಾನದಲ್ಲಿ ಶುಭಮನ್‌ ಗಿಲ್‌ ಇದ್ದಾರೆ. 2023ರ ಆವೃತ್ತಿಯಲ್ಲಿ ಗಿಲ್‌ 890 ರನ್‌ ಗಳಿಸಿದ್ದರು.

ಮಹೇಂದ್ರ ಸಿಂಗ್‌ ಧೋನಿ

ಐಪಿಎಲ್‌ನಲ್ಲಿ ನಾಯಕನಾಗಿ ಅತಿ ಹೆಚ್ಚು ಪಂದ್ಯಗಳನ್ನು ಪ್ರತಿನಿಧಿಸಿರುವುದು ಸ್ಟಾರ್‌ ಆಟಗಾರ ಎಂ ಎಸ್ ಧೋನಿ. ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಐದು ಟ್ರೋಫಿ ಗೆದ್ದುಕೊಟ್ಟಿರುವ ಧೋನಿ, 226 ಪಂದ್ಯಗಳಲ್ಲಿ ನಾಯಕತ್ವ ವಹಿಸಿದ್ದಾರೆ. ಈ ಪೈಕಿ ಧೋನಿ 133 ಪಂದ್ಯಗಳಲ್ಲಿ ತಮ್ಮ ತಂಡವನ್ನು ಗೆಲುವಿನತ್ತ ಕೊಂಡೊಯ್ದಿದ್ದಾರೆ. 91 ಪಂದ್ಯಗಳಲ್ಲಿ ಸೋಲು ಅನುಭವಿಸಿದ್ದಾರೆ.

ಯುಜೇಂದ್ರ ಚಹಲ್‌

ಐಪಿಎಲ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಸಾಧನೆ ಯುಜೇಂದ್ರ ಚಹಲ್‌ ಅವರದ್ದಾಗಿದೆ. ಚಹಲ್‌ ಅವರು ಒಟ್ಟು 159 ಐಪಿಎಲ್‌ ಪಂದ್ಯಗಳಲ್ಲಿ 205 ವಿಕೆಟ್ ಕಬಳಿಸಿದ್ದು, ಇದು ಈವರೆಗೆ ಸಾರ್ವಕಾಲಿಕ ದಾಖಲೆಯಾಗಿಯೇ ಉಳಿದಿದೆ. 40/5 ಅವರ ಅತ್ಯುತ್ತಮ ಬೌಲಿಂಗ್‌ . ಐಪಿಎಲ್ 2025 ರ ಋತುವಿನಲ್ಲಿ ಪಂಜಾಬ್‌ ಕಿಂಗ್ಸ್ ಪರ ಆಡಲಿರುವ ಚಹಲ್ ತಮ್ಮ ಮತ್ತಷ್ಟು ವಿಕೆಟ್‌ಗಳನ್ನು ಕಬಳಿಸಲಿದ್ದಾರೆ.

IPL2 1

ಅತೀ ಕಡಿಮೆ ರನ್‌ಗಳಿಗೆ ಆಲೌಟ್‌ ಆಗಿರುವ ತಂಡಗಳು

*ಆರ್‌ಸಿಬಿ – 49 ರನ್‌ – ಕೋಲ್ಕತ್ತಾ ನೈಟ್‌ರೈಡರ್ಸ್‌ ವಿರುದ್ಧ – 2017

*ರಾಜಸ್ಥಾನ್‌ ರಾಯಲ್ಸ್ – 58 ರನ್‌ – ಆರ್‌ಸಿಬಿ ವಿರುದ್ಧ – 2009

*ರಾಜಸ್ಥಾನ ರಾಯಲ್ಸ್‌ – 59 ರನ್‌ – ಆರ್‌ಸಿಬಿ ವಿರುದ್ಧ – 2023

*ಡೆಲ್ಲಿ ಡೇರ್‌ ಡೆವಿಲ್ಸ್‌ – 66 ರನ್‌ – ಮುಂಬೈ ಇಂಡಿಯನ್ಸ್‌ ವಿರುದ್ಧ – 2017

*ಡೆಲ್ಲಿ ಡೇರ್‌ ಡೆವಿಲ್ಸ್‌ – 67 ರನ್‌ – ಪಂಜಾಬ್‌ ಕಿಂಗ್ಸ್‌ ವಿರುದ್ಧ – 2017

blank profile picture 973460 640
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಮಹಿಳಾ ವಿಶ್ವಕಪ್‌, ಆಸೀಸ್‌ ಪ್ರವಾಸಕ್ಕೆ ಟೀಂ ಇಂಡಿಯಾ ತಂಡ ಪ್ರಕಟ

ಮುಂದಿನ ತಿಂಗಳು ಭಾರತ ಹಾಗೂ ಶ್ರೀಲಂಕಾದಲ್ಲಿ ನಡೆಯಲಿರುವ ಮಹಿಳೆಯರ ಏಕದಿನ ವಿಶ್ವಕಪ್‌ಗೆ...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

Download Eedina App Android / iOS

X