ಕ್ಷೇತ್ರ ಮರುವಿಂಗಡಣೆ | ಹಿಂದಿ ರಾಜ್ಯಗಳು ಜನಸಂಖ್ಯೆ ನಿಯಂತ್ರಿಸಿದ ಬಳಿಕವೇ ‘ಡಿಲಿಮಿಟೇಷನ್’ ಎಂದಿದ್ದರು ಇಂದಿರಾ ಗಾಂಧಿ – ವಾಜಪೇಯಿ

Date:

Advertisements
ಜನಸಂಖ್ಯೆ ಆಧಾರದಲ್ಲಿಯೇ ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆ ಮಾಡಬೇಕು. ಆದರೆ, ಜನಸಂಖ್ಯೆಯಲ್ಲಿ ಉತ್ತರ ಮತ್ತು ದಕ್ಷಿಣ ಭಾರತದ ನಡುವಿನ ಅಂತರ ಹೆಚ್ಚಿದೆ. ಈಗ ವಿಂಗಡಣೆ ಮಾಡಿದರೆ, ದಕ್ಷಿಣದ ರಾಜ್ಯಗಳಿಗೆ ಅನ್ಯಾಯ ಆಗುತ್ತದೆ. 25 ವರ್ಷಗಳ ಕಾಲ ಕ್ಷೇತ್ರ ಮರುವಿಂಗಣೆ ಮಾಡುವುದು ಬೇಡ ಎಂದಿದ್ದರು

ಜನಸಂಖ್ಯೆಯ ಆಧಾರದ ಮೇಲೆ ಲೋಕಸಭಾ ಕ್ಷೇತ್ರಗಳನ್ನು ಮರುವಿಂಗಡಣೆ ಮಾಡುವ ಕೇಂದ್ರ ಸರ್ಕಾರದ ನಿರ್ಧಾರದ ವಿರುದ್ಧ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಬೃಹತ್ ಹೋರಾಟ ಕಟ್ಟುತ್ತಿದ್ದಾರೆ. ಕೇಂದ್ರದ ಧೋರಣೆಯಿಂದ ದಕ್ಷಿಣ ರಾಜ್ಯಗಳಿಗೆ ಅನ್ಯಾಯವಾಗುತ್ತದೆ. ದಕ್ಷಿಣದ ರಾಜ್ಯಗಳು ಒಗ್ಗಟ್ಟಾಗಿ ಹೋರಾಡಬೇಕೆಂದು ಕರೆಕೊಡುತ್ತಿದ್ದಾರೆ. ಎಲ್ಲರನ್ನೂ ಒಗ್ಗೂಡಿಸುವ ಪ್ರಯತ್ನದಲ್ಲಿದ್ದಾರೆ. ದಕ್ಷಿಣ ರಾಜ್ಯಗಳು ಒಗ್ಗೂಡುತ್ತಿದ್ದರೂ, ಹಿಂದಿ ಬೆಲ್ಟ್‌ ರಾಜ್ಯಗಳ ಮಿತ್ರಪಕ್ಷಗಳು ಭಿನ್ನಾಭಿಪ್ರಾಯ ಹೊಂದಿದೆ. ಸ್ಟಾಲಿನ್ ನಡೆಯಿಂದ ತಮಗೆ ಅನಾನುಕೂಲವೆಂದು ಭಾವಿಸಿವೆ.

ಅಂದಹಾಗೆ, 1976ರಿಂದ ಈವರೆಗೆ ಕ್ಷೇತ್ರ ಮರುವಿಂಗಡಣೆ ಮಾಡಲಾಗಿಲ್ಲ. ಅದಕ್ಕೆ, ಈ ಜನಸಂಖ್ಯೆ ಆಧಾರವೇ ಪ್ರಮುಖ ಕಾರಣ. 1971ರಲ್ಲಿ ದೇಶಾದ್ಯಂತ ಜನಗಣತಿ ನಡೆದಿತ್ತು. ಆ ಗಣತಿಯ ವರದಿಯಲ್ಲಿ ಉತ್ತರ ಭಾರತ ಮತ್ತು ದಕ್ಷಿಣ ಭಾರತದ ನಡುವಿನ ಜನಸಂಖ್ಯೆಯಲ್ಲಿ ಬಹಳಷ್ಟು ಅಂತರವಿತ್ತು. ಜನಸಂಖ್ಯಾ ಬೆಳವಣಿಗೆಯನ್ನು ನಿಯಂತ್ರಿಸಲು ಜಾರಿಗೊಳಿಸಲಾಗಿದ್ದ, ‘ಜನಸಂಖ್ಯಾ ನಿಯಂತ್ರಣ ರಾಷ್ಟ್ರೀಯ ಯೋಜನೆ’ಯಡಿ ಕಟ್ಟುನಿಟ್ಟಿನ ಕ್ರಮಗಳನ್ನು ದಕ್ಷಿಣ ಭಾರತದ ರಾಜ್ಯಗಳು ಅನುಸರಿಸಿದ್ದವು. ಫಲವಾಗಿ, ಜನಸಂಖ್ಯೆಯಲ್ಲಿ ಭಾರೀ ಏರಿಕೆ ಇರಲಿಲ್ಲ. ಆದರೆ, ಉತ್ತರ ಭಾರತದ ರಾಜ್ಯಗಳು ಅಂತಹ ಕ್ರಮಗಳನ್ನು ಅನುಸರಿಸಲಿಲ್ಲ. ಅಲ್ಲಿನ ಜನಸಂಖ್ಯೆ ವಿಪರೀತವಾಗಿ ಏರಿಕೆಯಾಗಿತ್ತು.    

ಆ ದಶಕ ಮತ್ತು ನಂತರದ ವರ್ಷಗಳಲ್ಲಿ ದಕ್ಷಿಣ ರಾಜ್ಯಗಳಲ್ಲಿ ದಂಪತಿಗಳು ‘ನಾವಿಬ್ಬರು – ನಮಗಿಬ್ಬರು’ ಎಂಬಂತೆ ಎರಡು ಮಕ್ಕಳನ್ನು ಹೊಂದುತ್ತಿದ್ದರು. ಅದರಲ್ಲೂ 21ನೇ ಶತಮಾನಕ್ಕೆ ಕಾಲಿಡುತ್ತಿದ್ದಂತೆಯೇ ‘ಒಂದೇ ಮಗು ಸಾಕು’ ಎಂಬ ಅಭಿಯಾನವೂ ಪ್ರಚುರ ಪಡೆಯಿತು. ಪರಿಣಾಮ, ದಕ್ಷಿಣ ರಾಜ್ಯಗಳಲ್ಲಿ ಜನಸಂಖ್ಯೆ ಬೆಳವಣಿಗೆ ನಿಯಂತ್ರಣಕ್ಕೆ ಬಂದಿತು. ಆದರೆ, ಉತ್ತರ ರಾಜ್ಯಗಳಲ್ಲಿ ಕೇಂದ್ರ ಸರ್ಕಾರದ ನೀತಿಗೆ ಮನ್ನಡೆ ದೊರೆಯಲಿಲ್ಲ. ಅಲ್ಲಿನ ರಾಜ್ಯಗಳ ಸರ್ಕಾರಗಳೂ ಕಟ್ಟುನಿಟ್ಟಾಗಿ ನೀತಿಗಳನ್ನು ಪಾಲಿಸಲಿಲ್ಲ. ಪರಿಣಾಮ, ಇಂದಿಗೂ ಜನಸಂಖ್ಯೆ ಗಣನೀಯವಾಗಿ ಏರುತ್ತಲೇ ಇದೆ.

Advertisements

1976ರಲ್ಲಿ ಉತ್ತರ ಮತ್ತು ದಕ್ಷಿಣ ಭಾರತ ಭಾಗಗಳ ನಡುವಿನ ಜನಸಂಖ್ಯೆ ಬೆಳವಣಿಕೆಯಲ್ಲಿನ ಅಂತರವನ್ನು ಗಮನಿಸಿದ್ದ ಅಂದಿನ ಪ್ರಧಾನಿ ಇಂದಿರಾಗಾಂಧಿ, ‘ಜನಸಂಖ್ಯೆ ಆಧಾರದಲ್ಲಿ ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆ ಮಾಡಿದರೆ, ದಕ್ಷಿಣದ ರಾಜ್ಯಗಳಿಗೆ ಅನ್ಯಾಯ ಆಗುತ್ತದೆ. ಹೀಗಾಗಿ, 25 ವರ್ಷಗಳ ಕಾಲ ಕ್ಷೇತ್ರ ಮರುವಿಂಗಣೆ ಮಾಡುವುದು ಬೇಡ’ ಎಂದು ಸಂವಿಧಾನಕ್ಕೆ ತಿದ್ದುಪಡಿ ತಂದರು.

ಇಂದಿರಾ ಗಾಂಧಿ ರೂಪಿಸಿದ 25 ವರ್ಷಗಳ ಗಡುವು 2001ಕ್ಕೆ ಮುಗಿಯಿತು. ಅದೇ ವರ್ಷ ಜನಗಣತಿಯೂ ನಡೆಯಿತು. ಜನಗಣತಿ ವರದಿಯು ಉತ್ತರ ಮತ್ತು ದಕ್ಷಿಣ ಭಾರತದ ನಡುವಿನ ಜನಸಂಖ್ಯಾ ಬೆಳವಣಿಗೆಯ ಅಂತರವು 1971ರ ರೀತಿಯಲ್ಲಿಯೇ ಇದೆ ಎಂಬುದನ್ನು ವಿವರಿಸಿತ್ತು. ಹೀಗಾಗಿ, 2004ರಲ್ಲಿ ಪ್ರಧಾನಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರು ಇನ್ನೂ 25 ವರ್ಷಗಳ ಕಾಲ ಜನಸಂಖ್ಯೆ ಆಧಾರದ ಮೇಲೆ ಕ್ಷೇತ್ರ ಮರುವಿಂಗಡಣೆ ಮಾಡುವುದು ಬೇಡವೆಂದು ನಿರ್ಧರಿಸಿದರು. ವಾಜಪೇಯಿ ಅವರು ವಿಧಿಸಿದ್ದ ಗಡುವು ಕೂಡ 2026ಕ್ಕೆ ಮುಗಿಯಲಿದೆ. ಸದ್ಯ, ಕಳೆದ 15 ವರ್ಷಗಳಿಂದ ಜನಗಣತಿಯನ್ನೇ ನಡೆಸದ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಯಾವುದೇ ವಿವೇಕ, ವಿಶ್ಲೇಷಣೆಗಳು ಇಲ್ಲದೆ, ಕ್ಷೇತ್ರ ಮರುವಿಂಗಡಣೆ ಮಾಡಲು ಮುಂದಾಗಿದೆ.

ಮೋದಿ ಸರ್ಕಾರದ ನಡೆ ದಕ್ಷಿಣ ರಾಜ್ಯಗಳನ್ನು ಕೆರಳಿಸಿದೆ. ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳು ದನಿ ಎತ್ತುವಂತೆ ಮಾಡಿದೆ.

”ಈಗಲೂ ಉತ್ತರ ರಾಜ್ಯಗಳು ಜನಸಂಖ್ಯಾ ಬೆಳವಣಿಗೆ ನಿಯಂತ್ರಣಕ್ಕೆ ಹೆಚ್ಚು ಒತ್ತು ಕೊಟ್ಟಿಲ್ಲ. ಒಂದು ವೇಳೆ, ಈಗ ಅವರು ‘ಜನಸಂಖ್ಯಾ ನಿಯಂತ್ರಣ ರಾಷ್ಟ್ರೀಯ ಯೋಜನೆ’ಯನ್ನು ಅಳವಡಿಸಿಕೊಂಡು, ಜಾರಿಗೊಳಿಸಲು ತೀರ್ಮಾನಿಸಿದರೆ, ದಕ್ಷಿಣದ ರಾಜ್ಯಗಳು ಆ ರಾಜ್ಯಗಳಲ್ಲಿ ಜನಸಂಖ್ಯೆ ನಿಯಂತ್ರಣಕ್ಕೆ ಬರಲು ಕನಿಷ್ಠ 50 ವರ್ಷಗಳು ಬೇಕಾಗುತ್ತವೆ. ಆ 50 ವರ್ಷಗಳ ಕಾಲ ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆ ಆಗದಂತೆ ಮತ್ತೊಮ್ಮೆ ಸಂವಿಧಾನಕ್ಕೆ ತಿದ್ದುಪಡಿ ಮಾಡಬೇಕು” ಎಂದು ರಾಜಕೀಯ ವಿಶ್ಲೇಷಕ, ಚಿಂತಕ ನಾಗೇಗೌಡ ಕೀಲಾರ ಹೇಳುತ್ತಾರೆ.

ಇಂದಿರಾ ಗಾಂಧಿ ಮತ್ತು ವಾಜಪೇಯಿ ಅವರು ಕ್ಷೇತ್ರ ಮರುವಿಂಗಡಣೆಯನ್ನು ಮುಂದೂಡಲು ಹಾಗೂ ಈಗ ಮರುವಿಂಗಡಣೆಯನ್ನು ದಕ್ಷಿಣದ ರಾಜ್ಯಗಳು ವಿರೋಧಿಸುತ್ತಿರುವುದಕ್ಕೆ ಇರುವುದು ಒಂದೇ ಕಾರಣ: ಅದು, ಜನಸಂಖ್ಯಾ ಆಧಾರದ ಮೇಲೆ ಕ್ಷೇತ್ರ ಪುನರ್‌ ವಿಂಗಡಣೆ ಮಾಡಿದರೆ, ಜನಸಂಖ್ಯೆಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿರುವ ದಕ್ಷಿಣದ ರಾಜ್ಯಗಳು ಲೋಕಸಭೆಯಲ್ಲಿ ತಮ್ಮ ಪ್ರಾತಿನಿಧ್ಯವನ್ನು ಕಳೆದುಕೊಳ್ಳುತ್ತವೆ ಅಥವಾ ಕಡಿಮೆಯಾಗುತ್ತದೆ. ದಕ್ಷಿಣ ರಾಜ್ಯಗಳು ಮಾತ್ರವಲ್ಲ, ಈಶಾನ್ಯ ರಾಜ್ಯಗಳು ಕೂಡ ಲೋಕಸಭೆಯಲ್ಲಿ ಪ್ರತಿನಿಧಿತ್ವವನ್ನು ಕಳೆದುಕೊಳ್ಳುತ್ತವೆ ಎಂದೂ ಹೇಳಲಾಗುತ್ತಿದೆ. ಆ ಕಾರಣಕ್ಕಾಗಿಯೇ, ಜನಸಂಖ್ಯೆಯ ಆಧಾರದ ಮೇಲೆ ಕ್ಷೇತ್ರ ಮರುವಿಂಗಡಣೆ ಸಲ್ಲದು ಎಂಬುದು ಗಟ್ಟಿ ದನಿಯಲ್ಲಿ ವಿರೋಧ ವ್ಯಕ್ತವಾಗುತ್ತಿದೆ.

ಕ್ಷೇತ್ರ ಮರುವಿಂಗಡಣೆಯನ್ನು ವಿರೋಧಿಸುವ ಉದ್ದೇಶದಿಂದ ಮಾರ್ಚ್‌ 5ರಂದು ತಮಿಳುನಾಡು ಸರ್ಕಾರ ಸರ್ವಪಕ್ಷಗಳ ಸಭೆ ಕರೆದಿತ್ತು. ಆ ಸಭೆಗೆ ಬಿಜೆಪಿ ಭಾಗಿಯಾಗಲಿಲ್ಲ. ಆ ಸಭೆಯಲ್ಲಿ, ಮುಂದಿನ 3 ದಶಕ (30 ವರ್ಷ) ಕಾಲ ಕ್ಷೇತ್ರ ಮರುವಿಂಗಡಣೆಯನ್ನು ಸ್ಥಗಿತಗೊಳಿಸಬೇಕೆಂದು ಕೇಂದ್ರದ ಮೇಲೆ ಒತ್ತಡ ತರಲು ನಿರ್ಧರಿಸಲಾಗಿದೆ. ಬಳಿಕ, ತಮಿಳುನಾಡು ಸರ್ಕಾರದ ನಿಯೋಗವು ದಕ್ಷಿಣ ರಾಜ್ಯಗಳ ಸರ್ಕಾರಗಳು ಮತ್ತು ಎಲ್ಲ ಪಕ್ಷಗಳನ್ನು ಭೇಟಿ ಮಾಡಿ, ಹೋರಾಟದಲ್ಲಿ ಒಗ್ಗೂಡುವಂತೆ ಮನವಿ ಮಾಡುತ್ತಿದೆ. ಕರ್ನಾಟಕವೂ ಕೂಡ ಹೋರಾಟದಲ್ಲಿ ಜೊತೆಯಾಗಿ ನಿಲ್ಲುತ್ತದೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಆದಾಗ್ಯೂ, ಸ್ಟಾಲಿನ್ ಅವರ ಬಲವಾದ ನಿಲುವು ವಿಪಕ್ಷಗಳ ‘ಇಂಡಿಯಾ’ ಮೈತ್ರಿಕೂಟದಲ್ಲಿಯೂ ಭಾರೀ ಚರ್ಚೆಯನ್ನು ಹುಟ್ಟುಹಾಕಿದೆ. ಮೈತ್ರಿಕೂಟದೊಳಗೆ ವಿಭಿನ್ನ ನಿಲುವು, ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಜನಸಂಖ್ಯೆ ಆಧಾರದ ಮೇಲೆ ಮರುವಿಂಗಡಣೆಯಾದರೆ, ಉತ್ತರ ಪ್ರದೇಶ ಮತ್ತು ಬಿಹಾರದಂತಹ ರಾಜ್ಯಗಳು ಹೆಚ್ಚು ಸ್ಥಾನಗಳನ್ನು ಪಡೆಯುತ್ತವೆ ಹಾಗೂ ದಕ್ಷಿಣ ರಾಜ್ಯಗಳಿಗೆ ಅನ್ಯಾಯವಾಗುತ್ತದೆ ಎಂಬ ನಿಲುವಿಗೆ ಹಿಂದಿ ಬೆಲ್ಟ್‌ನ ವಿಪಕ್ಷಗಳು ಸಮ್ಮತಿಸಿವೆ. ಆದರೆ, 30 ವರ್ಷಗಳ ಕಾಲ ಮರುವಿಂಗಡಣೆ ಮಾಡಬಾರದು ಎಂಬ ಸ್ಟಾಲಿನ್ ಪ್ರತಿಪಾದನೆಯನ್ನು ಒಪ್ಪುವುದಿಲ್ಲ ಎಂದು ಹೇಳುತ್ತಿವೆ.

”ಕ್ಷೇತ್ರ ವಿಂಗಡಣೆ ಪ್ರಕ್ರಿಯೆಯನ್ನು ಅನಿರ್ದಿಷ್ಟವಾಗಿ ಸ್ಥಗಿತಗೊಳಿಸುವ ಬದಲು, ಜಂಟಿ ಸಂಸದೀಯ ಸಮಿತಿಗಳು ಅಥವಾ ಸರ್ವಪಕ್ಷಗಳ ಸಭೆಗಳನ್ನು ನಡೆಸಿ ಒಮ್ಮತದ ಕಾರ್ಯವಿಧಾನಗಳ ಮೂಲಕ ‘ಮಧ್ಯಮ ಮಾರ್ಗ’ವನ್ನು ಕಂಡುಕೊಳ್ಳಬಹುದು” ಎಂದು ಉತ್ತರ ಪ್ರದೇಶದ ಸಮಾಜವಾದಿ ಪಕ್ಷ ಮತ್ತು ಬಿಹಾರದ ಆರ್‌ಜೆಡಿ ಹೇಳುತ್ತಿವೆ.

ಈ ವರದಿ ಓದಿದ್ದೀರಾ?: Delimitation | ದಕ್ಷಿಣದ ರಾಜ್ಯಗಳಿಗೆ ಕಂಟಕವಾಗಿರುವ ಸಂಸದೀಯ ಕ್ಷೇತ್ರ ಮರುವಿಂಗಡಣೆ

”ಜನಸಂಖ್ಯೆಯ ಆಧಾರದ ಮೇಲೆ ಮಾತ್ರ ಕ್ಷೇತ್ರ ವಿಂಗಡಣೆ ನಡೆಸುವುದರಿಂದ ಕುಟುಂಬ ಯೋಜನೆಯಲ್ಲಿ ಯಶಸ್ಸು ಕಂಡಿರುವ ದಕ್ಷಿಣ ಭಾರತಕ್ಕೆ ಶಿಕ್ಷೆ ನೀಡಿದಂತಾಗುತ್ತದೆ. ಅದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ, ಉತ್ತರ ಭಾರತ ರಾಜ್ಯಗಳು ಲೋಕಸಭಾ ಕ್ಷೇತ್ರಗಳು ತುಂಬಾ ದೊಡ್ಡದಾಗುತ್ತಿವೆ. ಜನಸಂಖ್ಯೆ ಬೆಳೆದಿದೆ. ಸಂಸತ್ತಿನಲ್ಲಿ ಹೆಚ್ಚು ಪ್ರತಿನಿಧಿಗಳನ್ನು ಹೊಂದುವುದೂ ಅನಿವಾರ್ಯವಾಗಿದೆ. ಹೀಗಾಗಿ, ಎಲ್ಲರಿಗೂ ಸ್ವೀಕಾರಾರ್ಹವಾಗುವ ‘ವೈಜ್ಞಾನಿಕ’ ಮತ್ತು ‘ನ್ಯಾಯಯುತ’ ಸೂತ್ರವನ್ನು ರೂಪಿಸುವ ಅಗತ್ಯವಿದೆ” ಎಂದು ಉತ್ತರದ ವಿಪಕ್ಷಗಳು ಹೇಳಿವೆ.

ಕ್ಷೇತ್ರ ಪುನರ್‌ವಿಂಗಡಣೆ ಅತ್ಯಗತ್ಯ ಎಂದಿರುವ ಸಮಾಜವಾದಿ ಪಕ್ಷದ ವಕ್ತಾರ ಉದಯವೀರ್ ಸಿಂಗ್, ”ಲೋಕಸಭಾ ಕ್ಷೇತ್ರಗಳು ದೊಡ್ಡದಾಗಿವೆ. ಅವುಗಳ ವ್ಯಾಪ್ತಿಯನ್ನು ಕಡಿತಗೊಳಿಸಿ, ಹೊಸ ಕ್ಷೇತ್ರಗಳನ್ನು ರೂಪಿಸುವ ಅಗತ್ಯವಿದೆ. ಉತ್ತರ ಪ್ರದೇಶದ ಬುಂದೇಲ್‌ಖಂಡ್ ಪ್ರದೇಶವು ಬಹಳ ವಿಶಾಲವಾಗಿದೆ. ಆದರೆ, ಈ ಪ್ರದೇಶವು ಕೇವಲ 3/4 ಲೋಕಸಭಾ ಕ್ಷೇತ್ರಗಳನ್ನು ಮಾತ್ರ ಹೊಂದಿದೆ. ಇಂತಹ ಪ್ರದೇಶಗಳಲ್ಲಿ ಕ್ಷೇತ್ರಗಳನ್ನು ಹೆಚ್ಚಿಸಬೇಕಿದೆ” ಎಂದು ಹೇಳಿದ್ದಾರೆ.

”ರಾಷ್ಟ್ರಮಟ್ಟದಲ್ಲಿ ಡಿಎಂಕೆ ನಮ್ಮ ಮಿತ್ರ ಪಕ್ಷವಾಗಿದೆ ಅವರ ಹಿತಾಸಕ್ತಿಗಳಿಗೆ ಅನ್ಯಾಯವಾಗಲು ನಾವು ಎಂದಿಗೂ ಬಿಡುವುದಿಲ್ಲ. ಜನಸಂಖ್ಯೆ ಆಧಾರದ ವಿಂಗಡಣೆಯಿಂದ ದಕ್ಷಿಣ ರಾಜ್ಯಗಳಿಗೆ ತೊಂದರೆಯಾಗುತ್ತದೆ ಎಂಬುದು ಸತ್ಯ. ಅದರಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಅವರ ಹೋರಾಟದಲ್ಲಿ ನಾವು ಅವರ ಜೊತೆಗಿರುತ್ತೇವೆ. ಆದರೆ, ಇನ್ನೂ 30 ವರ್ಷಗಳ ಕಾಲ ಕ್ಷೇತ್ರ ವಿಂಗಡಣೆ ನಡೆಸದೇ ಇರುವುದು ಸಮಸ್ಯೆಯಾಗುತ್ತದೆ. ಕ್ಷೇತ್ರಗಳ ವಿಂಗಡಣೆಗೆ ಪರ್ಯಾಯ ಮಾರ್ಗವನ್ನು ಹುಡುಕಬೇಕಿದೆ” ಎಂದಿದ್ದಾರೆ.

”ಉತ್ತರ ಮತ್ತು ದಕ್ಷಿಣದ ನಡುವೆ ತಾರತಮ್ಯವಿಲ್ಲದ ರೀತಿಯಲ್ಲಿ ಮಾರ್ಗವನ್ನು ಕಂಡುಕೊಳ್ಳಬೇಕು. ಕ್ಷೇತ್ರ ಮರುವಿಂಗಡಣೆ ಆಯೋಗವು ದಕ್ಷಿಣ ರಾಜ್ಯಗಳ ಕಳವಳ ಮತ್ತು ಅನುಮಾನಗಳನ್ನು ಪರಿಹರಿಸಿದರೆ, ಉತ್ತಮ ಮಾರ್ಗವನ್ನು ಕಂಡುಕೊಳ್ಳಬಹುದು. ನಾವೆಲ್ಲರೂ ಒಟ್ಟಿಗೆ ಕುಳಿತು ಸ್ವೀಕಾರಾರ್ಹ ದಾರಿಯನ್ನು ಹುಡುಕಬೇಕು” ಎಂದು ಆರ್‌ಜೆಡಿ ವಕ್ತಾರ ಜಯಂತ್ ಜಿಗ್ಯಾಸು ಹೇಳಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

ರಾಜ್ಯ ಶಿಕ್ಷಣ ನೀತಿ ಆಯೋಗ: ಶಾಲಾ ಶಿಕ್ಷಣ ಕುರಿತ ಹೊಸ ಅಂಶಗಳೇನು?

ಎನ್‌ಇಪಿ (ರಾಷ್ಟ್ರೀಯ ಶಿಕ್ಷಣ ನೀತಿ) ಎಂಬುದು ಭಾರತೀಯ ಜ್ಞಾನದ ನೆಲೆಯಲ್ಲಿ ರೂಪಿಸಲಾಗಿದೆ....

Download Eedina App Android / iOS

X