ರಾಜ್ಯದ ಸರ್ಕಾರಿ ಪಾಲಿಟೆಕ್ನಿಕ್‍ಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರ ಸೇವೆ ಕಾಯಂಗೊಳಿಸಬೇಕು ಎಂದು ಕರ್ನಾಟಕ ರಾಜ್ಯ ಸರ್ಕಾರಿ ಪಾಲಿಟೆಕ್ನಿಕ್ ಅರೆಕಾಲಿಕ ಉಪನ್ಯಾಸಕರ ಸಂಘದ ಜಿಲ್ಲಾ ಘಟಕ ಆಗ್ರಹಿಸಿದೆ.
ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳು ಬುಧವಾರ ಉನ್ನತ ಶಿಕ್ಷಣ ಸಚಿವ ಎಂ.ಸಿ. ಸುಧಾಕರ ಅವರ ಹೆಸರಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರಿಗೆ ಸಲ್ಲಿಸಿದರು.
ʼರಾಜ್ಯ ಸರ್ಕಾರ ಪಾಲಿಟೆಕ್ನಿಕ್‍ಗಳಿಗೆ 2 ಸಾವಿರ ಪೂರ್ಣಾವಧಿ ಉಪನ್ಯಾಸಕರ ನೇಮಕಕ್ಕೆ ನಿರ್ಧರಿಸಿರುವುದು ಸ್ವಾಗತಾರ್ಹ. ಆದರೆ, ಈ ಪೈಕಿ 1,600 ಹುದ್ದೆಗಳಿಗೆ ಮಾನವೀಯತೆ ಆಧಾರದಲ್ಲಿ ಈಗಾಗಲೇ ರಾಜ್ಯದ 102 ಪಾಲಿಟೆಕ್ನಿಕ್‍ಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರನ್ನು ನೇಮಕಗೊಳಿಸಬೇಕು. ಉಳಿದ 400 ಹುದ್ದೆಗಳಿಗೆ ನಿಯಮಾನುಸಾರ ನೇಮಕಾತಿ ಪ್ರಕ್ರಿಯೆ ನಡೆಸಬೇಕುʼ ಎಂದು ಬೇಡಿಕೆ ಮಂಡಿಸಿದರು.
ʼಅತಿಥಿ ಉಪನ್ಯಾಸಕರ ಪೈಕಿ ಹಲವರ ವಯೋಮಿತಿ ಮೀರಿದೆ. ಇನ್ನೂ ಕೆಲವರ ವಯೋಮಿತಿ ಮೀರುವ ಹಂತದಲ್ಲಿದೆ. ಹೀಗಾಗಿ ಸರ್ಕಾರಿ ಹುದ್ದೆಗೆ ಅರ್ಜಿ ಸಲ್ಲಿಸಿ ಹುದ್ದೆ ಪಡೆಯಲು ಸಾಧ್ಯವಾಗುತ್ತಿಲ್ಲ. ಅತಿಥಿ ಉಪನ್ಯಾಸಕರು 2 ವರ್ಷದಿಂದ 20 ವರ್ಷಗಳ ಅವಧಿಯಿಂದ ಸೇವೆ ಸಲ್ಲಿಸುತ್ತಿದ್ದಾರೆ. ವರ್ಗಾವಣೆಗೊಂಡ ಇಲ್ಲವೇ ಹೊಸದಾಗಿ ನೇಮಕಗೊಂಡ ಪೂರ್ಣಾವಧಿ ಉಪನ್ಯಾಸಕರು ಬಂದರೆ ಹುದ್ದೆಯಿಂದ ಬಿಡುಗಡೆಗೊಳಿಸಲಾಗುತ್ತಿದೆʼ ಎಂದು ತಿಳಿಸಿದರು.
ʼನೆರೆಯ ತೆಲಂಗಾಣ, ಮಹಾರಾಷ್ಟ್ರ, ಹರಿಯಾಣ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಅತಿಥಿ ಉಪನ್ಯಾಸಕರಿಗೆ ಬೇಸಿಕ್ ಸ್ಟೇಟ್ ಸ್ಕೇಲ್ ಹಾಗೂ ಸೇವಾ ಭದ್ರತೆ ಕೊಡಲಾಗಿದೆ. ಆದರೆ, ರಾಜ್ಯದಲ್ಲಿ ಮಾತ್ರ ಒದಗಿಸಲಾಗಿಲ್ಲʼ ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಅನ್ನದಾತರ ಸಾವಿಗೆ ಕೊನೆಯಿಲ್ಲ : 5 ವರ್ಷಗಳಲ್ಲಿ 100 ದಾಟಿದ ರೈತರ ಆತ್ಮಹತ್ಯೆ ಸಂಖ್ಯೆ
ಸಂಘದ ರಾಜ್ಯ ಅಧ್ಯಕ್ಷ ಪ್ರವೀಣಕುಮಾರ ಮೀರಾಗಂಜಕರ್, ಜಿಲ್ಲಾ ಘಟಕದ ಸಂಘಟನಾ ಕಾರ್ಯದರ್ಶಿ ಶರಣಬಸಪ್ಪ ವಾಲಿ, ಜಂಟಿ ಕಾರ್ಯದರ್ಶಿ ಸಂತೋಷ್ ಲದ್ದೆ, ಪ್ರಮುಖರಾದ ಎಂ.ಡಿ. ಯುನೂಸ್, ಸಂದೀಪ್ ಕುಲಕರ್ಣಿ, ಸಚಿನ್ ಚಿಟ್ಮೆ, ಹಸ್ನಾ ಜಬೀನ್, ನಜ್ಮಾ ಆಫ್ರೀನ್, ಕೀರ್ತಿ, ಗೋದಾವರಿ ಮತ್ತಿತರರು ಇದ್ದರು.