ಹಿಡಕಲ್ ಜಲಾಶಯದಿಂದ ಘಟಪ್ರಭಾ ನದಿಗೆ, ಬಲ ದಂಡೆ, ಎಡ ದಂಡೆ ಹಾಗೂ ಚಿಕ್ಕೋಡಿ ಕಾಲುವೆಗಳಿಗೆ ತಕ್ಷಣ ನೀರು ಬಿಡುವಂತೆ ಒತ್ತಾಯಿಸಿ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಇಂದು ಬೆಳಗಾವಿ ಪ್ರಾದೇಶಿಕ ಆಯುಕ್ತರ ಕಚೇರಿ ಎದುರು ರೈತರು ಭಾರೀ ಪ್ರತಿಭಟನೆ ನಡೆಸಿದರು. ಸರ್ಕಾರಕ್ಕೆ ಮನವಿ ಸಲ್ಲಿಸಿದ ರೈತ ನಾಯಕರು, ಜಿಲ್ಲಾಧಿಕಾರಿ ಮತ್ತು ಉಸ್ತುವಾರಿ ಸಚಿವರ ನೇತೃತ್ವದಲ್ಲಿ ತಕ್ಷಣ ತುರ್ತು ಸಭೆ ಕರೆಯಬೇಕು ಎಂದು ಆಗ್ರಹಿಸಿದರು.
ನೀರಿನ ಕೊರತೆಯಿಂದ ಹಾಹಾಕಾರ – ಕೃಷಿ, ಪಶುಪಾಲನೆ ತೊಂದರೆ
ಈ ಸಂದರ್ಭದಲ್ಲಿ ರೈತ ಮುಖಂಡರಾದ ಶಿವಪುತ್ರಪ್ಪ ಜಕಬಾಳ್ ಮಾತನಾಡಿ, “ಈಗಾಗಲೇ ಬಿಸಿಲಿನ ತೀವ್ರತೆ ಹೆಚ್ಚಾಗಿದ್ದು, ನದಿ, ಹಳ್ಳ-ಕೊಳ್ಳಗಳು, ಬಾವಿಗಳು, ಕೊಳವೆಬಾವಿಗಳು ಹಾಗೂ ಕೆರೆಗಳು ಒಣಗುತ್ತಿವೆ. ಇದರಿಂದ ಜನ, ಜಾನುವಾರುಗಳಿಗೆ ನೀರಿನ ಸಮಸ್ಯೆ ಉಲ್ಬಣಗೊಂಡಿದ್ದು, ತಕ್ಷಣ ನೀರು ಬಿಡದಿದ್ದರೆ ಸ್ಥಿತಿ ಕಠಿಣವಾಗಲಿದೆ” ಎಂದು ತಿಳಿಸಿದರು.
ರೈತ ಸಂಘಟನೆಯ ಮುಖಂಡ ಗಣೇಶ ಇಳಿಗೇರ ಮಾತನಾಡಿ, “ನೀರಾವರಿ ನಿಗಮಗಳು ತಕ್ಷಣ ಸಭೆ ಕರೆದು ಜಲಾಶಯದ ನೀರಿನ ಲಭ್ಯತೆ ಪರಿಶೀಲಿಸಬೇಕು. ಜನರ ನೀರಿನ ಅವಶ್ಯಕತೆಗನುಗುಣವಾಗಿ ಘಟಪ್ರಭಾ ನದಿ ಮತ್ತು ಕಾಲುವೆಗಳಿಗೆ ನೀರು ಬಿಡಲು ನಿರ್ಧಾರ ಕೈಗೊಳ್ಳಬೇಕು” ಎಂದು ಒತ್ತಾಯಿಸಿದರು.

ಪ್ರತಿಭಟನಾಕಾರರು ಸರ್ಕಾರದ ನಿರ್ಲಕ್ಷ್ಯವನ್ನು ಖಂಡಿಸಿ ಘೋಷಣೆ ಕೂಗಿದರು. ರಾಜ್ಯ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳದೇ ಹೋದರೆ ಉಗ್ರ ಹೋರಾಟ ನಡೆಸುವ ಎಚ್ಚರಿಕೆಯನ್ನು ನೀಡಿದರು.
ನೀರಾವರಿ ಇಲಾಖೆ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯ
ಪ್ರತಿಭಟನೆಯ ನಂತರ ರೈತ ಸಂಘಟನೆಯ ನಾಯಕರು ಪ್ರಾದೇಶಿಕ ಆಯುಕ್ತರಿಗೆ ಮನವಿ ಸಲ್ಲಿಸಿದರು. “ನೀರಿನ ಸಮಸ್ಯೆ ದಿನೇದಿನೇ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಕುಡಿಯುವ ನೀರಿಗೂ ಅಭಾವ ಉಂಟಾಗಿದೆ. ಸರ್ಕಾರ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು” ಎಂದು ರೈತರು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಉಪಾಧ್ಯಕ್ಷ ಶಿವನಗೌಡ ಗೌಡರ, ವಿಭಾಗೀಯ ಅಧ್ಯಕ್ಷ ಈರನಗೌಡ ಪಾಟೀಲ, ಗೋಕಾಕ ತಾಲ್ಲೂಕಾ ಅಧ್ಯಕ್ಷ ಬಾಳಪ್ಪ ಪಾಟೀಲ, ಮುಖಂಡರಾದ ಭೀರಪ್ಪ ದೇಶನೂರ, ಪ್ರಕಾಶ ನಾಯಿಕ, ಮಾರುತಿ ಥರಕಾರ, ಬಸವರಾಜ ಮೋಕಾಶಿ ಸೇರಿದಂತೆ ಅನೇಕ ರೈತ ಮುಖಂಡರು ಭಾಗವಹಿಸಿದರು.