ʼರಾಜ್ಯದಾದ್ಯಂತ ಮಾರ್ಚ್ 21 ರಿಂದ ಏಪ್ರಿಲ್ 4ರವರೆಗೆ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಗಳು ನಡೆಯಲಿದೆ. ಜಿಲ್ಲೆಯ 91 ಕೇಂದ್ರಗಳಲ್ಲಿ ಸುಗಮ ಹಾಗೂ ಪಾರದರ್ಶಕವಾಗಿ ಪರೀಕ್ಷೆ ನಡೆಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ’ ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ತಿಳಿಸಿದ್ದಾರೆ.
ಮಾರ್ಚ್ 21ರಂದು ಪ್ರಥಮ ಭಾಷೆ, ಮಾರ್ಚ್ 24ರಂದು ಗಣಿತ, ಮಾರ್ಚ್ 26ರಂದು ದ್ವಿತೀಯ ಭಾಷೆ, ಮಾರ್ಚ್ 29ರಂದು ಸಮಾಜ ವಿಜ್ಞಾನ, ಏ.2ರಂದು ವಿಜ್ಞಾನ, ಏ.4ರಂದು ತೃತೀಯ ಭಾಷೆ ಪರೀಕ್ಷೆ ನಡೆಯಲಿವೆ. ಪ್ರಥಮ ಬಾರಿಗೆ 25,409, ಪುನರಾವರ್ತಿತ 2,353 ಸೇರಿದಂತೆ ಒಟ್ಟು 28,602 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆʼ ಎಂದು ತಿಳಿಸಿದ್ದಾರೆ.
ʼ91 ಪರೀಕ್ಷಾ ಕೇಂದ್ರಗಳ ಒಟ್ಟು 1,264 ಕೊಠಡಿಗಳಲ್ಲಿ ಪರೀಕ್ಷೆ ನಡೆಯಲಿವೆ. ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ವೆಬ್‌ಕಾಸ್ಟಿಂಗ್‌ನಲ್ಲಿ ಪರೀಕ್ಷೆ ನಡೆಯಲಿದೆ. ಎಲ್ಲ ಪರೀಕ್ಷಾ ಕೇಂದ್ರಗಳಿಗೆ ಮುಖ್ಯ ಅಧೀಕ್ಷಕ ಮತ್ತು ಪ್ರಶ್ನೆ ಪತ್ರಿಕೆ ಅಭಿರಕ್ಷಕರ ನೇಮಕಾತಿ ಮಾಡಲಾಗಿದೆʼ ಎಂದರು.
ʼಎಲ್ಲಾ ಪರೀಕ್ಷಾ ಕೇಂದ್ರಗಳ ಸುತ್ತಲು ಕಲಂ 144 ಜಾರಿ ಮಾಡಲಾಗಿದೆ. ಪರೀಕ್ಷಾ ಸಿಬ್ಬಂದಿಯನ್ನು ಹೊರತುಪಡಿಸಿ ಪರೀಕ್ಷಾ ಕೇಂದ್ರದಲ್ಲಿ ಯಾವುದೇ ಅನಧೀಕೃತ ವ್ಯಕ್ತಿಯನ್ನು ಪ್ರವೇಶಿಸಲು ನಿರ್ಬಂಧಿಸಲಾಗಿದೆ. ಮೊಬೈಲ್ ಫೋನ್ ಹಾಗೂ ಇನ್ನಿತರ ಡಿಜಿಟಲ್ ಉಪಕರಣಗಳನ್ನು ಬಳಸವುದನ್ನು ಕಡ್ಡಾಯವಾಗಿ ನಿಷೇಧಿಸಿದೆ. ತಾಲ್ಲೂಕಿಗೆ ಒಂದರಂತೆ ಸರದಿ ಪದ್ದತಿಯಲ್ಲಿ ಶಿಕ್ಷಣ ಇಲಾಖೆ ಹೊರತು ಪಡಿಸಿ ಅನ್ಯ ಇಲಾಖೆಯ ಅಧಿಕಾರಿಗಳನ್ನಾಗಿ ಜಾಗೃತದಳ ಅಧಿಕಾರಿಗಳಾಗಿ ನೇಮಿಸಿ 5 ತಂಡಗಳನ್ನು ರಚಿಸಲಾಗಿದೆʼ ಎಂದು ಮಾಹಿತಿ ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೀದರ್ | ಅನ್ನದಾತರ ಸಾವಿಗೆ ಕೊನೆಯಿಲ್ಲ : 5 ವರ್ಷಗಳಲ್ಲಿ 100 ದಾಟಿದ ರೈತರ ಆತ್ಮಹತ್ಯೆ ಸಂಖ್ಯೆ
ಬೇಸಿಗೆ ಅವಧಿಯಲ್ಲಿ ಸೆಕೆ ಹೆಚ್ಚಾಗಿರುವುದರಿಂದ ಆರೋಗ್ಯ ಇಲಾಖೆಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಂದ ಪ್ರತಿ ಪರೀಕ್ಷಾ ಕೇಂದ್ರಗಳಿಗೆ ಒಆರ್‌ಎಸ್ ನೀಡಲು ಸೂಚಿಸಲಾಗಿದೆ. ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರದವರೆಗೆ ಪ್ರವೇಶ ಪತ್ರ ತೋರಿಸಿ ಉಚಿತವಾಗಿ ಪ್ರಯಾಣಿಸಲು ಬಸ್ ಸೌಲಭ್ಯ ಕಲ್ಪಿಸಲಾಗಿದೆ. ಯಾವುದೇ ಆತಂಕವಿಲ್ಲದೆ ವಿದ್ಯಾರ್ಥಿಗಳು ಪರೀಕ್ಷೆ ಬರೆಯುವಂತೆ ವಿದ್ಯಾರ್ಥಿಗಳಿಗೆ ಜಿಲ್ಲಾಡಳಿತದಿಂದ ಶುಭ ಹಾರೈಸಿದ್ದಾರೆ.