ಬೀದರ್ ಜಿಲ್ಲೆಯ ಕೆಲವೆಡೆ ಗುರುವಾರ ರಾತ್ರಿ ಮೊದಲ ಮಳೆಯಾಗಿದ್ದು, ಹನಿಗಳ ಸಿಂಚನವಾಯಿತು.
ಜಿಲ್ಲೆಯಲ್ಲಿ ಹಲವು ದಿನಗಳಿಂದ 39-41 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದ್ದು ಮುಂದಿನ ದಿನಗಳಲ್ಲಿ ಬಿಸಿಲು ಇನ್ನೂ ತಾರಕಕ್ಕೆ ಏರುವ ಮುನ್ನವೇ ಮಳೆ ಹನಿಗಳ ಸಿಂಚನವಾಯಿತು.
ಗುರುವಾರ ಸಂಜೆ ಮೋಡ ಕವಿದ ವಾತಾವರಣ ಇತ್ತು. ರಾತ್ರಿ 9 ಗಂಟೆ ಸುಮಾರಿಗೆ ಔರಾದ್, ಬಸವಕಲ್ಯಾಣ ತಾಲ್ಲೂಕಿನ ಕೆಲವೆಡೆ ತಂಪಾದ ಗಾಳಿಯೊಂದಿಗೆ ವರ್ಷದ ಮೊದಲ ತುಂತುರು ಮಳೆ ಸುರಿಯಿತು. ಬಿಸಿಲಿನ ಧಗೆಯಿಂದ ಬೇಸತ್ತಿದ ಜನರಿಗೆ ತಂಪಿನ ಅನುಭವವಾಯಿತು.
ʼಜಿಲ್ಲೆಯ ಕೆಲವೆಡೆ ಮುಂದಿನ ಎರಡ್ಮೂರು ದಿನಗಳ ಕಾಲ ಹನಿಗಳ ಸಿಂಚನ ಆಗುವ ಸಾಧ್ಯತೆ ಇದೆ. ಆದರೆ ಮಾರ್ಚ್ ತಿಂಗಳಲ್ಲಿ ಸುರಿದ ಮಳೆ ಬಿಸಿಲ ಬೇಗೆಯನ್ನು ಕಡಿಮೆ ಮಾಡುವ ಬದಲಿಗೆ ಮತ್ತಷ್ಟು ಹೆಚ್ಚುಗೊಳಿಸುವ ಸಾಧ್ಯತೆ ಇದೆʼ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.