ಮಹಾಡ್ ಕೆರೆ ನೀರು ಮುಟ್ಟಿದ ದಿನ, ದಲಿತರ ಅರಿವಿನ ಪ್ರಜ್ಞೆ ವಿಸ್ತರಣೆಯಾದ ದಿನ ಎಂದು ತುಮಕೂರು ವಿವಿ ವಿಜ್ಞಾನ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ನಾಗಭೂಷಣ್ ಬಗ್ಗನಡು ಅಭಿಪ್ರಾಯಪಟ್ಟರು.
ತುಮಕೂರು ನಗರದ ಜಿಲ್ಲಾಸ್ಪತ್ರೆ ಸಭಾಂಗಣದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ(ರಿ), ಅಂಬೇಡ್ಕರ್ ವಾದ ತುಮಕೂರು ಜಿಲ್ಲಾ ಸಮಿತಿ, ರಾಜ್ಯ ಸಮಿತಿಯ ಸದಸ್ಯರಾದ ಕುಂದೂರು ತಿಮ್ಮಯ್ಯ ಅವರ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಭಾರತದ ಅಸ್ಪೃಷ್ಯರ ಮೊದಲ ಪ್ರತಿರೋಧ ಚಳವಳಿ ಮಹಾಡ್ ಸತ್ಯಾಗ್ರಹ ನೆನಪು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಹಾಡ್ ಸತ್ಯಾಗ್ರಹದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು, ರಕ್ತ ರಹಿತ ಕ್ರಾಂತಿಯ ಮೂಲಕ ಪ್ರಕೃತಿಯ ಮೇಲೆ ದಲಿತ ಸಮುದಾಯದ ಹಕ್ಕು ಪ್ರತಿಪಾದಿಸಿದರು. ಭಾರತದ ದಲಿತರ ಪಾಲಿಗೆ 1927ರ ಮಾರ್ಚ್ 20 ರಂದು ಮಹಾಡ್‌ನ ಚೌದರ ಕೆರೆ ನೀರು ಮುಟ್ಟುವುದು ಮತ್ತು ಡಿಸೆಂಬರ್ 27 ರಂದು ಮನುಸೃತಿಯನ್ನು ಸುಟ್ಟು ಹಾಕುವ ಮೂಲಕ ಭೌತಿಕವಾಗಿ ಮತ್ತು ಬೌದ್ಧಿಕವಾಗಿ ದಲಿತರನ್ನು ಎಚ್ಚರಿಸಿದ ವರ್ಷವಾಗಿದೆ.ಈ ಘಟನೆ ನಡೆದು ಸುಮಾರು 98 ವರ್ಷಗಳು ಸಂದಿವೆ.ಇಂದು ದಲಿತರ ಸ್ಥಿತಿಗತಿ ಏನಾಗಿದೆ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ದಿನವಾಗಿದೆ ಎಂದರು.

ಚರಕ ಆಸ್ಪತ್ರೆಯ ವೈದ್ಯರಾದ ಡಾ.ಬಸವರಾಜು ಮಾತನಾಡಿ ಸಂಪ್ರದಾಯ, ಕಟ್ಟುಪಾಡುಗಳ ಹೆಸರಿನದಲ್ಲಿ ಈ ನೆಲದ ದಲಿತರನ್ನು ಪ್ರಾಣಿ, ಪಕ್ಷಿಗಳಿಗಿಂತಲೂ ಕೀಳಾಗಿ ಕಾಣುತ್ತಿದ್ದ ಚಾರ್ತುವರ್ಣದ ವ್ಯವಸ್ಥೆಯ ವಿರುದ್ದ ಮೊದಲ ಹೋರಾಟವೇ ಮಹಾಡ್‌ನ ಚೌಧರ್ ಕೆರೆ ನೀರು ಮುಟ್ಟುವ ಐತಿಹಾಸಿಕ ಚಳವಳಿಯಾಗಿದೆ ಎಂದರು.
ಹಣಬಲ, ತೋಳ್ಬಲಗಳಿಂತ,ಬುದ್ದಿಬಲದ ಮೂಲಕವೇ ಪ್ರಕೃತಿಯಲ್ಲಿನ ಎಲ್ಲಾ ವಸ್ತುಗಳ ಮೇಲೆ ದಲಿತರಿಗೂ ಸಮಾನ ಹಕ್ಕಿದೆ ಎಂದು ಪ್ರತಿಪಾದಿಸಿದ ಮಹತ್ವದ ದಿನವಿದು.ಇದರ ಜೊತೆಗೆ,ಈ ಅಸಮಾನತೆಗೆ ಕಾರಣವಾದ ಮನುಸೃತಿಯನ್ನು ಸುಡುವ ಮಹತ್ವದ ಕ್ರಾಂತಿಗೆ ಮುನ್ನುಡಿ ಬರೆದ ದಿನ ಹಾಗಾಗಿಯೇ ಇಂದು ಜಾರ್ತುವರ್ಣದ ಮೂಲವಾದ ಮನುಸೃತಿಯನ್ನು ಸುಟ್ಟು,ಸಮಾನತೆಯ ಸಂಕೇತವಾದ ಪ್ರಕೃತಿಗೆ ನೀರೇರುವ ಮೂಲಕ ಈ ದಿನವನ್ನು ನೆನಪು ಮಾಡಿಕೊಂಡಿದ್ದೇವೆ ಎಂದರು.
ಬಾಬಾ ಸಾಹೇಬ್ ಅಂಬೇಡ್ಕರ್ ಅವರು 1927ರ ಮಾರ್ಚ್ 20ರಂದು ಸಾಂಕೇತಿಕವಾಗಿ ಚೌದರ್ ಕೆರೆಯ ನೀರನ್ನು ಮುಟ್ಟುವ ಮೂಲಕ ಪಂಚಭೂತಗಳಲ್ಲಿ ಎಲ್ಲರಿಗೂ ಸಮಾನ ಹಕ್ಕಿದೆ ಎಂದು ಪ್ರತಿಪಾದಿಸಿ ಹಂಚಿದ ಹಣತೆ ಇಂದು ದೊಡ್ಡ ಬೆಳಕುಗಳಾಗಿ, ದಲಿತರಲ್ಲಿ ಹಲವಾರು ಸಾಮಾಜಿಕ ಬದಲಾವಣೆಗೆ ಕಾರಣವಾಗಿದೆ.ಆದರೆ ಕಾನೂನಿನ ಮೂಲಕ ರಕ್ಷಣೆ ಇದ್ದರೂ, ಕೊಳಕು ಮನಸ್ಥಿತಿಗಳಲ್ಲಿ ಬದಲಾವಣೆ ಕಾಣದೆ, ಇಂದಿಗೂ ಜಾತಿಯ ಹೆಸರಿನಲ್ಲಿ ದೌರ್ಜನ್ಯ, ದಬ್ಬಾಳಿಕೆಗಳ ನಡೆಯುತ್ತಿವೆ.ದಲಿತರು ಅಂಬೇಡ್ಕರ್ ಪ್ರತಿಮೆ ಸ್ಥಾಪಿಸಿ ಅವರನ್ನು ದೇವರಾಗಿಸಲು ಹೊರಟ್ಟಿದ್ದು, ಅವರ ವಿಚಾರಗಳನ್ನು ಪಸರಿಸುವ ಮೂಲಕ ಅವರನ್ನು ವಿಶ್ವಮಾನವರನ್ನಾಗಿಸುವ ಕೆಲಸಕ್ಕೆ ಮುಂದಾಗಿಲ್ಲ ಎಂದು ಡಾ.ಬಸವರಾಜು ವಿಷಾದ ವ್ಯಕ್ತ ಪಡಿಸಿದರು.

ಸಾಮಾಜಿಕ ಹೋರಾಟಗಾರ ವಿ.ಎಲ್.ನರಸಿಂಹಮೂರ್ತಿ ಮಾತನಾಡಿ, ಚೌದರ್ ಕೆರೆಯ ನೀರು ಮುಟ್ಟುವ ಮೂಲಕ ನಡೆದ ದಲಿತರ ಹಕ್ಕು ಪ್ರತಿಪಾದನಾ ಚಳವಳಿ ನಡೆದು ಶತಮಾನಗಳಾಗುತ್ತಾ ಬಂದಿದ್ದರೂ ಇಂದಿಗೂ ದಲಿತರು ತಮ್ಮ ಹಕ್ಕುಗಳನ್ನು ಸ್ಥಾಪಿಸಲು ಮುಂದಾದಾಗ ದೌರ್ಜನ್ಯ, ದಬ್ಬಾಳಿಕೆಗಳಿಗೆ ಒಳಗಾಗುತ್ತಲೇ ಇದ್ದಾರೆ. ನೀರು, ಆಹಾರ, ಭೂಮಿ, ಸ್ಮಶಾನದಂತಹ ವಿಚಾರಗಳಲ್ಲಿ ಇಂದಿಗೂ ಘರ್ಷಣೆಗಳು ನಡೆಯುತ್ತಲೇ ಇವೆ.ಅದಕ್ಕೆ ಅಂಬೇಡ್ಕರ್ ಏಕಕಾಲಕ್ಕೆ ಬ್ರಿಟಿಷ್ ಸರಕಾರದಲ್ಲಿ ದಲಿತರಿಗೆ ಸಮಾನ ಅವಕಾಶ,ಮೇಲ್ವರ್ಗದ ಜನರಲ್ಲಿ ಸಾಮಾಜಿಕ ಸಮಾನತೆ ಹಾಗೂ ದಲಿತರಲ್ಲಿ ಕೀಳಿರಿಮೆ ತೊಡೆದುಕೊಳ್ಳುವ ಬೇಡಿಕೆಗಳನ್ನು ಮುಂದಿಟ್ಟಿದ್ದರು.ಆದರೆ ಇದುವರೆಗೂ ನಮ್ಮನ್ನು ಆಳಿದ ಯಾವ ರಾಜಕೀಯ ಪಕ್ಷಗಳು ಸಾಮಾಜಿಕ ಬದಲಾವಣೆಯ ಬಗ್ಗೆ ಮಾತನಾಡುವುದಿಲ್ಲ.ಅವುಗಳನ್ನು ಮುಂದುವರೆಸಿಕೊಂಡು ಹೋಗುವ ಮನಸ್ಥಿತಿಯಲ್ಲಿಯೇ ಇವೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದದ ರಾಜ್ಯ ಸಮಿತಿ ಸದಸ್ಯ ಕುಂದೂರು ತಿಮ್ಮಯ್ಯ ವಹಿಸಿದ್ದರು.
ಗುಬ್ಬಿ ತಾಲೂಕು ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕರು ಹಾಗೂ ಭೂ ನ್ಯಾಯ ಮಂಡಳಿ ನಾಮಿನಿ ಸದಸ್ಯರಾದ ಚೇಳೂರು ಶಿವನಂಜಪ್ಪ ಹಾಗೂ ದಸಂಸ ಜಿಲ್ಲಾ ಸಂಘಟನಾ ಸಂಚಾಲಕರು ಹಾಗೂ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ನಾಮ ನಿರ್ದೇಶಿತ ಸದಸ್ಯರಾದ ಕುಪ್ಪೂರು ಶ್ರೀಧರ್ ಅವರುಗಳನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ದಸಂಸ ಸಂಚಾಲಕ ವಿರೂಪಾಕ್ಷ ಡ್ಯಾಗೇರಹಳ್ಳಿ, ಉಮಾಪ್ರಗತಿ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಕೆಂಪರಾಜು,ಕೆಇಬಿ ದಲಿತ ನೌಕರರ ಒಕ್ಕೂಟದ ಸೋಮಶೇಖರ್ ಮತ್ತಿಹಳ್ಳಿ, ಕರ್ನಾಟಕ ಲಲಿತ ಕಲಾ ಆಕಾಡೆಮಿಯ ಮನುಚಕ್ರವರ್ತಿ,ದಸಂಸ ಜಿಲ್ಲಾ ಸಂಚಾಲಕ ಕುಂದೂರು ಮುರುಳಿ, ಕೆ.ಹೆಚ್.ರಂಗನಾಥ ಕಂಟಲಗೆರೆ, ಶ್ರೀನಿವಾಸ್ ಹೆಗ್ಗೆರೆ,ಮಂಚಲದೊರೆ ಭಾಗ್ಯಮ್ಮ, ಶಿವಮ್ಮ ಬಿ.ಹೆಚ್.ಕಾವಲ್ ಅವರುಗಳು ಉಪಸ್ಥಿತರಿದ್ದರು.