ಸಿನಿಮಾದ ಸ್ಕ್ರಿಪ್ಟ್ ಸಿದ್ಧವಾಗಿದೆ ಎಂದ ಸ್ಟಾರ್ ನಟ
ಸದ್ಯದಲ್ಲೇ ತಿಳಿಯಲಿದೆ ಯಶ್ ಮುಂದಿನ ಚಿತ್ರದ ಮಾಹಿತಿ
ಕೆಜಿಎಫ್-2 ಸಿನಿಮಾ ತೆರೆಕಂಡು ಒಂದು ವರ್ಷ ಕಳೆದರೂ ಯಶ್ ಮಾತ್ರ ತಮ್ಮ ಮುಂದಿನ ಸಿನಿಮಾ ಯಾವುದು ಎಂಬ ಬಗ್ಗೆ ಈವರೆಗೆ ಸುಳಿವು ನೀಡಿರಲಿಲ್ಲ. ಯಶ್ ಅವರ 19ನೇ ಸಿನಿಮಾ ಯಾವುದು? ಆ ಚಿತ್ರದ ನಿರ್ದೇಶಕರು ಯಾರು ಎಂಬ ಬಗ್ಗೆ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲವಿದೆ. ಬುಧವಾರ ಕುಟುಂಬಸ್ಥರ ಜೊತೆಗೆ ನಂಜನಗೂಡಿಗೆ ಭೇಟಿ ನೀಡಿದ್ದ ನಟ ಮನೆ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇದೇ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಅವರು ತಮ್ಮ ಮುಂದಿನ ಚಿತ್ರದ ಬಗ್ಗೆಯೂ ಮಾತನಾಡಿದ್ದಾರೆ.
ಪತ್ನಿ ರಾಧಿಕಾ ಮತ್ತು ಮಕ್ಕಳು ಹಾಗೂ ಆಪ್ತರ ಜೊತೆಗೆ ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಯಶ್ ಮನೆದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿರುವ ಅವರು ಮುಂದಿನ ಸಿನಿಮಾ ಘೋಷಣೆ ಮಾಡಲು ತಡವಾಗುತ್ತಿರುವ ಬಗ್ಗೆ ವಿವರಣೆ ನೀಡಿದ್ದಾರೆ.
“ಇಡೀ ದೇಶ ಮತ್ತು ಜಗತ್ತು ನಿರೀಕ್ಷೆಯಿಂದ ಎದುರು ನೋಡುತ್ತಿದೆ. ಅವರೆಲ್ಲರ ನಿರೀಕ್ಷೆಯನ್ನು ಹುಸಿಗೊಳಿಸದಂತೆ ನಡೆದುಕೊಳ್ಳಬೇಕಾದ ಜವಾಬ್ದಾರಿ ನನ್ನ ಮೇಲಿದೆ. ಒಂದು ಕ್ಷಣವನ್ನೂ ವ್ಯರ್ಥ ಮಾಡದಂತೆ ಕೆಲಸ ಮಾಡುತ್ತಿದ್ದೇವೆ. ಸಿನಿಮಾ ಸ್ಕ್ರಿಪ್ಟ್ ಕೂಡ ಸಿದ್ಧವಾಗಿದೆ. ಸದ್ಯದಲ್ಲೇ ಎಲ್ಲ ಮಾಹಿತಿಯನ್ನೂ ನೀಡುತ್ತೇನೆ. ಎಲ್ಲರೂ ದುಡ್ಡು ಕೊಟ್ಟು ಸಿನಿಮಾ ನೋಡುತ್ತಾರೆ. ಅವರು ದುಡ್ಡು ಖರ್ಚು ಮಾಡಿ ನನ್ನ ಸಿನಿಮಾ ನೋಡಿದ್ದಕ್ಕೂ ಸಾರ್ಥಕ ಎನ್ನಿಸಬೇಕು. ಆ ರೀತಿಯ ಸಿನಿಮಾ ಮಾಡುವ ಪ್ರಯತ್ನದಲ್ಲಿದ್ದೇನೆ” ಎಂದಿದ್ದಾರೆ.
ಇದೇ ವೇಳೆ ನೀವು ಬಾಲಿವುಡ್‌ಗೆ ಹೋಗುತ್ತೀರಂತೆ ಹೌದೇ ಎಂಬ ಪತ್ರಕರ್ತರೊಬ್ಬರ ಪ್ರಶ್ನೆಗೆ ಉತ್ತರಿಸಿರುವ ಯಶ್, “ನಾನು ಎಲ್ಲಿಗೂ ಹೋಗಲ್ಲ, ಇರುವಲ್ಲಿಗೆ ಎಲ್ಲರನ್ನೂ ಕರೆಸಿಕೊಳ್ಳತ್ತೇನೆ” ಎನ್ನುವ ಮೂಲಕ ಬಾಲಿವುಡ್, ಹಾಲಿವುಡ್‌ನ ಕಟ್ಟುಕತೆಗಳನ್ನು ತಳ್ಳಿ ಹಾಕಿದ್ದಾರೆ.
ಈ ಸುದ್ದಿ ಓದಿದ್ದೀರಾ? ಆದಿಪುರುಷ್ ಅವಾಂತರ | ತಿರುಗು ಬಾಣವಾದ ಪ್ರಚಾರ ತಂತ್ರ
ಯಶ್ ಅವರ 19ನೇ ಚಿತ್ರವನ್ನು ಮಲಯಾಳಂನ ಖ್ಯಾತ ನಿರ್ದೇಶಕಿ ಗೀತು ಮೋಹನ್‌ದಾಸ್ ನಿರ್ದೇಶನ ಮಾಡಲಿದ್ದಾರೆ ಎಂಬ ಮಾತುಗಳು ದಟ್ಟವಾಗಿ ಕೇಳಿಬರುತ್ತಿವೆ. ಜನಪ್ರಿಯ ಚಿತ್ರ ನಿರ್ಮಾಣ ಸಂಸ್ಥೆ ʼಕೆವಿನ್ ಪ್ರೊಡಕ್ಷನ್ಸ್ʼ ಈ ಚಿತ್ರಕ್ಕೆ ಬಂಡವಾಳ ಹೂಡುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.
ಇದೇ ಜೂನ್ 15ಕ್ಕೆ ಯಶ್ ಬೆಳ್ಳಿತೆರೆ ಪ್ರವೇಶಿಸಿ 15 ವರ್ಷಗಳು ಕಳೆಯಲಿವೆ. ಈ ಹಿನ್ನೆಲೆ ಅವರ 19ನೇ ಚಿತ್ರವನ್ನು ಅದೇ ದಿನದಂದು ಘೋಷಣೆ ಮಾಡುವ ಸಾಧ್ಯತೆ ಎಂಬ ಚರ್ಚೆ ಕೂಡ ಶುರುವಾಗಿದೆ. 2007ರಲ್ಲಿ ತೆರೆಕಂಡಿದ್ದ ಜಂಬದ ಹುಡುಗಿ ಚಿತ್ರದಲ್ಲಿ ಯಶ್ ಪ್ರಮುಖ ಪಾತ್ರದಲ್ಲಿ ನಟಿಸುವ ಮೂಲಕ ಚಿತ್ರರಂಗ ಪ್ರವೇಶಿಸಿದ್ದರು.
ಜೂನ್ 15ಕ್ಕೆ ಅಂದ್ರೇ 2024ನಲ್ಲಾ ಇವತ್ತು ಜೂನ್ 23 2023