ಕಾಂಗ್ರೆಸ್ ಸರ್ಕಾರ ಘೋಷಿಸಿರುವ ಅನ್ನಭಾಗ್ಯ ಯೋಜನೆಗೆ ಅಕ್ಕಿ ಒದಗಿಸಲು ಕೇಂದ್ರ ಬಿಜೆಪಿ ಸರ್ಕಾರ ನಿರಾಕರಿಸಿರುವುದನ್ನು ಖಂಡಿಸಿ ಸಿಪಿಐಎಂ ಕಾರ್ಯಕರ್ತರು ಗದಗ ಜಿಲ್ಲೆಯ ಗಜೇಂದ್ರಘಡದಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಗಜೇಂದ್ರಘಡ ತಹಶೀಲ್ದಾರ್‌ಗೆ ಹಕ್ಕೊತ್ತಾಯ ಸಲ್ಲಿಸಿದ ಪ್ರತಿಭಟನಾಕಾರರು, “ರಾಜ್ಯಸರ್ಕಾರ ಜುಲೈ ತಿಂಗಳಿನಿಂದ ಅನ್ನಭಾಗ್ಯ ಯೋಜನೆಯಡಿ ಪಡಿತರದಾರರಿಗೆ ತಲಾ 10 ಕೆ.ಜಿ ಅಕ್ಕಿ ನೀಡಲು ನಿರ್ಧರಿಸಿದೆ. ಅದು ಸ್ವಾಗತಾರ್ಹ. ಆದರೆ, ಕೇಂದ್ರ ಸರಕಾರವು ರಾಜ್ಯಕ್ಕೆ ಹೆಚ್ಚುವರಿ ಆಹಾರಧಾನ್ಯ ನೀಡುವಲ್ಲಿ ಸಂಕುಚಿತ ರಾಜಕೀಯ ಮಾಡುತ್ತಿರುವುದು ಖಂಡನೀಯ” ಎಂದು ಕಿಡಿಕಾರಿದ್ದಾರೆ.
“ರಾಜ್ಯ ಸರ್ಕಾರದ ಮನವಿಗೆ ಭಾರತ ಆಹಾರ ನಿಗಮದ ಅಧಿಕಾರಿಗಳು ಒಪ್ಪಿ, ಆಹಾರ ಧಾನ್ಯ ಒದಗಿಸುವುದಾಗಿ ಹೇಳಿದ್ದರೂ ಕೂಡಾ, ಕೇಂದ್ರ ಸರ್ಕಾರ ಬಡವರ ವಿರೋಧಿಯಾಗಿರುವುದು ಅಕ್ಷಮ್ಯ. ಕೇಂದ್ರವು ತನ್ನ ರಾಜಕೀಯವನ್ನು ಬದಿಗಿಟ್ಟು, ಒಪ್ಪಂದದಂತೆ ಭಾರತ ಆಹಾರ ನಿಗಮದ ಮೂಲಕ ಆಹಾರ ಧಾನ್ಯಗಳನ್ನು ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು” ಎಂದು ಅವರು ಒತ್ತಾಯಿಸಿದ್ದಾರೆ.
“ಜನರಿಗೆ ಆಹಾರಧಾನ್ಯದ ಬದಲು ನಗದು ವರ್ಗಾವಣೆ ಮಾಡುವಂತೆ ಸೂಚಿಸುವ ಬಿಜೆಪಿ ಧೋರಣೆಯು ಬಡವರ ಪರವಾಗಿರದೇ ಲೂಟಿಕೋರ ಕಾರ್ಪೊರೇಟ್ ಕಂಪನಿಗಳ ಪರವಾಗಿದೆ” ಎಂದು ಕಿಡಿಕಾರಿದ್ದಾರೆ.
ಪ್ರತಿಭಟನೆಯಲ್ಲಿ ಜಿಲ್ಲಾ ಕಾರ್ಯದರ್ಶಿ ಎಮ್ ಎಸ್ ಹಡಪದ, ಬಾಲು ರಾಠೋಡ, ಪೀರು ರಾಠೋಡ, ಮೈಬು ಹವಾಲ್ದಾರ ಮುಂತಾದವರು ಭಾಗವಹಿಸಿದ್ದರು