ಮಹಿಳೆಯ ಸ್ತನ ಮುಟ್ಟುವುದು, ಆಕೆಯ ಪೈಜಾಮದ ಲಾಡಿಯನ್ನು ಬಿಚ್ಚುವುದರನ್ನು ಅತ್ಯಾಚಾರ ಅಥವಾ ಲೈಂಗಿಕ ದೌರ್ಜನ್ಯ ಎನ್ನಲಾಗುವುದಿಲ್ಲ. ಬದಲಾಗಿ, ವಿವಸ್ತ್ರಗೊಳಿಸುವ ಉದ್ದೇಶ ಮತ್ತು ಹಲ್ಲೆ ಎಂಬ ಅಪರಾಧ ವರ್ಗಕ್ಕೆ ಸೇರುತ್ತದೆ ಎಂದು ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಿದೆ. ಈ ತೀರ್ಪನ್ನು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಅನ್ನಪೂರ್ಣ ದೇವಿ ಖಂಡಿಸಿದ್ದಾರೆ. ಇದು ದುರದೃಷ್ಟಕರ ಮತ್ತು ತಪ್ಪು ತೀರ್ಪು ಎಂದಿದ್ದಾರೆ.
ಅಲಹಾಬಾದ್ ಹೈಕೋರ್ಟ್‌ನ ತೀರ್ಪು ಸಮಾಜಕ್ಕೆ ತಪ್ಪು ಸಂದೇಶವನ್ನು ನೀಡುತ್ತದೆ. ಇಂತಹ ವಿಷಯಗಳು ಮತ್ತು ತೀರ್ಪುಗಳನ್ನು ಸುಪ್ರೀಂ ಕೋರ್ಟ್ ಗಮನಿಸಬೇಕು. ಮಧ್ಯಪ್ರವೇಶಿಸಬೇಕು ಎಂದು ಮನವಿ ಮಾಡಿದ್ದಾರೆ.
ಘಟನೆ 2021ರ ನವೆಂಬರ್‌ನಲ್ಲಿ ನಡೆದಿತ್ತು. ನವೆಂಬರ್ 10ರ ಸಂಜೆ ದೂರುದಾರ ಮಹಿಳೆ ಮತ್ತು ಆಕೆಯ ಅಪ್ರಾಪ್ತ ಮಗಳು ತಮ್ಮ ಸಂಬಂಧಿಯ ಮನೆಯಿಂದ ತಮ್ಮೂರಿಗೆ ಮರಳುತ್ತಿದ್ದರು. ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ, ತಮ್ಮ ಗ್ರಾಮದ ಮೂವರು ಪುರುಷರು – ಪವನ್, ಆಕಾಶ್ ಮತ್ತು ಅಶೋಕ್ – ಅವರನ್ನು ಎದುರುಗೊಂಡರು. ಅವರಲ್ಲಿ, ಪವನ್ ಎಂಬಾತ ಮಹಿಳೆಯ ಮಗಳನ್ನು ತನ್ನ ಮೋಟಾರ್ ಸೈಕಲ್‌ನಲ್ಲಿ ಮನೆಗೆ ಕರೆದೊಯ್ಯುವುದಾಗಿ ಹೇಳಿದ್ದ. ಆತನನ್ನು ನಂಬಿದ ಸಂತ್ರಸ್ತೆ, ಆತನೊಂದಿಗೆ ಮಗಳನ್ನು ಕಳಿಸಿದ್ದರು. ಆದರೆ, ಬಾಲಕಿಯನ್ನು ಕರೆದೊಯ್ದ ಆರೊಪಿಗಳು ದಾರಿ ಮಧ್ಯೆ ಬೈಕ್‌ನಲ್ಲಿ ನಿಲ್ಲಿಸಿ ಬಾಲಕಿ ಮೇಲೆ ಹಲ್ಲೆ ನಡೆಸಿದ್ದಾರೆ. ಪವನ್ ಮತ್ತು ಆಕಾಶ್ ಬಾಲಕಿಯ ಸ್ತನಗಳನ್ನು ಹಿಡಿದು, ಆಕೆಯ ಪೈಜಾಮದ ದಾರವನ್ನು ಬಿಚ್ಚು, ಪೈಜಾಮವನ್ನು ಕೆಳಗೆ ಎಳೆಯರು ಯತ್ನಿಸಿದ್ದರು. ಈ ವೇಳೆಗೆ, ಸ್ಥಳೀಯರು ಸ್ಥಳಕ್ಕೆ ಬಂದ ಕಾರಣ, ಬಾಲಕಿಯನ್ನು ಬಿಟ್ಟು ಪರಾರಿಯಾಗಿದ್ದರು ಎಂದು ಆರೋಪಿಸಲಾಗಿದೆ.
ಸಂತ್ರಸ್ತ ಬಾಲಕಿಯ ತಾಯಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅತ್ಯಾಚಾರ ಆರೋಪದ ಮೇಲೆ ಐಪಿಸಿ ಸೆಕ್ಷನ್ 376 (ಅತ್ಯಾಚಾರ) ಅಡಿಯಲ್ಲಿ ಆರೋಪಿಗಳಾದ ಪವನ್ ಮತ್ತು ಆಕಾಶ್‌ಗೆ ಸಮನ್ಸ್ ಜಾರಿ ಮಾಡಲು ಜಿಲ್ಲಾ ನ್ಯಾಯಾಲಯವು ಆದೇಶಿಸಿತ್ತು. ಅದನ್ನು ಪ್ರಶ್ನಿಸಿ ಆರೋಪಿಗಳು ಅಲಹಾಬಾದ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಆರೋಪಿಗಳ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ರಾಮ್ ಮನೋಹರ್ ನಾರಾಯಣ್ ಮಿಶ್ರಾ, ‘ಸ್ತನ ಮುಟ್ಟುವುದು, ಪೈಜಾಮದ ಲಾಡಿ ಬಿಚ್ಚುವುದು ಅತ್ಯಾಚಾರವಲ್ಲ. ಅದು ವಿವಸ್ತ್ರಗೊಳಿಸಿ, ಹಲ್ಲೆ ನಡೆಸುವ ಅಪರಾಧ’ ಎಂದು ಹೇಳಿದ್ದಾರೆ.
ಈ ವರದಿ ಓದಿದ್ದೀರಾ?: ಪೋಕ್ಸೋ ಪ್ರಕರಣ: ‘ಬಿಎಸ್‌ವೈ ಕೇಸ್ ರದ್ದು ಮಾಡಲ್ಲ’ ಎಂದ ಹೈಕೋರ್ಟ್
“ಪ್ರಸ್ತುತ ಪ್ರಕರಣದಲ್ಲಿ, ಆರೋಪಿ ಪವನ್ ಮತ್ತು ಆಕಾಶ್ ವಿರುದ್ಧದ ಆರೋಪವು ಅವರು ಸಂತ್ರಸ್ತೆಯ ಸ್ತನಗಳನ್ನು ಹಿಡಿದಿದ್ದಾರೆ ಮತ್ತು ಆಕಾಶ್ ಆಕೆಯ ಪೈಜಾಮವನ್ನು ಬಿಚ್ಚಲು ಪ್ರಯತ್ನಿಸಿದ್ದಾರೆ. ಆದರೆ, ಸಾಕ್ಷಿಗಳ ಮಧ್ಯಪ್ರವೇಶಿಸಿದ ಕಾರಣ ಅವರು ಸಂತ್ರಸ್ತೆಯನ್ನು ಬಿಟ್ಟು ಘಟನಾಸ್ಥಳದಿಂದ ಓಡಿಹೋಗಿದ್ದಾರೆ. ಹೀಗಾಗಿ, ಆರೋಪಿಗಳು ಸಂತ್ರಸ್ತೆಯ ಮೇಲೆ ಅತ್ಯಾಚಾರ ಎಸಗುವ ಉದ್ದೇಶ ಹೊಂದಿದ್ದರು ಎಂದು ಊಹಿಸಲಾಗುವುದಿಲ್ಲ” ಎಂದು ನ್ಯಾಯಾಲಯ ಹೇಳಿದೆ.
ಅಲಹಾಬಾದ್ ಹೈಕೋರ್ಟ್ ನೀಡಿದ ತೀರ್ಪಿನ ವಿರುದ್ಧ ವ್ಯಾಪಕ ಆಕ್ರೋಶ, ವಿರೋಧ, ಖಂಡನೆ ವ್ಯಕ್ತವಾಗಿದೆ. ಟಿಎಂಸಿ ಸಂಸದೆ ಜೂನ್ ಮಾಲಿಯಾ ಅವರು, “ದೇಶದಲ್ಲಿ ಮಹಿಳೆಯರನ್ನು ಸಂಪೂರ್ಣವಾಗಿ ಕಡೆಗಣಿಸುತ್ತಿರುವ ರೀತಿ ಅಸಹ್ಯಕರವಾಗಿದೆ. ಇದನ್ನು ನಾವು ಹೋಗಲಾಡಿಸಬೇಕು”ಎಂದು ಹೇಳಿದ್ದಾರೆ.
“ಈ ತೀರ್ಪು ತೀರಾ ದುರದೃಷ್ಟಕರ. ತೀರ್ಪಿನಲ್ಲಿ ಹೇಳಲಾಗಿರುವ ಸಾಲುಗಳನ್ನು ಕೇಳಿ ನನಗೆ ಆಘಾತವಾಗಿದೆ. ಇದು ತುಂಬಾ ನಾಚಿಕೆಗೇಡಿನ ಸನ್ನಿವೇಶ. ಆ ಪುರುಷರು ಮಾಡಿದ ಕೃತ್ಯವನ್ನು ಅತ್ಯಾಚಾರಕ್ಕೆ ಸಮಾನವಾದ ಕೃತ್ಯವೆಂದು ಪರಿಗಣಿಸಲು ಯಾಕೆ ಸಾಧ್ಯವಿಲ್ಲ? ಈ ತೀರ್ಪಿನ ಹಿಂದಿನ ತರ್ಕ ನನಗೆ ಅರ್ಥವಾಗುತ್ತಿಲ್ಲ. ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸುವ ಅಗತ್ಯವಿದೆ” ಎಂದು ಎಎಪಿ ಸಂಸದೆ ಸ್ವಾತಿ ಮಲಿವಾಲ್ ಹೇಳಿದ್ದಾರೆ.