ಕೃಷಿ ಕ್ಷೇತ್ರದಲ್ಲಿ ಮಹಿಳೆಯರ ಪಾತ್ರ ಪ್ರಮುಖವಾಗಿದೆ. ಹಾಗಾಗಿ ಕೃಷಿ ಅಭಿವೃದ್ಧಿ ಹೊಂದಲು ಸಾಧ್ಯವಾಗಿದೆ ಎಂದು ಆರ್ಟ್ ಆಫ್ ಲಿವಿಂಗ್ ಡಾ. ಬಿ ಎಂ ಗುರೂಜಿ ಹೇಳಿದರು.
ವಿಜಯಪುರ ನಗರದ ಹೊರವಲಯದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಕೃಷಿ ಸಖಿಯರಿಗೆ ಹಮ್ಮಿಕೊಂಡಿದ್ದ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮದಲ್ಲಿ ಮಾತನಾಡಿ, “ಬಿತ್ತನೆಯಿಂದ ಹಿಡಿದು ಕಟಾವಿನವರೆಗೆ ಮಹಿಳೆಯರೇ ಹೆಚ್ಚಿನ ಪಾತ್ರ ನಿರ್ವಹಿಸುತ್ತಿರುವುದನ್ನು ನಾವಿಂದು ಮನಗಾಣಬೇಕಾಗಿದೆ” ಎಂದು ಹೇಳಿದರು.
”ಕೃಷಿ ಚಟುವಟಿಕೆಗಳಲ್ಲಿ ಮಹಿಳೆಯರು ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಯಿಂದ ಹಿಡಿದು ಮಾರುಕಟ್ಟೆವರೆಗೆ ನಿರ್ವಹಿಸುತ್ತಾರೆ” ಎಂದು ಬಣ್ಣಿಸಿದರು.
ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಉಪ ನಿರ್ದೇಶ ಡಾ. ಬಾಲರಾಜ ಬಿರಾದಾರ ಮಾತನಾಡಿ, “ಕೃಷಿ ಸಖಿಯರು ನೈಸರ್ಗಿಕ ಕೃಷಿ, ಬೆಳೆ ಪರಿವರ್ತನೆ, ಕಡಿಮೆ ವೆಚ್ಚದ ಪರಿಕರ ತಯಾರಿಕೆ, ಎರೆಹುಳು ಕೃಷಿ, ಹೈನುಗಾರಿಕೆ ಮುಂತಾದ ಸುಸ್ಥಿರ ಕೃಷಿ ಪದ್ಧತಿ ಅಳವಡಿಸಿಕೊಳ್ಳಲು ತರಬೇತಿ ಪಡೆಯಬೇಕು” ಎಂದರು.
ಹಿರಿಯ ವಿಜ್ಞಾನಿ ಡಾ. ಎಸ್ ಎಂ ವಸ್ತ್ರದ ಪ್ರಾಸ್ತಾವಿಕವಾಗಿ ಮಾತನಾಡಿ, ”ಸ್ವಸಹಾಯ ಗುಂಪಿನ ತೋಟಗಾರಿಕೆ, ರೇಷ್ಮೆ, ಪಶುಸಂಗೋಪನೆ, ಮೀನುಗಾರಿಕೆ ಮಾಹಿತಿ ನೀಡಲಾಗುತ್ತಿದೆ” ಎಂದು ತಿಳಿಸಿದರು.
ಸಹ ವಿಸ್ತರಣಾ ನಿರ್ದೇಶಕ ಡಾ.ರವೀಂದ್ರ ಬೆಳ್ಳಿ ಅಧ್ಯಕ್ಷತೆ ವಹಿಸಿ ಮಾತನಾಡಿ, “ಕೃಷಿ ಸಖಿಯರು 6ದಿನಗಳ ತರಬೇತಿ ನಂತರ ಸಂಪನ್ಮೂಲ ವ್ಯಕ್ತಿಗಳಾಗಿ ತಮ್ಮ ವ್ಯಾಪ್ತಿಯ ರೈತರು/ರೈತ ಮಹಿಳೆಯರಿಗೆ ತರಬೇತಿ ನೀಡಬೇಕು” ಎಂದು ಸೂಚಿಸಿದರು.
ಈ ಸುದ್ದಿ ಓದಿದ್ದೀರಾ? ಮಲ್ಪೆ ಮಹಿಳೆ ಮೇಲೆ ಹಲ್ಲೆ; ಘಟನೆ ಬಗ್ಗೆ ಸಂತ್ರಸ್ತೆ ಹೇಳಿದ್ದೇನು?
“ತರಬೇತಿಯಲ್ಲಿ ತಾವು ಪಡೆದ ತಾಂತ್ರಿಕ ಜ್ಞಾನದಿಂದ ಉದ್ಯಮಶಿಲರಾಗಿ, ಗ್ರಾಮದಲ್ಲಿ ಸ್ವಸಹಾಯ ಸಂಘಗಳಿಗೆ ಮಾರ್ಗದರ್ಶನ ಮಾಡಬೇಕು. ಬೆಳೆ ಬೆಳೆಯುವುದರಿಂದ ಹಿಡಿದು ಸಂಸ್ಕರಣೆ, ಮೌಲ್ಯವರ್ಧನೆ ಮತ್ತು ಮಾರುಕಟ್ಟೆ ಹಂತದವರೆಗೆ ಮಧ್ಯವರ್ತಿಗಳ ಹಾವಳಿ ತಪ್ಪಿಸಬೇಕು. ರೈತರ ಆರ್ಥಿಕ ಅಭಿವೃದ್ಧಿಗೆ ಸಹಕರಿಸಬೇಕು” ಎಂದರು.
ಡಾ. ಶಿಲ್ಪಾ ಚೋಗಟಪುರ, ಡಾ. ಕಿರಣ ಸಾಗರ, ಡಾ. ಶಿವರಾಜ ಕಾಂಬಳೆ, ಶ್ರೀಶೈಲ ರಾಠೋಡ, ನಿಂಗಣ್ಣ ಮಸೊತಿ, ಚಂದ್ರಶೇಖರ ಸಿಂದೋರು, ಅನಿತಾ ಪಾಟೀಲ ಹಾಗೂ ಸಿಂದಗಿ, ದೇವರ ಹಿಪ್ಪರಗಿ, ಬಸವನ ಬಾಗೇವಾಡಿ ಭಾಗದ ಕೃಷಿ ಸಖಿಯರು ಇದ್ದರು.