ಪತ್ರಕರ್ತರ ನಕಲಿ ಐಡಿ ಕಾರ್ಡ್ ದುರ್ಬಳಕೆ ಮಾಡುವ ಹಾಗೂ ಮೀಡಿಯಾ ನಕಲಿ ಸ್ಟಿಕ್ಕರ್ ಅಳವಡಿಸಿಕೊಂಡಿರುವ ವಾಹನಗಳನ್ನು ಪತ್ತೆ ಹಚ್ಚುವಂತೆ ಮಂಗಳೂರು ಸಂಚಾರಿ ಪೊಲೀಸರಿಗೆ ಕಮಿಷನರ್ ಅನುಪಮ್ ಅಗರ್ವಾಲ್ ಸೂಚಿಸಿದರು.
ನಕಲಿ ಪತ್ರಕರ್ತರಿಗೆ ಕಡಿವಾಣ ಹಾಕುವಂತೆ ಹಾಗೂ ಕರ್ತವ್ಯ ನಿರ್ವಹಿಸುವ ಸಂದರ್ಭ ಪತ್ರಕರ್ತರಿಗೆ ಭದ್ರತೆ ಖಾತ್ರಿ ಪಡಿಸುವಂತೆ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಮನವಿಗೆ ಸ್ಪಂದಿಸಿ ಶೀಘ್ರ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಇತ್ತೀಚಿನ ದಿನಗಳಲ್ಲಿ ಮಾಧ್ಯಮ ಐಡಿ ಕಾರ್ಡ್ ದುರ್ಬಳಕೆ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿವೆ. ಗುರುವಾರ ರಾತ್ರಿ ಕೊಡಿಯಾಲ್ ಬೈಲ್ ಬಳಿ ನಡೆದ ಸರಣಿ ಅಪಘಾತದ ಪ್ರಕರಣದಲ್ಲಿ ಮಾಧ್ಯಮ ಹೆಸರು ದುರ್ಬಳಕೆ ಮಾಡಿರುವುದಲ್ಲದೇ ಸ್ಥಳದಲ್ಲಿ ನಕಲಿ ಐಡಿ ಕಾರ್ಡ್ ಪತ್ತೆಯಾಗಿದೆ. ಜತೆಗೆ ಹಲವಾರು ವಾಹನಗಳಲ್ಲಿ ಮೀಡಿಯಾ ಹಾಗೂ ಪ್ರೆಸ್ ಸ್ಟಿಕರ್ ಬಳಸುತ್ತಿರುವುದು ಕಂಡು ಬರುತ್ತಿದೆ. ಈ ರೀತಿ ಕಾನೂನು ಬಾಹಿರ ಕೃತ್ಯ ನಡೆಸುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಇದನ್ನೂ ಓದಿ: ಮಂಗಳೂರು | ಮಹಾನಗರ ಪಾಲಿಕೆಯ ಮಾಜಿ ಉಪ ಮೇಯರ್ ಮುಹಮ್ಮದ್ ಕುಂಜತ್ತಬೈಲ್ ನಿಧನ
ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ, ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ, ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ, ಉಪಾಧ್ಯಕ್ಷ ಭಾಸ್ಕರ ರೈ ಕಟ್ಟ, ಪ್ರೆಸ್ ಕ್ಲಬ್ ಉಪಾಧ್ಯಕ್ಷ ಮುಹಮ್ಮದ್ ಆರೀಫ್ ಪಡುಬಿದ್ರಿ, ಕಾರ್ಯಕಾರಿ ಸಮಿತಿ ಸದಸ್ಯರಾದ ಸುಖಪಾಲ್ ಪೊಳಲಿ, ರಾಜೇಶ್ ದಡ್ಡಂಗಡಿ, ಸದಸ್ಯರಾದ ಪ್ರಸನ್ನ ಪೂಜಾರಿ, ಶಶಿಕಾಂತ್ ಜೆ., ಸಂದೀಪ್ ಕುಮಾರ್ ಇದ್ದರು.