ಮೀನು ಕದ್ದ ಆರೋಪದ ಮೇಲೆ ಮಲ್ಪೆ ಮಹಿಳೆ ಮೇಲೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆ ಲಕ್ಕೀಬಾಯಿ ಮೊದಲ ಬಾರಿ ಪ್ರತಿಕ್ರಿಯೆ ನೀಡಿದ್ದು, ʼನಾನು ಸ್ವಲ್ಪ ಮೀನು ತೆಗೆದಿದ್ದೆ. ಅದಕ್ಕೆ ಮೀನು ಕದ್ದಿದ್ದು ಎಂದು ಹೇಳಿ ಅವರೆಲ್ಲ ಹೊಡೆದರು. ನನಗೆ ಅವರ ಮೇಲೆ ಏನೂ ದ್ವೇಷವಿಲ್ಲ. ಅವರಿಗೆ ನನ್ನ ಮೇಲೆ ದ್ವೇಷವಿಲ್ಲ. ಅವರನ್ನು ಬಂದರಿನಲ್ಲಿ ನಾನು ನೋಡಿ ಪರಿಚಯವಿದೆʼ ಎಂದು ಹೇಳಿದರು.
ಸಂತ್ರಸ್ತೆ ಸುದ್ದಿಗಾರರೊಂದಿಗೆ ಮಾತನಾಡಿದ್ದು, “ನಾನು ಮಲ್ಪೆಯಲ್ಲಿ ಆರೇಳು ವರ್ಷದಿಂದ ಕೆಲಸ ಮಾಡುತ್ತಿದ್ದೇನೆ. ಯಾರಿಗೆ ಏನೂ ಶಿಕ್ಷೆ ಕೊಡುವುದು ಬೇಡ. ಅವರ ಪಾಡಿಗೆ ಅವರು ನಮ್ಮ ಪಾಡಿಗೆ ನಾವು ಇರುತ್ತೇವೆ. ಈ ಘಟನೆಯಾದ ಮೇಲೆ ನಾನು ಬಂದರಿಗೆ ಹೋಗಿಲ್ಲ. ಮೊನ್ನೆಯ ಘಟನೆ ಬಗ್ಗೆ ಹೇಳಲು ಏನೂ ಇಲ್ಲ” ಎಂದು ಹೇಳಿದರು.
“ಅವರು ಮೇಲಿಂದಲೇ ಕಂಪ್ಲೇಂಟ್ ಕೊಡಲು ಹೇಳಿ, ಕಂಪ್ಲೇಂಟ್ ಕೊಡಲು ಬನ್ನಿ ಎಂದು ಕರೆದುಕೊಂಡು ಹೋದರು. ಅವರು ಹೇಳಿದ್ದಕ್ಕೆ ನಾನು ಸಹಿ ಮಾಡಿದ್ದೇನೆ ಅಷ್ಟೇ. ಘಟನೆಯಾದ ರಾತ್ರಿಯೇ ರಾಜಿ ಮಾಡಿಕೊಂಡಿದ್ದೇವೆ. ಕೇಸ್ ಮಾಡುವುದು ಬೇಡವೆಂದು ಮಾತನಾಡಿ ಬಂದಿದ್ದೆವು. ಆಮೇಲೆ ಮೇಲಿಂದ ಇದು ಆಯ್ತು” ಎಂದು ಹೇಳಿದರು.
“ಯಾರಿಗೂ ಶಿಕ್ಷೆ ಆಗೋದು ಬೇಡ ಅವರ ಪಾಡಿಗೆ ಅವರು ನಮ್ಮ ಪಾಡಿಗೆ ನಾವು ದುಡಿದು ತಿನ್ನುತ್ತೇವೆ. ಇನ್ನು ಇಲ್ಲಿ ಕೆಲಸ ಮಾಡೋದು ಕಷ್ಟ ಊರಿಗೆ ಹೋಗುತ್ತೇನೆ. ಮೀನುಗಾರರು ನನಗೆ ಸಹಾಯ ಮಾಡಿದ್ದಾರೆ. ಈಗ ಇರೋಕೆ ಒಂಥರಾ ಮುಜುಗರವಾಗುತ್ತದೆ. ಅದುಬಿಟ್ಟರೆ ನನಗೆ ಬೇರೆ ಏನೂ ತೊಂದರೆ ಕೊಟ್ಟಿಲ್ಲ. ಸ್ವಲ್ಪ ಮೀನು ತೆಗೆದದ್ದು ಹೌದು. ಬಂದರಿನಲ್ಲಿ ಆ ಥರ ತೆಗೆಯೋದು ಸಹಜ. ಎಲ್ಲರೂ ಹಾಗೆ ಮಾಡುತ್ತಾರೆ. ಆಗರೆ ಆವತ್ತು ಏನೋ ನನ್ನ ಗ್ರಹಚಾರ ಸರಿ ಇರಲಿಲ್ಲ. ಏನೂ ಮಾಡೋಕೆ ಆಗಲ್ಲ” ಎಂದು ಹೇಳಿದರು.
ಕರಾವಳಿ ಭಾಗದಲ್ಲಿ ಈ ಹಿಂದೆ ವಿದ್ಯಾರ್ಥಿಯೊಬ್ಬ ಕಾಣೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ಬಿಜೆಪಿ ಶಾಸಕರು ಇದನ್ನು ಮತೀಯ ಬಣ್ಣಕ್ಕೆ ತಿರುಗಿಸಿ, ಸರ್ಕಾರದ ವಿರುದ್ಧ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರು. ಆತನ ನಿಗೂಢ ನಾಪತ್ತೆ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿತ್ತು. ಮಂಗಳೂರಿನ ಫರಂಗಿಪೇಟೆಯ ಅಂಗಡಿ ಮುಂಗಟ್ಟನ್ನು ಬಂದ್ ಮಾಡಬೇಕೆಂದು ಹಿಂದುತ್ವ ಸಂಘಟನೆಗಳು ಕರೆ ಕೊಟ್ಟಿದ್ದವು. ಎಲ್ಲರೂ ಜಾತಿ ಧರ್ಮವೆನ್ನದೆ ಅಂಗಡಿ ಮುಂಗಟ್ಟನ್ನು ಬಂದ್ ಮಾಡಿ ಪ್ರತಿಭಟನೆಗೆ ಬೆಂಬಲ ನೀಡಿದ್ದರು. ಮುಸ್ಲಿಮರು ಹೆಚ್ಚಾಗಿರುವ ಫರಂಗಿಪೇಟೆಗೆ ಕೋಮು ಬಣ್ಣ ಹಚ್ಚಲು ಹಾಗೂ ಇಡೀ ಊರಿಗೆ ಕ್ರಿಮಿನಲ್ ಹಣೆಪಟ್ಟಿ ಕಟ್ಟಲು ಮುಂದಾಗಿದ್ದ ಬಿಜೆಪಿ ಹಾಗೂ ಸಂಘ ಪರಿವಾರದ ನಾಯಕರು ಪ್ರಚೋದನಕಾರಿ ಹೇಳಿಕೆಗಳನ್ನೂ ಕೊಟ್ಟಿದ್ದರು.
ಈ ಸುದ್ದಿ ಓದಿದ್ದೀರಾ? ಉಡುಪಿ | ದಲಿತ ಮಹಿಳೆ ಮೇಲೆ ಹಲ್ಲೆ ಪ್ರಕರಣ: ಇಬ್ಬರು ಪೊಲೀಸರು ಅಮಾನತು
ಪೊಲೀಸ್ ಇಲಾಖೆಗೆ ಎಲ್ಲ ಸಂಘಟನೆಯವರು ಸೇರಿಕೊಂಡು ಒಂದು ದಿನಾಂಕ ಹೇಳಿದ್ದೇವೆ. ಯುವಕನ ಸುಳಿವನ್ನು ಪತ್ತೆಹಚ್ಚಬೇಕು, ಇಲ್ಲದಿದ್ದರೆ ಮುಂದಿನ ದಿನದಲ್ಲಿ ಇಡೀ ರಾಜ್ಯವ್ಯಾಪಿ ನಾವು ರಸ್ತೆಗಿಳಿದು ಹೋರಾಟ ಮಾಡಬೇಕಾಗುತ್ತದೆಂದು ಶಾಸಕ ಹರೀಶ್ ಪೂಂಜಾ ಪೊಲೀಸರನ್ನು ಬೆದರಿಸಿದ್ದರು.
ಇದೀಗ ಮಲ್ಪೆಯಲ್ಲಿ ಮೀನು ಕದ್ದ ಆರೋಪದ ಮೇಲೆ ಮಹಿಳೆಯನ್ನು ಮರಕ್ಕೆ ಕಟ್ಟಿ ಹಲ್ಲೆ ಮಾಡಿ, ಅವಮಾನಿಸಿದರೂ ಕೂಡ ಅಲ್ಲಿಯ ಯಾವುದೇ ಜನಪ್ರತಿನಿಧಿಗಳಾಗಲೀ ಸಂಘಪರಿವಾರದವರಾಗಲಿ, ಬಿಜೆಪಿ ಮುಖಂಡರಾಗಲಿ ಆ ಕುರಿತು ಯಾವುದೇ ಚಕಾರವೆತ್ತಿಲ್ಲ. ʼಬೇಟಿ ಬಚಾವೋ, ಬೇಟಿ ಪಡಾವೋʼ ಎಂದು ಪುಂಗುವ ಬಿಜೆಪಿಗರು, ಮೀನು ಕದ್ದ ಆರೋಪದ ಮೇಲೆ ಮಲ್ಪೆಯಲ್ಲಿ ದಲಿತ ಮಹಿಳೆಯನ್ನು ಮರಕ್ಕೆ ಕಟ್ಟಿ ಹಲ್ಲೆ ಮಾಡಿರುವುದಕ್ಕೆ ಸಂಬಂಧಿಸಿದಂತೆ ಬೀದಿಗಿಳಿಯುವುದಿರಲಿ, ನಾಲಿಗೆಯನ್ನು ಹೊರಚಾಚಲು ತುಟಿಗಳನ್ನೂ ಬಿಚ್ಚುತ್ತಿಲ್ಲ.