ಗೋಕುಲ ಶಾಲೆ | ಮಕ್ಕಳ ಸಂಖ್ಯೆ, ದಾಖಲಾತಿ ಎಲ್ಲವೂ ಬೋಗಸ್‌; 2021ರಲ್ಲೇ ಬಿಇಒಗೆ ವರದಿ ನೀಡಿದ್ದ ಕ್ಷೇತ್ರ ಸಮನ್ವಯಾಧಿಕಾರಿ

Date:

Advertisements

2020-21ರಲ್ಲಿಯೇ ಕ್ಷೇತ್ರ ಸಮನ್ವಯಾಧಿಕಾರಿಗಳು ಕ್ಷೇತ್ರ ಶಿಕ್ಷಣಾಧಿಕಾರಿಗೆ ಸಲ್ಲಿಸಿದ ವರದಿ ಈ ದಿನ.ಕಾಂಗೆ ಲಭ್ಯವಾಗಿದೆ. ಅದರಲ್ಲಿ ಗೋಕುಲ ಹಿರಿಯ ಪ್ರಾಥಮಿಕ ಶಾಲೆ, ಕಿರುಗಾವಲು ಹಾಗೂ ಗೋಕುಲ ಹಿರಿಯ ಪ್ರಾಥಮಿಕ ಶಾಲೆ, ಟಿ.ಕಾಗೇಪುರ ಇಲ್ಲಿಗೆ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ 129 ವಿದ್ಯಾರ್ಥಿಗಳು ದಾಖಲಾಗಿರುತ್ತಾರೆಂದು ಎಸ್.ಎ.ಟಿ.ಎಸ್ ಸುಳ್ಳು ಮಾಹಿತಿಯನ್ನು ನಮೂದಿಸಿದ್ದಾರೆ ಎಂದು ಸ್ಪಷ್ಟವಾಗಿ ಬರೆದಿದ್ದಾರೆ. ಆದರೆ ಯಾವುದೇ ಕ್ರಮ ಜರುಗಿಸಿಲ್ಲ

ಮಳವಳ್ಳಿಯ ಲಂಕೇಶ್‌ ಅವರಿಗೆ ಸೇರಿದ ಕಿರುಗಾವಲುನಲ್ಲಿರುವ ಗೋಕುಲ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಟಿ ಕಾಗೇಪುರದಲ್ಲಿರುವ ಗೋಕುಲ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಗೆ ತೋರಿಸುವ ಉದ್ದೇಶದಿಂದ ಸುಳ್ಳು ಮಾಹಿತಿ ನೀಡಲಾಗಿದೆ ಎಂದು 2021ರಲ್ಲಿಯೇ ಮಳವಳ್ಳಿ ತಾಲ್ಲೂಕು ಕ್ಷೇತ್ರ ಸಮನ್ವಯಾಧಿಕಾರಿಗಳು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ದಾಖಲೆಗಳ ಸಹಿತ ವರದಿ ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ತಿಳಿದುಬಂದಿದೆ.

ಕ್ಷೇತ್ರ ಸಮನ್ವಯಾಧಿಕಾರಿಗಳು ಸಲ್ಲಿಸಿದ ವರದಿ ಈ ದಿನ.ಕಾಂಗೆ ಲಭ್ಯವಾಗಿದೆ. ಅದರಲ್ಲಿ ಗೋಕುಲ ಹಿರಿಯ ಪ್ರಾಥಮಿಕ ಶಾಲೆ, ಕಿರುಗಾವಲು ಹಾಗೂ ಗೋಕುಲ ಹಿರಿಯ ಪ್ರಾಥಮಿಕ ಶಾಲೆ, ಟಿ.ಕಾಗೇಪುರ ಇಲ್ಲಿಗೆ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ 129 ವಿದ್ಯಾರ್ಥಿಗಳು ದಾಖಲಾಗಿರುತ್ತಾರೆಂದು ಎಸ್.ಎ.ಟಿ.ಎಸ್ ಸುಳ್ಳು ಮಾಹಿತಿಯನ್ನು ನಮೂದಿಸಿದ್ದಾರೆ ಎಂಬ ವಿಚಾರವನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಆ ವರದಿಯ ಪೂರ್ಣಪಾಠ ಹೀಗಿದೆ.

Advertisements

ಪ್ರಕರಣ (1) : ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಪೋಷಕರ ಮನವಿಯ ಮೇರೆಗೆ ಅನುದಾನ ರಹಿತ ಶಾಲೆಯಿಂದ ಸರ್ಕಾರಿ ಶಾಲೆಗೆ ದಾಖಲಾಗಿರುವ ವಿದ್ಯಾರ್ಥಿಗಳ ವರ್ಗಾವಣೆ ಪ್ರಮಾಣ ಪತ್ರವನ್ನು ಮುಖ್ಯ ಶಿಕ್ಷಕರ ಕೋರಿಕೆಯ ಮೇರೆಗೆ ಬ್ಲಾಕ್ ಎಸ್ ಎ ಟಿ ಎಸ್ ಲಾಗಿನ್ ನಲ್ಲಿ ವಿದ್ಯಾರ್ಥಿ ದಾಖಲಾಗಿರುವ ಶಾಲೆಗೆ ವರ್ಗಾಯಿಸುವ ಸಂದರ್ಭದಲ್ಲಿ ಗೋಕುಲ ಹಿರಿಯ ಪ್ರಾಥಮಿಕ ಶಾಲೆ, ಟಿ.ಕಾಗೇಪುರ ಇಲ್ಲಿಂದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಬಸವನಪುರ ಇಲ್ಲಿಗೆ 3ನೇ ತರಗತಿಗೆ ನಾಗೇಂದ್ರ ಎ ಎಂಬ ವಿದ್ಯಾರ್ಥಿ ದಾಖಲಾಗಿದ್ದು, ಈ ವಿದ್ಯಾರ್ಥಿಯ ವರ್ಗಾವಣೆ ಪ್ರಮಾಣ ಪತ್ರವನ್ನು ಬ್ಲಾಕ್ ಎಸ್ ಎ ಟಿ ಎಸ್ ಲಾಗಿನ್ ನಲ್ಲಿ ಗೋಕುಲ ಹಿರಿಯ ಪ್ರಾಥಮಿಕ ಶಾಲೆ, ಟಿ.ಕಾಗೇಪುರದಿಂದ ವರ್ಗಾಯಿಸಲು ಪರಿಶೀಲಿಸಿದಾಗ ಈ ವಿದ್ಯಾರ್ಥಿಯ ಮಾಹಿತಿ ಗೋಕುಲ ಹಿರಿಯ ಪ್ರಾಥಮಿಕ ಶಾಲೆ, ಕಿರುಗಾವಲು ಇಲ್ಲಿ ದಾಖಲಾಗಿರುವ ಮಾಹಿತಿ ಲಭ್ಯವಿರುತ್ತದೆ.

ಪ್ರಕರಣ (2) : ಸ.ಹಿ.ಪ್ರಾ.ಶಾಲೆ ಅಪ್ಪುಗೌಡನಹಳ್ಳಿ ಇಲ್ಲಿಯ ಮುಖ್ಯ ಶಿಕ್ಷಕರು ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಗೆ ಪತ್ರ ವ್ಯವಹಾರ ಮಾಡಿ ಕಳೆದ ಶೈಕ್ಷಣಿಕ ವರ್ಷದಲ್ಲಿ ಗೋಕುಲ ಹಿರಿಯ ಪ್ರಾಥಮಿಕ ಶಾಲೆ, ಟಿ.ಕಾಗೇಪುರ ಇಲ್ಲಿ ದೀಪ್ತಿ ಕೆ.ಆರ್, 2ನೇ ತರಗತಿ, ಕುಶಲ್ ಗೌಡ 3ನೇ ತರಗತಿ ಈ ಇಬ್ಬರು ವಿದ್ಯಾರ್ಥಿಗಳು ವ್ಯಾಸಂಗ ಮಾಡಿದ್ದು, ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಸ.ಹಿ.ಪ್ರಾ.ಶಾಲೆ ಅಪ್ಪುಗೌಡನಹಳ್ಳಿಗೆ ದಾಖಲಾಗಿದ್ದು, ಈ ವಿದ್ಯಾರ್ಥಿಗಳ ವರ್ಗಾವಣೆ ಪ್ರಮಾಣ ಪತ್ರವನ್ನು ನೀಡುವಂತೆ ಕೋರಿದುದರಿಂದ ಬ್ಲಾಕ್ ಎಸ್ ಎ ಟಿ ಎಸ್ ಲಾಗಿನ್ ನಲ್ಲಿ ಗೋಕುಲ ಹಿರಿಯ ಪ್ರಾಥಮಿಕ ಶಾಲೆ, ಟಿ.ಕಾಗೇಪುರ ವರ್ಗಾಯಿಸಲು ಪರಿಶೀಲಿಸಿದಾಗ ಈ ವಿದ್ಯಾರ್ಥಿಗಳ ಮಾಹಿತಿಯೂ ಸಹ ಗೋಕುಲ ಹಿರಿಯ ಪ್ರಾಥಮಿಕ ಶಾಲೆ, ಕಿರುಗಾವಲಿನಲ್ಲಿ ದಾಖಲಾಗಿರುವ ಬಗ್ಗೆ ಮಾಹಿತಿ ಸಿಕ್ಕಿರುತ್ತದೆ.

ಈ ಮೇಲ್ಕಂಡ 2 ಪ್ರಕರಣಗಳಿಂದ ಅನುಮಾನಗೊಂಡು ಗೋಕುಲ ಹಿ.ಪ್ರಾ.ಶಾಲೆ ಕಿರುಗಾವಲು ಹಾಗೂ ಗೋಕುಲ ಹಿ.ಪ್ರಾ.ಶಾಲೆ ಟಿ.ಕಾಗೇಪುರದ ಕಳೆದ 2 ವರ್ಷದ ದಾಖಲಾತಿಯನ್ನು ಪರಿಶೀಲಿಸಿದಾಗ, ಕಿರುಗಾವಲುಗೋಕುಲ ಹಿ.ಪ್ರಾ.ಶಾಲೆ ಕಿರುಗಾವಲು (ಕ್ಲಸ್ಟರ್‌ ಸಂಖ್ಯೆ 29220309505) 2020-21ರಲ್ಲಿ 90 ಮಕ್ಕಳು, 2021-22ರಲ್ಲಿ 195 ಮಕ್ಕಳು ಹಾಗೂ ಟಿ.ಕಾಗೇಪುರ ಗೋಕುಲ ಹಿ.ಪ್ರಾ.ಶಾಲೆ (ಕ್ಲಸ್ಟರ್‌ ಸಂಖ್ಯೆ 29220321602) 2021-22ರಲ್ಲಿ 239 ಮತ್ತು 2021-22ರಲ್ಲಿ 257 ವಿದ್ಯಾರ್ಥಿಗಳು ಇರುವುದಾಗಿ ದಾಖಲೆಗಳು ತೋರಿಸುತ್ತಿವೆ.

೧೧೧೧೧೧ 1

ಈ ಮೇಲ್ಕಂಡ ಸಂಖ್ಯೆ ಬ್ಲಾಕ್ ಎಸ್ ಎ ಟಿ ಎಸ್ ಲಾಗಿನ್ ನಲ್ಲಿ ಲಭ್ಯವಿದ್ದು, ಕೋವಿಡ್-19 ರ ಸಂದರ್ಭದಲ್ಲಿಯೂ ಶಾಲೆಯನ್ನು ವಾರದಲ್ಲಿ 03 ದಿನ ಮಾತ್ರ ತೆರೆಯುವುದಾಗಿ ನೋಟಿಸ್ ಬೋರ್ಡಿನಲ್ಲಿ ಹಾಕಿದ್ದಾಗಿಯೂ, ಗೋಕುಲ ಹಿ.ಪ್ರಾ.ಶಾಲೆ ಕಿರುಗಾವಲು ಇಲ್ಲಿ ಯಾವುದೇ ರೀತಿಯ ಕನಿಷ್ಠ ಮೂಲಭೂತ ಸೌಲಭ್ಯಗಳು ಇಲ್ಲದ ಶಾಲೆಗೆ ಏಕಕಾಲದಲ್ಲಿ 105 ವಿದ್ಯಾರ್ಥಿಗಳು ಹೇಗೆ ಸಾಧ್ಯ? ಎಂದು ಅನುಮಾನಗೊಂಡು ಬ್ಲಾಕ್ ಎಸ್.ಎ.ಟಿ.ಎಸ್.ಲಾಗಿನ್ ನಲ್ಲಿ ಈ 2 ಶಾಲೆಗೆ ಕಳೆದ ಶೈಕ್ಷಣಿಕ ವರ್ಷದಿಂದ ಇಲ್ಲಿಯವರೆಗೆ ಯಾವ ಯಾವ ಶಾಲೆಯಿಂದ ವಿದ್ಯಾರ್ಥಿಗಳು ದಾಖಲಾಗಿದ್ದಾರೆ ಎಂದು ಪರಿಶೀಲಿಸಿದಾಗ ಶ್ರೀ ಭೈರವೇಶ್ವರ ಹಿ.ಪ್ರಾ.ಶಾಲೆ ಬೆಳಗೊಳ ಶ್ರೀರಂಗಪಟ್ಟಣ ತಾಲ್ಲೂಕು, ಮಂಡ್ಯ ಜಿಲ್ಲೆ. ಇಲ್ಲಿಂದ ದಿನಾಂಕ : 26.03.2021 ರಂದು 59 ವಿದ್ಯಾರ್ಥಿಗಳು, ಇಂದಿರಾ ಕಾನ್ವೆಂಟ್ ಹಿ.ಪ್ರಾ.ಶಾಲೆ, ಮಂಡ್ಯ ದಕ್ಷಿಣ ವಲಯ ಇಲ್ಲಿಂದ ದಿನಾಂಕ : 23.03.2021 ರಂದು 35 ವಿದ್ಯಾರ್ಥಿಗಳು, ಗೋಕುಲ ಹಿ.ಪ್ರಾ.ಶಾಲೆ ಕಿರುಗಾವಲು ಇಲ್ಲಿ 2020-21ನೇ ಸಾಲಿನಲ್ಲಿ 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ 05 ವಿದ್ಯಾರ್ಥಿಗಳು, 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಒಂದು ವಿದ್ಯಾರ್ಥಿ ಒಟ್ಟು 100 ವಿದ್ಯಾರ್ಥಿಗಳು ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಗೋಕುಲ ಹಿ.ಪ್ರಾ.ಶಾಲೆ ಟಿ.ಕಾಗೇಪುರ ಇಲ್ಲಿಗೆ ದಾಖಲಾಗಿರುತ್ತಾರೆ.

ಇಂದಿರಾ ಕಾನ್ವೆಂಟ್ ಹಿ.ಪ್ರಾ.ಶಾಲೆ, ಮಂಡ್ಯ ದಕ್ಷಿಣ ವಲಯ ಇಲ್ಲಿಂದ ದಿನಾಂಕ : 30.03.2021 ರಂದು 18 ವಿದ್ಯಾರ್ಥಿಗಳು, ಶ್ರೀ ಭೈರವೇಶ್ವರ ಹಿ.ಪ್ರಾ.ಶಾಲೆ ಬೆಳಗೊಳ ಶ್ರೀರಂಗಪಟ್ಟಣ ತಾಲ್ಲೂಕು, ಮಂಡ್ಯ ಜಿಲ್ಲೆ. ಇಲ್ಲಿಂದ ದಿನಾಂಕ : 30.03.2021 ರಂದು 17 ವಿದ್ಯಾರ್ಥಿಗಳು, ಗೋಕುಲ ಹಿರಿಯ ಪ್ರಾಥಮಿಕ ಶಾಲೆ. ಟಿ.ಕಾಗೇಪುರದಿಂದ ಮಾರ್ಚಿನಿಂದ ಇಲ್ಲಿಯವರೆಗೆ 107 ವಿದ್ಯಾರ್ಥಿಗಳು ಒಟ್ಟು 132 ವಿದ್ಯಾರ್ಥಿಗಳು ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಗೋಕುಲ ಹಿರಿಯ ಪ್ರಾಥಮಿಕ ಶಾಲೆ, ಕಿರುಗಾವಲು ಇಲ್ಲಿಗೆ ದಾಖಲಾಗಿರುತ್ತಾರೆ.

ಇದನ್ನೂ ಓದಿ ಗೋಕುಲ ಶಾಲೆ | ʼಉಳಿದ ಆಹಾರ ಕಳಿಸಿಕೊಡಿʼ ಎಂದು ಬಹಿರಂಗ ಬೇಡಿಕೆ ಇಟ್ಟಿದ್ದ ಮುಖ್ಯಸ್ಥ ಲಂಕೇಶ್‌

ಈ ಮೇಲ್ಕಂಡ ಮಾಹಿತಿಯ ಆಧಾರದ ಮೇಲೆ ಶ್ರೀರಂಗಪಟ್ಟಣ ತಾಲ್ಲೂಕು ಹಾಗೂ ದಕ್ಷಿಣ ವಲಯ ಮಂಡ್ಯ ಇಲ್ಲಿಂದ ವಿದ್ಯಾರ್ಥಿಗಳು ಈ ಎರಡು ಶಾಲೆಗೆ ದಾಖಲಾಗಲು ಹೇಗೆ ಸಾಧ್ಯ? ಟಿ.ಕಾಗೇಪುರ ವ್ಯಾಪ್ತಿಯಲ್ಲಿ ಹಲವಾರು ಸರ್ಕಾರಿ, ಖಾಸಗಿ ಶಾಲೆಗಳಿದ್ದರು 107 ವಿದ್ಯಾರ್ಥಿಗಳು ಸುಮಾರು 20 ಕಿ.ಮೀ ದೂರದಲ್ಲಿರುವ ಯಾವುದೇ ಕನಿಷ್ಟ ಮೂಲಭೂತ ಸೌಲಭ್ಯವಿಲ್ಲದ ಗೋಕುಲ ಹಿ.ಪ್ರಾ.ಶಾಲೆ ಕಿರುಗಾವಲು ಇಲ್ಲಿಗೆ ದಾಖಲಾಗಲು ಹೇಗೆ ಸಾಧ್ಯ ಎಂದು ಸಂಶಯಗೊಂಡು ಈ 02 ಶಾಲೆಯ ಶೈಕ್ಷಣಿಕ ಜವಾಬ್ದಾರಿ ನಿರ್ವಹಿಸುತ್ತಿರುವ ಶ್ರೀ ಲಂಕೇಶ್ ರವರ ದೂರವಾಣಿ ಸಂಖ್ಯೆಗೆ ದಿನಾಂಕ:26.07.2021ರಂದು ದೂರವಾಣಿ ಕರೆಮಾಡಿ ಗೋಕುಲ ಹಿ.ಪ್ರಾ.ಶಾಲೆ ಕಿರುಗಾವಲು ಇಲ್ಲಿಗೆ ಭೇಟಿ ನೀಡಬೇಕಿದ್ದು, ಶಾಲೆಯಲ್ಲಿ ಮುಖ್ಯ ಶಿಕ್ಷಕರು ಲಭ್ಯವಿರುವರೇ ಎಂದು ಕೇಳಿದಾಗ ಲಂಕೇಶ್ ಅವರು ವಾರದಲ್ಲಿ 3 ದಿನಗಳು ಮಾತ್ರ ಗೋಕುಲ ಹಿ.ಪ್ರಾ.ಶಾಲೆಯನ್ನು ತೆರೆಯುತ್ತಿದ್ದು, ಮುಖ್ಯ ಶಿಕ್ಷಕರು ಲಭ್ಯವಿಲ್ಲ, ಈ ದಿನ ನಾನು ಹೊರಗಡೆ ಇರುವುದರಿಂದ ಶಾಲೆಗೆ ಹಾಜರಾಗಲು ಸಾಧ್ಯವಿಲ್ಲ ಎಂದು ತಿಳಿಸಿರುತ್ತಾರೆ. ದಿನಾಂಕ : 27.07.2021ರ ಬೆಳಿಗ್ಗೆ ನಾನು ಮತ್ತು ಕಿರುಗಾವಲು ಕ್ಲಸ್ಟರ್ ನ ಸಿ.ಆರ್.ಪಿರವರು ಗೋಕುಲ ಹಿ.ಪ್ರಾ.ಶಾಲೆ ಕಿರುಗಾವಲು ಇಲ್ಲಿಗೆ ಭೇಟಿ ನೀಡಲಿದ್ದು, ಮುಖ್ಯ ಶಿಕ್ಷಕರು ಹಾಜರಿರುವಂತೆ ತಿಳಿಸಿ ಎಂದು ಮಾಹಿತಿ ನೀಡಿರುತ್ತೇನೆ.

ದಿನಾಂಕ:27.07.2021 ರಂದು ಬೆಳಿಗ್ಗೆ ಗೋಕುಲ ಹಿ.ಪ್ರಾ.ಶಾಲೆ ಕಿರುಗಾವಲು ಇಲ್ಲಿಗೆ ಭೇಟಿ ನೀಡಿದಾಗ ಶ್ರೀ ರವಿಕುಮಾರ್ ಮತ್ತು ಶ್ರೀ ನಿರಂಜನ್ ಎಂಬ ಇಬ್ಬರು ಶಿಕ್ಷಕರು ಶಾಲೆಯಲ್ಲಿ ಹಾಜರಿದ್ದರು. ಶಾಲೆಯ ಹಾಜರಾತಿ ವಹಿಯನ್ನು ಪರಿಶೀಲಿಸಿದಾಗ ಶ್ರೀ ಟಿ.ಆರ್.ರವಿಕುಮಾರ್, ಶ್ರೀ ಪಿ.ನಿರಂಜನ, ಶ್ರೀಮತಿ ಕಾವ್ಯಶ್ರೀ ಕೆ.ಎಸ್. ಶ್ರೀಮತಿ ನಂದಿನಿ ಜಿ.ಆರ್. ಶ್ರೀಮತಿ ಅಜುಂ ಬಾನು, ಶ್ರೀಮತಿ ಸೌಮ್ಯ ಎನ್. ಶ್ರೀ ರಾಜು ಎಸ್.ಆರ್ ಈ 7 ಶಿಕ್ಷಕರ ಹೆಸರು ನಮೂದಾಗಿರುತ್ತದೆ. ಉಳಿದ ಶಿಕ್ಷಕರು ಗೈರು ಹಾಜರಾಗಿರುತ್ತಾರೆ. ಶಾಲೆಯ ಭೌತಿಕ ಸೌಲಭ್ಯಗಳಿಗೆ ಸಂಬಂಧಿಸಿದಂತೆ ಒಂದು ಮನೆಯೇ ಶಾಲೆಯಾಗಿದ್ದು, ಮನೆಯ ಹಾಲ್, 3 ರೂಮ್ ಗಳನ್ನು 4 ಕೊಠಡಿಗಳನ್ನಾಗಿ ಬದಲಾಯಿಸಿರುತ್ತಾರೆ ಹಾಗೂ ವಿದ್ಯಾರ್ಥಿಗಳು ಕುಳಿತುಕೊಳ್ಳಲು ಗಾಳಿ, ಬೆಳಕಿನ ವ್ಯವಸ್ಥೆ, ಆಸನದ ವ್ಯವಸ್ಥೆ ಇರುವುದಿಲ್ಲ. ಶೌಚಾಲಯ/ಮೂತ್ರಾಲಯ, ಆಟದ ಮೈದಾನದ ವ್ಯವಸ್ಥೆ ಕಲ್ಪಿಸಿರುವುದಿಲ್ಲ. ಹೊರಾಂಗಣದಲ್ಲಿ “ಶಾಲೆಯ ಕಛೇರಿಯು ಸೋಮವಾರ, ಬುಧವಾರ ಮತ್ತು ಶುಕ್ರವಾರದಂದು ತೆರೆದಿರುತ್ತದೆ” ದಯವಿಟ್ಟು ಈ ಮೂರು ದಿನದಂದು ಭೇಟಿ ನೀಡಬಹುದಾಗಿದೆ ಹೆಚ್ಚಿನ ಮಾಹಿತಿಗಾಗಿ “ಅಬ್ದುಲ್ ಸರ್ (9916989989) ನಂಬರ್ ಗೆ ಸಂಪರ್ಕಿಸಿ ಎಂದು ತೂಗು ಹಾಕಿರುತ್ತಾರೆ.

೨೨೨ 1

ಕಳೆದ ಹಾಗೂ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ದಾಖಲಾಗಿರುವ ವಿದ್ಯಾರ್ಥಿಗಳ ಮಾಹಿತಿಯನ್ನು ಪರಿಶೀಲಿಸಲು ದಾಖಲಾತಿ ವಹಿ, ವರ್ಗಾವಣೆ ಪ್ರಮಾಣ ಪತ್ರ, ನಿರ್ವಹಣಾ ವಹಿ ನೀಡುವಂತೆ ಕೇಳಿದಾಗ ಬೀರುವಿನ ಕೀ ಶ್ರೀ ಲಂಕೇಶ್ ರವರ ಬಳಿ ಇದೆ ಅವರು ಈ ದಿನ ಶಾಲೆಗೆ ಹಾಜರಿರುವುದಿಲ್ಲ ಎಂದು ಶ್ರೀ ರವಿಕುಮಾರ್ ಟಿ.ಆರ್ ರವರು ತಿಳಿಸಿರುತ್ತಾರೆ. ಹಾಜರಾತಿ ವಹಿಯಲ್ಲಿ ಮುಖ್ಯ ಶಿಕ್ಷಕರ ಹೆಸರು ನಮೂದಾಗಿರುವುದಿಲ್ಲ. ಈ ಶಾಲೆಯ ಮುಖ್ಯ ಶಿಕ್ಷಕರು ಯಾರು ಎಂಬುವ ಮಾಹಿತಿಯೇ ಲಭ್ಯವಿರುವುದಿಲ್ಲ.

ಟಿ.ಕಾಗೇಪುರ ಕ್ಲಸ್ಟರ್ ನ ಸಿಆರ್‌ಪಿಯವರಾದ ಶ್ರೀ ಮಧುಸೂಧನ್ ಎಂ ಎನ್ ಅವರಿಗೆ ದಿನಾಂಕ : 27.07.2021 ರಂದು ದೂರವಾಣಿ ಕರೆಮಾಡಿ ಗೋಕುಲ ಹಿ.ಪ್ರಾ.ಶಾಲೆ ಇಲ್ಲಿಗೆ ಭೇಟಿ ನೀಡಿ ಕಳೆದ ಮತ್ತು ಪ್ರಸಕ್ತ ಶೈಕ್ಷಣಿಕ ವರ್ಷದವರೆಗಿನ ದಾಖಲಾತಿ ಮತ್ತು ವರ್ಗಾವಣಾ ನಿರ್ವಹಣಾ ಮಾಹಿತಿಯನ್ನು ಪರಿಶೀಲಿಸುವಂತೆ ತಿಳಿಸಲಾಗಿತ್ತು. ಟಿ.ಕಾಗೇಪುರ ಕ್ಲಸ್ಟರ್ ನ ಸಿಆರ್ ಪಿ ರವರಾದ ಶ್ರೀ ಮದುಸೂಧನ್ ಎಂ ಎನ್ ರವರು ದಿನಾಂಕ : 27.07.2021 ರಂದು ಭೇಟಿ ನೀಡಿರುತ್ತಾರೆ. ಭೇಟಿ ನೀಡಿದ ಸಂದರ್ಭದಲ್ಲಿ ಕಳೆದ ಮತ್ತು ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಶಾಲೆಗೆ ದಾಖಲಾಗಿರುವ ವಿದ್ಯಾರ್ಥಿಗಳ ಮಾಹಿತಿ ನೀಡುವಂತೆ ಕೋರಿದಾಗ ಮುಖ್ಯ ಶಿಕ್ಷಕರಾದ ಶ್ರೀ ಲಂಕೇಶ್ ರವರು ರಜೆಯ ಮೇಲಿದ್ದು ಅವರ ಬಳಿಯೇ ಬೀರು ಕೀ ಇದ್ದು, ಈಗ ಯಾವುದೇ ದಾಖಲೆ ಲಭ್ಯವಿಲ್ಲವೆಂದು ಪ್ರಭಾರಿ ಮುಖ್ಯ ಶಿಕ್ಷಕರಾದ ಶ್ರೀ ಸುಂದ್ರಮ್ಮರವರು ತಿಳಿಸಿರುತ್ತಾರೆ. (ಸಿಆರ್‌ಪಿರವರ ಶಾಲಾ ವರದಿ ಲಗತ್ತಿಸಿದೆ.)

ಈ ಮೇಲ್ಕಂಡ ಎಲ್ಲಾ ಮಾಹಿತಿಯನ್ನು ಪರಿಶೀಲಿಸಿದಾಗ ಈ ರೀತಿಯ ತಪ್ಪು ಮಾಹಿತಿಯನ್ನು ನೀಡಿ ಇಲಾಖೆಯ ನಿಯಮಗಳನ್ನು ಗಾಳಿಗೆ ತೂರಿರುವ ಮುಖ್ಯ ಶಿಕ್ಷಕರು ಹಾಗೂ ಆಡಳಿತ ಮಂಡಳಿಯ ಮೇಲೆ ಕ್ರಮ ಜರುಗಿಸಬೇಕೆಂದು ವಿನಮ್ರವಾಗಿ ಕೋರಿಕೊಳ್ಳುತ್ತಾ ತಾವು ಒಂದು ದಿನಾಂಕವನ್ನು ನಿಗದಿಪಡಿಸಿ ಆ ದಿನ ದಾಖಲಾತಿಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ಖುದ್ದು ಮುಖ್ಯ ಶಿಕ್ಷಕರೇ ಹಾಜರಿದ್ದು ಮಾಹಿತಿ ನೀಡುವಂತೆ ಮುಖ್ಯ ಶಿಕ್ಷಕರಿಗೆ ತಿಳಿಸಬೇಕೆಂದು ಕೋರಿಕೊಳ್ಳುತ್ತಾ ಮುಂದಿನ ಅಗತ್ಯ ಕ್ರಮಕ್ಕಾಗಿ ತಮ್ಮ ಅವಗಾಹನೆಗೆ ತರಬಯಸುತ್ತೇನೆ. ಇದು ಸಮನ್ವಯಾಧಿಕಾರಿಗಳ ತಂಡ ನೀಡಿದ ವರದಿ.

ವ್ಯಾಸಂಗ ಮಾಡದ ವಿದ್ಯಾರ್ಥಿಯ ಹೆಸರಿನಲ್ಲಿ RTE ಶುಲ್ಕ ಮರುಪಾವತಿ

ಗೋಕುಲ ಹಿ.ಪ್ರಾ.ಶಾಲೆ ಕಿರುಗಾವಲು, ಇಲ್ಲಿ ವ್ಯಾಸಂಗ ಮಾಡದ ವಿದ್ಯಾರ್ಥಿಯ ಮಾಹಿತಿಯನ್ನು ನಮೂದಿಸಿ ಆರ್.ಟಿ.ಇ ಶುಲ್ಕ ಮರು ಪಾವತಿ ಮಾಡಿಕೊಂಡಿರುವ ಬಗ್ಗೆ ಕೂಡಾ ಶಿಕ್ಷಣಾಧಿಕಾರಿಗಳಿಗೆ ವರದಿ ನೀಡಲಾಗಿತ್ತು.

ಅಶ್ರತ್ ಮೆಹದಿ ಬಿನ್ ನವಾಜ್ ಮೆಹದಿ ಎಂಬ ವಿದ್ಯಾರ್ಥಿಯು 2016-17 ನೇ ಸಾಲಿನಲ್ಲಿ ಎಲ್ ಕೆ ಜಿ ಗೆ ಆರ್ ಟಿ ಇ ಮೂಲಕ ಗೋಕುಲ ಹಿ.ಪ್ರಾ.ಶಾಲೆ ಕಿರುಗಾವಲು ಇಲ್ಲಿಗೆ ದಾಖಲಾಗಿದ್ದು, 2017-18ನೇ ಸಾಲಿನಲ್ಲಿ ಗೋಕುಲ ಹಿ.ಪ್ರಾ.ಶಾಲೆ ಕಿರುಗಾವಲಿನಿಂದ ರಾಯಲ್ ಪಬ್ಲಿಕ್ ಸ್ಕೂಲ್ ಕಿರುಗಾವಲು ಇಲ್ಲಿಗೆ ಯುಕೆಜಿಗೆ ಪೋಷಕರು ದಾಖಲು ಮಾಡಿರುತ್ತಾರೆ. ಗೋಕುಲ ಹಿ.ಪ್ರಾ.ಶಾಲೆ ಕಿರುಗಾವಲು ಇಲ್ಲಿಯ ಮುಖ್ಯ ಶಿಕ್ಷಕರು 2017-18ನೇ ಸಾಲಿನಲ್ಲಿ ಈ ಮಗುವಿನ ದಾಖಲಾತಿಯನ್ನು ಎಸ್ ಎ ಟಿ ಎಸ್ ನಲ್ಲಿ ತೆಗೆಯದೆ, 2017-18 ರಲ್ಲಿ ಯು.ಕೆ.ಜಿ, 2018-19 ರಲ್ಲಿ ಒಂದನೇ ತರಗತಿ, 2019-20ರಲ್ಲಿ 2ನೇ ತರಗತಿಗೆ ಮಗು ಶಾಲೆಯಲ್ಲಿ ಹಾಜರಾಗದಿದ್ದರು ಗ್ರೇಡ್ ನಮೂದಿಸಿ ಮುಂದಿನ ತರಗತಿಗಳಿ ಉತ್ತೀರ್ಣಗೊಳಿಸಿ ವ್ಯಾಸಂಗ ಮಾಡಿರುವುದಾಗಿ ಇಲಾಖೆಗೆ ಸುಳ್ಳು ಮಾಹಿತಿ ನೀಡಿ ಆರ್.ಟಿ.ಇ ಯೋಜನೆಯಡಿ ಸರ್ಕಾರದಿಂದ ಸಿಗುವ ಶುಲ್ಕ ಮರು ಪಾವತಿ ಹಣವನ್ನು ಸತತ 3 ವರ್ಷಗಳು ಪಡೆದಿರುತ್ತಾರೆ.

(2019-20ರಲ್ಲಿ ಆರ್ ಟಿ ಇ ಯೋಜನೆಯಡಿ ವ್ಯಾಸಂಗ ಮಾಡಿರುವ ವಿದ್ಯಾರ್ಥಿಗಳ ಪಟ್ಟಿಯನ್ನು ಲಗತ್ತಿಸಿದೆ) ರಾಯಲ್ ಪಬ್ಲಿಕ್ ಸ್ಕೂಲ್ ಮುಖ್ಯ ಶಿಕ್ಷಕರು ಪೋಷಕರ ಮನವಿ ಮೇರೆಗೆ ಯು.ಕೆ.ಜಿ.ಗೆ ದಾಖಲು ಮಾಡಿಕೊಂಡು ಈ ವಿದ್ಯಾರ್ಥಿ ಈ ಹಿಂದೆ ಗೋಕುಲ ಹಿ.ಪ್ರಾ.ಶಾಲೆ ಕಿರುಗಾವಲು ಇಲ್ಲಿ ವ್ಯಾಸಂಗ ಮಾಡಿರುವ ಮಾಹಿತಿ ಲಭ್ಯವಿಲ್ಲದ ಕಾರಣ ಈ ವಿದ್ಯಾರ್ಥಿಯ ಮಾಹಿತಿಯನ್ನು ರಾಯಲ್ ಪಬ್ಲಿಕ್ ಸ್ಕೂನ್ ನ ಮುಖ್ಯ ಶಿಕ್ಷಕರು ಎಸ್ ಎ ಟಿ ಎಸ್ ನಲ್ಲಿ ನಮೂದಿಸಿರುತ್ತಾರೆ. (ಎಸ್ ಎ ಟಿ ಎಸ್ ಸಂಖ್ಯೆ : 160978641) ಈ ಬಗ್ಗೆ 2017-18 ರಿಂದ ಪ್ರಸಕ್ತ ಶೈಕ್ಷಣಿಕ ವರ್ಷದವರೆಗೆ ರಾಯಲ್ ಪಬ್ಲಿಕ್ ಸ್ಕೂಲ್. ಕಿರುಗಾವಲು ವ್ಯಾಸಂಗ ಮಾಡುತ್ತಿರುವ ಮಾಹಿತಿಯನ್ನು ರಾಯಲ್ ಪಬ್ಲಿಕ್ ಸ್ಕೂಲ್, ಕಿರುಗಾವಲು ಮುಖ್ಯ ಶಿಕ್ಷಕರು ದೃಢೀಕರಣ ನೀಡಿರುತ್ತಾರೆ. (ದೃಢೀಕರಣ ಲಗತ್ತಿಸಿದೆ.)

ಸತತ 3 ವರ್ಷಗಳು ಮಗು ಶಾಲೆಗೆ ಹಾಜರಾಗದೇ ಬೇರೆ ಶಾಲೆಯಲ್ಲಿ ದಾಖಲಾಗಿದ್ದರು ಗೋಕುಲ ಹಿ.ಪ್ರಾ.ಶಾಲೆ ಕಿರುಗಾವಲಿನ ಶೈಕ್ಷಣಿಕ ಜವಾಬ್ದಾರಿ ನಿರ್ವಹಿಸುತ್ತಿರುವ ಶ್ರೀ ಲಂಕೇಶ್ ರವರು ಆರ್.ಟಿ.ಇ ಶುಲ್ಕ ಮರುಪಾವತಿ ಹಣವನ್ನು ಪಡೆದು 2020-21 ನೇ ಸಾಲಿನಲ್ಲಿ ಬಿಆರ್ ಸಿ ಕೇಂದ್ರಕ್ಕೆ ಹಾಜರಾಗಿ ಇಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಂಪ್ಯೂಟರ್ ಪ್ರೋಗ್ರಾಮರ್ ಶ್ರೀ ಬ್ರಿಜಿತ್ ಮೆಕಾನ್ಜ್ ಇವರ ಬಳಿ ಅಶ್ರತ್ ಮೆಹದಿ ಬಿನ್ ನವಾಜ್ ಮೆಹದಿ ಎಂಬ ವಿದ್ಯಾರ್ಥಿ ರಾಯಲ್ ಪಬ್ಲಿಕ್ ಸ್ಕೂಲ್ ಕಿರುಗಾವಲು ಹಾಗೂ ನಮ್ಮ ಶಾಲೆ (ಗೋಕುಲ ಹಿ.ಪ್ರಾ.ಶಾಲೆ ಕಿರುಗಾವಲು) ಎರಡು ಶಾಲೆಗಳಲ್ಲಿಯೂ ಎಸ್.ಎ.ಟಿ.ಎಸ್ ನಲ್ಲಿ ನಮೂದಾಗಿದ್ದು ನಮ್ಮ ಶಾಲೆಯಿಂದ ಮಗುವನ್ನು ರಾಯಲ್ ಪಬ್ಲಿಕ್ ಶಾಲೆಗೆ ವಿಲೀನಗೊಳಿಸಬೇಕೆಂದು ಮಾಹಿತಿ ನೀಡಿ ವಿದ್ಯಾರ್ಥಿಯ ಎಸ್ ಎ ಟಿ ಎಸ್ ಸಂಖ್ಯೆನ್ನು 3 ವರ್ಷಗಳ ನಂತರ ವಿಲೀನಗೊಳಿಸಿರುತ್ತಾರೆ (ಪ್ರಸ್ತುತ ಚಾಲ್ತಿಯಲ್ಲಿರುವ ಎಸ್ ಎ ಟಿ ಎಸ್ ಸಂಖ್ಯೆ : 159217508) ಎಂಬ ಮಾಹಿತಿಯನ್ನು ತಮ್ಮ ಅವಗಾಹನೆಗೆ ತರಬಯಸುತ್ತೇನೆ.
****
ಇದು ಮಳವಳ್ಳಿಯ ಕ್ಷೇತ್ರ ಸಮನ್ವಯಾಧಿಕಾರಿಗಳು ಸಲ್ಲಿಸಿದ ವರದಿಯ ಸಾರಾಂಶ. ಆದರೆ, ಈ ವರದಿಗಳನ್ನು ಕಸದ ಬುಟ್ಟಿಗೆ ಹಾಕಿ ಅಕ್ರಮದಲ್ಲಿ ಅಧಿಕಾರಿಗಳೇ ಶಾಮೀಲಾಗಿರುವ ಶಂಕೆ ಸ್ಥಳೀಯರಿಂದಲೂ ವ್ಯಕ್ತವಾಗಿದೆ. 2020ರಿಂದ ಶಿಕ್ಷಣಾಧಿಕಾರಿಗಳಾಗಿದ್ದವರು ಎ ಟಿ ಶಿವಲಿಂಗಯ್ಯ, ಚಿಕ್ಕಸ್ವಾಮಿ, ಎಸ್‌ ಪಿ ನಾಗರಾಜ್‌, ಎಸ್‌ ಚಂದ್ರ ಪಾಟೀಲ್‌, ಎಂ ಕೆ ಶ್ರೀನಿವಾಸ್‌, ಉಮಾ ವಿ ಇ (ಈಗಿನ ಅಧಿಕಾರಿ). ಇಷ್ಟು ಗಂಭೀರವಾದ ಅಕ್ರಮದ ಬಗ್ಗೆ ಸಮನ್ವಯಾಧಿಕಾರಿ ಗಮನ ಸೆಳೆದು ತನಿಖೆ ಮಾಡಿ ವರದಿ ಕೊಟ್ಟರೂ ಶಾಲೆಯ ವಿರುದ್ಧ ಯಾವುದೇ ಕ್ರಮ ಜರುಗಿಸಿಲ್ಲ. ಎಲ್ಲರೂ ಈ ಅಕ್ರಮದಲ್ಲಿ ಪಾಲುದಾರರಾಗಿರುವ ಅನುಮಾನ ವ್ಯಕ್ತವಾಗುವುದು ಸಹಜ.

ಗೋಕುಲ ಶಾಲೆಗೆ ಕನ್ನಡ ಮಾಧ್ಯಮಕ್ಕೆ ಮಾತ್ರ ಅನುಮತಿ ಇದೆ. ಆದರೆ ಪೋಷಕರನ್ನು ಸೆಳೆಯಲು ಅಲ್ಲಿ ಆಂಗ್ಲ ಮಾಧ್ಯಮ ನಡೆಸಲಾಗುತ್ತಿದೆ. ಇಂಗ್ಲಿಷ್‌ ಪರಿಣತಿ ಇಲ್ಲದ ಶಿಕ್ಷಕರು ಪಾಠ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ. ಎಂಟನೇ ತರಗತಿಯವರೆಗೆ ಮಾತ್ರ ಅನುಮತಿ ಪಡೆದು ಒಂಭತ್ತು ಮತ್ತು ಹತ್ತನೇ ತರಗತಿ ನಡೆಸುತ್ತಿದ್ದಾರೆ. ದಾಖಲಾತಿ ಮಾತ್ರ ಬೇರೆ ಶಾಲೆಯಲ್ಲಿರುತ್ತದೆ ಎಂಬ ಆರೋಪಗಳು ಕೇಳಿ ಬಂದಿವೆ.

ಇದನ್ನೂ ಓದಿ ಈ ದಿನ ಸಂಪಾದಕೀಯ | ಸದನದಲ್ಲಿ ಹನಿಟ್ರ್ಯಾಪ್‌ ಸದ್ದು;  ತಾವು ಅನೈತಿಕರೆಂದು ಸಾರಿಕೊಂಡರೇ ನಾಯಕರು?

07e0d3e8 3f8a 4b81 8fd5 641335b91d85
ಹೇಮಾ ವೆಂಕಟ್‌
+ posts

ʼಈ ದಿನ.ಕಾಂʼನಲ್ಲಿ ಮುಖ್ಯ ವರದಿಗಾರರು.
ಉದಯವಾಣಿ, ಪ್ರಜಾವಾಣಿಯಲ್ಲಿ ವರದಿಗಾರ್ತಿಯಾಗಿ ಅನುಭವ.
ಮೂರು ಪುಸ್ತಕಗಳು ಪ್ರಕಟಗೊಂಡಿವೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಹೇಮಾ ವೆಂಕಟ್‌
ಹೇಮಾ ವೆಂಕಟ್‌
ʼಈ ದಿನ.ಕಾಂʼನಲ್ಲಿ ಮುಖ್ಯ ವರದಿಗಾರರು. ಉದಯವಾಣಿ, ಪ್ರಜಾವಾಣಿಯಲ್ಲಿ ವರದಿಗಾರ್ತಿಯಾಗಿ ಅನುಭವ. ಮೂರು ಪುಸ್ತಕಗಳು ಪ್ರಕಟಗೊಂಡಿವೆ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬ್ರಹ್ಮಾವರ | ಮಹೇಶ್ ಶೆಟ್ಟಿ ತಿಮರೋಡಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ

ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ವಿರುದ್ಧ ಅವಹೇಳನಾಕಾರಿ ಹೇಳಿಕೆ...

ಚಿಕ್ಕಮಗಳೂರು l ಸಭಾಧ್ಯಕ್ಷರೇ ಮಲೆನಾಡಿನ ಸಮಸ್ಯೆ ಬಗ್ಗೆ ಚರ್ಚಿಸಲು ಅವಕಾಶ ಕಲ್ಪಿಸಿ; ಹೆಚ್.ಡಿ ತಮ್ಮಯ್ಯ

ಮಲೆನಾಡಿನಲ್ಲಿ ಕಾಡುತ್ತಿರುವ ಕಾಡು-ಪ್ರಾಣಿ-ಮಾನವ ಸಂಘರ್ಷದಿಂದ ಜನಜೀವನ ಅಸ್ತವ್ಯಸ್ಥವಾಗಿದೆ. ಇಂತಹ ಗಂಭೀರ ಸಮಸ್ಯೆಗಳ...

ಒಳಮೀಸಲಾತಿ | ಅಲೆಮಾರಿ ಸಮುದಾಯಗಳಿಗೆ ಸರ್ಕಾರದಿಂದ ನ್ಯಾಯ ಸಿಗಲಿ: ಬರಗೂರು ರಾಮಚಂದ್ರಪ್ಪ

ರಾಜ್ಯ ಸರ್ಕಾರವು ಜಾರಿಗೊಳಿಸಿರುವ ಒಳಮೀಸಲಾತಿಯಲ್ಲಿ ಅಲೆಮಾರಿ ಸಮುದಾಯಗಳಿಗೆ ನ್ಯಾಯ ಸಿಗಬೇಕು ಎಂದು...

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

Download Eedina App Android / iOS

X