ವರ್ಷ ಪೂರ್ತಿ ಕಷ್ಟ ಪಟ್ಟು ಓದಿದ ವಿದ್ಯಾರ್ಥಿ, ಇನ್ನೇನು ವಾರ್ಷಿಕ ಪರೀಕ್ಷೆ ಬರೆಯಲು ಹೊರಡಬೇಕು ಎನ್ನುವಷ್ಟರಲ್ಲಿ ಹೆತ್ತ ತಾಯಿ ನಿಧನರಾದರೆ ಪಾಪಾ ಆ ಹುಡುಗನ ಪರಿಸ್ಥಿತಿ ಹೇಗಾಗಬೇಡ? ಸುಮ್ಮನೇ ಊಹಿಸಿಕೊಂಡರೆ ಕರುಳು ಕಿವುಚುತ್ತೆ. ಆದರೆ ಇಂತಹ ಘಟನೆ ರಾಜ್ಯದಲ್ಲಿ ಇಂದು ನಡೆದಿದೆ.
ಶುಕ್ರವಾರ (ಮಾ.21) ಗಂಗಾವತಿಯಲ್ಲಿ ಈ ನೈಜ ಘಟನೆ ನಡೆದಿದೆ. ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆ ಇಂದು ಆರಂಭವಾಗಿದ್ದು, ಬೆಳಿಗ್ಗೆ ಎದ್ದ ಹುಡುಗ ಪರೀಕ್ಷೆ ಬರೆಯಲು ಹೊರಡಬೇಕು ಎನ್ನುವಷ್ಟರಲ್ಲಿ ತಾಯಿ ನಿಧನರಾಗಿದ್ದಾರೆ.
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಕೆಸರಹಟ್ಟಿ ಗ್ರಾಮದ ಈ ಘಟನೆ ನಡೆದಿದೆ. ತಮ್ಮ ತಾಯಿ ಮೃತಪಟ್ಟ ದುಃಖದ ನಡುವೆಯೂ ಅಡಿವೆಯ್ಯಸ್ವಾಮಿ ಹಿರೇಮಠ ಎಂಬ ವಿದ್ಯಾರ್ಥಿ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಗೆ ಹಾಜರಾಗಿದ್ದಾನೆ. ಶೈಕ್ಷಣಿಕ ಜೀವನಕ್ಕೆ ಮಹತ್ವ ನೀಡಿ, ಮಾದರಿಯಾಗಿದ್ದಾನೆ.
ಅಡಿವೆಯ್ಯಸ್ವಾಮಿ ಕೆಸರಹಟ್ಟಿ ಗ್ರಾಮದ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಯಾಗಿದ್ದು, ತಾಯಿ ನಿಧನದ ಸುದ್ದಿಯ ನೋವಿನ ನಡುವೆಯೂ ಶಿಕ್ಷಕರು, ವಿದ್ಯಾರ್ಥಿ ಮತ್ತು ಅವರ ಕುಟುಂಬ ಸದಸ್ಯರ ಮನವೊಲಿಸಿ ವಿದ್ಯಾರ್ಥಿಯ ಪರೀಕ್ಷೆ ಬರೆಯಿಸಿದ್ದಾರೆ. ಪರೀಕ್ಷೆ ಮುಗಿದ ಬಳಿಕ ವಿದ್ಯಾರ್ಥಿ ತಾಯಿಯ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಿದ್ದಾನೆ.
ಕೆಲ ದಿನಗಳ ಹಿಂದೆ ವಿದ್ಯಾರ್ಥಿಯ ತಾಯಿ ವಿಜಯಲಕ್ಷ್ಮಿ ಸಿದ್ದಯ್ಯಸ್ವಾಮಿ ಅವರು ಸ್ನಾನದ ಕೋಣೆಯಲ್ಲಿ ಜಾರಿ ಬಿದ್ದು ತಲೆಗೆ ಗಾಯ ಮಾಡಿಕೊಂಡಿದ್ದರು. ರಕ್ತ ಹೆಪ್ಪುಗಟ್ಟಿದ್ದರಿಂದ ಶುಕ್ರವಾರ ಬೆಳಿಗ್ಗೆ ಮೃತಪಟ್ಟಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ.