ಬೀದರ್ ನಗರ ಸೇರಿದಂತೆ ತಾಲೂಕಿನ ಹಲವೆಡೆ ಶುಕ್ರವಾರ ಗುಡುಗು ಸಹಿತ ಸಾಧಾರಣ ಮಳೆಯಾಗಿದ್ದು, ಶನಿವಾರವೂ ಮಳೆಯಾಗುವುದಾಗಿ ಹವಾಮಾನ ಇಲಾಖೆ ಸೂಚನೆ ನೀಡಿದೆ.
ಇಂದು ಮಧ್ಯಾಹ್ನ 3.30ರಿಂದ ಸಂಜೆ 4.30ರ ತನಕ ಗುಡುಗು ಸಹಿತ ಸಾಧಾರಣ ಮಳೆ ಸುರಿದಿದೆ. ಇದರಿಂದ ತಾಪಮಾನದಲ್ಲಿ ಭಾರೀ ಇಳಿಕೆಯಾಗಿದ್ದು, ವಾತಾವರಣ ಸಂಪೂರ್ಣ ತಂಪಾಗಿರುವುದು ಕಂಡುಬಂದಿದೆ.
ಬಿಸಿಲಿನಿಂದ ಕಂಗೆಟ್ಟಿದ್ದ ಜನ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಬೆಳಿಗ್ಗೆಯಿಂದ ಮಧ್ಯಾಹ್ನದ ತನಕ ಸಾಧಾರಣ ಪ್ರಮಾಣದಲ್ಲಿ ಬಿಸಿಲು ಇತ್ತು. ಮಧ್ಯಾಹ್ನದ ಬಳಿಕ ದಟ್ಟ ಕಾರ್ಮೋಡ ಕವಿದು ಸುರಿದ ಮಳೆಗೆ ಇಳೆ ತಂಪಾಗಿದೆ.
ಈ ಸುದ್ದಿ ಓದಿದ್ದೀರಾ? ಮಲ್ಪೆ ಮಹಿಳೆ ಮೇಲೆ ಹಲ್ಲೆ; ಘಟನೆ ಬಗ್ಗೆ ಸಂತ್ರಸ್ತೆ ಹೇಳಿದ್ದೇನು?
ತಾಲೂಕಿನ ಅಮಲಾಪೂರ, ಚಿಟ್ಟಾ, ಘೋಡಂಪಳ್ಳಿ, ಯಾಕತಪೂರ, ಯದಲಾಪೂರ, ಶಹಾಪೂರ, ಗುನ್ನಳ್ಳಿ ಸೇರಿದಂತೆ ಹಲವೆಡೆ ಮಳೆಯಾಗಿರುವುದು ವರದಿಯಾಗಿದೆ.
ಜಿಲ್ಲೆಯ ಬಸವಕಲ್ಯಾಣ, ಚಿಟಗುಪ್ಪ, ಹುಮನಾಬಾದ್, ಹುಲಸೂರಿನಲ್ಲಿ ಗುರುವಾರ ತಡರಾತ್ರಿ ಸಾಧಾರಣ ಮಳೆಯಾಗಿದೆ. ಜಿಲ್ಲೆಯ ಬಹುತೇಕ ಕಡೆಗಳಲ್ಲಿ ವರ್ಷದ ಮೊದಲ ಮಳೆ ಪ್ರವೇಶಿಸಿದೆ. ಮಾರ್ಚ್ 22ರ ಶನಿವಾರವೂ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.