ಮಾರ್ಚ್ 21ರಂದು ಎಎಪಿ ನೇತೃತ್ವದ ಪಂಜಾಬ್ ಸರ್ಕಾರ ಕರೆದ ಸಭೆಗೆ ಪಂಜಾಬ್ ರೈತ ಸಂಘಗಳು ಹಾಜರಾಗಿಲ್ಲ. ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ಮತ್ತು ಭಾರತಿ ಕಿಸಾನ್ ಯೂನಿಯನ್ ಏಕತಾ ಉಗ್ರಾನ್ (ಬಿಕೆಯು ಉಗ್ರಾನ್) ಸಭೆಗೆ ಹಾಜರಾಗಿಲ್ಲ.
ತಾವು ಒಪ್ಪದ ಷರತ್ತುಗಳು ಇದ್ದ ಕಾರಣ ಸಭೆಯಲ್ಲಿ ಭಾಗವಹಿಸಿಲ್ಲ ಎಂದು ರೈತ ಸಂಘಗಳು ಹೇಳಿದೆ. ಹಾಗೆಯೇ ಸರ್ಕಾರದೊಂದಿಗೆ ಸಭೆ ನಡೆಸುವ ಮೊದಲು ಮೂರು ಪ್ರಮುಖ ಬೇಡಿಕೆಗಳನ್ನು ರೈತ ಸಂಘಟನೆಗಳು ಮುಂದಿಟ್ಟಿದೆ.
ಇದನ್ನು ಓದಿದ್ದೀರಾ? ಹುಬ್ಬಳ್ಳಿ ಸೇರಿ 11 ವಿಮಾನ ನಿಲ್ದಾಣಗಳ ಖಾಸಗೀಕರಣ: ಯಾರ ಸುಪರ್ದಿಗೆ; ಮೋದಿ ಗೆಳೆಯರಾದ ಅದಾನಿಗೋ, ಅಂಬಾನಿಗೋ?
ಬಿಕೆಯು ಉಗ್ರಾನ್ ಅಧ್ಯಕ್ಷ ಜೋಗಿಂದರ್ ಸಿಂಗ್ ಉಗ್ರಾನ್ ಸಭೆಯಲ್ಲಿ ಭಾಗವಹಿಸಲು ನಿರಾಕರಿಸಿದರು. ರೈತರು ಮಾತುಕತೆಯಿಂದ ತಪ್ಪಿಸಿಕೊಳ್ಳುತ್ತಿಲ್ಲ ಎಂದೂ ಹೇಳಿದರು. ಮುಖ್ಯಮಂತ್ರಿ ಭಗವಂತ್ ಸಿಂಗ್ ಮಾನ್ ಸಭೆಯಲ್ಲಿ ಹಾಜರಿರಬೇಕು ಆಗ್ರಹಿಸಿದರು.
ಮಾರ್ಚ್ 3 ರಂದು ಮುಖ್ಯಮಂತ್ರಿಯೊಂದಿಗೆ ನಡೆದ ಹಿಂದಿನ ಸಭೆಯನ್ನು ಉಲ್ಲೇಖಿಸಿ, ಮುಖ್ಯಮಂತ್ರಿ ಮಾನ್ ಸಭೆಯಿಂದ ಹೊರನಡೆದಾಗ ದಿಢೀರ್ ಆಗಿ ಸಭೆ ನಿಲ್ಲಿಸಲಾಯಿತು. ಈ ಸಂದರ್ಭಗಳನ್ನು ಗಮನಿಸಿದರೆ, ಸಭೆ ಸೂಕ್ತವೇ ಎಂದು ನಿರ್ಧರಿಸುವುದು ಮುಖ್ಯ ಎಂದು ಹೇಳಿದ್ದಾರೆ.
ಮಾರ್ಚ್ 19ರಂದು ಶಂಭು ಮತ್ತು ಕನೌರಿಯಲ್ಲಿ ಪ್ರತಿಭಟನಾನಿರತ ರೈತ ನಾಯಕರನ್ನು ಬಂಧಿಸಲಾಗಿದೆ. ಪ್ರತಿಭಟನಾಕಾರರನ್ನು ಪೊಲೀಸ್ ಪಡೆಗಳು ಸ್ಥಳಗಳಿಂದ ಬಲವಂತವಾಗಿ ಹೊರಹಾಕಿದ್ದರು.
ಸಂಘಟನೆಯು ಮಾರ್ಚ್ 26ರಂದು ಚಂಡೀಗಢದಲ್ಲಿ ದಿನವಿಡೀ ಪ್ರತಿಭಟನೆ ನಡೆಸುವ ಘೋಷಣೆ ಮಾಡಿದೆ. ಬಂಧಿತ ಎಲ್ಲಾ ರೈತರು ಮತ್ತು ನಾಯಕರನ್ನು ತಕ್ಷಣವೇ ಬಿಡುಗಡೆ ಮಾಡಬೇಕು, ಅವರ ವಸ್ತುಗಳನ್ನು ಹಿಂತಿರುಗಿಸಬೇಕು ಮತ್ತು ಆಸ್ತಿಪಾಸ್ತಿಗೆ ಹಾನಿ ಮಾಡಿದ್ದಕ್ಕೆ ಪರಿಹಾರವನ್ನು ನೀಡಬೇಕು ಎಂದು ರೈತ ಸಂಘಟನೆಗಳು ಆಗ್ರಹಿಸಿದೆ.
ವರ್ಷಗಳಿಂದ ರೈತರು ಪಂಜಾಬ್ ಗಡಿಯಲ್ಲಿ ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ. ಎಂಎಸ್‌ಪಿಗೆ ಕಾನೂನು ಖಾತರಿ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ರೈತರು ಪ್ರತಿಭಟನೆ ನಡೆಸುತ್ತಿದ್ದು, ಸರ್ಕಾರ ರೈತರೆಡೆ ಗಮನವೂ ಹರಿಸುತ್ತಿಲ್ಲ. ದೇಶಕ್ಕೆ ಅನ್ನ ನೀಡುವ ರೈತರನ್ನು ಭಯೋತ್ಪಾದಕರಂತೆ ಬಿಂಬಿಸುವ ಯತ್ನವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ. ಇದೀಗ ಪಂಜಾಬ್ ಸರ್ಕಾರವು ಪಂಜಾಬ್‌ನ ರೈತರ ಬೇಡಿಕೆ ಈಡೇರಿಕೆಗೆ ಹಿಂದೆ ಮುಂದೆ ನೋಡುತ್ತಿದೆ.
