ಮಕ್ಕಳ ಕಲಿಕೆಯಲ್ಲಿ ಶಿಕ್ಷಕರ ಪ್ರತಿಭೆ ಪ್ರದರ್ಶನಗೊಳ್ಳುತ್ತದೆ. ಸರ್ಕಾರಿ ಶಾಲೆಯ ಉಳಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸುರೇಶ ಚನ್ನಶೆಟ್ಟಿ ಹೇಳಿದರು.
ಔರಾದ್ ತಾಲ್ಲೂಕಿನ ಮಸ್ಕಲ್ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ವಾರ್ಷಿಕ ಸ್ನೇಹ ಸಮ್ಮೇಳನ, ಪಾಲಕರ ಪಾದ ಪೂಜೆ ಹಾಗೂ ವಿಜ್ಞಾನ ಮೇಳ ಉದ್ಘಾಟನೆ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ʼಶಾಲೆಯಲ್ಲಿ ವಿಜ್ಞಾನ ವಿಷಯ ಶಿಕ್ಷಕರಿಲ್ಲದಿದ್ದರೂ ವಿದ್ಯಾರ್ಥಿಗಳು ವಿಜ್ಞಾನ ಮೇಳದಲ್ಲಿ 115ಕ್ಕೂ ಹೆಚ್ಚಿನ ಪ್ರಯೋಗಗಳು ಸಿದ್ಧಪಡಿಸಿ ವಿವರಿಸುತ್ತಿರುವುದು ಹೆಮ್ಮೆ ಎನಿಸಿದೆ. ಪಠ್ಯೇತರ ಚಟುವಟಿಕೆಗಳಲ್ಲಿ ಶಿಕ್ಷಕರು ಹೆಚ್ಚು ತೊಡಗಿಸಿಕೊಳ್ಳುವ ಮೂಲಕ ಮಕ್ಕಳಿಗೆ ಸ್ಫೂರ್ತಿಯಾಗಬೇಕುʼ ಎಂದು ಸಲಹೆ ನೀಡಿದರು.
ವಿಕಾಸ ಅಕಾಡೆಮಿ ಅಧ್ಯಕ್ಷ ರೇವಣಸಿದ್ದಪ್ಪಾ ಜಲಾದೆ ಮಾತನಾಡಿ, ʼಸರ್ಕಾರಿ ಶಾಲೆಯ ಮಕ್ಕಳಿಗೆ ವಿಜ್ಞಾನ ಮೇಳ ನಡೆಸುತ್ತಿರುವುದು ಮಾದರಿ ಕಾರ್ಯ. ಶಾಲೆಯ ಶಿಕ್ಷಕರು ಹಾಗೂ ಎಸ್‌ಡಿಎಂಸಿ ಅಧ್ಯಕ್ಷರ ಕಾಳಜಿಯಿಂದ ಮಾತ್ರ ಇಂತಹ ಅಪರೂಪ ಕಾರ್ಯಕ್ರಮಗಳು ಆಯೋಜಿಸಬಹುದುʼ ಎಂದು ತಿಳಿಸಿದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಗಜಾನನ ಮಳ್ಳಾ ಮಾತನಾಡಿ, ʼಮಸ್ಕಲ್ ಗ್ರಾಮಸ್ಥರು, ಶಿಕ್ಷಕರು ಸೇರಿ ತಮ್ಮ ಊರಿನ ಸರ್ಕಾರಿ ಶಾಲೆಯ ವಾರ್ಷಿಕೋತ್ಸವ ಹಾಗೂ ವಿಜ್ಞಾನ ಮೇಳ ಕಾರ್ಯಕ್ರಮ ಆಯೋಜಿಸಿರುವುದು ಜಿಲ್ಲೆಗೆ ಮಾದರಿಯಾಗಿದೆʼ ಎಂದು ನುಡಿದರು.

ಶಾಲೆಯ ಮುಖ್ಯಗುರು ಶಿವಪುತ್ರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಣ ಇಲಾಖೆ ಅಧಿಕಾರಿ ಗುಂಡಪ್ಪ ಹುಡುಗೆ, ಕಸಾಪ ಔರಾದ್ ತಾಲ್ಲೂಕಾಧ್ಯಕ್ಷ ಬಾಲಾಜಿ ಅಮರವಾಡಿ, ಬಿಆರ್‌ಪಿ ಶಶಿಕಾಂತ ಬಿಡವೆ ಮಾತನಾಡಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಬೈಕ್‌ಗೆ ಅಪರಿಚಿತ ವಾಹನ ಡಿಕ್ಕಿ : ಸವಾರರಿಬ್ಬರ ಸಾವು
ಸಂತಪೂರ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಾಹಾದೇವಿ ಪಾಟೀಲ್, ಪಿಡಿಒ ಸಂತೋಷ ಪಾಟೀಲ್, ಸಿಆರ್‌ಪಿ ಜ್ಯೋತಿ ಜೀರ್ಗೆ, ಎಸ್‌ಡಿಎಂಸಿ ಅಧ್ಯಕ್ಷ ಶರಣಬಸವ ಚಿದ್ರೆ, ಉಪಾಧ್ಯಕ್ಷ ಶಿಲ್ಪಾ ಸತೀಷ, ಗ್ರಾಮ ಪಂಚಾಯತ್ ಸದಸ್ಯರಾದ ಸಂತೋಷ ಹಟಕರ್, ಇಸ್ಮಾಯಿಲ್ ದಸ್ತಗೀರ್, ದೇವುಬಾಯಿ ಶಿವಾಜಿ, ಜೈಶ್ರೀ ಶಿವಕುಮಾರ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಚಪ್ಪ ಇಸ್ಲಾಂಪುರೆ, ಕಾರ್ಯದರ್ಶಿ ಬಸವರಾಜ ಕಾಡೆ ಸೇರಿದಂತೆ ಸದಸ್ಯರು, ಎಸ್‌ಡಿಎಂಸಿ, ಸದಸ್ಯರು, ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ಶಿಕ್ಷಕ ನೌನಾಥ ಸ್ವಾಗತಿಸಿದರು. ಬಸವರಾಜ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ವಿರೇಶ ಖತಗಾಂವೆ ನಿರೂಪಿಸಿದರು. ಶಿಕ್ಷಕ ಸಂತೋಷ ತಂಬಾಕೆ ವಂದಿಸಿದರು.