ಬೆಳಗಾವಿಯಲ್ಲಿ ಕಂಡಕ್ಟರ್ ಮೇಲೆ ಹಲ್ಲೆ ಹಾಗೂ ಸುಳ್ಳು ಪೋಕ್ಸೋ ಕೇಸ್ ದಾಖಲಿಸಿದ, ಹಾಗೂ ಎಂಇಎಸ್ ಪುಂಡಾಟದ ವಿರುದ್ಧ ನಿಷೇಧ, ಕ್ರಮಕ್ಕೆ ಒತ್ತಾಯಿಸಿ ವಿಶ್ವ ಕರ್ನಾಟಕ ರಕ್ಷಣಾ ವತಿಯಿಂದ ದಾವಣಗೆರೆಯಲ್ಲಿ ಅಂಬೇಡ್ಕರ್ ಸರ್ಕಲ್ ನಿಂದ ಉಪನೋಂದಣಾಧಿಕಾರಿಗಳ ಕಚೇರಿವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿ, ಕನ್ನಡಪರ ಸಂಘಟನೆಗಳ ಕರ್ನಾಟಕ ಬಂದ್ ನಲ್ಲಿ ಭಾಗವಹಿಸಿ ಉಪನೋಂದಣಾಧಿಕಾರಿಗಳ ಮೂಲಕ ಮನವಿ ಸಲ್ಲಿಸಿ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.

ಬೆಳಗಾವಿಯಲ್ಲಿ ಇತ್ತೀಚೆಗೆ “ಕನ್ನಡ ಮಾತಾಡಿ” ಎಂದು ಕಂಡಕ್ಟರ್ ಹೇಳಿದ್ದಕ್ಕೆ ತಿರುಗಿ ಕಂಡಕ್ಟರ್‌ನನ್ನೇ ಮರಾಠಿ ಮಾತಾಡುವಂತೆ ಒತ್ತಾಯಿಸಿ ಹಲ್ಲೆ ನಡೆಸಿದ್ದಲ್ಲದೇ ಕಂಡಕ್ಟರ್ ಮೇಲೆ ನಡೆಸಿರುವ ಮಾರಣಾಂತಿಕ ಹಲ್ಲೆ ಹಾಗೂ ಸುಳ್ಳು ಫೋಕ್ಲೋ ಕೇಸ್ ದಾಖಲಿಸಿದ್ದು, ಬಲವಂತವಾಗಿ ಹೆಣ್ಣು ಮಗಳಿಂದ ಸುಳ್ಳು ಕೇಸ್ ದಾಖಲಿಸಿ ನಂತರ ವಾಪಾಸ್ ಪಡೆದಿರುತ್ತಾರೆ. ಎಂಇಎಸ್ ಪುಂಡರು, ಪುಂಡಾಟಿಕೆ ಮತ್ತು ಉದ್ಧಟತನವನ್ನು ಪ್ರತೀ ಬಾರಿಯೂ ಮಾಡುತ್ತಲೇ ಬಂದಿದ್ದಾರೆ ಎಂದು ಕನ್ನಡಪರ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದರು.
ಮತಗಳಿಗೋಸ್ಕರ ಪುಂಡರ ಇಂತಹ ಚಟುವಟಿಕೆಯನ್ನು ಯಾವ ರಾಜಕೀಯ ಧುರೀಣರೂ ಖಂಡಿಸಿಲ್ಲ. ಭಾಷಾವಾರು ಪ್ರಾಂತ್ಯಗಳ ರಚನೆಯ ನಂತರ ಎಂಇಎಸ್ ಮತ್ತು ಶಿವಸೇನೆ ಬೆಳಗಾವಿ ಗಡಿಭಾಗದಲ್ಲಿ ಮರಾಠಿಗರು ಮತ್ತು ಕನ್ನಡಿಗರ ಮಧ್ಯೆ ಭಾಷಾ ಸಾಮರಸ್ಯವನ್ನು ಹದಗೆಡಿಸಿ ದ್ವೇಷದ ವಾತಾವರಣ ಮೂಡಿಸಿ ರಾಜಕೀಯ ಲಾಭ ಪಡೆದುಕೊಳ್ಳಲು ಯತ್ನಿಸಿರುತ್ತಾರೆ. ಅಲ್ಲದೇ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಎಂ.ಇ.ಎಸ್. ಹಾಗೂ ಶಿವಸೇನೆಯ ಸಂಘಟನೆಗಳು ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ಈ ಹಿಂದೆ ಭಗ್ನಗೊಳಿಸಿರುತ್ತಾರೆ. ಇವರ ಈ ದುಷ್ಕೃತ್ಯಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ಇವರನ್ನು ಕರ್ನಾಟಕದಿಂದಲೇ ಗಡಿಪಾರು ಹಾಗೂ ನಿಷೇಧ ಮಾಡಬೇಕು ಎಂದು ಕನ್ನಡಪರ ಸಂಘಟನೆಗಳ ಪರವಾಗಿ ಸರ್ಕಾರ, ಮುಖ್ಯಮಂತ್ರಿಗಳಿಗೆ ಆಗ್ರಹಿಸಿದರು. ನಿಷೇಧ ಮಾಡದೇ ಇದ್ದಲ್ಲಿ ವಿಶ್ವ ಕರ್ನಾಟಕ ರಕ್ಷಣಾ ವೇದಿಕೆ ಉಗ್ರ ಹೋರಾಟ ಹಮ್ಮಿಕೊಳ್ಳಲಿದೆ ಎಂದು ಎಚ್ಚರಿಸಿದರು.
ಈ ವೇಳೆ ವಿಶ್ವ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷರಾದ ಕೆ.ಜಿ. ಯಲ್ಲಪ್ಪ ಮಾತನಾಡಿ, “ಕರ್ನಾಟಕದಲ್ಲಿ ಆಡಳಿತ ಮಾಡಿದ ಇದುವರೆಗಿನ ಯಾವ ಸರ್ಕಾರಗಳು ಕೂಡ ಗಡಿಭಾಗದ ಕನ್ನಡಿಗರ ರಕ್ಷಣೆ ಮಾಡಿಲ್ಲ. ಅದರಲ್ಲೂ ಬಹುಭಾಗ ಬೆಳಗಾವಿಯಲ್ಲಿ ಮರಾಠಿಗರ ಪ್ರಾಬಲ್ಯ ಇರುವುದರಿಂದ ಅವರ ಮತದ ಆಸೆಗೆ ರಾಜಕಾರಣಿಗಳು, ಮುಖ್ಯಮಂತ್ರಿಗಳು ಕನ್ನಡಿಗರ ಹಿತವನ್ನು ಕಡೆಗಣಿಸುತ್ತಿದ್ದಾರೆ. ಹೀಗಾಗಿ ಭಾಷಾ ಪ್ರಾಂತ್ಯ ರಚನೆಯಾದಾಗಿನಿಂದಲೂ ಮರಾಠಿಗರ ಹಾವಳಿ ಮುಂದುವರೆದಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಬೇರೆ ರಾಜ್ಯಗಳಲ್ಲಿ ನಾವು ಆಯಾ ಭಾಷಿಕರೆಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಆದರೆ ಕರ್ನಾಟಕದಲ್ಲಿ ನಾವು ಕನ್ನಡಿಗರು ಎಂದು ಹೆಮ್ಮೆಯಿಂದ ಹೇಳಿಕೊಳ್ಳುವುದಿಲ್ಲ. ಇಲ್ಲಿ ಜಾತಿವಾರು ವಿಂಗಡಣೆಯಾಗಿದೆ. ಜನ ಮತ್ತು ರಾಜಕಾರಣಿಗಳು ಜಾತಿಯಿಂದ ಗುರುತಿಸಿಕೊಳ್ಳುತ್ತಾರೆ. ಇದು ಕನ್ನಡಿಗರ ದುಸ್ಥಿತಿ. ಗಡಿಭಾಗದಲ್ಲಿ ತೆಲುಗು, ತಮಿಳು, ಮಲಯಾಳಂ ಮತ್ತು ಮರಾಠಿಗರ ಹಾವಳಿಯಿಂದ ಕನ್ನಡಿಗರು ತತ್ತರಿಸುತ್ತಿದ್ದಾರೆ. ಈಗಲಾದರೂ ಮುಖ್ಯಮಂತ್ರಿಗಳು ಮತ್ತು ಸರ್ಕಾರ ಎಚ್ಚೆತ್ತು ಅನ್ಯಭಾಷಿಕ ಪುಂಡರ ಹಾವಳಿಯಿಂದ ಕನ್ನಡಿಗರನ್ನು ರಕ್ಷಿಸಬೇಕಿದೆ” ಎಂದು ಕಿಡಿಕಾರಿದರು.

ಪ್ರತಿಭಟನೆಯಲ್ಲಿ ವಿಶ್ವ ಕರ್ನಾಟಕ ರಕ್ಷಣಾ ವೇದಿಕೆ ಮುಖಂಡರಾದ ಎಂ ರವಿ, ಸಂತೋಷ್ ದೊಡ್ಮನಿ, ದಯಾನಂದ್ ಬಿ ಇ, ಮಂಜುನಾಥ್, ಶಾಬಾಜ್ ಜಬಿವುಲ್ಲಾ, ನವೀನ್ ಕೆಎಚ್, ಮಹಬೂಬ್, ಬಾಬುರಾವ್, ಗಿರೀಶ್, ಫಾರೂಕ್ ಹಟೆಲಿ,ಶಾರುಖ್ ಅಶ್ಮಿ, ಹನುಮಂತಪ್ಪ, ಗದಿಗೆಪ್ಪ, ಶಾರುಖ್, ಮಂಜುನಾಥ್ ಶೆಟ್ಟಿ, ಇಮ್ರಾನ್, ಮಂಜುನಾಥ್ ಬಿವಿ ಹಾಗೂ ಸಂಘಟನೆ ಕಾರ್ಯಕರ್ತರು, ಮುಖಂಡರು ಭಾಗವಹಿಸಿದ್ದರು.