- ಹ್ಯಾಕ್ ವಿಚಾರ ಪ್ರಸ್ತಾಪಿಸಿದ್ದ ಸಚಿವ ಸತೀಶ್ ಜಾರಕಿಹೊಳಿ
- ‘ದೇಶ ಗೆಲ್ಲಬೇಕು ಅನ್ನುವವರು ಮೋದಿಯವರನ್ನ ಗೆಲ್ಲಿಸ್ತಾರೆ’
ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಯ ವೆಬ್‌ಸೈಟ್‌ನ ಸರ್ವರ್ ಅನ್ನು ಕೇಂದ್ರ ಸರ್ಕಾರ ಹ್ಯಾಕ್ ಮಾಡಿದೆ ಎಂಬ ಸಚಿವ ಸತೀಶ್ ಜಾರಕಿಹೊಳಿ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಕಾಂಗ್ರೆಸ್‌ನವರು ಹುಚ್ಚುಚ್ಚು ಹೇಳಿಕೆ ನೀಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಮಂಗಳೂರಿನಲ್ಲಿ ಗುರುವಾರ ಮಾತನಾಡಿದ ಅವರು, “ಮುಂದಿನ ದಿನಗಳಲ್ಲಿ ಕಾಂಗ್ರೆಸ್ ನಾಯಕರು ಈ ರೀತಿಯಲ್ಲಿಯೂ ಹೇಳಿಕೆಗಳು ಬರಬಹುದು. ನಮ್ಮ ಮೈಂಡ್ ಹ್ಯಾಕ್ ಮಾಡಿದ್ದಾರೆ. ಹಾಗಾಗಿ ಹುಚ್ಚುಚ್ಚು ಹೇಳಿಕೆ ಕೊಡ್ತಿದ್ದೇವೆ ಎಂದು ಹೇಳಲೂಬಹುದು” ಎಂದು ವ್ಯಂಗ್ಯವಾಡಿದ್ದಾರೆ.
ಪ್ರಧಾನಿ ಮೋದಿಯವರು ನೂರಾರು ಯೋಜನೆ ಕೊಟ್ಟಿದ್ದಾರೆ. ಅವರು ಚುನಾವಣೆಗೆ ಅಂತ ಕೊಡಲಿಲ್ಲ. ಗೆದ್ದ ಮೇಲೆ ಜನರ ಅವಶ್ಯಕತೆ ಗುರುತಿಸಿ ಕೂಡ ಕೊಟ್ಟಿದ್ದಾರೆ. ಕಾಂಗ್ರೆಸ್‌ನವರು ಚುನಾವಣೆಗೆ ಮೊದಲೇ ಡಂಗುರ ಹೊಡೆದರು. ಈಗ ಅವರಿಂದ ಆಗುತ್ತಿಲ್ಲ. ಅದಕ್ಕೆ ಬೇರೆ ಬೇರೆ ಕಾರಣ ಹುಡುಕುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಅನ್ನಭಾಗ್ಯ ಅಕ್ಕಿ ವಿಚಾರ ಪ್ರಸ್ತಾಪಿಸಿ ಸಿಎಂ ಅವರನ್ನು ತರಾಟೆಗೈದ ಸಿ.ಟಿ. ರವಿ, ಹಿಂದೆ ಸಿದ್ದರಾಮಯ್ಯ ಸರ್ಕಾರ ಇದ್ದಾಗಲೂ ಕೇಂದ್ರದಲ್ಲಿ ಬಿಜೆಪಿ ಇತ್ತು. ಆದರೆ ಆಗ ಸಿದ್ದರಾಮಯ್ಯ ಮೋದಿ ಅಕ್ಕಿ ಕೊಟ್ಟರು ಅಂತ ಹೇಳಿದ್ರಾ? ಆಗಲೂ ನಾನೇ ಕೊಟ್ಟದ್ದು ಅಂತಾನೇ ಸಿದ್ದರಾಮಯ್ಯ ಹೇಳಿದ್ದಾರೆ. ಯಾವುದೇ ರಾಜ್ಯಗಳಿಗೆ ಕೇಂದ್ರ ಅಕ್ಕಿ ಕೊಟ್ಟಿಲ್ಲ ಅಂತ ಸಚಿವರು ಸ್ಪಷ್ಟಪಡಿಸಿದ್ದಾರೆ. ಗರೀಬಿ ಕಲ್ಯಾಣ್ ಯೋಜನೆಗೆ ಬಳಸಿ ಉಳಿದ್ರೆ ಮಾತ್ರ ಮಾರುಕಟ್ಟೆಗೆ ಬಿಡುಗಡೆ ಮಾಡ್ತೀವಿ ಅಂದಿದ್ದಾರೆ ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಬಿಜೆಪಿಯ 25 ಸಂಸದರು ಮುಚ್ಚಿದ ಕಣ್ಣು ತೆರೆಯಲಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ದೇಶ ಗೆಲ್ಲಬೇಕು ಅನ್ನುವವರು ಮೋದಿಯವರನ್ನ ಗೆಲ್ಲಿಸ್ತಾರೆ. ದೇಶ ಹಾಳಾಗಬೇಕು ಅನ್ನುವ ತುಕಡೆ ಗ್ಯಾಂಗ್‌ಗಳು ದೇಶದ ಸೋಲನ್ನು ಬಯಸುತ್ತಾರೆ ಎಂದು ಸಿ ಟಿ ರವಿ ಆರೋಪಿಸಿದ್ದಾರೆ.
ರಾಜ್ಯದಲ್ಲಿ ಪಕ್ಷದ ಸೋಲನ್ನು ಒಪ್ಪಿಕೊಳ್ತೇವೆ. ಆದರೆ ಅದು ಹೀನಾಯ ಸೋಲಲ್ಲ. ಯಾಕೆಂದರೆ ನಮ್ಮ ಮತಗಳಿಕೆ ಪ್ರಮಾಣ ಕಡಿಮೆ ಆಗಿ ನಾವು ಅಧಿಕಾರ ಕಳೆದುಕೊಂಡಿಲ್ಲ. 2013ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಗೆದ್ದಿತ್ತು. ಆದರೆ ಇದೇ ಜನ ಲೋಕಸಭೆಗೆ ಬಿಜೆಪಿಯನ್ನು ಗೆಲ್ಲಿಸಿದ್ರು. ಆಗಲೂ ಸಿದ್ದರಾಮಯ್ಯ, ಕುಮಾರಸ್ವಾಮಿಯವರು ಬಿಜೆಪಿಯವರು ಒಂದೂ ಸೀಟು ಗೆಲ್ಲುವುದಿಲ್ಲ ಅಂದಿದ್ದರು ಎಂದು ಮಾಜಿ ಶಾಸಕ ಸಿ ಟಿ ರವಿ ಹೇಳಿದ್ದಾರೆ.