ಸದಾ ವಿವಾದಾತ್ಮಕ ಹೇಳಿಕೆ ನೀಡಿಯೇ ಸುದ್ದಿಯಾಗುತ್ತಿರುವ ದಾಸ್ನಾ ದೇವಾಲಯದ ಯತಿ ನರಸಿಂಹಾನಂದ ಮತ್ತೊಂದು ವಿವಾದಾತ್ಮಕ, ಅವಹೇಳನಕಾರಿ ಹೇಳಿಕೆಯನ್ನು ನೀಡಿದ್ದಾರೆ. ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಮತ್ತು ಉನ್ನತ ಪೊಲೀಸ್ ಅಧಿಕಾರಿಗಳನ್ನು ನಿಂದಿಸಿದ, ಅವಹೇಳನ ಮಾಡಿದ ಕಾರಣಕ್ಕೆ ಯತಿ ನರಸಿಂಹಾನಂದ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಉಪ ಪೊಲೀಸ್ ಆಯುಕ್ತ ಸುರೇಂದ್ರ ನಾಥ್ ಅವರು ನೀಡಿದ ದೂರಿನ ಆಧಾರದಲ್ಲಿ ನರಸಿಂಹಾನಂದ ವಿರುದ್ಧ ಉತ್ತರ ಪ್ರದೇಶದ ವೇವ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ವಾಮೀಜಿ ಹೇಳಿಕೆಗಳು ಕೋಮು ಸಾಮರಸ್ಯವನ್ನು ಕದಡುವ ಉದ್ದೇಶವನ್ನು ಹೊಂದಿದೆ ಎಂದು ಪೊಲೀಸ್ ಅಧಿಕಾರಿ ದೂರಿದ್ದಾರೆ.
ಇದನ್ನು ಓದಿದ್ದೀರಾ? ದಾವಣಗೆರೆ | ಪ್ರವಾದಿ ಮಹಮ್ಮದ್ರಿಗೆ ಅವಹೇಳನ; ಯತಿ ನರಸಿಂಹಾನಂದ ವಿರುದ್ಧ ಕ್ರಮಕ್ಕೆ ಆಗ್ರಹ
ದಸ್ನಾ ದೇವಿ ದೇವಾಲಯದ ಅರ್ಚಕ ಮಹಾತ್ಮ ಗಾಂಧಿಯವರ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ. ಧಾರ್ಮಿಕ ಭಾವನೆಗಳನ್ನು ಪ್ರಚೋದಿಸುವ, ಅಪರಾಧ ಕೃತ್ಯಕ್ಕೆ ಪ್ರಚೋದನೆ ನೀಡುವ, ಅವಮಾನಿಸುವ, ಮಾನಹಾನಿ ಮಾಡುವ ಮತ್ತು ಸಾರ್ವಜನಿಕ ಶಾಂತಿಯನ್ನು ಭಂಗಗೊಳಿಸುವಂತಹ ಹೇಳಿಕೆಯನ್ನು ನೀಡಿದ್ದಾರೆ ಎಂದು ಎಫ್ಐಆರ್ನಲ್ಲಿ ಆರೋಪಿಸಲಾಗಿದೆ.
ನರಸಿಂಹಾನಂದ ಅವರು ವಿಡಿಯೋದಲ್ಲಿ ಗಾಜಿಯಾಬಾದ್ ಪೊಲೀಸ್ ಆಯುಕ್ತ ಮತ್ತು ಲೋನಿಯ ಸಹಾಯಕ ಪೊಲೀಸ್ ಆಯುಕ್ತರ ವಿರುದ್ಧ ಅವಾಚ್ಯ ಶಬ್ದಗಳನ್ನು ಬಳಸಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ. ಸದ್ಯ ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ನಿರಂತರವಾಗಿ ಧಾರ್ಮಿಕ ಭಾವನೆಗೆ ಧಕ್ಕೆ ತರುವಂತಹ, ಪ್ರಚೋದನಕಾರಿ ಹೇಳಿಕೆ ನೀಡುತ್ತಾ ಬಂದಿರುವ ಯತಿ ನರಸಿಂಹಾನಂದ, ಕಳೆದ ವರ್ಷ ಡಿಸೆಂಬರ್ನಲ್ಲಿ ಇಸ್ಲಾಂ ಧರ್ಮ ಪ್ರವಾದಿ ಮಹಮ್ಮದ್ ಪೈಗಂಬರರ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ್ದರು. ಆದರೆ ಈ ವಿಡಿಯೋವನ್ನು ಪೋಸ್ಟ್ ಮಾಡಿ ನರಸಿಂಹಾನಂದ ಹೇಳಿಕೆಯನ್ನು ಖಂಡಿಸಿದ ಹಿರಿಯ ಪತ್ರಕರ್ತ ಮೊಹಮ್ಮದ್ ಝುಬೈರ್ ಅವರ ವಿರುದ್ಧವೇ ಪ್ರಕರಣ ದಾಖಲಿಸಲಾಗಿದೆ.
ದೇಶದಲ್ಲಿ ಪ್ರಸ್ತುತ ಧಾರ್ಮಿಕ ದ್ವೇಷವನ್ನು ಬಿತ್ತುವವರನ್ನು ಮಹಾನ್ ವ್ಯಕ್ತಿಗಳಂತೆ ಸ್ಥಾನಮಾನ ನೀಡಿ ಗೌರವಿಸಲಾಗುತ್ತದೆ. ಆದರೆ ಜನರ ನಡುವೆ ಸೌಹಾರ್ದತೆಗೆ ಒತ್ತು ನೀಡುವವರಿಗೆ ದೇಶದ್ರೋಹಿಗಳೆಂಬ ಪಟ್ಟ ಕಟ್ಟಲಾಗುತ್ತದೆ. ದ್ವೇಷ, ಅವಹೇಳನಕಾರಿ ಭಾಷಣ ಮಾಡಿದವರ ವಿರುದ್ಧ ಜನರ ಪ್ರತಿಭಟನೆಯ ಒತ್ತಡದಿಂದಾಗಿ ದೂರು ದಾಖಲಿಸಲಾಗಿದೆ. ಬಳಿಕ ಪ್ರಕರಣ ಮುಚ್ಚಿಹೋಗುತ್ತದೆ.
