- ಬಿಟಿಎಂ 2ನೇ ಹಂತದಿಂದ ಜೆಪಿ ನಗರ ಮೆಟ್ರೋಗೆ ತೆರಳುತ್ತಿದ್ದ ಮಹಿಳೆ
- ಲಿಂಕ್ಡ್‌ಇನ್ ಮುಖಾಂತರ ಉಬರ್ ಕಂಪನಿಗೆ ಚಾಲಕನ ವರ್ತನೆಯ ಬಗ್ಗೆ ದೂರು
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮಹಿಳೆಯೊಬ್ಬರು ಉಬರ್ ಕ್ಯಾಬ್‌ನಲ್ಲಿ ಪ್ರಯಾಣಿಸುವಾಗ ಚಾಲಕ ಅನುಚಿತವಾಗಿ ನಡೆದುಕೊಂಡ ಘಟನೆ ನಡೆದಿದೆ.
ಮಹಿಳೆಯೂ ಬಿಟಿಎಂ 2ನೇ ಹಂತದಿಂದ ಜೆಪಿ ನಗರ ಮೆಟ್ರೋಗೆ ತೆರಳುತ್ತಿದ್ದರು. ಈ ಬಗ್ಗೆ ಮಹಿಳೆಯೂ ಲಿಂಕ್ಡ್ ಇನ್‌ನಲ್ಲಿ ಪೋಸ್ಟ್ ಹಾಕುವ ಮೂಲಕ ಚಾಲಕನ ವಿರುದ್ಧ ಆರೋಪ ಮಾಡಿದ್ದರು. ಮರುದಿನ ಚಾಲಕನ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದರು.
ಏನಿದು ಪ್ರಕರಣ?
ನಗರದಲ್ಲಿ ಮಹಿಳೆಯೊಬ್ಬರು ಬಿಟಿಎಂ 2ನೇ ಹಂತದಿಂದ ಉಬರ್ ಕ್ಯಾಬ್ ಬುಕ್ ಮಾಡಿದ್ದರು. ಚಾಲಕನು ಸರಿಯಾದ ಸಮಯಕ್ಕೆ ಬಂದು ಮಹಿಳೆಯನ್ನು ಪಿಕಪ್ ಮಾಡಿದ್ದಾನೆ.
“ಕ್ಯಾಬ್‌ನಲ್ಲಿ ಪ್ರಯಾಣ ಮಾಡುವಾಗ ಚಾಲಕ ಅಸಭ್ಯವಾಗಿ ವರ್ತಿಸಲು ಪ್ರಾರಂಭ ಮಾಡಿದ. ಇದರಿಂದ ಕೆಲಕಾಲ ಮುಜುಗರಕ್ಕೆ ಒಳಗಾಗಬೇಕಾಯಿತು. ನಾನು ತಲುಪಬೇಕಿದ್ದ ಸ್ಥಳಕ್ಕೆ ನಿಗದಿತ ಸಮಯಕ್ಕಿಂತ ಬೇಗ ಬಿಡಲು ಕೇಳಿದೆ. ಅದರಂತೆಯೇ, ಚಾಲಕ ಒಪ್ಪಿಕೊಂಡು ನನ್ನನ್ನು ಸ್ಥಳಕ್ಕೆ ಬಿಟ್ಟರು” ಎಂದು ಮಹಿಳೆ ಲಿಂಕ್ಡ್‌ಇನ್‌ನಲ್ಲಿ ಬರೆದುಕೊಂಡಿದ್ದಾರೆ.
“ಬಳಿಕ ಚಾಲಕನಿಗೆ ರೈಡ್‌ನ ದುಡ್ಡು ನೀಡಲು ಹೋದಾಗ ಆತನು ತನ್ನ ಖಾಸಗಿ ಭಾಗಗಳನ್ನು ತೋರಿಸಿದ್ದಾನೆ. ಇದರಿಂದ ನಾನು ಭಯಗೊಂಡು ತಕ್ಷಣ ಆ ಸ್ಥಳದಿಂದ ಓಡಿಬಂದೆ” ಎಂದಿದ್ದಾರೆ.
ಈ ಪೋಸ್ಟ್ ಮಾಡಿದ ಮರುದಿನ ಮಹಿಳೆಯು ಲಿಂಕ್ಡ್‌ಇನ್ ನಲ್ಲಿ ಮತ್ತೊಂದು ಪೋಸ್ಟ್ ಹಾಕಿದ್ದು, ಚಾಲಕನ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
“ಲಿಂಕ್ಡ್‌ಇನ್ ಮುಖಾಂತರ ನಾನು ಉಬರ್ ಕಂಪನಿಗೆ ಚಾಲಕನ ಅಸಭ್ಯ ವರ್ತನೆಯ ಬಗ್ಗೆ ದೂರು ನೀಡಿದ್ದೆ, ಅದರಂತೆಯೇ ಉಬರ್ ತಂಡವು ನನ್ನ ಸಂಪರ್ಕ ಮಾಡಿ, ನಿನ್ನೆ ನಡೆದ ಘಟನೆಯ ಬಗ್ಗೆ ಸಂಪೂರ್ಣ ಮಾಹಿತಿ ತೆಗೆದುಕೊಂಡಿದೆ. ಈಗ ಅದರಂತೆಯೇ ಚಾಲಕನ ವಿರುದ್ಧ ಉಬರ್ ತಂಡವು ಕ್ರಮ ಕೈಗೊಂಡಿದೆ” ಎಂದು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಹೋಟೆಲಿನ ಕಾಫಿ-ಟೀ, ತಿಂಡಿ-ತಿನಿಸುಗಳ ಬೆಲೆ ಏರಿಕೆ ಮಾಡುವುದು ಅನಿವಾರ್ಯ: ಪಿ ಸಿ ರಾವ್
“ಉಬರ್ ಪ್ರತಿಕ್ರಿಯೆಗೆ ಮತ್ತು ಲಿಂಕ್ಡ್‌ಇನ್‌ಗೆ ಕೃತಜ್ಞಳಾಗಿದ್ದೇನೆ. ಈ ವಿಷಯವನ್ನು ಉಬರ್ ಗಂಭೀರವಾಗಿ ಪರಿಗಣಿಸಿದೆ. ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ನೀಡಿ ಚಾಲಕನ ವಿರುದ್ಧ ಸೂಕ್ತ ಕ್ರಮಗಳನ್ನು ತೆಗೆದುಕೊಂಡಿದೆ. ಮುಂದೆ ಈ ರೀತಿಯ ಘಟನೆಗಳು ನಡೆಯಬಾರದು” ಎಂದಿದ್ದಾರೆ.