ಕ್ಷೇತ್ರ ಪುನರ್ ವಿಂಗಡಣೆ 1971ರ ಜನಗಣತಿ ಆಧಾರದ ಮೇಲೆ ಆಗಬೇಕು: ಡಿ.ಕೆ. ಶಿವಕುಮಾರ್

Date:

Advertisements

“ಕೇಂದ್ರ ಸರ್ಕಾರ ಕೇವಲ ಜನಸಂಖ್ಯೆ ಆಧಾರದ ಮೇಲೆ ಮಾತ್ರ ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆಗೆ ಮುಂದಾಗಿದ್ದು, ಇದರಿಂದ ಕರ್ನಾಟಕ, ತಮಿಳುನಾಡು, ಕೇರಳ, ತೆಲಂಗಾಣ, ಪಂಜಾಬ್ ಸೇರಿದಂತೆ ಪ್ರಗತಿಪರ ರಾಜ್ಯಗಳ ರಾಜಕೀಯ ಧ್ವನಿ ಹತ್ತಿಕ್ಕಲಾಗುತ್ತದೆ. ಹೀಗಾಗಿ, ಕೇವಲ ಜನಸಂಖ್ಯೆ ಮಾತ್ರವಲ್ಲದೇ, ಮಾನವ ಅಭಿವೃದ್ಧಿ, ತೆರಿಗೆ ಕೊಡುಗೆ, ಆಡಳಿತ, ಜನಸಂಖ್ಯೆ ನಿಯಂತ್ರಣದ ಸೂಚ್ಯಂಕಗಳ ಮಾನದಂಡಗಳ ಮೇಲೆ ಕ್ಷೇತ್ರ ಪುನರ್ ವಿಂಗಡಣೆ ಆಗಬೇಕು. ಜನಸಂಖ್ಯೆ ಆಧಾರದ ಮೇಲೆ ಕ್ಷೇತ್ರ ಪುನರ್ ವಿಂಗಡಣೆ ಮಾಡುವುದಾದರೆ, 1971ರ ಜನಗಣತಿ ಆಧಾರದ ಮೇಲೆ ಮರುವಿಂಗಡಣೆ ಮಾಡಬೇಕು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಆಗ್ರಹಿಸಿದರು.

ಜನಸಂಖ್ಯೆ ಆಧಾರದ ಮೇಲೆ ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆ ವಿರೋಧಿಸಿ ತಮಿಳುನಾಡಿನ ಸಿಎಂ ಎಂ.ಕೆ. ಸ್ಟಾಲಿನ್ ಅವರ ನೇತೃತ್ವದಲ್ಲಿ ಚೆನ್ನೈನಲ್ಲಿ ಶನಿವಾರ ನಡೆದ ಮೊದಲ ಜೆಎಸಿ(Joint Action Committee) ಸಭೆಯಲ್ಲಿ ಕರ್ನಾಟಕದ ಪರವಾಗಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಭಾಗವಹಿಸಿ, ಕೇಂದ್ರ ಸರ್ಕಾರದ ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆ ವಿಚಾರವಾಗಿ ಕರ್ನಾಟಕದ ನಿಲುವನ್ನು ತಿಳಿಸಿದರು.

“ನಮ್ಮ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರ ಸಂಪೂರ್ಣ ಬೆಂಬಲದೊಂದಿಗೆ ಈ ಸಭೆಯಲ್ಲಿ ಮಾತನಾಡುತ್ತಿದ್ದೇನೆ. ಅನಾರೋಗ್ಯದ ಕಾರಣ ಅವರು ಈ ಸಭೆಯಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ. ಆದರೆ ದೇಶದ ಒಕೂಟ ವ್ಯವಸ್ಥೆಯ ರಕ್ಷಣೆಯ ಈ ಐತಿಹಾಸಿಕ ಹೋರಾಟಕ್ಕೆ ಅವರ ಬೆಂಬಲವಿದೆ” ಎಂದು ತಿಳಿಸಿದರು.

Advertisements
WhatsApp Image 2025 03 22 at 2.39.47 PM

“ದೇಶದ ಸಂದಿಗ್ಧ ಪರಿಸ್ಥಿತಿಯಲ್ಲಿ ನಾವೆಲ್ಲರೂ ಸೇರಿದ್ದೇವೆ. ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯ ಅಡಿಪಾಯವಾಗಿರುವ ಒಕ್ಕೂಟ ವ್ಯವಸ್ಥೆಯೇ ಇಂದು ಅಪಾಯಕ್ಕೆ ಸಿಲುಕಿದೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನವನ್ನು ಹಂತ ಹಂತವಾಗಿ ಇಂದು ನಾಶ ಮಾಡುವ ಪ್ರಯತ್ನ ನಡೆಯುತ್ತಿದೆ. ದಬ್ಬಾಳಿಕೆಗೆ ತಲೆಬಾಗುವ ಅಥವಾ ಅದನ್ನು ವಿರೋಧಿಸಿ ಮೇಲೇಳುವ ಆಯ್ಕೆ ಮಾತ್ರ ನಮ್ಮ ಮುಂದೆ ಇದೆ. ಹೀಗಾಗಿ ಕರ್ನಾಟಕ, ತಮಿಳುನಾಡು ಸೇರಿದಂತೆ ಈ ಸಭೆಯಲ್ಲಿ ಭಾಗವಹಿಸಿರುವ ಎಲ್ಲ ಪ್ರಗತಿಪರ ರಾಜ್ಯಗಳು ಪ್ರತಿರೋಧವನ್ನು ಆಯ್ಕೆ ಮಾಡಿಕೊಂಡಿದ್ದೇವೆ” ಎಂದು ತಿಳಿಸಿದರು.

“ಕೇವಲ ಜನಸಂಖ್ಯೆಯನ್ನೇ ಮಾನದಂಡವಾಗಿಟ್ಟುಕೊಂಡು ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆ ಮಾಡಲಾಗುತ್ತಿದೆ. ಇದು ದಕ್ಷಿಣ ರಾಜ್ಯಗಳ ಮೇಲೆ ನಡೆಸಲಾಗುತ್ತಿರುವ ರಾಜಕೀಯ ದಬ್ಬಾಳಿಕೆ. ಜನಸಂಖ್ಯೆ ನಿಯಂತ್ರಣ, ಅಕ್ಷರಸ್ಥರ ಸಂಖ್ಯೆ ಏರಿಕೆ ಹಾಗೂ ಮಹಿಳೆಯರ ಸಬಲೀಕರಣದಲ್ಲಿ ಯಶಸ್ಸು ಸಾಧಿಸಿರುವ ನಮ್ಮ ರಾಜ್ಯಗಳನ್ನು ಕುಗ್ಗಿಸುವ ಪ್ರಯತ್ನ ಕೇಂದ್ರ ಮಾಡುತ್ತಿದೆ. ಕರ್ನಾಟಕ, ತಮಿಳುನಾಡು, ಕೇರಳ ಹಾಗೂ ಇತರೆ ದಕ್ಷಿಣ ಭಾರತದ ರಾಜ್ಯಗಳು ಭಾರತದ ಪ್ರಗತಿಯಲ್ಲಿ ಗಣನೀಯ ಕೊಡುಗೆ ನೀಡಿವೆ. ಈ ರಾಜ್ಯಗಳು ಶಿಕ್ಷಣ, ಆರೋಗ್ಯ ಸುಧಾರಣೆ ಹಾಗೂ ಸುಸ್ಥಿರ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿವೆ. ಆದರೂ ಕೇಂದ್ರ ಸರ್ಕಾರ ನಮ್ಮ ಸಂಸತ್ ಪ್ರತಿನಿಧಿತ್ವವನ್ನು ಕಡಿತಗೊಳಿಸಲು ಮುಂದಾಗಿದೆ. ಆ ಮೂಲಕ ರಾಷ್ಟ್ರ ಮಟ್ಟದಲ್ಲಿ ನಮ್ಮ ಧ್ವನಿಯನ್ನು ಹತ್ತಿಕ್ಕುವ ಪ್ರಯತ್ನ ಮಾಡಲಾಗುತ್ತಿದೆ. ಇದು ಕೇವಲ ಅನ್ಯಾಯ ಮಾತ್ರವಲ್ಲ, ಇದೊಂದು ದ್ರೋಹ. ಉತ್ತಮ ಆಡಳಿತ ಹಾಗೂ ಪ್ರಗತಿ ಸಾಧಿಸಿರುವ ರಾಜ್ಯಗಳಿಗೆ ಮಾನ್ಯತೆ ಸಿಗಬೇಕೇ ಹೊರತು ಕಡೆಗಣಿಸಬಾರದು” ಎಂದು ಆಗ್ರಹಿಸಿದರು.

“ಕರ್ನಾಟಕ ರಾಜ್ಯವು ಕೇಂದ್ರ ಸರ್ಕಾರದ ತೆರಿಗೆ ಆದಾಯದಲ್ಲಿ ವಾರ್ಷಿಕವಾಗಿ 4 ಲಕ್ಷ ಕೋಟಿ ಕೊಡುಗೆ ನೀಡುತ್ತಿದೆ. ಆದರೂ ಕೇಂದ್ರದಿಂದ ನಮಗೆ ಸಿಗುತ್ತಿರುವುದೇನು? ತೆರಿಗೆ ಹಂಚಿಕೆಯಲ್ಲಿ ಕೇವಲ 45 ಸಾವಿರ ಕೋಟಿ ಹಾಗೂ ಅನುದಾನದ ಮೂಲಕ 15 ಸಾವಿರ ಕೋಟಿ ಮಾತ್ರ. ಕರ್ನಾಟಕ ರಾಜ್ಯ ನೀಡುವ ಪ್ರತಿ ಒಂದು ರೂಪಾಯಿಗೆ ಕರ್ನಾಟಕ ರಾಜ್ಯಕ್ಕೆ ಮರಳಿ ಸಿಗುತ್ತಿರುವುದು ಕೇವಲ 13 ಪೈಸೆ ಮಾತ್ರ. ಇದು ಕೇವಲ ಆರ್ಥಿಕ ಅನ್ಯಾಯ ಮಾತ್ರವಲ್ಲ, ನಮ್ಮ ಸಂಪನ್ಮೂಲದ ವ್ಯವಸ್ಥಿತ ಲೂಟಿ” ಎಂದು ಆರೋಪಿಸಿದರು.

“15ನೇ ಹಣಕಾಸು ಆಯೋಗವು ಜನಸಂಖ್ಯೆ ಆಧಾರದ ಮೇಲೆ ಅನುದಾನ ಹಂಚಿಕೆ ಮಾಡಿರುವ ಕಾರಣಕ್ಕೆ ಕರ್ನಾಟಕ ರಾಜ್ಯಕ್ಕೆ ನಷ್ಟವಾಗಿದೆ. ಈಗ ಪ್ರಸ್ತಾಪಿಸಲಾಗಿರುವ ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆ ಮೂಲಕ ನಮ್ಮ ರಾಜಕೀಯ ಧ್ವನಿಯನ್ನು ಹತ್ತಿಕ್ಕಲಾಗುವುದು. ಜತೆಗೆ ಸಂಸತ್ತಿನಲ್ಲಿ ನಮ್ಮ ಹಕ್ಕನ್ನು ಪ್ರತಿಪಾದಿಸಲು ಅವಕಾಶವನ್ನು ಕಸಿಯುವ ಪ್ರಯತ್ನ ನಡೆಯುತ್ತಿದೆ” ಎಂದರು.

WhatsApp Image 2025 03 22 at 2.39.48 PM

“ಇದು ಕೇವಲ ಸಂಖ್ಯೆಗಳಿಗಾಗಿ ನಡೆಯುತ್ತಿರುವ ಹೋರಾಟವಲ್ಲ. ಇದು ನಮ್ಮ ಘನತೆ, ಸಂಸ್ಕೃತಿ ಹಾಗೂ ನಮ್ಮ ಪರಂಪರೆ ವಿಚಾರ. ಕರ್ನಾಟಕವು ಬಸವಣ್ಣನವರ ವಚನಗಳಿಂದ ಕುವೆಂಪು ಅವರವರೆಗೂ 1,500 ವರ್ಷಗಳ ಸಾಹಿತ್ಯದ ಪರಂಪರೆ ಹೊಂದಿದೆ. ತಮಿಳುನಾಡಿನ ಸಂಗಮ ಕಾವ್ಯ, ಕೇರಳದ ಸಾಂಪ್ರದಾಯಿಕ ಕಲೆಗಳು ಹಾಗೂ ಆಂಧ್ರ ಪ್ರದೇಶದ ತೆಲುಗು ಪರಂಪರೆ ಕೇವಲ ಪ್ರಾದೇಶಿಕ ಸಂಪತ್ತಲ್ಲ. ಇವೆಲ್ಲವೂ ಭಾರತದ ಆತ್ಮಗಳಾಗಿವೆ. ಆದರೂ ಕೇಂದ್ರ ಸರ್ಕಾರ ಒಂದು ದೇಶ, ಒಂದು ಭಾಷೆ ನೀತಿಯನ್ನು ಹೇರಲು ಮುಂದಾಗಿದೆ. ಆ ಮೂಲಕ ಭಾಷಾ ವೈವಿಧ್ಯವನ್ನು ನಿರ್ಮೂಲನೆ ಮಾಡಲು ಹೊರಟಿದೆ. ರೈಲ್ವೆ ಚಿಹ್ನೆಗಳಿಂದ ಸ್ಪರ್ಧಾತ್ಮಕ ಪರೀಕ್ಷೆಗಳವರೆಗೂ ಹಿಂದಿ ಹೇರಿಕೆ ಮಾಡುತ್ತಿರುವುದು ನಮ್ಮ ಭಾಷಾ ಹಾಗೂ ಸಾಂಸ್ಕೃತಿಕ ಏಕತೆಗೆ ಧಕ್ಕೆ ತಂದಿದೆ. ಕನ್ನಡ, ತಮಿಳು, ತೆಲುಗು, ಮಲೆಯಾಳಂ ಹಾಗೂ ಇತರ ಪ್ರಾದೇಶಿಕ ಭಾಷೆಗಳು ಕೇವಲ ಆಡುಭಾಷೆ ಮಾತ್ರವಲ್ಲ, ಇವು ನಮ್ಮ ನಾಗರಿಕತೆಯ ಜೀವವಾಗಿದೆ ಎಂಬುದನ್ನು ಸ್ಪಷ್ಟಪಡಿಸಲು ಬಯಸುತ್ತೇನೆ” ಎಂದು ಹೇಳಿದರು.

ಇದನ್ನು ಓದಿದ್ದೀರಾ? ಮಲ್ಪೆ | ‘ನಮಗೆ ಲಾಠಿ ಏಟು ಬಿದ್ದಾಗ ಪ್ರಮೋದ್ ಮಧ್ವರಾಜ್ ಬೆಂಬಲ ನೀಡಿರಲಿಲ್ಲ’ ಎಂದ ಕಾಂಗ್ರೆಸ್ ಮುಖಂಡ; ಭಾಷಣಕ್ಕೆ ಅಡ್ಡಿ

ಕರ್ನಾಟಕ, ತಮಿಳುನಾಡು, ಕೇರಳ ಹಾಗೂ ಎಲ್ಲಾ ಪ್ರಗತಿಯ ರಾಜ್ಯಗಳು ಮೌನವಾಗಿರುವುದಿಲ್ಲ. ಈ ವಿಚಾರವಾಗಿ ಸದನದಲ್ಲಿ, ನ್ಯಾಯಾಲಯಗಳಲ್ಲಿ ಹಾಗೂ ಜನರ ಮಧ್ಯೆ ರಸ್ತೆಗಳಲ್ಲಿ ಹೋರಾಟ ನಡೆಸುತ್ತೇವೆ. ಆ ಮೂಲಕ ನಮ್ಮ ಹಕ್ಕು, ನಮ್ಮ ಸಂಪನ್ಮೂಲ ಹಾಗೂ ನಮ್ಮ ಗುರುತನ್ನು ಉಳಿಸಿಕೊಳ್ಳುತ್ತೇವೆ ಎಂದು ಕೇಂದ್ರ ಸರ್ಕಾರಕ್ಕೆ ಸ್ಪಷ್ಟ ಸಂದೇಶ ಕಳುಹಿಸಬೇಕಿದೆ. ಪೆರಿಯಾರ್ ಅವರ ಹೋರಾಟ, ಅಣ್ಣಾದೊರೈ ಅವರ ನಾಯಕತ್ವ, ಬಸವಣ್ಣನವರ ಕಿಚ್ಚನ್ನು ನಾವು ರೂಢಿಸಿಕೊಳ್ಳಬೇಕು. ಕರ್ನಾಟಕ ಹಾಗೂ ತಮಿಳುನಾಡು ಒಟ್ಟಾಗಿ ನಿಂತರೆ ಯಾವುದೇ ಶಕ್ತಿ ನಮ್ಮನ್ನು ತಡೆಯಲು ಸಾಧ್ಯವಿಲ್ಲ. ನಮ್ಮ ಧ್ವನಿ ದುರ್ಬಲಗೊಳಿಸಲು, ನಮ್ಮ ಸಂಪನ್ಮೂಲ ಲೂಟಿ ಮಾಡಲು, ನಮ್ಮ ಸಂಸ್ಕೃತಿ ನಾಶಪಡಿಸಲು ನಾವು ಅವಕಾಶ ನೀಡುವುದಿಲ್ಲ. ನಾವೆಲ್ಲರೂ ಒಟ್ಟಾಗಿ ಭಾರತದ ಒಕ್ಕೂಟ ವ್ಯವಸ್ಥೆಯನ್ನು ಪುನರ್ ಸ್ಥಾಪಿಸಬೇಕಿದೆ. ಈ ದೇಶದಲ್ಲಿರುವ ವೈವಿಧ್ಯತೆಯನ್ನು ಸಂಭ್ರಮಿಸಬೇಕು, ಸಮಾನತೆಯನ್ನು ಎತ್ತಿ ಹಿಡಿಯಬೇಕು ಎಂದು ಡಿಸಿಎಂ ಡಿ ಕೆ ಶಿವಕುಮಾರ್ ತಿಳಿಸಿದರು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈದಿನ ವಿಶೇಷ | ಧರ್ಮಸ್ಥಳ: ಉತ್ತರ ನೀಡಿದ ಗೃಹ ಸಚಿವರು; ಈಗಲೂ ಉಳಿದ ಹಲವು ಪ್ರಶ್ನೆಗಳು

ಸದನದಲ್ಲಿ ನಿಂತು ಷಡ್ಯಂತ್ರ ಎನ್ನುವವರಿಗೆ, ಎಸ್‌ಐಟಿ ರಚನೆಯಾಗಿದ್ದೇಕೆ? ಕಾನೂನು ಏನು ಹೇಳುತ್ತೆ?...

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಪಟ್ಟಣ ಪಂಚಾಯತ್ ಚುನಾವಣೆ: ಮೂರರಲ್ಲಿ ಕಾಂಗ್ರೆಸ್‌ಗೆ ಮೇಲುಗೈ; ಎರಡರಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಗೆ ಜಯ

ಕರ್ನಾಟಕದಲ್ಲಿ ಐದು ಪ್ರದೇಶಗಳು ತಾಲೂಕು ಸ್ಥಾನಕ್ಕೇರಿದ ಬಳಿಕ ರಚನೆಯಾದ ಪಟ್ಟಣ ಪಂಚಾಯಿತಿಗೆ...

Download Eedina App Android / iOS

X