ಇತ್ತೀಚಿನ ನಾಗ್ಪುರ ಹಿಂಸಾಚಾರದಲ್ಲಿ ಉಂಟಾದ ಆಸ್ತಿ ಹಾನಿಯ ನಷ್ಟವನ್ನು ಸರ್ಕಾರವು ಗಲಭೆಕೋರರಿಂದ ವಸೂಲಿ ಮಾಡಲಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಶನಿವಾರ ಹೇಳಿದ್ದಾರೆ.
ಹಿಂಸಾಚಾರ ಮಾಡಿದ ಅಪರಾಧಿಗಳು ಈ ಹಾನಿಯ ನಷ್ಟವನ್ನು ನೀಡಲು ವಿಫಲವಾದರೆ ಅವರ ಆಸ್ತಿ ವಶಪಡಿಸಿಕೊಳ್ಳಲಾಗುವುದು. ಬಳಿಕ ಅವರ ಆಸ್ತಿ ಮಾರಾಟ ಮಾಡಿ ಈ ಹಾನಿಯ ನಷ್ಟವನ್ನು ನಾವು ತುಂಬುತ್ತೇವೆ ಎಂದು ಹೇಳಿದರು.
ಇದನ್ನು ಓದಿದ್ದೀರಾ? ನಾಗ್ಪುರ ಹಿಂಸಾಚಾರ | ವಿಎಚ್‌ಪಿ, ಬಜರಂಗ ದಳದ ಮುಖಂಡರೂ ಸೇರಿ 78 ಮಂದಿ ಬಂಧನ
“ಈ ಹಿಂಸಾಚಾರದ ವೇಳೆ ಪೊಲೀಸ್ ಅಧಿಕಾರಿಗಳ ಮೇಲೆ ದಾಳಿ ಮಾಡಿದವರ ಮೇಲೆ ನಾವು ಕಠಿಣ ಕ್ರಮವನ್ನು ಕೈಗೊಳ್ಳುತ್ತೇವೆ. ಈ ದಾಳಿಯನ್ನು ನಾವು ಗುಪ್ತಚರ ವೈಫಲ್ಯ ಎಂದು ಹೇಳಲಾಗುವುದಿಲ್ಲ. ಆದರೆ ಗುಪ್ತಚರ ನಿರ್ವಹಣೆ ಉತ್ತಮವಾಗಿರಬಹುದಿತ್ತು ಎಂದು ಹೇಳಬಹುದು” ಎಂದು ಫಡ್ನವೀಸ್ ಒತ್ತಿ ಹೇಳಿದ್ದಾರೆ.
ಈವರೆಗೆ ಈ ಹಿಂಸಾಚಾರಕ್ಕೆ ಸಂಬಂಧಿಸಿದಂತೆ 104 ಜನರನ್ನು ಗುರುತಿಸಲಾಗಿದ್ದು, 12 ಅಪ್ರಾಪ್ತ ವಯಸ್ಕರು ಸೇರಿದಂತೆ 92 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಮಾರ್ಚ್ 17ರಂದು ಛತ್ರಪತಿ ಸಂಭಾಜಿನಗರದಲ್ಲಿ ಔರಂಗಜೇಬ್ ಸಮಾಧಿಯನ್ನು ತೆಗೆದುಹಾಕುವಂತೆ ಒತ್ತಾಯಿಸಿ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ನಡೆಸಿದ ಪ್ರತಿಭಟನೆಯ ವೇಳೆ ಮುಸ್ಲಿಮರ ಪವಿತ್ರ ಗ್ರಂಥವನ್ನು ಸುಡಲಾಗಿದೆ ಎಂಬ ವದಂತಿಯೇ ಈ ಹಿಂಸಾಚಾರಕ್ಕೆ ಕಾರಣವಾಗಿದೆ. ಸುಮಾರು 33 ಪೊಲೀಸ್ ಸಿಬ್ಬಂದಿಗಳು ಗಾಯಗೊಂಡಿದ್ದಾರೆ. ಈ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ವಿಎಚ್‌ಪಿ ಮುಖಂಡರು, ಮುಸ್ಲಿಂ ಮುಖಂಡರು ಸೇರಿದಂತೆ ಒಟ್ಟು 105 ಮಂದಿಯನ್ನು ಬಂಧಿಸಲಾಗಿದೆ.
ಇದನ್ನು ಓದಿದ್ದೀರಾ? ನಾಗ್ಪುರ ಹಿಂಸಾಚಾರ ಪೂರ್ವಯೋಜಿತ, ‘ಛಾವಾ’ ಚಿತ್ರದಿಂದಾಗಿ ಔರಂಗಜೇಬ್ ಮೇಲೆ ಆಕ್ರೋಶ: ಫಡ್ನವೀಸ್
ಇನ್ನು ಮಾರ್ಚ್ 30ರಂದು ನಾಗ್ಪುರಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಲಿದ್ದಾರೆ. ಹಿಂಸಾಚಾರದಿಂದಾಗಿ ನಿಗದಿಪಡಿಸಿದ ಭೇಟಿಯಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ಸಿಎಂ ಹೇಳಿದ್ದಾರೆ.
ಈ ಹಿಂದೆ ಸಂಭಾಲ್ ಹಿಂಸಾಚಾರದ ಸಂದರ್ಭದಲ್ಲಿ ಉತ್ತರ ಪ್ರದೇಶ ಸರ್ಕಾರವೂ ಹಾನಿಯ ವೆಚ್ಚವನ್ನು ಪ್ರತಿಭಟನಾಕಾರರಿಂದ ವಸೂಲಿ ಮಾಡಲಾಗುವುದು. ಅವರ ಆಸ್ತಿ ಮುಟ್ಟುಗೋಲು ಹಾಕಲಾಗುವುದು ಎಂದು ಹೇಳಿತ್ತು. ಆದರೆ ಈ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು.
ಅರೋಪಿಯ ಬದಲಾಗಿ ಆಸ್ತಿ ಕಿತ್ತುಕೊಂಡು ಆರೋಪಿಯ ಪೂರ್ಣ ಕುಟುಂಬಕ್ಕೆ ಶಿಕ್ಷೆ ವಿಧಿಸುವುದು ಸರಿಯಲ್ಲ ಎಂಬ ವಾದ ಕೇಳಿಬಂದಿತ್ತು. ಹಾಗೆಯೇ ಈ ಪೈಕಿ ಹಲವು ಮಂದಿ ನಿರಪರಾಧಿಗಳು, ನಿರಪರಾಧಿಗಳ ಆಸ್ತಿಯನ್ನು ಕಿತ್ತುಕೊಂಡಂತೆ ಆಗುತ್ತದೆ ಎಂದು ನೆಟ್ಟಿಗರು ಹೇಳಿದ್ದರು.
