ಜಾನಪದ ಉತ್ಸವದಲ್ಲಿ ಜಾನಪದ ಹಾಡುಗಳು ಇಲ್ಲದೆ ಕೇವಲ ಚಲನಚಿತ್ರ ಗೀತೆಗಳಿಗೆ ಮಾರುಹೋದರೆ ಇಂದಿನ ಕಾರ್ಯಕ್ರಮ ಹೇಗೆ ಅರ್ಥ ಗಳಿಸುತ್ತದೆ. ಮೊಬೈಲ್ ನಲ್ಲಿ ನಿರತರಾಗಿರುವ ವಿದ್ಯಾರ್ಥಿಗಳಲ್ಲಿ ಶಿಸ್ತು ಮತ್ತು ಸಂಸ್ಕಾರ ಕಾಣದಿರುವುದು ಬೇಸರ ಮೂಡಿಸಿದೆ ಎಂದು ರಂಗಕಲಾವಿದೆ ಶ್ರೀಮತಿ ಬಿ.ಜಯಶ್ರೀ ದೇವಿ ಬೇಸರ ವ್ಯಕ್ತಪಡಿಸಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಜಾನಪದ ಉತ್ಸವ ಕಾರ್ಯಕ್ರಮ ನೆರವೇರಿಸಿ ಮಾತನಾಡಿದ ಅವರು ಜಾನಪದ ಉತ್ಸವ ಎಂಬ ಎಂಬ ಅಭೂತಪೂರ್ವ ಕಾರ್ಯಕ್ರಮ ಮಾಡಿ ಕೇವಲ ಚಲನಚಿತ್ರ ಗೀತೆಗಳ ಜೊತೆಗೆ ವಾದ್ಯಗೋಷ್ಠಿ ಮಾಡಿ ತಾವೆಲ್ಲರೂ ಕುಣಿದು ಕುಪ್ಪಳಿಸುವ ಕೆಲಸ ಮಾಡುವುದು ಸರಿಯಲ್ಲ. ಜಾನಪದಕ್ಕೆ ಅರ್ಥ ನೀಡುವ ಕಾರ್ಯಕ್ರಮ ಎನಿಸಲಿಲ್ಲ ಎಂದು ವಿಷಾದಿಸಿದರು.

ಜಾನಪದ ಉತ್ಸವದಲ್ಲಿ ಹಾಡು, ಕಲೆ,ಸೋಬಾನೆ ಪದಗಳ ಮೂಲಕ ಜಾನಪದ ಸೊಗಡನ್ನು ಬಿಂಬಿಸುವ ಕಾರ್ಯಕ್ರಮ ಇದಾಗದಿರುವುದು ಬೇಸರ ಮೂಡಿಸಿದೆ. ಯಾರು ಏನೇ ಬೈದು ಕೊಂಡರು ನನಗೆ ಬೇಸರವಿಲ್ಲ, ಐ ಡೊಂಟ್ ಕೇರ್ ಎಂದ ಅವರು ಸೊಗಡಿನ ಕಂಪನ್ನು ಪಸರಿಸುವ ಕೆಲಸವನ್ನು ಮಾಡದಿರುವ ಬಗ್ಗೆ ಎಚ್ಚೆತ್ತು ಮುನ್ನಡೆಯಬೇಕಿದೆ ಎಂದರು.
ನಾಟಕ ರಂಗಭೂಮಿ ಸೇರಿದಂತೆ ಜಾನಪದ ಸೊಗಡನ್ನು ಉಳಿಸುವ ನಿಟ್ಟಿನಲ್ಲಿ ಸಂಸ್ಕೃತಿ ಮತ್ತು ಪರಂಪರೆಯನ್ನು ಹಿಂದಿನ ಪೀಳಿಗೆ ಉಳಿಸುವ ಕೆಲಸ ಮಾಡಬೇಕಿದೆ. ಆಗ ಮಾತ್ರ ನಮ್ಮ ಕಲೆ ಸಂಸ್ಕೃತಿ ಉಳಿಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದ ಅವರು ಈ ಕಾರ್ಯಕ್ರಮ ನಾನೇ ನಿರ್ವಹಣೆ ಮಾಡಿದ್ದರೆ ಎಲ್ಲಾ ಜನಪದ ಶೈಲಿ ಮೆಳೆಸುವಂತೆ ಮಾಡುತ್ತಿದ್ದೆ. ಕೇವಲ ಹೆಣ್ಣು ಮಕ್ಕಳು ಮಾತ್ರ ಅಲಂಕಾರ ಮಾಡಿಕೊಂಡು ಗಂಡು ಮಕ್ಕಳು ಜೀನ್ಸ್ ಪ್ಯಾಂಟ್ ಧರಿಸಿರುವುದು ಉತ್ಸವದ ಅರ್ಥ ಕಳೆದುಕೊಂಡಿದೆ ಎಂದರು.

ಪ್ರಾಂಶುಪಾಲ ಪ್ರಸನ್ನಕುಮಾರ್ ಮಾತನಾಡಿ ನಿಮ್ಮ ಈ ಶಿಸ್ತು ಸಂಸ್ಕಾರ ಮತ್ತು ಮೊಬೈಲ್ ಗೀಳಿನ ನಡೆ ಕಂಡು ಅಥಿತಿಯಾಗಿ ಕಾರ್ಯಕ್ರಮದ ಉದ್ಘಾಟನೆಗೆ ಬಂದಿದ್ದ ಜಯಶ್ರೀ ಅಮ್ಮನವರು ತುಂಬಾ ಬೇಸರ ಮಾಡಿಕೊಂಡಿದ್ದಾರೆ. ಮತ್ತೆ ಹೇಗೆ ಕಾರ್ಯಕ್ರಮಕ್ಕೆ ಅವರನ್ನು ಕರೆಯೋದು ಎಂದು ವಿದ್ಯಾರ್ಥಿಗಳಿಗೆ ಪ್ರಶ್ನಿಸಿ ಕಾರ್ಯಕ್ರಮದಲ್ಲಿ ಶೋಭೆ ತರುವ ಕೆಲಸ ಮಾಡಲು ತಿಳಿ ಹೇಳಿದರು.
ಉತ್ಸವದಲ್ಲಿ ಹಳ್ಳಿಗಾಡಿನ ವಾತಾವರಣವನ್ನು ಕಾಲೇಜು ಆವರಣದಲ್ಲಿ ಸೃಷ್ಟಿಸಲಾಗಿತ್ತು. ಕಾರ್ಯಕ್ರಮದಲ್ಲಿ ತಮಟೆ ನರಸಮ್ಮ ಸೇರಿದಂತೆ ಕಾಲೇಜಿನ ಉಪನ್ಯಾಸಕರು ಉಪಸ್ಥಿತರಿದ್ದರು.