ಕೊಡಗು ಜಿಲ್ಲಾ ಕಸಾಪ, ವಿರಾಜಪೇಟೆ ತಾಲೂಕು ಕಸಾಪ, ಸರಕಾರಿ ಪ್ರಥಮ ದರ್ಜೆ ಕಾಲೇಜು ವಿರಾಜಪೇಟೆ ಸಂಯುಕ್ತಾಶ್ರಯದಲ್ಲಿ ನಡೆದ ‘ ನಾ ಡಿಸೋಜಾ ಮಕ್ಕಳ ಸಾಹಿತ್ಯ ದತ್ತಿ ಪುರಸ್ಕಾರ’ ಕಾರ್ಯಕ್ರಮದಲ್ಲಿ ಗಾಳಿಬೀಡು ನವೋದಯ ವಿದ್ಯಾಲಯದ ಉಪನ್ಯಾಸಕ ಹಾಗೂ ಸಾಹಿತಿ ಮಾರುತಿ ದಾಸಣ್ಣ ಮಾತನಾಡಿ ‘ ಅಂತರ್ಜಾಲ ಯುಗದಲ್ಲಿ ಗ್ರಂಥಾಲಯ ಮರೆಯುವಂತಿಲ್ಲ, ಯುವಕರು ಓದಿನ ಕಡೆಗೆ ಗಮನ ಹರಿಸಬೇಕು ‘ ಎಂದರು.
” ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿ ನಡೆದ 80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ನಾ ಡಿಸೋಜಾರವರು ಭಾಗವಹಿಸಿದ್ದನ್ನು ನೆನಪಿಸಿಕೊಂಡರು. ಮಕ್ಕಳ ಸಾಹಿತ್ಯ ವಿಶಿಷ್ಟವಾದದ್ದು, ಮಕ್ಕಳ ಬಗ್ಗೆ ಹಲವಾರು ಕಥೆಗಳನ್ನು ರಚಿಸಿದ್ದಾರೆ. ಅವರು ಪಂಚತಂತ್ರದ ಕಥೆಗಳ ಮುಂದೆ ಯಾವುದೇ ಮಕ್ಕಳ ಕಥೆಗಳು ಇಲ್ಲ ಎನ್ನುವ ಮಾತನ್ನು ಕೂಡ ಹೇಳಿದ್ದರು. ಅಲ್ಲದೆ, ಕನ್ನಡ ಸಾರಸ್ವತ ಲೋಕದಲ್ಲಿ ಹಲವಾರು ಹಿರಿಯ ಸಾಹಿತಿಗಳು ತಮ್ಮ ವಿಚಾರವನ್ನು ಮಂಡಿಸಿದ್ದಾರೆ ಅವೆಲ್ಲವನ್ನು ಓದುವ ಅವಕಾಶ ವಿದ್ಯಾರ್ಥಿಗಳಿಗೆ ಇದೆ. ಅದನ್ನು ಸದುಪಯೋಗಪಡಿಸಿಕೊಳ್ಳಬೇಕು ” ಎಂದು ಹೇಳಿದರು.
ಕೊಡಗು ಜಿಲ್ಲಾ ಕಸಪಾ ಮಾಜಿ ಅಧ್ಯಕ್ಷ ಟಿ ಪಿ ರಮೇಶ್ ಮಾತನಾಡಿ ” ನಾಬರ್ಟ್ ಡಿಸೋಜ ಇದು ನಾ ಡಿಸೋಜಾರವರ ಹೆಸರು. ಸರ್ಕಾರಿ ನೌಕರರಾಗಿದ್ದು ಸಾಹಿತ್ಯ ಲೋಕದಲ್ಲಿ ಹೆಚ್ಚು ಅತ್ಯುತ್ತಮ ಕೃತಿಗಳನ್ನು ನೀಡಿದ ಸರಳ ಸಜ್ಜನ ಸಾಹಿತಿ. ಅವರಿಗೆ ಡಾಕ್ಟರೇಟ್ ಪದವಿ ಬಂದಿದ್ದರು ತಮ್ಮ ಹೆಸರಿನೊಂದಿಗೆ ಡಾಕ್ಟರ್ ಪದವನ್ನು ಸೇರಿಸಿಕೊಳ್ಳುತ್ತಿರಲಿಲ್ಲ. 2014 ರಲ್ಲಿ ಮಡಿಕೇರಿಯಲ್ಲಿ ನಡೆದ 80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದರು. ಆ ಸಂದರ್ಭದಲ್ಲಿ ನಾನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷನಾಗಿದ್ದು ಸಮ್ಮೇಳನದ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುವ ಭಾಗ್ಯ ಸಿಕ್ಕಿತ್ತು. ಕೊಡಗು ಕಂಡು ಕೇಳರಿಯದಷ್ಟು ಸಾಹಿತಿಗಳು, ಕನ್ನಡ ಅಭಿಮಾನಿಗಳು ಜಿಲ್ಲೆಗೆ ಆಗಮಿಸಿದ್ದರು. ಸುಮಾರು 3 ಲಕ್ಷ ಸಾಹಿತ್ಯಾಭಿಮಾನಿಗಳು ಆಗಮಿಸಿದ್ದು ದಾಖಲೆಯೇ ಸರಿ ” ಎಂದರು.
ವಿರಾಜಪೇಟೆ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ ಕೂಡಕಂಡಿ ದಯಾನಂದ ಮಾತನಾಡಿ ‘ ಕನ್ನಡ ಸಾಹಿತ್ಯ ಪರಿಷತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಮಾಡುತ್ತಿರುವ ಕೆಲಸಗಳ ಕುರಿತು ಶ್ಲಾಘನೆ ವ್ಯಕ್ತಪಡಿಸಿದರು. ಕನ್ನಡ ನಾಡು ನುಡಿ,ಆಚಾರ-ವಿಚಾರ ಪರಂಪರೆಗಳನ್ನು ವಿದ್ಯಾರ್ಥಿಗಳಿಗೆ ತಿಳಿಯಪಡಿಸುವ ಕಾರ್ಯ ಮಾಡುತ್ತಿರುವುದು ಪ್ರೋತ್ಸಾಹದಾಯಕ ‘ ಎಂದರು.
ವಿರಾಜಪೇಟೆ ಉಪವಿಭಾಗದ ಪೊಲೀಸ್ ಉಪ ಅಧೀಕ್ಷಕ ಎಸ್ ಮಹೇಶ್ ಕುಮಾರ್ ಮಾತನಾಡಿ ” ಇಂದಿನ ವಿದ್ಯಾರ್ಥಿಗಳು, ಯುವ ಪೀಳಿಗೆ ಸಾಹಿತ್ಯದತ್ತ ಮುಖ ಮಾಡದೆ ವಿರುದ್ಧ ದಿಕ್ಕಿನಲ್ಲಿ ಹೋಗುತ್ತಿದೆ. ಅವರೆಲ್ಲರನ್ನು ಸಾಹಿತ್ಯ, ಸಂಸ್ಕೃತಿ ಮತ್ತು ಸಾಂಸ್ಕೃತಿಕ ವಿಚಾರಗಳ ಕಡೆಗೆ ಕರೆದುಕೊಂಡು ಬರುವ ಕೆಲಸ ಮಾಡಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಸಾಹಿತ್ಯ ಪರಿಷತ್ತು ಕೊಡಗು ಜಿಲ್ಲೆಯಲ್ಲಿ ಈ ಕೆಲಸ ಮಾಡುತ್ತಿರುವುದು ಶ್ಲಾಘನೀಯ ” ಎಂದರು.
ಕೊಡಗು ಜಿಲ್ಲಾ ಕಸಾಪ ಅಧ್ಯಕ್ಷ ಎಂ ಪಿ ಕೇಶವ ಕಾಮತ್ ಮಾತನಾಡಿ ಸಾಹಿತ್ಯ ಪರಿಷತ್ತು ನಡೆಸುತ್ತಿರುವ ಕಾರ್ಯಕ್ರಮಗಳಿಗೆ ನಿಮ್ಮೆಲ್ಲರ ಬೆಂಬಲ ಬೇಕಾಗಿದೆ. ನೀವು ಸಾಹಿತ್ಯ ಪರಿಷತ್ತಿನ ಸದಸ್ಯರಾಗುವ ಮೂಲಕ ಸಾಹಿತ್ಯಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಮನವಿ ಮಾಡಿದರು.
ಈ ಸುದ್ದಿ ಓದಿದ್ದೀರಾ? ಕೊಡಗು | ‘ ಲೈನ್ ಮನೆ ‘ ಜೀತ ಇಂದಿಗೂ ಜೀವಂತ
ವೇದಿಕೆಯಲ್ಲಿ ವಿರಾಜಪೇಟೆ ತಾಲ್ಲೂಕು ಕಸಾಪ ಅಧ್ಯಕ್ಷ ಡಿ ರಾಜೇಶ್, ಪದ್ಮನಾಭ, ಕೊಡಗು ಜಿಲ್ಲಾ ಕಸಾಪ ಗೌರವ ಕೋಶಾಧಿಕಾರಿ ಎಸ್ ಎಸ್ ಸಂಪತ್ ಕುಮಾರ್, ಸದಸ್ಯ ಎ ಯು ಮೊಹಮ್ಮದ್, ಕಾಲೇಜಿನ ಆಧ್ಯಾಪಕರುಗಳು ಹಾಗೂ ವಿದ್ಯಾರ್ಥಿಗಳು ಇದ್ದರು.