ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ನಗರಸಭೆ ಸೇರಿದಂತೆ ಪಟ್ಟಣದ ಹಲವು ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಚಾಮರಾಜನಗರದ ಸಂತೇಮರಹಳ್ಳಿ ವೃತ್ತದಲ್ಲಿಂದು ಹಮ್ಮಿಕೊಳ್ಳಲಾಗಿದ್ದ ಸ್ವಚ್ಚತಾ ಅಭಿಯಾನಕ್ಕೆ ಶಾಸಕ ಸಿ ಪುಟ್ಟರಂಗಶೆಟ್ಟಿ ಹಸಿರು ನಿಶಾನೆ ತೋರಿದರು.
ನಗರಸಭೆ ಅಧ್ಯಕ್ಷ ಎಸ್ ಸುರೇಶ್, ಉಪಾಧ್ಯಕ್ಷೆ ಮಮತ, ಜಿಲ್ಲಾಧಿಕಾರಿ ಶಿಲ್ಪಾ ನಾಗ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ ಬಿ ಟಿ ಕವಿತ ಸೇರಿದಂತೆ ಇನ್ನಿತರರು ದೊಡ್ಡಂಗಡಿ ಬೀದಿಯುದ್ದಕ್ಕೂ ಕಸಪೊರಕೆ ಹಿಡಿದು ರಸ್ತೆಯನ್ನು ಸ್ವಚ್ಚಗೊಳಿಸುವ ಮೂಲಕ ‘ ಚಾಮರಾಜನಗರ ಸ್ವಚ್ಚತಾ ಅಭಿಯಾನ’ ಕಾರ್ಯಕ್ರಮಕ್ಕೆ ಹುರುಪು ತಂದರು. ಪಟ್ಟಣದ ಸ್ವಚ್ಚತೆಗಾಗಿ ನಗರದ ನಾಗರಿಕರನ್ನು ಪ್ರೇರೇಪಿಸಿದರು.
ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ ಬಿ ಟಿ ಕವಿತ ಅವರು ರಸ್ತೆಯ ಅಂಗಡಿಗಳ ಮಾಲೀಕರೊಂದಿಗೆ ಮಾತನಾಡಿ ರಸ್ತೆಯ ಮುಂಭಾಗದಲ್ಲಿ ಎಲ್ಲೆಂದರಲ್ಲಿ ಕಸ ಸುರಿಯದೇ ನಿಗಧಿತ ಸ್ಥಳದಲ್ಲೇ ಹಾಕಬೇಕು. ಪ್ಲಾಸ್ಟಿಕ್ ಬಳಸಬಾರದು. ಅಂಗಡಿ ಮುಂದಿನ ಚರಂಡಿಯಲ್ಲಿ ಕಸ ಹಾಕದಂತೆ ಮಾಲೀಕರ ಮನವೊಲಿಸಿದರು. ಶುದ್ಧ ಗಾಳಿ, ಶುದ್ಧ ಜಲಕ್ಕಾಗಿ ಸ್ವಚ್ಚತೆಯ ಅರಿವನ್ನು ಸಾರ್ವಜನಿಕರಿಗೆ ಮೂಡಿಸಿದರು.

ಸ್ವಚ್ಚತಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಎಂಎಸ್ಐಎಲ್ ಅಧ್ಯಕ್ಷ ಹಾಗೂ ಶಾಸಕರಾದ ಸಿ ಪುಟ್ಟರಂಗಶೆಟ್ಟಿ ” ಚಾಮರಾಜನಗರ ಪಟ್ಟಣ ನಾಲ್ಕೂ ಕಡೆಯು ಅಭಿವೃದ್ಧಿ ಹೊಂದುತ್ತಿದೆ. ಮುಖ್ಯವಾಗಿ ಪಟ್ಟಣದ ಜನರಿಗೆ ಸ್ವಚ್ಚತೆಯ ಬಗ್ಗೆ ಜಾಗೃತಿ ಅಗತ್ಯವಾಗಿದೆ. ಸುಂದರ ಪಟ್ಟಣಕ್ಕಾಗಿ ಸ್ವಚ್ಚತಾ ಕಾರ್ಯ ನಿರಂತರವಾಗಿ ನಡೆಯಬೇಕು. ಪಟ್ಟಣದ ಒಳಚರಂಡಿ ವ್ಯವಸ್ಥೆಯನ್ನು ಸಮಗ್ರ ಅಭಿವೃದ್ಧಿಗಾಗಿ 144 ಕೋಟಿ ಅನುದಾನದ ಅವಶ್ಯವಿದೆ. ಸ್ವಚ್ಚತೆಗೆ ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳ ಸಹಕಾರವು ಬೇಕು ” ಎಂದರು.
ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಮಾತನಾಡಿ ” ಬಹಳ ಉತ್ಸಾಹದಿಂದ ಸ್ವಚ್ಚತಾ ಅಭಿಯಾನ ಆರಂಭಿಸಿದ್ದೇವೆ. ಸ್ವಚ್ಚತೆ ಎನ್ನುವುದು ನಗರಸಭೆಯ ಕೆಲಸ ಮಾತ್ರವಲ್ಲ. ಸ್ವಚ್ಚತಾ ಕಾರ್ಯದಲ್ಲಿ ಎಲ್ಲರ ಸಹಭಾಗಿತ್ವ ಅಗತ್ಯವಾಗಿದೆ. ಮುಂದಿನ ಒಂದು ವರ್ಷದೊಳಗೆ ಚಾಮರಾಜನಗರ ಸ್ವಚ್ಚ, ಸುಂದರ ಪಟ್ಟಣವಾಗುವ ನಿಟ್ಟಿನಲ್ಲಿ ಪಟ್ಟಣದ ಎಲ್ಲಾ 31 ವಾರ್ಡ್‍ಗಳಲ್ಲಿಯೂ ಪ್ರತಿ ವಾರ ಸ್ವಚ್ಚತಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಾಗಿದೆ. ಚೆಲುವ ಚಾಮರಾಜನಗರಕ್ಕಾಗಿ ಎಲ್ಲರೂ ಒಗ್ಗೂಡಿ ಶ್ರಮಿಸಬೇಕಾಗಿದೆ. ಇದಕ್ಕಾಗಿ ಎಲ್ಲಾ ಸಂಘ ಸಂಸ್ಥೆಗಳ ಸಹಕಾರ, ನೆರವು ಬೇಕಾಗಿದೆ.

ಸ್ವಚ್ಚತೆ ಒಂದು ದಿನದ ಕಾರ್ಯಕ್ರಮವಾಗಬಾರದು. ನಿರಂತರವಾಗಿರಬೇಕು. ಎಲ್ಲಾ ವಾರ್ಡ್‍ಗಳಲ್ಲಿ ಜನಾಂದೋಲನ ಮಾದರಿಯಲ್ಲಿ ಸ್ವಚ್ಚತಾ ಅರಿವು ಕಾರ್ಯಕ್ರಮ ನಡೆಯಬೇಕು. ಎಲ್ಲಾ ಜನಪ್ರತಿನಿಧಿಗಳು, ನಾಗರಿಕರು ಸ್ವಚ್ಚತಾ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು. ಮನೆ ಮನೆಗಳಲ್ಲಿ, ಅಂಗಡಿಗಳ ಹಂತದಲ್ಲಿಯೇ ಹಸಿ ಕಸ, ಒಣ ಕಸ ಬೇರ್ಪಡಿಸಿ ಸ್ವಚ್ಚತಾ ವಾಹನಗಳಿಗೆ ನೀಡಬೇಕು. ಕಸವನ್ನು ಸೂಕ್ತವಾಗಿ ವಿಲೇವಾರಿ ಮಾಡಬೇಕು. ಪ್ರತಿದಿನ ಬೆಳ್ಳಂಬೆಳಿಗ್ಗೆಯೇ ಸ್ವಚ್ಚತೆ ಕಾರ್ಯದಲ್ಲಿ ತೊಡುಗುವ ಪೌರಕಾರ್ಮಿಕರಿಗೆ ಸಾರ್ವಜನಿಕರು ಸಹಕಾರ ನೀಡಬೇಕು” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಕೊಡಗು | ‘ ಲೈನ್ ಮನೆ ‘ ಜೀತ ಇಂದಿಗೂ ಜೀವಂತ
ಚುಡಾ ಅಧ್ಯಕ್ಷ ಮಹಮ್ಮದ್ ಅಸ್ಗರ್ ಮುನ್ನಾ, ನಗರಸಭೆ ಸದಸ್ಯರಾದ ಕುಮುದ, ಬಸವಣ್ಣ, ಚಂದ್ರಶೇಖರ್, ಚಿನ್ನಮ್ಮ, ಮುಂಜುನಾಥ್, ಶಿವರಾಜು, ಪೌರಾಯುಕ್ತ ಎಸ್ ವಿ ರಾಮದಾಸ್, ಪಟ್ಟಣದ ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಪದಾಧಿಕಾರಿಗಳು ಸ್ವಚ್ಚತಾ ಅಭಿಯಾನ ಕಾರ್ಯಕ್ರಮದಲ್ಲಿ ಇದ್ದರು.