ಚಳ್ಳಕೆರೆಯಲ್ಲಿ ಪ್ರಾಣಿಪಕ್ಷಿಗಳು, ಮನುಷ್ಯರಿಗೆ ಬಿಸಿಲು ಜೋರಾಗಿಯೇ ಬಿಸಿ ಮುಟ್ಟಿಸುತ್ತಿದೆ. ಬಿರು ಬಿಸಿಲಿಗೆ ಇಲ್ಲಿನ ಜನ ಹೈರಾಣಾಗಿದ್ದಾರೆ. ಇಂತಹ ಸಮಯದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಬೇಕಾದ್ದು ಸ್ಥಳಿಯ ಆಡಳಿತದ ಜವಾಬ್ದಾರಿಯವಾಗಿತ್ತು. ಆದರೆ ಈ ಜವಾಬ್ದಾರಿಯನ್ನೇ ಮರೆತಂತೆ ಸ್ಥಳೀಯ ಆಡಳಿತ ಇದರಿಂದ ವಿಮುಖವಾಗಿದೆ. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯ ಖಾಸಗಿ ಬಸ್ ನಿಲ್ದಾಣದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದೆ ಬಸ್ ಪ್ರಯಾಣಿಕರು, ಸಾರ್ವಜನಿಕರು ಶಪಿಸುತ್ತಿದ್ದಾರೆ. ಬಿಸಿಲಿನ ಝಳಕ್ಕೆ ಹನಿ ನೀರು ಸಿಕ್ಕರೆ ಸಾಕು ಎಂಬಂತಾಗಿದೆ ಜನರ ಶೋಚನೀಯ ಸ್ಥಿತಿ.
ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಸ್ಥಳೀಯ ಮುಖಂಡ ಭೋಜರಾಜು, “ಇದು ಬೇಸಿಗೆಕಾಲ ಆಗಿರುವುದರಿಂದ ಬಸ್ ಪ್ರಯಾಣಿಕರು ನೀರಿಗಾಗಿ ಪರಿತಪಿಸುವುದನ್ನು ಕಾಣುತ್ತಿದ್ದೇವೆ. ಖಾಸಗಿ ಬಸ್ ನಿಲ್ದಾಣದಲ್ಲಿ ಕನಿಷ್ಠ ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಡಬೇಕೆಂದು ನಗರಸಭೆ ಹಾಗೂ ತಹಶೀಲ್ದಾರ್ ಮತ್ತೊಂದು ಬಾರಿ ಕೇಳಿಕೊಳ್ಳುತ್ತೇವೆ. ಆದಷ್ಟು ಬೇಗ ನೀರಿನ ವ್ಯವಸ್ಥೆ ಮಾಡಬೇಕು” ಎಂದು ಒತ್ತಾಯಿಸಿದರು.

ಈ ಬಗ್ಗೆ ಸ್ಥಳೀಯರಾದ ಅವಿನಾಶ್, “ಖಾಸಗಿ ಬಸ್ ನಿಲ್ದಾಣದಲ್ಲಿ ಕುಡಿಯುವ ನೀರಿನಂತಹ ಮೂಲಭೂತ ಸೌಲಭ್ಯಗಳಿಲ್ಲ. ಈ ಬೇಸಿಗೆಯಲ್ಲಿ ಬಿಸಿಲಿನ ಅಲೆಯನ್ನು ಪರಿಗಣಿಸಿ, ದಯವಿಟ್ಟು ಬಸ್ ಪ್ರಯಾಣಿಕರಿಗಾದರೂ ಸ್ವಲ್ಪ ಕುಡಿಯುವ ನೀರು ಒದಗಿಸಬೇಕು. ಸಾರ್ವಜನಿಕರು ಕನಿಷ್ಠ ಮೂಲಭೂತ ಸೌಲಭ್ಯಗಳನ್ನೂ ಕೇಳಬೇಕೇ? ಮನವಿ ಪತ್ರಗಳನ್ನು ಸಲ್ಲಿಸಿದ ನಂತರವೂ ಕೂಡ ಯಾರೂ ಕಾಳಜಿ ವಹಿಸುತ್ತಿಲ್ಲ ಮತ್ತು ಕ್ರಮ ಕೈಗೊಳ್ಳುತ್ತಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಜಾತಿ ತಾರತಮ್ಯ, ಎಸ್ಡಿಎಂಸಿ ಅಧ್ಯಕ್ಷನಿಂದ ಮುಖ್ಯ ಶಿಕ್ಷಕನ ವಿರುದ್ಧ ದೂರು, ಕ್ರಮಕ್ಕೆ ಆಗ್ರಹ.
ಈ ಬಗ್ಗೆ ಚಳ್ಳಕೆರೆಯ ನಾಗರೀಕರು ಮತ್ತು ಇಲ್ಲಿ ಬಂದು ಪ್ರಯಾಣಿಸುವ ಪ್ರಯಾಣಿಕರು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಮೂಲಕ ಆಕ್ರೋಶ ಹೊರಹಾಕುತ್ತಿದ್ದು, ಸ್ಥಳೀಯ ಆಡಳಿತ ಕೂಡಲೇ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಎಂದು
ಒತ್ತಾಯಿಸಿದ್ದಾರೆ.