ದಲಿತ ಯುವಕನ ಬೈಕ್ ಮತ್ತೊಂದು ದ್ವಿಚಕ್ರ ವಾಹನದ ನಡುವೆ ಡಿಕ್ಕಿಯಾದ ಕಾರಣಕ್ಕೆ, ದಲಿತ ಯುವಕನ ಮೇಲೆ ಹಲ್ಲೆ ನಡೆಸಿ, ಆತನನ್ನು ಒತ್ತೆಯಾಳಾಗಿ ಇಟ್ಟುಕೊಂಡು ದೌರ್ಜನ್ಯ ಎಸಗಿರುವ ಅಮಾನವೀಯ, ಜಾತಿ ದೌರ್ಜನ್ಯದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನ ಹಂಡಿಯಾ ಗ್ರಾಮದಲ್ಲಿ ಘಟನೆ ನಡೆದಿದೆ. ಸಂತ್ರಸ್ತ ದಲಿತ ಯುವಕ ಸಂಗಮ್ ಲಾಲ್ ಗೌತಮ್‌ನನ್ನು ಪೊಲೀಸರು ರಕ್ಷಿಸಿದ್ದಾರೆ.
ದಲಿತ ಯುವಕ ಚಲಾಯಿಸುತ್ತಿದ್ದ ಬೈಕ್ ಮತ್ತು ಪ್ರಬಲ ಜಾತಿಗೆ ಸೇರಿದ ರಿಷಭ್ ಪಾಂಡೆಯ ಬೈಕ್ ನಡುವೆ ಡಿಕ್ಕಿಯಾಗಿದೆ. ಆದರೆ, ತಮ್ಮ ಬೈಕ್‌ಗೆ ದಲಿತ ಯುವಕನ ಬೈಕ್ ಡಿಕ್ಕಿಯಾಗಿದ್ದಕ್ಕೆ ಕುಪಿತಗೊಂಡ ಗುಂಪು ಆತನ ಮೇಲೆ ನಡೆಸಿದೆ. ಜಾತಿ ನಿಂದನೆ ಮಾಡಿ, ಒತ್ತೆಯಾಳಾಗಿ ಇರಿಸಿಕೊಂಡು ದೌರ್ಜನ್ಯ ಎಸಗಿದ್ದರು ಎಂದು ವರದಿಯಾಗಿದೆ.
ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿರುವ ಪ್ರಯಾಗ್‌ರಾಜ್ ಪೊಲೀಸ್ ವರಿಷ್ಠಾಧಿಕಾರಿ ಅಭಿಮನ್ಯು ಮಂಗ್ಲೀಕ್, “ತಪ್ಪು ದಿಕ್ಕಿನಲ್ಲಿ ಚಲಿಸುತ್ತಿದ್ದ ರಿಷಭ್ ಪಾಂಡೆ ಎಂಬಾತನ ದ್ವಿಚಕ್ರ ವಾಹನ ಮತ್ತು ದಲಿತ ಯುವಕ ಸಂಗಮ್ ಲಾಲ್ ಬೈಕ್ ನಡುವೆ ಡಿಕ್ಕಿಯಾಗಿದೆ. ಘಟನೆಯಲ್ಲಿ ಸಂತ್ರಸ್ತ ಸಂಗಮ್ ಲಾಲ್‌ಗೆ ಗಾಯಗಳಾಗಿವೆ. ಅದರೂ, ಆತನ ಜಾತಿಯ ಬಗ್ಗೆ ತಿಳಿದ ಪಾಂಡೆ ಮತ್ತು ಇತರ 10 ಮಂದಿ ಸಂಗಮ್ ಮೇಲೆ ಹಲ್ಲೆ ನಡೆಸಿದ್ದಾರೆ” ಎಂದು ತಿಳಿಸಿದ್ದಾರೆ.
ಈ ವರದಿ ಓದಿದ್ದೀರಾ?: ಮಹಾಡ್ ಸತ್ಯಾಗ್ರಹ | ಚವದಾರ್ ನೀರು ಮುಟ್ಟಿ, ಮನುಸ್ಮೃತಿ ಸುಟ್ಟ ಮೊದಲ ದಲಿತ ಬಂಡಾಯ
“ಜಾತಿ ನಿಂದನೆ ಮಾಡಿ, ಆತನನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದ ಪಾಂಡೆಯ ಗುಂಪು, ತನ್ನ ಬೈಕ್‌ಗೆ ಆಗಿದ್ದ ಹಾನಿಗಾಗಿ 20,000 ರೂ. ಕೊಡುವಂತೆ ಸಂಗಮ್ ಬಳಿ ಬೇಡಿಕೆ ಇಟ್ಟಿದ್ದಾರೆ. ಬಳಿಕ, ತನ್ನ ತಂದೆಯನ್ನು ಸಂಪರ್ಕಿಸಿರುವ ಸಂಗಮ್, ಪೊಲೀಸ್ ತುರ್ತು ಸೇವೆಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ತಕ್ಷಣವೇ ಸ್ಥಳಕ್ಕೆ ಧಾವಿಸಿದ್ದು, ಸಂಗಮ್‌ನನ್ನು ರಕ್ಷಿಸಿದ್ದಾರೆ. ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ” ಎಂದು ವಿವರಿಸಿದ್ದಾರೆ.
ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಮತ್ತು ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.